
ನ್ಯೂಯಾರ್ಕ್/ಮುಂಬೈ (ಏ.10): 26/11 ಮುಂಬೈ ಉಗ್ರ ದಾಳಿಯ ಆರೋಪಿ ತಹಾವುರ್ ರಾಣಾ ಭಾರತಕ್ಕೆ ಬಂದಿಳಿಯುವ ಕಾಲ ಸನ್ನಿಹಿತವಾಗಿದೆ. ಆತನನ್ನು ಅಮೆರಿಕದ ವಿಶೇಷ ವಿಮಾನದಲ್ಲಿ ಗಡೀಪಾರು ಮಾಡಲಾಗಿದೆ ಹಾಗೂ ಗುರುವಾರ ಬೆಳಗ್ಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಆತನನ್ನು ಬಿಗಿ ಭದ್ರತೆಯಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗುವುದು. ಆತನ ವಿಚಾರಣೆ ಮುಂಬೈ ಬದಲು ದಿಲ್ಲಿಯಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಇದರೊಂದಿಗೆ 26/11 ಘಟನೆ ನಡೆದು 17 ವರ್ಷಗಳ ಬಳಿಕ ಭಯೋತ್ಪಾದನೆ ವಿಚಾರದಲ್ಲಿ ದೊಡ್ಡ ಜಯ ಭಾರತಕ್ಕೆ ಸಿಕ್ಕಂತಾಗಿದೆ.
ತನ್ನನ್ನು ಭಾರತಕ್ಕೆ ಗಡೀಪಾರು ಮಾಡದಂತೆ ಕೋರಿದ್ದ ರಾಣಾನ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ‘ರಾಣಾನನ್ನು ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದೇವೆ’ ಎಂದು ಅಮೆರಿಕ ಜೈಲಧಿಕಾರಿಗಳು ಹೇಳಿದ್ದಾರೆ. ಇದರ ಬೆನ್ನಲ್ಲೇ ಆತನಿದ್ದ ವಿಮಾನ ಬುಧವಾರ ಸಂಜೆ ಅಮೆರಿಕದಿಂದ ಹೊರಟಿದೆ ಎಂಬ ಮಾಹಿತಿ ಲಭಿಸಿದೆ. ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡುವುದಾಗಿ ಅಮೆರಿಕದ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಬಳಿಕ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ರಾಣಾನನ್ನು ಗಡೀಪಾರು ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದರು.
ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ರಾಣಾ ಗಡಿಪಾರಿಗೆ ಅಮೆರಿಕ ಕೋರ್ಟ್ ಸೂಚನೆ
ಅದರ ಬೆನ್ನಲ್ಲೇ, ‘ನಾನು ಪಾಕಿಸ್ತಾನ ಮೂಲದವನಾಗಿರುವುದರಿಂದ ಭಾರತದಲ್ಲಿ ನನ್ನ ಪ್ರಾಣಕ್ಕೆ ಅಪಾಯವಿದೆ. ಅಂತೆಯೇ ನನಗೆ ಆರೋಗ್ಯ ಸಮಸ್ಯೆಗಳೂ ಇವೆ. ಆದಕಾರಣ ನನ್ನನ್ನು ಗಡೀಪಾರು ಮಾಡಬಾರದು’ ಎಂದು ಆತ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ. ಆದರೆ ಅವನ ಮನವಿಯನ್ನು ಅಲ್ಲಿನ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಇದೀಗ ಗಡೀಪಾರಿಗೆ ಸಂಬಂಧಿಸಿದ ಎಲ್ಲಾ ಕಾಗದಪತ್ರಗಳ ಕೆಲಸ ಸಂಪನ್ನಗೊಂಡಿದ್ದು, ಭಾರತದ ವಶಕ್ಕೆ ಒಪ್ಪಿಸಲಾಗಿದೆ.
ಗಲ್ಲಿಗೇರಿಸಿ- ಸಂತ್ರಸ್ತರು: ಭಾರತದಲ್ಲಿ ರಾಣಾ ವಿಚಾರಣೆ ನಡೆಸಿ ಆತನನ್ನು ಗಲ್ಲಿಗೇರಿಸಬೇಕು ಎಂದು ಮುಂಬೈ ದಾಳಿ ಸಂತ್ರಸ್ತರು ಆಗ್ರಹಿಸಿದ್ದಾರೆ.
ಯಾರು ಈ ರಾಣಾ?: ಪಾಕಿಸ್ತಾನ ಮೂಲಕ ರಾಣಾ ಕೆನಡಾದ ಉದ್ಯಮಿ. ಈತ ವಲಸೆ ಸೇವೆಗಳನ್ನೂ ಒದಗಿಸುತ್ತಿದ್ದ ಹಾಗೂ ಮುಂಬೈನಲ್ಲಿ ಕಚೇರಿ ಹೊಂದಿದ್ದ. ಈತನ ಸ್ನೇಹಿತನಾಗಿದ್ದ ಡೇವಿಡ್ ಹೆಡ್ಲಿ ಎಂಬಾತ ಪಾಕ್‌ನ ಲಷ್ಕರ್ ಎ ತೊಯ್ಬಾ ಉಗ್ರರ ಆಪ್ತನೂ ಆಗಿದ್ದ.
ಮುಂಬೈ ಸಮೀಕ್ಷೆ ನಡೆಸಿದ್ದ ಉಗ್ರ: ರಾಣಾ ಮುಂಬೈನಲ್ಲಿ ಹೊಂದಿದ್ದ ಕಚೇರಿಯಲ್ಲಿ ತಂಗಿ ಮುಂಬೈನ ಪ್ರಮುಖ ಸ್ಥಳಗಳ ಸಮೀಕ್ಷೆ ನಡೆಸಿ ಲಷ್ಕರ್ ಉಗ್ರರಿಗೆ ಮಾಹಿತಿ ನೀಡಿದ್ದ. ಈತನ ಮಾಹಿತಿ ಆಧರಿಸಿ ಕಸಬ್ ಸೇರಿ ಅನೇಕ ಉಗ್ರರು 2008ರ ನ.26ರಂದು ಮುಂಬೈಗೆ ನುಗ್ಗಿ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿ 166 ಜನರ ಬಲಿಪಡೆದಿದ್ದರು.
ಮುಂಬೈ ಉಗ್ರರ ದಾಳಿಯ ಆರೋಪಿ ರಾಣಾ ಶೀಘ್ರದಲ್ಲಿಯೇ ಭಾರತಕ್ಕೆ
ಮೋದಿ ಸರ್ಕಾರಕ್ಕೆ ಸಿಕ್ಕ ದೊಡ್ಡ ಯಶಸ್ಸುತಹಾವುರ್ ರಾಣಾನ ಗಡೀಪಾರು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸಿಕ್ಕ ದೊಡ್ಡ ಯಶಸ್ಸು. ಭಾರತದ ಗೌರವ, ಭೂಮಿ ಮತ್ತು ಜನರ ಮೇಲೆ ದಾಳಿ ಮಾಡುವವರನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿ ಶಿಕ್ಷೆಗೆ ಒಳಪಡಿಸುವುದು ಮೋದಿ ಸರ್ಕಾರದ ಗುರಿಯಾಗಿದೆ.
- ಅಮಿತ್ ಶಾ, ಗೃಹ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ