
ವಾಷಿಂಗ್ಟನ್ (ನ.15): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹೀನ ಸೋಲು ಕಂಡರೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಅಧಿಕಾರ ಬಿಟ್ಟು ಕೊಡಲು ಸುತರಾಂ ಸಿದ್ಧರಿಲ್ಲ. ಅಧಿಕಾರದಿಂದ ಕೆಳಗಿಳಿಯುವ ಸೂಚನೆ ಸಿಗುತ್ತಿದ್ದಂತೆ ಒಂದಲ್ಲೊಂದು ಕ್ಯಾತೆ ತೆಗೆಯುತ್ತಲೇ ಇದ್ದಾರೆ. ಇದೀಗ ವಿಜಯೋತ್ಸವದಂತೆ ಕಾರ್ಯಕ್ರಮ ಆಯೋಜಿಸಿ, ಬೆಂಬಲಿಗರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ವಿರೋಧಿಸಿ ಟ್ರಂಪ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಮತದಾನದಲ್ಲಿ ವಂಚನೆ ನಡೆದಿದ್ದು, ಚುನಾವಣಾ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಪ್ರತಿಭಟನೆಯಲ್ಲಿ ಕಾಣಿಸಿಕೊಂಡ ಟ್ರಂಪ್, ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಮಿಲಿಯನ್ ಮೆಘಾ ಮಾರ್ಚ್ ಎಂಬ ಈ ಪ್ರತಿಭಟನೆಯ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಟ್ರಂಪ್ ಕಾರಿನಲ್ಲಿ ಬಂದು ಜನರತ್ತ ನಗು ಬೀರಿದ್ದಾರೆ. ನಂತರ ಟ್ವೀಟ್ ಮಾಡಿದ್ದು, ಜನರ ಅಭೂತಪೂರ್ವ ಬೆಂಬಲಕ್ಕಾಗಿ ಧನ್ಯವಾದಗಳು. ಈ ಚುನಾವಣೆ ವಂಚನೆಯ ಪರಮಾವಧಿಯಾಗಿದ್ದು, ದುಷ್ಟತನವೇ ಮೈಲುಗೈ ಸಾಧಿಸಿದೆ ಎಂದು ಆರೋಪಿಸಿದ್ದಾರೆ.
ಅಮೆರಿಕ ಚುನಾವಣೆ ಮುಗಿದರೂ ಹೋರಾಟ ಮುಗಿದಿಲ್ಲ
ಭಾರೀ ಸಂಖ್ಯೆಯಲ್ಲಿ ಸೇರಿದ ಜನರ ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಪ್ರತಿಭಟನೆ ಹಿಂಸಾ ರೂಪವೂ ತಾಳಿತ್ತು. ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಲಾಗುತ್ತಿದೆ.
ಈ ಟ್ರಂಪ್ ಚುನಾವಣೆಯಲ್ಲಿ ಸೋಲುಂಡ ನಂತರ ಬಾಲಿಷವಾಗಿ ವರ್ತಿಸುತ್ತಿದ್ದು, ಚುನಾವಣೆಯಲ್ಲಿ ಅವ್ಯವಹಾರದ ನಡೆದ ಬಗ್ಗೆ ತಿರುಳಿಲ್ಲದ ಆರೋಪ ಮಾಡುತ್ತಿದ್ದಾರೆ. ವರ್ಜಿನೀಯಾದ ಕಾನೂನು ಕಂಪನಿಯೊಂದು ಕಕ್ಷಿದಾರರಾಗಿದ್ದ ಟ್ರಂಪ್ ಅವರನ್ನು ಕೈ ಬಿಟ್ಟಿದೆ. ಟ್ರಂಪ್ ವರ್ತನೆ ಇದೇ ರೀತಿ ಮುಂದುವರಿದಲ್ಲಿ, ಅಮೆರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಆದರೂ 2ನೇ ಅವಧಿಗೆ ಶ್ವೇತಭವನದಲ್ಲಿ ಸಿದ್ಧತೆ?
ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಗೆ ಶ್ವೇತಭವನದಲ್ಲಿ ಸಿದ್ಧತೆ ನಡೆಯುತ್ತಿದೆ, ಎನ್ನಲಾಗುತ್ತಿದೆ. ಟ್ರಂಪ್ ಮತ್ತೊಂದು ಅವಧಿಗೆ ಆಯ್ಕೆಯಾಗಬಹುದು ಎಂಬ ನಂಬುಗೆಯೊಂದಿಗೆ ಶ್ವೇತಭವನದಲ್ಲಿ ಸಿದ್ಧತೆಯಲ್ಲಿ ತೊಡಗಿದ್ದೇವೆ ಎಂದು ನಿರ್ಗಮಿತ ಅಧ್ಯಕ್ಷರ ವ್ಯಾಪಾರ ಸಲಹೆಗಾರ ಪೀಟರ್ ನವಾರ್ರೋ ತಿಳಿಸಿದ್ದಾರೆ. ನ.3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಪರಾಭವ ಹೊಂದಿರುವುದಾಗಿ ಟ್ರಂಪ್ ಈವರೆಗೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.
ಪದತ್ಯಾಗದ ಸುಳಿವು ನೀಡಿದ್ದ ಟ್ರಂಪ್
ತಮ್ಮ ಸೋಲನ್ನು ಅಧಿಕೃತವಾಗಿ ಒಪ್ಪಿಕೊಳ್ಳದ ಟ್ರಂಪ್, 021ರ ಜ.20ಕ್ಕೆ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸುವ ಸುಳಿವು ನೀಡಿದ್ದರು. ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರಿಸಿದ್ದು, ಬೈಡನ್ ಲಾಕ್‌ಡೌನ್ ರಚಿಸಿದ ವಿಶೇಷ ಸಮಿತಿ ಲಾಕ್‌ಡೌನ್‌ಗೆ ಸಲಹೆ ನೀಡಿದೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಟ್ರಂಪ್, ‘ಮತ್ತೊಮ್ಮೆ ದೇಶವ್ಯಾಪಿ ಲಾಕ್‌ಡೌನ್ ಮಾಡುವುದ ನನಗೆ ಇಷ್ಟವಿಲ್ಲ. ಅದಕ್ಕೆ ನಾನು ಬಿಡುವುದಿಲ್ಲ. ಆದರೆ ಭವಿಷ್ಯದಲ್ಲಿ ಏನಾಗುತ್ತದೆಯೋ ಯಾರಿಗೆ ಗೊತ್ತು? ಯಾವ ಆಡಳಿತ ಬರುತ್ತದೆಯೋ? ಅದನ್ನು ಕಾಲವೇ ಹೇಳಬಲ್ಲದು,’ ಎಂದು ಹೇಳಿದ್ದರು.
ಅಮೆರಿಕದಲ್ಲಿ ಒಂದು ತಿಂಗಳು ಲಾಕ್‌ಡೌನ್
ಇದೇ ವೇಳೆ ನಾನು ಸೋತಿಲ್ಲ ಎಂಬ ಘೋಷಣೆಯೊಂದಿಗೇ ಅಧಿಕಾರ ಹಸ್ತಾಂತರ ಮಾಡಬಹುದು ಎಂದು ಟ್ರಂಪ್ ಆಪ್ತರೊಬ್ಬರು ಹೇಳಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಸೋಲೊಪ್ಪಿಕೊಳ್ಳುವಂತೆ ಟ್ರಂಪ್ ಅವರನ್ನು ಅಳಿಯ ಹಾಗೂ ಪತ್ನಿ ಮನವೊಲಿಸಲು ಯತ್ನಿಸಿದ್ದಾರೆ ಎಂಬ ವರದಿಗಳು ಬಂದಿದ್ದವು. ಅದರ ಬೆನ್ನಲ್ಲೇ ಟ್ರಂಪ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ನ.3ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆದು, ಅಂದೇ ಮತ ಎಣಿಕೆ ಆರಂಭವಾಗಿತ್ತು. ಆದರೆ ಜಾರ್ಜಿಯಾ ರಾಜ್ಯದ ಮತ ಎಣಿಕೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಇನ್ನೂ ನೂತನ ಅಧ್ಯಕ್ಷರ ಆಯ್ಕೆ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೆ ಇದುವರೆಗೆ ಉಳಿದ ರಾಜ್ಯಗಳು ಮತ್ತು ಜಾರ್ಜಿಯಾದಲ್ಲಿನ ಎಣಿಕೆಯಾದ ಮತಗಳನ್ನು ಆಧರಿಸಿ, ಅಮೆರಿಕದ ಮಾಧ್ಯಮಗಳು ಜೋ ಬೈಡೆನ್ ಚುನಾವಣೆ ಗೆದ್ದಿದ್ದಾರೆ ಎಂದೇ ಘೋಷಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ