
ಲಂಡನ್(ಡಿ.28): ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸೇರಿ ಹಲವು ನಿರ್ಬಂಧಗಳನ್ನು ಬ್ರಿಟನ್ ಸರ್ಕಾರ ಹೇರಿರುವಾಗಲೇ, 2500 ಆರೋಗ್ಯವಂತರಿಗೆ ಬೇಕಂತಲೇ ಕೊರೋನಾ ಸೋಂಕು ಹಬ್ಬಿಸಲು ಬ್ರಿಟನ್‌ನಲ್ಲಿ ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ!
ನಂಬಲು ಅಚ್ಚರಿಯಾದರೂ ಇದು ನಿಜ. ಕೊರೋನಾ ವಿಶ್ವಾದ್ಯಂತ ವ್ಯಾಪಿಸಿ ಒಂದು ವರ್ಷವಾಗುತ್ತಾ ಬಂದಿದ್ದರೂ ಅದರ ಸಂಪೂರ್ಣ ಗುಣಲಕ್ಷಣ ಇನ್ನೂ ಅರ್ಥವಾಗಿಲ್ಲ. ಹೀಗಾಗಿ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು 2500 ಮಂದಿಗೆ ವೈರಸ್ ಸೋಂಕು ಹಬ್ಬಿಸಲು ವಿಜ್ಞಾನಿಗಳು ತಯಾರಾಗಿದ್ದಾರೆ. ಮಾನವನ ದೇಹದಲ್ಲಿ ವೈರಸ್ ಯಾವ ರೀತಿ ವರ್ತನೆ ತೋರುತ್ತದೆ, ಅದು ಅಭಿವೃದ್ಧಿಗೊಳ್ಳಲು ಎಷ್ಟುಸಮಯ ಹಿಡಿಯುತ್ತದೆ ಎಂಬುದನ್ನು ಅರಿಯುವುದು ವಿಜ್ಞಾನಿಗಳ ಒಟ್ಟಾರೆ ಉದ್ದೇಶ. ಇದರ ವರದಿ ಆಧಾರದಲ್ಲಿ ಲಸಿಕೆಗಳು ಕೊರೋನಾ ನಿಗ್ರಹದಲ್ಲಿ ಯಾವ ರೀತಿ ಕೆಲಸ ಮಾಡಲಿವೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಲು ಉದ್ದೇಶಿಸಿದ್ದಾರೆ.
ಈ ಸಂಶೋಧನೆಗೆ ಬ್ರಿಟನ್ ಸರ್ಕಾರ 330 ಕೋಟಿ ರು. ಮಂಜೂರು ಮಾಡಿದೆ. ಬ್ರಿಟನ್‌ನ ಇಂಪೀರಿಯಲ್ ಕಾಲೇಜು, ರಾಷ್ಟ್ರೀಯ ಆರೋಗ್ಯ ಸೇವೆಯ ರಾಯಲ್ ಫ್ರೀ ಆಸ್ಪತ್ರೆ ಹಾಗೂ ಔಷಧ ಕಂಪನಿ ಎಚ್‌ವೀವೋಗಳು ಇದರಲ್ಲಿ ಭಾಗಿಯಾಗಲಿವೆ.
ಹೇಗೆ ಸಂಶೋಧನೆ?:
18-30ರ ವಯೋಮಾನದ 2500 ಆರೋಗ್ಯವಂತ ಕಾರ್ಯಕರ್ತರಿಗೆ ಮೊದಲಿಗೆ ಮೂಗಿನ ಮೂಲಕ ನೀಡಬಹುದಾದ ಕೊರೋನಾ ಲಸಿಕೆಯನ್ನು ಕೊಡಲಾಗುತ್ತದೆ. ಬಳಿಕ ಕೊರೋನಾ ವೈರಸ್ ಅನ್ನು ದೇಹಕ್ಕೆ ಸೇರಿಸಲಾಗುವುದು. ಹೀಗೆ ಸೋಂಕು ತಗುಲಿಸಿಕೊಂಡವರನ್ನು 3 ವಾರಗಳ ಕಾಲ ಆಸ್ಪತ್ರೆಯಲ್ಲೇ ಇಟ್ಟುಕೊಂಡು ದಿನದ 24 ಗಂಟೆಗಳ ಕಾಲವೂ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ. ಈ ಪ್ರಯೋಗಕ್ಕೆ ಒಳಪಟ್ಟಿದ್ದಾಗಿ ಪ್ರತಿಯೊಬ್ಬರಿಗೂ ಸುಮಾರು 4 ಲಕ್ಷ ರುಪಾಯಿ ನೀಡಲಾಗುತ್ತದೆ.
ಜನವರಿ ಮೊದಲ ವಾರದಲ್ಲಿ ನ್ಯಾಷನಲ್ ಹೆಲ್ತ್ ಸವೀರ್‍ಸಸ್‌ನ ರಾಯಲ್ ಫ್ರೀ ಆಸ್ಪತ್ರೆಯಲ್ಲಿ ಪ್ರಯೋಗ ಆರಂಭವಾಗಲಿದ್ದು, ಅದರ ವರದಿ ಮೇ ವೇಳೆಗೆ ಸಿಗುವ ನಿರೀಕ್ಷೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ