
ನ್ಯೂಯಾರ್ಕ್/ವಾಷಿಂಗ್ಟನ್: ಭಾರತದ ಮೇಲಿನ ದಾಳಿಯನ್ನು ನಿಲ್ಲಿಸಿದ್ದಕ್ಕೆ ಧನ್ಯವಾದ ಹೇಳಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ಗೆ ತಾವು ಔತಣಕೂಟ ನೀಡಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಯುದ್ಧ ನಿಲ್ಲಿಸಿ ಎಂದು ಪಾಕಿಸ್ತಾನ ಮಂಡಿಯೂರಿದ ಬಳಿಕವೇ ತಾನು ಯುದ್ಧ ನಿಲ್ಲಿಸಿದ್ದಾಗಿ ಭಾರತ ಹಲವು ಬಾರಿ ಸ್ಪಷ್ಟನೆ ನೀಡಿದ್ದರೂ, ದಾಳಿ ನಿಲ್ಲಿಸಿದ್ದು ಪಾಕಿಸ್ತಾನ ಎನ್ನುವ ಮೂಲಕ ಆ ದೇಶ ಮೇಲುಗೈ ಸಾಧಿಸಿತ್ತು ಎಂಬ ರೀತಿಯಲ್ಲಿ ಟ್ರಂಪ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್ ಜತೆಗಿನ ಔತಣಕೂಟದ ಬಳಿಕ ತಮ್ಮ ಓವಲ್ ಕಚೇರಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಭಾರತದೊಂದಿಗೆ ಯುದ್ಧ ನಿಲ್ಲಿಸಿದಕ್ಕಾಗಿ ಔತಣಕೂಟಕ್ಕೆ ಕರೆಸಿಕೊಂಡಿದ್ದೆ. ನಾನು ಮುನೀರ್‌ಗೆ ಕೃತಜ್ಞತೆ ಸಲ್ಲಿಸಲು ಬಯಸಿದ್ದೆ. ಇದೇ ವಿಚಾರವಾಗಿ ನಾನು ಪ್ರಧಾನಿ ಮೋದಿ ಅವರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಇಬ್ಬರು ಬುದ್ಧಿವಂತ ವ್ಯಕ್ತಿಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ಅಣುಸಮರಕ್ಕೆ ನಾಂದಿಯಾಗಬಹುದಾಗಿದ್ದ ಯುದ್ಧ ನಿಂತಿತು ಎಂದಿದ್ದಾರೆ.
ಇರಾನ್ ಯುದ್ಧ ವಿಚಾರ ಚರ್ಚೆ:
ಈ ನಡುವೆ ಮುನೀರ್ ಜತೆಗಿನ ಭೇಟಿ ವೇಳೆ ಇರಾನ್ ವಿಚಾರ ಪ್ರಸ್ತಾಪವಾಯಿತೇ ಎಂಬ ಪ್ರಶ್ನೆಗೆ, ಅವರಿಗೆ(ಪಾಕಿಸ್ತಾನ) ಇರಾನ್ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ. ಅಲ್ಲಿ ಏನಾಗುತ್ತಿದೆ ಎಂದು ಅವರು ಗಮನಿಸುತ್ತಿದ್ದಾರೆ. ಇರಾನ್ ವಿಚಾರದಲ್ಲಿ ಅವರು ನನ್ನ ಅಭಿಪ್ರಾಯಕ್ಕೆ ಸಹಮತ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ, ಈ ಔತಣಕೂಟದ ಮುಖ್ಯ ಉದ್ದೇಶ ಇರಾನ್ ಜತೆಗಿನ ಸಂಘರ್ಷವೇ ಆಗಿತ್ತು. ಪಾಕಿಸ್ತಾನವು ಇರಾನ್ ಜತೆಗೆ ಗಡಿಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಗುಪ್ತಚರ ಮಾಹಿತಿಗಾಗಿ ನೆರವು ಪಡೆಯಲು ಪಾಕಿಸ್ತಾನದ ಸೇನಾ ಮುಖ್ಯಸ್ಥರ ಜತೆಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಜ।ಅಸೀಂ ಮುನೀರ್‌ಗೆ ಪ್ರತಿಭಟನೆ ಬಿಸಿ
ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ।ಅಸೀಂ ಮುನೀರ್‌ಗೆ ಪ್ರತಿಭಟನೆ ಬಿಸಿ ಎದುರಾಗಿತ್ತು, ಅಮೆರಿಕದಲ್ಲಿರುವ ಪಾಕಿಸ್ತಾನಿ ಪ್ರಜೆಗಳು, ‘ಆಸಿಮ್ ಮುನೀರ್ ಹೇಡಿ, ಸಾಮೂಹಿಕ ಕೊಲೆಗಾರ’ ಎಂದು ಟೀಕಿಸಿ ಪ್ರತಿಭಟಿಸಿದ ಘಟನೆ ನಡೆದಿತ್ತು.
ವಾಷಿಂಗ್ಟನ್‌ನಲ್ಲಿ ಜ. ಮುನೀರ್ ತಂಗಿದ್ದ ಕಟ್ಟಡದ ಬಳಿ ಜಮಾಯಿಸಿದ ಪಾಕಿಸ್ತಾನಿ ಪ್ರಜೆಗಳು ಸೇನಾ ಮುಖ್ಯಸ್ಥನ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅವರು ಹೊರಬರುತ್ತಿದ್ದಂತೆ ‘ಅಸೀಮ್ ಮುನೀರ್ ನೀನು ಹೇಡಿ, ನಿನಗೆ ನಾಚಿಕೆಯಾಗಬೇಕು, ಸಾಮೂಹಿಕ ಕೊಲೆಗಾರ, ಸರ್ವಾಧಿಕಾರಿ, ಪಾಕಿಸ್ತಾನಿಗಳ ಹಂತಕ’ ಎಂದು ಘೋಷಣೆ ಕೂಗಿದ್ದಾರೆ. ಪಾಕಿಸ್ತಾನ ಪ್ರಜೆಗಳು ಘೋಷಣೆ ಕೂಗುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಪಾಕಿಸ್ತಾನದ ತೆಹ್ರೀಕ್- ಇ- ಇನ್ಸಾಫ್ ಬೆಂಬಲಿಗರು ಈ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ. ಅಮೆರಿಕದಲ್ಲಿ ತಮ್ಮ ದೇಶದವರಿಂದಲೇ ಎದುರಾದ ಈ ಅನಿರೀಕ್ಷಿತ ಆಕ್ರೋಶಕ್ಕೆ ಜ. ಮುನೀರ್ ತೀವ್ರ ಮುಖಭಂಗ ಅನುಭವಿಸುವಂತಾಗಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ