ರಷ್ಯಾದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸಲು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸರ್ಕಾರ ‘ಸೆಕ್ಸ್ ಸಚಿವಾಲಯ’ ಸ್ಥಾಪನೆಗೆ ಚಿಂತನೆ ನಡೆಸಿದೆ.
ಮಾಸ್ಕೋ (ನ.10): ರಷ್ಯಾದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸಲು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸರ್ಕಾರ ‘ಸೆಕ್ಸ್ ಸಚಿವಾಲಯ’ ಸ್ಥಾಪನೆಗೆ ಚಿಂತನೆ ನಡೆಸಿದೆ. ಪುಟಿನ್ ಆಪ್ತೆ ಹಾಗೂ ರಷ್ಯಾ ಸರ್ಕಾರದ ಕುಟುಂಬ ಸಂರಕ್ಷಣೆ ಸಂಸದೀಯ ಸಮಿತಿ ಅಧ್ಯಕ್ಷೆ ನಿನಾ ಆಸ್ಟೇನಿಯಾ ಎಂಬುವರು ಈ ಸಂಬಂಧ ಸಲ್ಲಿಕೆಯಾಗಿರುವ ಮನವಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಬ್ರಿಟನ್‌ನ ‘ದ ಸನ್’ ಹಾಗೂ ‘ದ ಮಿರರ್’ ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾದಲ್ಲಿ ಜನಸಂಖ್ಯೆ ವೇಗವಾಗಿ ಕುಸಿಯುತ್ತಿದೆ. 3 ವರ್ಷದಿಂದ ನಡೆಯುತ್ತಿರುವ ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಸಾಕಷ್ಟು ಜನರು ಮೃತಪಟ್ಟಿದ್ದು, ಜನಸಂಖ್ಯೆ ಇಳಿಕೆಯ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ. ಹೀಗಾಗಿ ಮಹಿಳೆಯರು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು ಎಂದು ಈಗಾಗಲೇ ಸರ್ಕಾರ ಅನೇಕ ಉಪಕ್ರಮಗಳನ್ನು ಜಾರಿಗೊಳಿಸಿದೆ. ಆ ಪ್ರಯತ್ನವನ್ನು ತೀವ್ರಗೊಳಿಸಲು ಗ್ಲಾವ್‌ಪಿಆರ್ ಎಂಬ ಏಜೆನ್ಸಿಯು ಸರ್ಕಾರಕ್ಕೆ ‘ಸೆಕ್ಸ್ ಸಚಿವಾಲಯ’ ಸ್ಥಾಪಿಸುವ ಸಲಹೆ ನೀಡಿದೆ ಎಂದು ವರದಿ ಹೇಳಿದ್ದು, ವರದಿಗಳ ತುಣುಕುಗಳು ವೈರಲ್ ಆಗಿವೆ.
undefined
ಕೆಲ ವಿಚಿತ್ರ ಕ್ರಮಗಳಿಗೆ ಚಿಂತನೆ: ಜನಸಂಖ್ಯೆ ಹೆಚ್ಚಿಸಲು ಸರ್ಕಾರ ವಿವಿಧ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ರಾತ್ರಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸುವುದು, ರಾತ್ರಿ 10ರಿಂದ ಬೆಳಗಿನ ಜಾವ 2 ಗಂಟೆಯವರೆಗೆ ವಿದ್ಯುತ್ ಸ್ಥಗಿತಗೊಳಿಸಿ, ಜನರು ಲೈಂಗಿಕ ಕ್ರಿಯೆ ನಡೆಸಲು ಪ್ರೋತ್ಸಾಹಿಸುವುದು. ಹೆಂಗಸರು ಮನೆಯಲ್ಲೇ ಇರುವುದಕ್ಕೆ ಸರ್ಕಾರದಿಂದ ಸಂಬಳ ನೀಡುವುದು. ತನ್ಮೂಲಕ ಅವರ ಸಂತಾನೋತ್ಪತ್ತಿ ಶಕ್ತಿ ಹೆಚ್ಚಿಸುವುದು. ನವ ದಂಪತಿಗಳು ಹೋಟೆಲ್‌ನಲ್ಲಿ ಉಳಿದುಕೊಳ್ಳುವುದಕ್ಕೆ ಸರ್ಕಾರದಿಂದ ಹಣ ನೀಡುವುದು ಮುಂತಾದ ಕ್ರಮಗಳನ್ನು ಗ್ಲಾವ್‌ಪಿಆರ್ ಏಜೆನ್ಸಿ ಶಿಫಾರಸು ಮಾಡಿದೆ. ಈಗಾಗಲೇ ಕೆಲ ಪ್ರಾಂತೀಯ ಸರ್ಕಾರಗಳು 18ರಿಂದ 23 ವರ್ಷದ ವಿದ್ಯಾರ್ಥಿನಿಯರು ಗರ್ಭಿಣಿಯಾದರೆ ಅವರಿಗೆ ಹಣ ನೀಡುವ ಯೋಜನೆ ತಂದಿವೆ. ಒಂದು ಪ್ರಾಂತೀಯ ಸರ್ಕಾರದ ಆರೋಗ್ಯ ಸಚಿವರು ‘ರಷ್ಯನ್ನರು ಕಚೇರಿಗಳಲ್ಲಿ ಕಾಫಿ ಮತ್ತು ಊಟದ ಬ್ರೇಕ್‌ನಲ್ಲಿ ಸೆಕ್ಸ್ ನಡೆಸಬೇಕು’ ಎಂದು ಕರೆ ನೀಡಿದ್ದಾರೆ.
ಸೂಪರ್ ಪವರ್ ದೇಶಗಳ ಪಟ್ಟಿ ಸೇರಲು ಭಾರತ ಅರ್ಹ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಮಹಿಳೆಯರ ಮೇಲೆ ಒತ್ತಡ: ಹೆಚ್ಚು ಮಕ್ಕಳನ್ನು ಹೆರುವಂತೆ ಈಗಾಗಲೇ ರಷ್ಯಾ ಸರ್ಕಾರ ಮಹಿಳೆಯರ ಮೇಲೆ ಒತ್ತಡ ಹೇರಲಾರಂಭಿಸಿದೆ. ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಂದ ಅವರ ಖಾಸಗಿ ಲೈಂಗಿಕ ಜೀವನದ ಕುರಿತು ಬಲವಂತವಾಗಿ ಮಾಹಿತಿ ಕಲೆಹಾಕಲಾಗುತ್ತಿದೆ. ಅವರಿಗೆ ಸರ್ಕಾರದಿಂದ ಪ್ರಶ್ನಾವಳಿ ನೀಡಲಾಗುತ್ತಿದ್ದು, ‘ನೀವು ಯಾವಾಗ ಲೈಂಗಿಕ ಕ್ರಿಯೆ ಆರಂಭಿಸಿದಿರಿ? ಕಾಡೋಂ ಬಳಸುತ್ತೀರಾ? ಲೈಂಗಿಕ ಕ್ರಿಯೆ ವೇಳೆ ನೋವಾಗುತ್ತದೆಯೇ? ಸಂತಾನಹೀನತೆ ಸಮಸ್ಯೆ ಇದೆಯೇ? ಎಷ್ಟು ಮಕ್ಕಳನ್ನು ಹಡೆಯುವ ಪ್ಲಾನ್ ಇದೆ?’ ಎಂಬಂತಹ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಅಲ್ಲದೆ, ಸರ್ಕಾರದಿಂದಲೇ ಮಹಿಳೆಯರಿಗೆ ಉಚಿತವಾಗಿ ಬಂಜೆತನ ಚಿಕಿತ್ಸೆ ಶಿಬಿರಗಳನ್ನು ನಡೆಸಲಾಗುತ್ತಿದೆ.