
‘ಸೈಫರ್ ನಂ. ಐ-0678’ ಸಮಕಾಲೀನ ಪಾಕ್ ಇತಿಹಾಸದಲ್ಲೇ ತೀವ್ರ ವಿವಾದ ಸೃಷ್ಟಿಸಿದ ರಹಸ್ಯ ವರದಿ. ಕಳೆದ 4 ವರ್ಷಗಳಿಂದ ದೇಶದ ರಾಜಕೀಯ ಪ್ರಹಸನದ ಕೇಂದ್ರಬಿಂದು. ತಮ್ಮ ಪದಚ್ಯುತಿಯ ಹಿಂದೆ ಅಮೆರಿಕದ ಕೈವಾಡವಿದೆ ಎಂಬ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರ ಆರೋಪವನ್ನು ಈ ವರದಿ ಸಾಬೀತುಪಡಿಸಿದೆ. ಈ ಮೂಲಕ ಪ್ರಪಂಚಕ್ಕೆ ಸಾರ್ವಭೌಮತ್ವದ ಪಾಠ ಮಾಡುವ ಪಾಕ್ ಸ್ವತಃ ತಾನೇ ಅಮೆರಿಕದ ಕೈಗೊಂಬೆ ಎಂಬುದು ಜಗಜ್ಜಾಹೀರಾಗಿದೆ.
ಅಮೆರಿಕ-ಇರಾನ್ ಉದ್ವಿಗ್ನತೆಯ ಬಿಸಿ ಇಡೀ ಜಗತ್ತನ್ನೇ ಸುಡುತ್ತಿರುವ ನಡುವೆ ನೆರೆಯ ಪಾಕಿಸ್ತಾನ ಅಚ್ಚರಿಯ ರೀತಿಯಲ್ಲಿ ‘ಶಾಂತಿ ಸಂಧಾನ’ಕ್ಕೆ ಮಧ್ಯಸ್ಥಿಕೆ ವಹಿಸುತ್ತಿದೆ. ಭಯೋತ್ಪಾದನೆ, ಆರ್ಥಿಕ ದಿವಾಳಿತನ, ಸಾಲದ ಸುಳಿಯಿಂದ ಜಾಗತಿಕ ಮಟ್ಟದಲ್ಲಿ ಗೌರವ ಕಳೆದುಕೊಂಡರೂ, ಯುದ್ಧ ನಿಲ್ಲಿಸಿ ಜಾಗತಿಕ ಹೀರೋ ಎನ್ನಿಸಿಕೊಳ್ಳುವ ಹುರುಪಿನಲ್ಲಿದೆ. ಆಪರೇಷನ್ ಸಿಂದೂರದ ಸಮಯದಿಂದಲೂ ಅಮೆರಿಕಕ್ಕೆ ಹತ್ತಿರವಾಗಲು, ಅದರ ಮೆಚ್ಚುಗೆ ಪಡೆಯಲು ಪಾಕ್ ನಡೆಸಿದ ಹರಸಾಹಸವನ್ನು ಇಡೀ ವಿಶ್ವವೇ ಕಂಡಿದೆ. ಈ ನಡುವೆ ಪಾಕ್‌ನ ಮಾನ ಹರಾಜು ಹಾಕುವ ಸ್ಫೋಟಕ ವರದಿಯೊಂದನ್ನು ಸ್ವತಃ ಅಮೆರಿಕದ ಡ್ರಾಪ್‌ಸೈಟ್ ಎಂಬ ವೆಬ್‌ಸೈಟ್ ಬಹಿರಂಗಪಡಿಸಿದೆ.
‘ಸೈಫರ್ ನಂ. ಐ-0678’ ಸಮಕಾಲೀನ ಪಾಕ್ ಇತಿಹಾಸದಲ್ಲೇ ತೀವ್ರ ವಿವಾದ ಸೃಷ್ಟಿಸಿದ ರಹಸ್ಯ ವರದಿ. ಕಳೆದ 4 ವರ್ಷಗಳಿಂದ ದೇಶದ ರಾಜಕೀಯ ಪ್ರಹಸನದ ಕೇಂದ್ರಬಿಂದು. ತಮ್ಮ ಪದಚ್ಯುತಿಯ ಹಿಂದೆ ಅಮೆರಿಕದ ಕೈವಾಡವಿದೆ ಎಂಬ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರ ಆರೋಪವನ್ನು ಈ ವರದಿ ಸಾಬೀತುಪಡಿಸಿದೆ. ಈ ಮೂಲಕ ಪ್ರಪಂಚಕ್ಕೆ ಸಾರ್ವಭೌಮತ್ವದ ಪಾಠ ಮಾಡುವ ಪಾಕ್ ಸ್ವತಃ ತಾನೇ ಅಮೆರಿಕದ ಕೈಗೊಂಬೆ ಎಂಬುದು ಜಗಜ್ಜಾಹೀರಾಗಿದೆ.
ಅದು 2022ರ ಮಾ.7. ಅಮೆರಿಕದಲ್ಲಿನ ಪಾಕಿಸ್ತಾನದ ರಾಯಭಾರಿ ಅಸಾದ್ ಮಜೀದ್ ಖಾನ್ ಹಾಗೂ ಅಮೆರಿಕದ ದಕ್ಷಿಣ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳ ಉಪಕಾರ್ಯದರ್ಶಿ ಡೊನಾಲ್ಡ್ ಲು ಭೇಟಿಯಾಗಿದ್ದರು. ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದ ಪ್ರಧಾನಿ ಇಮ್ರಾನ್ ಖಾನ್ ಪದಚ್ಯುತಿಗೆ ವೇದಿಕೆ ಸಿದ್ಧವಾಗಿದ್ದೇ ಅಲ್ಲಿ! ಆ ಸಭೆಯಲ್ಲಿ ಖಾನ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ ಲು, ‘ಅವಿಶ್ವಾಸ ಗೊತ್ತುವಳಿ ಹೊರಡಿಸಿ ಖಾನ್‌ರನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸಿ. ಹೀಗೆ ಮಾಡಿದರೆ ಮಾತ್ರ ಅಮೆರಿಕ ಮತ್ತು ಯುರೋಪ್ ಜೊತೆ ಪಾಕ್ ಸಂಬಂಧ ಸುಧಾರಿಸಲು ಸಾಧ್ಯ. ಇದೊಂದು ಕೆಲಸ ಮಾಡಿದರೆ ಸಾಕು, ಪಾಕ್‌ನ ಎಲ್ಲ ತಪ್ಪುಗಳನ್ನೂ ಮನ್ನಿಸಲಾಗುವುದು’ ಎಂದು ತಾಕೀತು ಮಾಡಿದ್ದರು. ಸಭೆಯ ಸಾರಾಂಶವನ್ನು ರಹಸ್ಯಮಯ ಲಿಪಿಯಲ್ಲಿ ಬರೆದ ಅಸಾದ್ ಮಜೀದ್ ಖಾನ್ ಅದನ್ನು ಪಾಕ್ ಸರ್ಕಾರಕ್ಕೆ ಕಳಿಸಿಕೊಟ್ಟರು. ಅಲ್ಲದೆ, ಶ್ವೇತಭವನದ ಅನುಮತಿಯಿಲ್ಲದೆ ಲು ಇಂಥ ಆಗ್ರಹವನ್ನು ಮಾಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು.
ಇದಾಗಿ ಒಂದೇ ತಿಂಗಳಿಗೆ ಪಾಕ್ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಯಿತು. ಸೇನೆ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ತಿರುಗಿಬಿತ್ತು. ಅವರ ವಿರುದ್ಧ ಹತ್ತಾರು ಆರೋಪಗಳನ್ನು ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಲಾಯಿತು. ವಿರೋಧ ಪಕ್ಷಗಳು ಒಗ್ಗೂಡಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದವು. ಕೊನೆಗೂ ಖಾನ್‌ರನ್ನು ಅಧಿಕಾರದಿಂದ ಕೆಳಗಿಳಿಸುವ ತಂತ್ರ ಯಶಸ್ವಿಯಾಯಿತು. ಹಾಗಾದರೆ ಖಾನ್ ಪದಚ್ಯುತಿ ಸಂಸದೀಯ ಪ್ರಕ್ರಿಯೆಯ ಮೂಲಕವೇ ನಡೆದಿತ್ತೇ? ಅಥವಾ ಅದರ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿತ್ತೇ? ಈ ಪ್ರಶ್ನೆಗೆ ‘ಕೇಬಲ್ ಐ-0678’ ಉತ್ತರ ನೀಡುತ್ತದೆ.
‘ನಯಾ ಪಾಕ್’ನಿಂದ ಪ್ರಧಾನಿವರೆಗೆ:
3 ಸಲ ಪಾಕ್ ಪ್ರಧಾನಿಯಗಿದ್ದ ನವಾಜ್ ಷರೀಫ್ ಪನಾಮಾ ಪೇಪರ್ ಹಗರಣದಲ್ಲಿ ಸಿಲುಕಿ ಜನವಿರೋಧಕ್ಕೆ ತುತ್ತಾಗಿದ್ದರು. ಅವರ ಸ್ವಜನಪಕ್ಷಪಾತ, ಐಷಾರಾಮಿ ಬದುಕು, ಭ್ರಷ್ಟಾಚಾರಕ್ಕೆ ಜನ ಬೇಸತ್ತಿದ್ದರು. ಇಂಥ ಸಂದರ್ಭದಲ್ಲಿ ಜನತೆ ಉತ್ತಮ ಆಡಳಿತ ನೀಡಬಲ್ಲ ಹೊಸ ಮುಖದ ಹುಡುಕಾಟದಲ್ಲಿದ್ದರು. ಆಗ ಪ್ರವರ್ಧಮಾನಕ್ಕೆ ಬಂದವರೇ ಕ್ರಿಕೆಟ್ ದಿಗ್ಗಜನಾಗಿ ಜನಪ್ರಿಯನಾಗಿದ್ದ ಇಮ್ರಾನ್ ಖಾನ್.
ಖಾನ್ ಸ್ಥಾಪಿಸಿದ ಪಿಟಿಐ ಪಕ್ಷ ಭ್ರಷ್ಟಾಚಾರ ವಿರೋಧಿ ನೀತಿ ಮತ್ತು ನಯಾ ಪಾಕಿಸ್ತಾನ್ ಪರಿಕಲ್ಪನೆಯ ಮೂಲಕ ಜನರನ್ನು ತಲುಪುವಲ್ಲಿ ಯಶಸ್ವಿಯಾಯಿತು. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು, ಮೈತ್ರಿ ಸರ್ಕಾರವನ್ನು ರಚಿಸಿತು. ಇಮ್ರಾನ್ ಖಾನ್ ಪ್ರಧಾನಿಯಾದರು. 2018ರಿಂದ 2020ರವರೆಗೆ ಖಾನ್ ಸರ್ಕಾರ ಅಭೂತಪೂರ್ವ ಜನಪ್ರೀತಿ ಗಳಿಸಿತು. ಹೊರಜಗತ್ತಿಗೆ ಆಡಳಿತ ಸರ್ಕಾರದ ಕೈಯಲ್ಲಿದ್ದರೂ, ವಿದೇಶಾಂಗ ನೀತಿ, ಭದ್ರತೆ ಮತ್ತು ಆಡಳಿತ ನೀತಿಗಳ ಮೇಲೆ ಸೇನೆಯೇ ಸಂಪೂರ್ಣ ನಿಯಂತ್ರಣ ಹೊಂದಿತ್ತು. ಆದರೆ ಖಾನ್ ಮತ್ತು ಸೇನಾ ಮುಖ್ಯಸ್ಥ ಜ. ಖಮರ್ ಜಾವೇದ್ ಬಾಜ್ವಾ ಒಗ್ಗಟ್ಟು ಪ್ರದರ್ಶಿಸಿದರು. ಒಟ್ಟಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಆದರೆ ನಿಧಾನವಾಗಿ ಖಾನ್ ಮತ್ತು ಸೇನೆಯ ನಡುವೆ ಬಿರುಕು ಆರಂಭವಾಯಿತು. ನಂತರ ಹಠಾತ್ತಾಗಿ ಬಹಿರಂಗವಾಗಿಯೇ ಗೋಚರವಾಗತೊಡಗಿತು. ಸೇನೆ ಆಡಳಿತದಲ್ಲಿ ಮೂಗು ತೂರಿಸದಂತೆ ಖಾನ್ ಕಡಿವಾಣ ಹಾಕತೊಡಗಿದರು. ತಮಗೆ ಒಪ್ಪದ ಸೇನೆಯ ಸಲಹೆಗಳನ್ನು ನಿರಾಕರಿಸುತ್ತಿದ್ದರು. 2021ರಲ್ಲಿ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥರ ನೇಮಕಾತಿ ವಿಷಯದಲ್ಲಿ ಸಂಘರ್ಷ ಸ್ಫೋಟವಾಯಿತು. ಲೆ.ಜ. ನದೀಂ ಅಜುಂ ಅವರನ್ನು ಐಎಸ್‌ಐ ಮುಖ್ಯಸ್ಥರಾಗಿ ನೇಮಕ ಮಾಡುವ ಸೇನೆಯ ನಿರ್ಧಾರಕ್ಕೆ ಖಾನ್ ವಿರೋಧ ವ್ಯಕ್ತಪಡಿಸಿದರು. ಅದೇ ಸಮಯದಲ್ಲಿ ಸರ್ಕಾರ ಹಣಕಾಸು ನಿರ್ವಹಣೆಯಲ್ಲಿ ತೊಂದರೆ ಅನುಭವಿಸುತ್ತಿತ್ತು. ರುಪಾಯಿ ಮೌಲ್ಯ ಕುಸಿಯಿತು, ಹಣದುಬ್ಬರ ಉತ್ತುಂಗಕ್ಕೇರಿತು, ಸಾರ್ವಜನಿಕ ಅಸಮಾಧಾನವೂ ಭುಗಿಲೆದ್ದಿತು. ಸೇನೆಯನ್ನು ಬೆಂಬಲಿಸಿ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಅಲೆ ಎದ್ದಿತು.
ಶತ್ರುಗಳ ಸೃಷ್ಟಿಸಿದ ಕಠಿಣ ನಿಲುವು:
ಪಾಕಿಸ್ತಾನ ತನ್ನ ಆರ್ಥಿಕತೆಗಾಗಿ ಸೌದಿ ಅರೇಬಿಯಾ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಪಾಕಿಸ್ತಾನೀಯರು ಸೌದಿಯಲ್ಲಿ ಕೆಲಸ ಮಾಡಿ ಕಳಿಸುವ ಹಣ (ರೆಮಿಟೆನ್ಸ್), ಸೌದಿಯಿಂದ ಬರುವ ತುರ್ತು ಸಾಲಗಳು ಮತ್ತು ಬ್ಯಾಂಕ್‌ನಲ್ಲಿ ಇಡುವ ಡಾಲರ್ ಠೇವಣಿಗಳು ಪಾಕ್ ಆರ್ಥಿಕತೆಗೆ ಬಹಳ ಮುಖ್ಯ. ಆದರೆ ಇಮ್ರಾನ್ ಖಾನ್ ಸೌದಿ ರಾಜಕುಮಾರನಿಗೆ ಸಡ್ಡು ಹೊಡೆಯತೊಡಗಿದರು. ಅವರ ಸ್ವತಂತ್ರ ವಿದೇಶಾಂಗ ನೀತಿ ಮತ್ತು ಮುಸ್ಲಿಂ ದೇಶಗಳಿಗೆ ತಾನೇ ಬಾಸ್ ಆಗಬೇಕೆನ್ನುವ ನಡೆ ಸೌದಿಯ ಅಸಮಾಧಾನಕ್ಕೆ ಕಾರಣವಾಯಿತು. ಇದನ್ನು ಸೌದಿ ತನ್ನ ಇಸ್ಲಾಮಿಕ್ ಜಗತ್ತಿನ ನಾಯಕತ್ವಕ್ಕೆ ಸವಾಲು ಎಂದು ಭಾವಿಸಿತು. ಪಾಕ್‌ಗೆ ಹಣ ಸಹಾಯವನ್ನು ಕಡಿಮೆ ಮಾಡಿತು. ಇದರಿಂದ ದೇಶದ ಆರ್ಥಿಕ ಸಂಕಷ್ಟ ತೀವ್ರಗೊಂಡಿತು.
2022ರ ಫೆ.24ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸಿದರು. ಅದೇ ಸಮಯದಲ್ಲಿ ಇಮ್ರಾನ್ ಖಾನ್ ಪೂರ್ವನಿಗದಿಯಂತೆ ಪುಟಿನ್ ಜೊತೆ ಸಭೆಯಲ್ಲಿ ಕಾಣಿಸಿಕೊಂಡರು. ಇಡೀ ಯುರೋಪ್‌ನಲ್ಲಿ ಅತಿ ದೊಡ್ಡ ಸೇನಾ ಸಂಘರ್ಷ ತಲೆದೋರಿರುವ ಸಂದರ್ಭದಲ್ಲಿ, ಪಶ್ಚಿಮ ದೇಶಗಳ ಸಹಾಯವನ್ನು ಅವಲಂಬಿಸಿರುವ ಪಾಕಿಸ್ತಾನದ ಪ್ರಧಾನಿ ರಷ್ಯಾ ರಾಜಧಾನಿಯಲ್ಲಿದ್ದರು! ಇದೇ ವೇಳೆ, ಪಾಕಿಸ್ತಾನದ ನೆಲವನ್ನು ತನ್ನ ಸೇನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಮುಂದಾಗಿದ್ದ ಅಮೆರಿಕಕ್ಕೆ ಖಾನ್ ತಡೆಯೊಡ್ಡಿದರು. ಈ ಕಾರಣಗಳೆಲ್ಲ ಒಟ್ಟುಗೂಡಿ ಖಾನ್ ವಿರುದ್ಧ ಅಮೆರಿಕದ ಅಸಮಾಧಾನ ಭುಗಿಲೆದ್ದಿತು.
ಪ್ರಧಾನಿಯನ್ನೇ ಪದಚ್ಯುತಗೊಳಿಸಿದ ಬೆಳವಣಿಗೆ:
ಇದಾಗಿ ಕೆಲವೇ ದಿನಗಳಲ್ಲಿ ಪಾಕ್ ರಾಜಕೀಯದಲ್ಲಿ ವಿಚಿತ್ರ ಬೆಳವಣಿಗೆಗಳು ಆರಂಭವಾದವು. ಖಾನ್‌ಗೆ ಮಾಧ್ಯಮ ಬೆಂಬಲ ಸ್ಥಗಿತವಾಯಿತು. ಅವರ ವಿರುದ್ಧದ ಕೋರ್ಟ್ ಪ್ರಕರಣಗಳು ತೀವ್ರತೆ ಪಡೆದುಕೊಂಡವು. ಒಂದು ಕಾಲದಲ್ಲಿ ಒಟ್ಟಿಗೆ ಕುಳಿತುಕೊಳ್ಳಲೂ ಸಾಧ್ಯವಿಲ್ಲದಂತಿದ್ದ ವಿರೋಧ ಪಕ್ಷಗಳು ಇದ್ದಕ್ಕಿದ್ದಂತೆ ಒಂದುಗೂಡಿದವು. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ, ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಸೇರಿದಂತೆ ವಿಪಕ್ಷಗಳೆಲ್ಲ ಒಟ್ಟಾಗಿ 2022ರ ಏ.10ರಂದು ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದವು. ಪಾಕಿಸ್ತಾನದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸಂಸತ್ತಿನ ಮತದಾನದ ಮೂಲಕ ಪ್ರಧಾನಿಯನ್ನು ಹೊರಹಾಕಲಾಯ್ತು.
ಖಾನ್‌ಗೆ ಏನಾಗುತ್ತಿದೆ ಎಂಬುದು ತಿಳಿದಿತ್ತು. ಮಾ.27ರಂದು ಇಸ್ಲಾಮಾಬಾದ್‌ನಲ್ಲಿ ದೊಡ್ಡ ರ‍್ಯಾಲಿಯಲ್ಲಿ ಮಾತನಾಡುತ್ತಾ, ತಮ್ಮ ಜೇಬಿನಿಂದ ಒಂದು ಕಾಗದವನ್ನು ಹೊರತೆಗೆದರು. ಅದು ಸೈಫರ್ (ಗುಪ್ತ ಸಂದೇಶ) ಎಂದು ಹೇಳಿ, ಒಂದು ವಿದೇಶಿ ಪಿತೂರಿಯಿಂದ ತನ್ನನ್ನು ಹೊರಹಾಕಲಾಗುತ್ತಿದೆ ಎಂದು ಆರೋಪಿಸಿದರು. ಕೆಲ ದಿನಗಳ ನಂತರ ಖಾನ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ, ದೇಶದ ಆಂತರಿಕ ವಿಚಾರದಲ್ಲಿ ಅಮೆರಿಕದ ಮಧ್ಯಪ್ರವೇಶ ಸ್ವೀಕಾರಾರ್ಹವಲ್ಲ ಎಂದು ಘೋಷಿಸಲಾಯಿತು. ಆದರೆ ಖಾನ್ ಪದಚ್ಯುತಿ ಬಳಿಕ ಹೊಸ ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ಅದೇ ಸಮಿತಿ ಮತ್ತೆ ಸಭೆ ಸೇರಿತು. ಈ ಬಾರಿ ಸಮಿತಿ ತನ್ನ ಹಿಂದಿನ ನಿರ್ಧಾರವನ್ನು ಸಂಪೂರ್ಣವಾಗಿ ಬದಲಿಸಿತ್ತು. ಅಮೆರಿಕದ ಮಧ್ಯಪ್ರವೇಶ ನಡೆದಿದೆ ಎಂದು ಒಪ್ಪಿಕೊಂಡಿತಾದರೂ ಅದು ಪಿತೂರಿ ಎನ್ನಲು ಯಾವುದೇ ಪುರಾವೆಯಿಲ್ಲ ಎಂದು ಕೈತೊಳೆದುಕೊಂಡಿತು. ವಿಚಿತ್ರವೆಂದರೆ ಎರಡೂ ಸಭೆಗಳಿಗೂ ಸೈನ್ಯದ ಮುಖ್ಯಸ್ಥರು ಹಾಜರಿದ್ದರು. ಆದರೆ ಸಭೆಯ ಅಧ್ಯಕ್ಷತೆ ಯಾರು ವಹಿಸಿದ್ದಾರೆ ಎಂಬುದರ ಮೇಲೆ ಸೇನಾ ಮುಖ್ಯಸ್ಥರ ಅಭಿಪ್ರಾಯ ಬದಲಾಗುತ್ತಿತ್ತು!
ಪದಚ್ಯುತಿಯ ನಂತರ ಖಾನ್ ಸುಮ್ಮನೆ ಕೂರಲಿಲ್ಲ. ಸರ್ಕಾರದ ವಿರುದ್ಧ ಬೀದಿಗಿಳಿದರು. ಬೃಹತ್ ರ‍್ಯಾಲಿಗಳನ್ನು ಆಯೋಜಿಸಿ ಲಕ್ಷಾಂತರ ಜನರನ್ನು ಆಕರ್ಷಿಸತೊಡಗಿತು. ಅಲ್ಲೆಲ್ಲ ತಮ್ಮ ಪದಚ್ಯುತಿಯ ಹಿಂದೆ ಪಾಕ್ ಸೇನೆ ಮತ್ತು ಅಮೆರಿಕದ ಷಡ್ಯಂತ್ರವಿದೆ ಎಂದು ನಿರಂತರವಾಗಿ ಆರೋಪಿಸುತ್ತಾ ಬಂದರು. ಇದು ಜನಸಮೂಹದೊಂದಿಗೆ ಅವರ ಒಡನಾಟ ಮತ್ತು ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಈ ಹೋರಾಟ ಷರೀಫ್ ಸರ್ಕಾರಕ್ಕೆ ನುಂಗಲಾರದ ತುತ್ತಾಯಿತು. ಅಂತಿಮವಾಗಿ 2023ರ ಮೇ 9ರಂದು ಖಾನ್‌ರ ಬಂಧನವಾಯಿತು. ಅವರ ಬೆಂಬಲಿಗರು ಮತ್ತು ಪಕ್ಷದ ನಾಯಕರನ್ನೆಲ್ಲ ಸಾಲು ಸಾಲಾಗಿ ಜೈಲಿಗಟ್ಟಲಾಯಿತು. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಕೋರ್ಟ್ ಖಾನ್‌ರನ್ನು ದೋಷಿ ಎಂದು ಘೋಷಿಸಿ 3 ವರ್ಷಗಳ ಜೈಲುಶಿಕ್ಷೆ ವಿಧಿಸಿತು. 2024ರ ಜೂನ್‌ನಲ್ಲಿ ಸೈಫರ್ ಪ್ರಕರಣವನ್ನೇ ರದ್ದುಪಡಿಸಿತು. ನಂತರ 2025ರ ಜನವರಿಯಲ್ಲಿ ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಖಾನ್ ಮತ್ತು ಅವರ ಪತ್ನಿ ಬುಷ್ರಾ ಬೀಬಿಗೆ 14 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಸದ್ಯ ಜೈಲಿನಲ್ಲಿರುವ ಖಾನ್‌ಗೆ ಚಿತ್ರಹಿಂಸೆ ನೀಡಲಾಗುತ್ತಿದೆ, ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನೂ ನೀಡಲಾಗುತ್ತಿಲ್ಲ. ಅವರ ಎರಡೂ ಕಣ್ಣುಗಳು ದೃಷ್ಟಿ ಕಳೆದುಕೊಂಡಿವೆ ಎಂದು ವರದಿಯಾಗಿದೆ.
ಅಮೆರಿಕ ಆಪ್ತ ವಲಯಕ್ಕೆ ಪಾಕ್ ಸೇನೆ:
ಪಾಕಿಸ್ತಾನದ ಆಂತರಿಕ ರಾಜಕೀಯದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿರುವ ನಡುವೆಯೇ, ಅಮೆರಿಕ ಮತ್ತು ಪಾಕ್ ಸೇನೆಯ ಬಾಂಧವ್ಯ ವಿಶೇಷ ಎತ್ತರಕ್ಕೆ ಏರಿತು. ಆಪರೇಷನ್ ಸಿಂದೂರದ ಸಮಯದಲ್ಲಿ ಪಾಕ್ ಅಮೆರಿಕದ ಮಧ್ಯಪ್ರವೇಶಕ್ಕೆ ಆಹ್ವಾನಿಸಿತು. ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನವನ್ನೂ ಮಾಡಿತು. ಇತ್ತ ಸೇನಾ ಮುಖ್ಯಸ್ಥ ಆಸೀಂ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಹುದ್ದೆಯನ್ನು ದಯಪಾಲಿಸಲಾಯಿತು. ಟ್ರಂಪ್ ಮುನೀರ್‌ನನ್ನು ‘ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್’ ಎಂದು ಕೊಂಡಾಡಿದರು. ಈ ನಡುವೆ ಭುಗಿಲೆದ್ದ ಇರಾನ್-ಅಮೆರಿಕ ಸಂಘರ್ಷವನ್ನು ತಣಿಸಲು ಪಾಕ್ ಸಂಧಾನಕಾರನ ವೇಷ ತೊಟ್ಟಿತು. ಕಾಕತಾಳೀಯವೋ ಎನ್ನುವಂತೆ ಇದೇ ಸಂದರ್ಭದಲ್ಲೇ ಸೈಫರ್ ಗುಪ್ತ ವರದಿ ಸೋರಿಕೆಯಾಗಿದೆ! ಪಾಕಿಸ್ತಾನದಲ್ಲಿ ಹೆಸರಿಗೆ ಪ್ರಜಾಪ್ರಭುತ್ವ ಇದ್ದರೂ ಅದರ ನಿಯಂತ್ರಣವಿರುವುದು ಸೇನೆಯ ಕೈಯಲ್ಲಿ. ಅಮೆರಿಕ, ಚೀನಾ, ಸೌದಿಯಂತಹ ವಿದೇಶಿ ಶಕ್ತಿಗಳೇ ಪಾಕ್‌ನ ನಿಜವಾದ ನಿಯಂತ್ರಕರು ಎಂಬ ಸತ್ಯ ಜಗಜ್ಜಾಹೀರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ