ಅಮೆರಿಕದ ತೈಲ ಪೂರೈಕೆ ಜಾಲದ ಮೇಲೆ ಸೈಬರ್‌ ದಾಳಿ, ಕಾರ್ಯಚರಣೆ ಸಂರ್ಪೂ ಸ್ಥಗಿತ!

By Kannadaprabha NewsFirst Published May 10, 2021, 8:40 AM IST
Highlights

* ಅಮೆರಿಕದ ತೈಲ ಪೂರೈಕೆ ಜಾಲದ ಮೇಲೆ ಸೈಬರ್‌ ದಾಳಿ

* ಕಲೊನಿಯಲ್‌ ಪೈಪ್‌ಲೈನ್‌ ಕಾರ್ಯಚರಣೆ ಸಂರ್ಪೂ ಸ್ಥಗಿತ

* ಪೂರ್ವ ಹಾಗೂ ದಕ್ಷಿಣದ ರಾಜ್ಯಗಳಿಗೆ ತೈಲ ಪೂರೈಕೆ ವ್ಯತ್ಯಯ

ವಾಷಿಂಗ್ಟನ್‌(ಮೇ.10): ಅಮೆರಿಕದ ಪ್ರಮುಖ ಇಂಧನ ಪೂರೈಕೆ ಜಾಲಗಳ ಪೈಕಿ ಒಂದಾದ ಕಲೊನಿಯಲ್‌ ಪೈಪ್‌ಲೈನ್‌ ಸೈಬರ್‌ ದಾಳಿಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ತೈಲ ಪೂರೈಕೆ ಜಾಲವನ್ನೇ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಶುಕ್ರವಾರದಿಂದ ಅಮೆರಿಕದ ಪೂರ್ವಕರಾವಳಿಯ ಅರ್ಧದಷ್ಟು ಭಾಗಗಳಿಗೆ ತೈಲ ಪೂರೈಕೆ ವ್ಯತ್ಯಯಗೊಂಡಿದೆ.

ತೈಲ ಪೂರೈಕೆ ಜಾಲದ ಕಂಪ್ಯೂಟರ್‌ ವ್ಯವಸ್ಥೆಗೆ ಹಾನಿ ಮಾಡುವ ವೈರಸ್‌ ದಾಳಿ ಇದಾಗಿದೆ. ಈ ಘಟನೆಯು ಇದುವರೆಗೆ ದಾಖಲಾದ ಅತ್ಯಂತ ವಿನಾಶಕಾರಿ ಡಿಜಿಟಲ್‌ ಸುಲಿಗೆ ಕಾರ್ಯಾಚರಣೆ ಎನಿಸಿಕೊಂಡಿದೆ. ಅಲ್ಲದೇ ಅಮೆರಿಕದ ಇಂಧನ ಮೂಲ ಸೌಕರ್ಯ ಹ್ಯಾಕ​ರ್‍ಸ್ಗಳಿಗೆ ಸುಲಭ ತುತ್ತಾಗಬಲ್ಲದು ಎಂಬುದನ್ನು ಈ ದಾಳಿ ತೋರಿಸಿಕೊಟ್ಟಿದೆ.

ಇಂಧನ ಪೂರೈಕೆ ಜಾಲದ ಮೇಲಿನ ದಾಳಿಯಿಂದಾಗಿ ಕಲೊನಿಯಲ್‌ ಪೈಪ್‌ಲೈನ್‌ ಅನ್ನು ದೀರ್ಘಕಾಲ ಸ್ಥಗಿತಗೊಳಿಸಬೇಕಾಗಿ ಬಂದಿದ್ದು, ಇದರಿಂದಾಗಿ ಅಮೆರಿಕದಲ್ಲಿ ಪೆಟ್ರೋಲ್‌ ದರಗಳ ಏರಿಕೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಕಲೊನಿಯಲ್‌ ಪೈಪ್‌ಲೈನ್‌ ಪ್ರತಿನಿತ್ಯ ಸುಮಾರು 25 ಲಕ್ಷ ಬ್ಯಾರಲ್‌ನಷ್ಟುಪೆಟ್ರೋಲ್‌ ಹಾಗೂ ಇತರ ಇಂಧನಗಳನ್ನು 8,850 ಕಿ.ಮೀ. ದೂರದ ತನಕ ಪೂರೈಕೆ ಮಾಡುತ್ತಿದೆ. ಈ ಪೈಪ್‌ಲೈನ್‌ ಅಮೆರಿಕದ ದಕ್ಷಿಣ ಹಾಗೂ ಪೂರ್ವ ಕರವಳಿಯ ರಾಜ್ಯಗಳಿಗೆ ತೈಲ ಪೂರೈಕೆ ಮಾಡುತ್ತಿದೆ. ಅಲ್ಲದೇ ದೇಶದ ಅತ್ಯಂತ ದೊಡ್ಡ ವಿಮಾನ ನಿಲ್ದಾಣಗಳಾದ ಅಟ್ಲಾಂಟಾದ ಹಾಟ್ಸ್‌ರ್‍ ಫೀಲ್ಡ್‌ ಜಾಕ್ಸನ್‌ ವಿಮಾನ ನಿಲ್ದಾಣಕ್ಕೂ ಇದರಿಂದಲೇ ತೈಲ ಪೂರೈಕೆ ಆಗುತ್ತಿದೆ. ಸೈಬರ್‌ ದಾಳಿಯ ಹಿನ್ನೆಲೆಯಲ್ಲಿ ಇವುಗಳಿಗೆ ಇಂಧನ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

ಸೈಬರ್‌ ದಾಳಿಯನ್ನು ಅರ್ಥ ಮಾಡಿಕೊಂಡು ಅದನ್ನು ಇತ್ಯರ್ಥಪಡಿಸಲು ದೀರ್ಘ ಸಮಯ ಬೇಕಾಗಲಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸೈಬರ್‌ ಭದ್ರತಾ ಸಂಸ್ಥೆ ಫೈರ್‌ಐನ ನೆರವನ್ನು ಪಡೆಯಲಾಗಿದೆ. ಆದರೆ, ಈ ದಾಳಿ ನಡೆದಿದ್ದು ಹೇಗೆ? ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಇದುವರೆಗೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ನಿಟ್ಟಿನಲ್ಲಿ ಇನ್ನಷ್ಟುತನಿಖೆ ನಡೆಸುವ ಅಗತ್ಯವಿದೆ ಎಂದು ಅಮೆರಿಕದ ತನಿಖಾ ದಳ ಎಫ್‌ಡಿಐ ತಿಳಿಸಿದೆ.

ಇದೇ ವೇಳೆ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ತೈಲ ಪೂರೈಕೆ ಕಂಪನಿಯ ಜೊತೆ ಅಮೆರಿಕ ಸರ್ಕಾರ ಕೈಜೋಡಿಸಿದೆ ಎಂದು ಮೂಲಗಳು ತಿಳಿಸಿವೆ.

click me!