ಕೊರೋನಾ ನಿಯಂತ್ರಣಕ್ಕೆ ಸೇನೆ ಮೊರೆ ಹೋದ ಸಿಡ್ನಿ!

By Suvarna NewsFirst Published Jul 30, 2021, 1:00 PM IST
Highlights

* ಹೆಚ್ಚುತ್ತಿರುವ ಡೆಲ್ಟಾಕೊರೋನಾ ಸೋಂಕು

* ಕೊರೋನಾ ನಿಯಂತ್ರಣಕ್ಕೆ ಸೇನೆ ಮೊರೆ ಹೋದ ಸಿಡ್ನಿ

* ಲಾಕ್‌ಡೌನ್‌ ಘೋಷಣೆ, ಜನರ ನಿಯಂತ್ರಿಸಲು ಸೇನೆ

ಸಿಡ್ನಿ(ಜು.30): ಹೆಚ್ಚುತ್ತಿರುವ ಡೆಲ್ಟಾಕೊರೋನಾ ಸೋಂಕನ್ನು ನಿಯಂತ್ರಿಸಲು ಆಸ್ಪ್ರೇಲಿಯಾದ ಅತಿ ದೊಡ್ಡ ನಗರ, ನ್ಯೂ ಸೌತ್‌ ವೇಲ್ಸ್‌ ರಾಜಧಾನಿ ಸಿಡ್ನಿಯಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ಇದಕ್ಕಾಗಿ ಅಧಿಕಾರಿಗಳು ಸೈನ್ಯದ ನೆರವು ಕೋರಿದ್ದಾರೆ.

ಸಿಡ್ನಿಯಲ್ಲಿ ಈಗಾಗಲೇ ಅಗಸ್ಟ್‌ ಅಂತ್ಯದವರೆಗೆ ಲಾಕ್‌ಡೌನ್‌ ಘೋಷಿಸಲಾಗಿದೆ. ಆದರೂ ಇಲ್ಲಿ 24 ತಾಸಿನಲ್ಲಿ 239 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಲಾಕ್‌ಡೌನ್‌ ನಿಯಮಗಳನ್ನು ಪಾಲಿಸುವುದಕ್ಕಾಗಿ ಸರ್ಕಾರವು ಸೈನ್ಯದ ಮೊರೆ ಹೋಗಿದ್ದು, 300 ಸೈನಿಕರನ್ನು ಸಿಡ್ನಿಗೆ ಕಳುಹಿಸುವಂತೆ ಅಧಿಕಾರಿಗಳು ಪ್ರಧಾನಿ ಹಾಗೂ ದೇಶದ ರಕ್ಷಣಾ ಇಲಾಖೆಗೆ ಮನವಿ ಮಾಡಿದ್ದಾರೆ. ಆದರೆ ಪ್ರಧಾನಿ ಮೋರಿಸನ್‌ ಹಾಗೂ ರಕ್ಷಣಾ ಸಚಿವ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೊರೋನಾ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸವಿದೆ. ಬುಧವಾರ ಕೊರೋನಾದಿಂದಾಗಿ ಒಬ್ಬರು ಮೃತಪಟ್ಟಿದ್ದು, ಡೆಲ್ಟಾ ವೇರಿಯಂಟ್ ನಿಂದ ಕೊರೊನಾ ಸೋಂಕು ಹರಡಲು ಪ್ರಾರಂಭವಾದ ಬಳಿಕ ಒಟ್ಟು 13 ಜನರು ಮೃತಪಟ್ಟಿದ್ಧಾರೆ. ಕೊರೋನಾ ಸೋಂಕಿನಿಂದ ಇದುವರೆಗೆ ದೇಶಾದ್ಯಂತ 921 ಜನರು ಮೃತಪಟ್ಟಿದ್ಧಾರೆ. ಇತ್ತೀಚೆಗೆ ಕಠಿಣ ಲಾಕ್ ಡೌನ್ ನಿಂದಾಗಿ ಸೋಂಕಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ ಈಗ ಏಕಾಏಕಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸಿಡ್ನಿಯ 8 ಕೊರೊನಾ ಹಾಟ್ ಸ್ಪಾಟ್ ಗಳಲ್ಲಿ 20 ಲಕ್ಷ ಜನರು ವಾಸಿಸುತ್ತಿದ್ದು, ಅವರೆಲ್ಲರೂ ಮಾಸ್ಕ್ ಧರಿಸಿ ಮನೆಯಿಂದ ಹೊರಗೆ ಬರಬೇಕಿದೆ ಮತ್ತು ಅವರ ಮನೆಯಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸಬಹುದಾಗಿದೆ ಎಂದು ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಗ್ಲಾಡಿಸ್ ಬೆರೆಜಿಕ್ಲಿಯನ್ ತಿಳಿಸಿದ್ದಾರೆ.

click me!