ಚೀನಾ ಐಸ್‌ಕ್ರೀಂನಲ್ಲಿ ಕೊರೋನಾ ಪತ್ತೆ: ಆಹಾರದಲ್ಲಿ ವೈರಸ್‌ ಪತ್ತೆ ಇದೇ ಮೊದಲು

By Suvarna NewsFirst Published Jan 18, 2021, 7:47 AM IST
Highlights

ಚೀನಾ ಐಸ್‌ಕ್ರೀಂನಲ್ಲಿ ಕೊರೋನಾ ಪತ್ತೆ!| ಆಹಾರ ಪದಾರ್ಥದಲ್ಲಿ ವೈರಸ್‌ ಪತ್ತೆ ಇದೇ ಮೊದಲು| 29000 ಬಾಕ್ಸ್‌ ಐಸ್‌ಕ್ರೀಂ ವಾಪಸ್‌, 1662 ಜನರು ಕ್ವಾರಂಟೈನ್‌| ಐಸ್‌ ಕ್ರೀಂ ಕಂಪನಿ ಸೀಲ್‌ಡೌನ್‌| ಎಲ್ಲ ಸಿಬ್ಬಂದಿಗೂ ಕೊರೋನಾ ಪರೀಕ್ಷೆ ನಡೆಸಿದ ಚೀನಾ ಸರ್ಕಾರ

ಬೀಜಿಂಗ್‌(ಜ.18): ವಿಶ್ವಕ್ಕೆಲ್ಲಾ ಕೊರೋನಾ ವೈರಸ್‌ ಹಬ್ಬಿಸಿದ ಕುಖ್ಯಾತಿ ಹೊಂದಿರುವ ಚೀನಾದಿಂದ ಮತ್ತೊಂದು ಆಘಾತದ ಸುದ್ದಿ ಬಂದಿದೆ. ಚೀನಾದ ಕಂಪನಿಯೊಂದು ಉತ್ಪಾದಿಸಿದ್ದ ಐಸ್‌ಕ್ರಿಂನಲ್ಲಿ ಕೊರೋನಾ ವೈರಸ್‌ ಪತ್ತೆಯಾಗಿದೆ. ಆಹಾರ ಪದಾರ್ಥದಲ್ಲಿ ವೈರಸ್‌ ಪತ್ತೆಯಾಗಿದ್ದು ಇದೇ ಮೊದಲಾದ ಕಾರಣ ಭಾರೀ ಆತಂಕ ವ್ಯಕ್ತವಾಗಿದೆ.

ಕೆಲ ತಿಂಗಳ ಹಿಂದೆ ವಿದೇಶದಿಂದ ಚೀನಾ ಆಮದು ಮಾಡಿಕೊಂಡಿದ್ದ ಪ್ಯಾಕ್‌ ಮಾಡಲಾದ ಮೀನಿನ ಮಾಂಸದ ಪೊಟ್ಟಣದ ಹೊರಭಾಗದಲ್ಲಿ ಕೊರೋನಾ ಪತ್ತೆಯಾಗಿತ್ತು. ಆದರೆ ಆಹಾರದಲ್ಲೇ ಪತ್ತೆಯಾಗಿದ್ದು ಇದೇ ಮೊದಲು. ಹೀಗಾಗಿ ಈ ಬಾರಿ ಕಳವಳ ಹೆಚ್ಚಿದೆ.

ಬೀಜಿಂಗ್‌ಗೆ ಹೊಂದಿಕೊಂಡಿರುವ ಪೂರ್ವ ಚೀನಾದ ತಿಯಾನ್‌ಜಿನ್‌ನ ‘ದ ದಖಿಯೋಡಾ ಫುಡ್‌ ಕಂ’ ತಯಾರಿಸಿದ್ದ ಐಸ್‌ ಕ್ರೀಂನಲ್ಲಿ ವೈರಸ್‌ ಪತ್ತೆಯಾಗಿದೆ. ಐಸ್‌ಕ್ರಿಂನ ಮೂರು ಮಾದರಿಯನ್ನು ಸಾಮಾನ್ಯ ಪರೀಕ್ಷೆಗೆ ಕಳುಹಿಸಿದ ವೇಳೆ ವೈರಸ್‌ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಕಂಪನಿಯನ್ನು ಸೀಲ್‌ಡೌನ್‌ ಮಾಡಿದ್ದು, ಎಲ್ಲಾ 1662 ಸಿಬ್ಬಂದಿಗಳಿಗೂ ಕೊರೋನಾ ಪತ್ತೆ ಪರೀಕ್ಷೆ ನಡೆಸಿ, ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಪೈಕಿ 700 ಸಿಬ್ಬಂದಿಗಳ ವರದಿ ನೆಗೆಟಿವ್‌ ಬಂದಿದ್ದು, ಉಳಿದವರ ಪರೀಕ್ಷಾ ವರದಿ ಇನ್ನೂ ಬರಬೇಕಿದೆ. ಜೊತೆಗೆ ಪ್ರಾಥಮಿಕ ತನಿಖೆ ವೇಳೆ ಐಸ್‌ಕ್ರೀಂನಿಂದ ಯಾರಿಗೂ ಸೋಂಕು ಹಬ್ಬಿದ್ದು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವೈರಸ್‌ ಪತ್ತೆಯಾದ ಬ್ಯಾಚ್‌ನ, ಈಗಾಗಲೇ ಮಾರಾಟವಾಗಿರುವ 390 ಬಾಕ್ಸ್‌ಗಳನ್ನು ಪತ್ತೆ ಮಾಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಸುಮಾರು 29000 ಬಾಕ್ಸ್‌ ಐಸ್‌ಕ್ರೀಂ ಇನ್ನೂ ಮಾರಾಟವಾಗಿರಲಿಲ್ಲ. ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐಸ್‌ಕ್ರೀಂ ತಯಾರಿಗೆ ನ್ಯೂಜಿಲೆಂಡ್‌ನ ಹಾಲಿನ ಪೌಡರ್‌ ಮತ್ತು ಉಕ್ರೇನ್‌ನಿಂದ ವೇ ಪೌಡರ್‌ ಆಮದು ಮಾಡಿಕೊಳ್ಳಲಾಗಿತ್ತು.

- ಪೂರ್ವ ಚೀನಾದ ದ ದಖಿಯೋಡಾ ಆಹಾರ ಕಂಪನಿ ಉತ್ಪಾದಿಸಿದ್ದ ಐಸ್‌ಕ್ರೀಂ

- ಐಸ್‌ಕ್ರೀಂ ತಯಾರಿಕೆಗೆ ನ್ಯೂಜಿಲೆಂಡ್‌, ಉಕ್ರೇನ್‌ನಿಂದ ವಸ್ತು ತರಲಾಗಿತ್ತು

- ಮೂರು ಮಾದರಿಯನ್ನು ಸಾಮಾನ್ಯ ಪರೀಕ್ಷೆಗೆ ಕಳಿಸಿದ ವೇಳೆ ವೈರಸ್‌ ಪತ್ತೆ

- ಈ ಐಸ್‌ಕ್ರೀಂನಿಂದ ಯಾರಿಗೂ ಸೋಂಕು ಹರಡಿರುವುದು ಪತ್ತೆಯಾಗಿಲ್ಲ

click me!