
ಇಸ್ಲಾಮಾಬಾದ್: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿಕೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕುವ ಉದ್ದೇಶದಿಂದ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇದೀಗ ಪಾಕಿಸ್ತಾನಕ್ಕೂ ವಿಸ್ತರಿಸಿದೆ.
ಅಲ್ಲಿ ಕಾಕ್ರೋಚ್ ಅವಾಮಿ ಪಾರ್ಟಿ, ಕಾಕ್ರೋಚ್ ಅವಾಮಿ ಲೀಗ್ ಹಾಗೂ ಮುತ್ತಹಿದಾ ಕಾಕ್ರೋಚ್ ಮೂವ್‌ಮೆಂಟ್ ಎಂಬ 3 ಹೆಸರಿನಲ್ಲಿ ಆನ್ಲೈನ್ ಅಭಿಯಾನ ಆರಂಭವಾಗಿದೆ.
ಒಂದು ಖಾತೆಯ ಬಯೋದಲ್ಲಿ ‘ಪಾಕಿಸ್ತಾನಕ್ಕಾಗಿ, ಯುವಕರಿಂದ, ಯುವಕರ ರಾಜಕೀಯ ರಂಗ’ ಎಂಬ ಬರೆದುಕೊಳ್ಳಲಾಗಿದೆ. ಇನ್ನೊಂದರಲ್ಲಿ, ‘ನಾವು ವ್ಯವಸ್ಥೆಯು ಜಿರಳೆಗಳೆಂದು ಪರಿಗಣಿಸಿದ ಜನರ ಧ್ವನಿ’ ಎಂದು ಬರೆಯಲಾಗಿದೆ. ಅಭಿಯಾನದ ಲೋಗೊ ಕೂಡ ಭಾರತದ್ದನ್ನೇ ಹೋಲುವ ರೀತಿಯಲ್ಲಿದೆ. ಆದರೆ ಹಸಿರು ಮತ್ತು ಬಿಳಿ ಬಣ್ಣವನ್ನು ಅಳವಡಿಸಲಾಗಿದೆ. ಜಿರಳೆಯ ಕೈಯಲ್ಲಿ ಪಾಕ್ ಧ್ವಜವನ್ನು ಹಿಡಿಸಲಾಗಿದೆ.
ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ), ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯವಂತಹ (ಪಿಪಿಪಿ) ಸ್ಥಾಪಿತ ರಾಜಕೀಯ ಪಕ್ಷಗಳಿಗೆ ವಿಶಿಷ್ಟ ಪರ್ಯಾಯವಾಗಿ ರೂಪುಗೊಳ್ಳುವ ರೀತಿಯಲ್ಲಿ ಇವುಗಳನ್ನು ಬಿಂಬಿಸಲಾಗುತ್ತಿದೆ.
ಸಿಜೆಐ ಹೇಳಿಕೆಯಿಂದ ಸೃಷ್ಟಿಯಾಗಿ ರಾಜಕೀಯ ತಲ್ಲಣ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿಗೆ (ಸಿಜೆಪಿ) ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಂದ ಬೆಂಬಲ ವ್ಯಕ್ತವಾಗಿದೆ. ಜತೆಗೆ, ಅದರ ಸಾಮಾಜಿಕ ಮಾಧ್ಯಮ ಖಾತೆಯನ್ನು ನಿರ್ಬಂಧಿಸಿರುವುದಕ್ಕೆ ಕೂಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ತರೂರ್, ‘ಕೇವಲ 5 ದಿನದಲ್ಲಿ 1.9 ಕೋಟಿಗೂ ಹೆಚ್ಚು ಹಿಂಬಾಲಕರನ್ನು ಗಳಿಸಿದ ಸಿಜಿಪಿ ಪಕ್ಷ ನನ್ನಲ್ಲಿ ಕುತೂಹಲ ಮೂಡಿಸಿದೆ. ಯುವಕರ ಹತಾಶೆ ನನಗೆ ಅರ್ಥವಾಗಿದೆ ಮತ್ತು ಅವರು ಈ ರೀತಿ ಪ್ರತಿಕ್ರಿಯಿಸುವುದಕ್ಕೆ ಕಾರಣವೂ ನನಗೆ ತಿಳಿದಿದೆ. ಹೀಗಿರುವಾಗ, ಸಿಜೆಪಿಯ ಎಕ್ಸ್ ಖಾತೆಯನ್ನು ಬ್ಲಾಕ್ ಮಾಡುವುದು ಹಾನಿಕಾರಕ ಮತ್ತು ತೀರಾ ಅವಿವೇಕದ ಸಂಗತಿ. ಯುವಕರಿಗೆ ಭಾವನೆಗಳನ್ನು ವ್ಯಕ್ತಪಡಿಸಲು ವೇದಿಕೆಯಾಗಿರುವ ಅದು ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ, ಹಾಸ್ಯ, ವಿಡಂಬನೆ ಮತ್ತು ಹತಾಶೆಗೂ ಸಹ ಮಾಧ್ಯಮಗಳು ಬೇಕಾಗುತ್ತವೆ’ ಎಂದು ಹೇಳಿದ್ದಾರೆ. ಜತೆಗೆ ಸಿಜೆಪಿ ಹಿಂದಿರುವ ವ್ಯಕ್ತಿಗಳು (ಅಭಿಜೀತ್ ದೀಪ್ಕೆ) ರಾಜಕೀಯ ಪ್ರವೇಶಿಸಲಿ ಎಂಬ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ