ನವದೆಹಲಿ: ದೇಶದಲ್ಲಿ ಹೊಸ ರೂಪಾಂತರಿ ಒಮಿಕ್ರೋನ್ ಪ್ರಭೇದಕ್ಕೆ ಸಿಲುಕುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಭಾರತದ ಕೋವಿಡ್‌ನ 2ನೇ ಅಲೆಗೆ ಕಾರಣವಾಗಿದ್ದ ಡೆಲ್ಟಾದ ತಳಿಯ ಸ್ಥಾನವನ್ನು ಒಮಿಕ್ರೋನ್ ಆವರಿಸಲು ಆರಂಭಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಈವರೆಗೆ ವಿದೇಶದಿಂದ ಬಂದು ಕೊರೋನಾ ದೃಢಪಟ್ಟಶೇ.80 ಜನರಲ್ಲಿ ಒಮಿಕ್ರೋನ್ ಸೋಂಕು ಕಂಡುಬಂದಿದೆ. ದೇಶದಲ್ಲಿ ನಿಧಾನವಾಗಿ ನಿತ್ಯದ ಪ್ರಕರಣಗಳಲ್ಲಿ ಒಮಿಕ್ರೋನ್ ಪಾಲು ಹೆಚ್ಚುತ್ತಿದೆ. ಹೀಗಾಗಿ ಡೆಲ್ಟಾಸ್ಥಾನವನ್ನು ಒಮಿಕ್ರೋನ್ ಆವರಿಸಲು ಆರಂಭಿಸಿದೆ ಎಂದು ಅವು ಹೇಳಿವೆ.
ಆದಾಗ್ಯೂ, ಪತ್ತೆಯಾದ ಒಟ್ಟಾರೆ ಪ್ರಕರಣಗಳ ಮೂರನೇ ಒಂದು ಭಾಗದಷ್ಟುಪ್ರಕರಣಗಳು ಸೌಮ್ಯ ಸ್ವಾಭಾವದ್ದಾಗಿದ್ದು, ಉಳಿದ ಸೋಂಕಿತರಲ್ಲಿ ವೈರಸ್ಸಿನ ಲಕ್ಷಣಗಳೇ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ದೇಶಾದ್ಯಂತ ಕಡಿಮೆ ಕೊರೋನಾ ಪರೀಕ್ಷೆಗಳು ನಡೆಯುತ್ತಿರುವ ಹೊರತಾಗಿಯೂ, ದೇಶದಲ್ಲಿ ಈವರೆಗೆ 1270 ಮಂದಿಯಲ್ಲಿ ಒಮಿಕ್ರೋನ್ ಸೋಂಕು ಕಂಡುಬಂದಿದೆ. ಹೀಗಾಗಿ ಒಮಿಕ್ರೋನ್ ಅನ್ನು ತ್ವರಿತವಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೊರೋನಾ ಪರೀಕ್ಷೆಗಳನ್ನು ತ್ವರಿತ ಮತ್ತು ಹೆಚ್ಚು ಮಾಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಡಿ.2ರಂದು ದೇಶದಲ್ಲಿ ಮೊದಲ ಬಾರಿ ಒಮಿಕ್ರೋನ್ ಕೇಸ್‌ಗಳು ಪತ್ತೆಯಾಗಿದ್ದವು.
ರೋಗನಿರೋಧಕ ಶಕ್ತಿಯನ್ನು ತಪ್ಪಿಸಿಕೊಳ್ಳುವ ಸಾಮರ್ಥ್ಯ ಒಮಿಕ್ರಾನ್ ಗೆ ಇದೆ ಎಂದ INSACOG
ಜಾಗತಿಕ ದತ್ತಾಂಶವನ್ನು ಉಲ್ಲೇಖಿಸಿ ಮಾತನಾಡಿರುವ ಭಾರತೀಯ ಸಾರ್ಸ್-ಕೋವ್-2 (SARS-COV-2) ಜೀನೋಮಿಕ್ಸ್ ಕನ್ಸೋರ್ಟಿಯಾ INSACOG, ಒಮಿಕ್ರಾನ್ ವೈರಸ್ ಅತಿಹೆಚ್ಚು ರೋಗ ನಿರೋಧಕ ವ್ಯವಸ್ಥೆಯನ್ನು ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಕುರಿತಾಗಿ ಸ್ಪಷ್ಟ ಪ್ರಾಯೋಗಿಕ ಹಾಗೂ ಕ್ಲಿನಿಕಲ್ ದತ್ತಾಂಶ ಲಭ್ಯವಿದೆ ಎಂದು ತಿಳಿಸಿದೆ. ಡೆಲ್ಟಾ ವೈರಸ್ ಗಿಂತ ( Delta variant) ಹೆಚ್ಚಿನ ವೇಗದಲ್ಲಿ ಒಮಿಕ್ರಾನ್ ವೈರಸ್ (Omicron)ಹಬ್ಬಲು ಈ ಅಂಶವೇ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದೆ. ಕಳೆದ ಒಂದು ವಾರದಲ್ಲಿ ಜಾಗತಿಕವಾಗಿ ಒಮಿಕ್ರಾನ್ ಕೇಸ್ ಗಳಲ್ಲಿ ಶೇ.11 ರಷ್ಟು ಏರಿಕೆಯಾಗಿದೆ. ಇದರ ಬೆನ್ನಲ್ಲಿಯೇ ವಿಶ್ವ ಆರೋಗ್ಯ ಸಂಸ್ಥೆ(WHO) ಬುಧವಾರ ದೊಡ್ಡ ಎಚ್ಚರಿಕೆಯನ್ನು ನೀಡಿದ್ದು, ಕೋವಿಡ್-19 ನ ಈ ರೂಪಾಂತರವು ಇನ್ನೂ "ಅತ್ಯಂತ ಹೆಚ್ಚಿನ" ಮಟ್ಟದ ಅಪಾಯವನ್ನುಂಟು ಮಾಡಲಿದ್ದು ಮತ್ತು ಆರೋಗ್ಯ ವ್ಯವಸ್ಥೆಯನ್ನೇ ಹದಗೆಡಿಸಬಹುದು ಎಂದಿದೆ.
ಕೋವಿಡ್-19 ಇಂಡಿಯಾ ಟ್ರ್ಯಾಕರ್ (India Covid tracker)ಅನ್ನು ಅಭಿವೃದ್ಧಿಪಡಿಸಿರುವ ಕೆಂಬ್ರಿಡ್ಜ್ ವಿವಿಯ(University of Cambridge) ಜಡ್ಜ್ ಬ್ಯುಸಿನೆಸ್ ಸ್ಕೂಲ್ ನ ಪ್ರೊಫೆಸರ್ ಪೌಲ್ ಕಟ್ಟುಮನ್ (Paul Kattuman) ಈ ಮೇಲ್ ಮೂಲಕ ಕೆಲ ವಿಚಾರಗಳನ್ನು ತಿಳಿಸಿದ್ದು, "ಭಾರತದಲ್ಲಿ ದೈನಂದಿನ ಪ್ರಕರಣಗಳ ವಿಚಾರದಲ್ಲಿ ಸ್ಫೋಟಕ ಬೆಳವಣಿಗೆಯನ್ನು ನೋಡುವ ಸಾಧ್ಯತೆ ಹೆಚ್ಚಾಗಿದೆ. ತೀವ್ರವಾಗಿ ಪ್ರಕರಣವು ಬೆಳೆಯುವ ಹಂತ ತುಲನಾತ್ಮಕವಾಗಿ ಬಹಳ ಚಿಕ್ಕದಾಗಿರುತ್ತದೆ. ಕೆಲವೇ ದಿನಗಳಲ್ಲಿ, ಅಂದರೆ ಬಹುಶಃ ಈ ವಾರದ ಒಳಗೆ ಸೋಂಕುಗಳು ಹೆಚ್ಚಾಗಲು ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ. ಅದರೊಂದಿಗೆ ದೈನಂದಿನ ಪ್ರಕರಣಗಳು ಎಷ್ಟು ಹೆಚ್ಚಾಗಬಹುದು ಎನ್ನುವುದನ್ನು ಸದ್ಯದ ಮಟ್ಟಿಗೆ ಅಂದಾಜು ಮಾಡುವುದು ಕಷ್ಟ ಎಂದಿದ್ದಾರೆ.