ಎವರೆಸ್ಟ್‌ಗೂ ತಲುಪಿತು ಕೊರೋನಾ ಮಹಾಮಾರಿ!!

By Kannadaprabha NewsFirst Published May 11, 2021, 8:09 AM IST
Highlights

* ನೇಪಾಳದಲ್ಲಿ ಪರ್ವತಾರೋಹಿಗಳಿಗೆ ಸೋಂಕು

* ಎವರೆಸ್ಟ್‌ಗೂ ತಲುಪಿತು, ಕೊರೋನಾ ಮಹಾಮಾರಿ!

* ಬೆಚ್ಚಿದ ಚೀನಾದಿಂದ ಎವರೆಸ್ಟ್‌ಗೇ ಗಡಿ ಗೆರೆ!

ಬೀಜಿಂಗ್‌(ಮೇ.11): 200ಕ್ಕೂ ಹೆಚ್ಚು ದೇಶಗಳನ್ನು ಆವರಿಸಿ ಇನ್ನಿಲ್ಲದ ವಿನಾಶ ಸೃಷ್ಟಿಸಿರುವ ಕೊರೋನಾ ಸೋಂಕು ಇದೀಗ ವಿಶ್ವದ ಅತಿ ಎತ್ತರದ ಹಿಮಶಿಖರ ಮೌಂಟ್‌ ಎವರೆಸ್ಟ್‌ ಅನ್ನು ಏರಿದೆ. ಇದಕ್ಕೆ ಉದಾಹರಣೆ ಎಂಬಂತೆ ಶಿಖರ ಏರಿ ಬಂದ ಮತ್ತು ಬೇಸ್‌ ಕ್ಯಾಂಪ್‌ನಲ್ಲಿರುವ ಹಲವು ಪರ್ವತಾರೋಹಿಗಳು ಮತ್ತು ಶೆರ್ಪಾಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ನಾರ್ವೆ ಮೂಲದ ಪರ್ವತಾರೋಹಿಯೊಬ್ಬರಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದ ಸೋಂಕು, ಇದೀಗ ಇನ್ನಷ್ಟುಜನರಲ್ಲಿ ಪತ್ತೆಯಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ಎವರೆಸ್ಟ್‌ ಏರುವುದಕ್ಕೆ ನಿಷೇಧ ಹೇರಿ, ಕಳೆದ ಏಪ್ರಿಲ್‌ನಲ್ಲಷ್ಟೇ ಮತ್ತೆ ಅವಕಾಶ ಕಲ್ಪಿಸಲಾಗಿತ್ತು. ಅದರ ಬೆನ್ನಲ್ಲೇ ಹಲವರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕ ಹುಟ್ಟಿಸಿದೆ.

ತುದಿಯಲ್ಲಿ ಚೀನಾ ಗೆರೆ:

ಈ ನಡುವೆ ವಿಶ್ವದಲ್ಲೇ ಮೊದಲ ಬಾರಿಗೆ ತನ್ನ ದೇಶದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್‌ ಅನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವ ಚೀನಾಕ್ಕೆ ಇದೀಗ ನೇಪಾಳದಿಂದ ಮೌಂಟ್‌ ಎವರೆಸ್ಟ್‌ ಮೂಲಕ ಸೋಂಕು ಬರಬಹುದು ಎಂಬ ಭೀತಿ ಕಾಣಿಸಿಕೊಂಡಿದೆ. ಹೀಗಾಗಿ ನೇಪಾಳ ಕಡೆಯಿಂದ ಪರ್ವತ ಹತ್ತುವವರ ಸಂಪರ್ಕಕ್ಕೆ ತನ್ನ ದೇಶದಿಂದ ಪರ್ವತಾರೋಹಣ ಮಾಡುವವರು ಬರದಿರಲಿ ಎಂಬ ಕಾರಣಕ್ಕೆ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ಗೇ ಗೆರೆ ಎಳೆಯಲು ಹೊರಟಿದೆ!

ನೇಪಾಳ ಹಾಗೂ ಚೀನಾ ಪರ್ವತಾರೋಹಿಗಳನ್ನು ಪ್ರತ್ಯೇಕಿಸುವ ಗೆರೆಯನ್ನು ಯಾವ ವಸ್ತು ಬಳಸಿ ಸೃಷ್ಟಿಸಲಾಗುತ್ತದೆ ಎಂಬುದು ತಿಳಿದುಬಂದಿಲ್ಲ. ಚೀನಾದಿಂದ ಪರ್ವತ ಹತ್ತುವವರು ನೇಪಾಳ ಕಡೆಯಿಂದ ಬರುವವರ ಜತೆ ಯಾವುದೇ ಕಾರಣಕ್ಕೂ ಸಂಪರ್ಕ ಸಾಧಿಸುವಂತಿರಬಾರದು ಎಂಬ ಕಾರಣಕ್ಕೆ ಈ ಯೋಜನೆಯನ್ನು ಚೀನಾ ರೂಪಿಸಿದೆ.

ಮೌಂಟ್‌ ಎವರೆಸ್ಟ್‌ ಅನ್ನು ಉತ್ತರ ಭಾಗವಾದ ಚೀನಾ ಹಾಗೂ ದಕ್ಷಿಣ ಭಾಗವಾದ ನೇಪಾಳದಿಂದ ಏರಬಹುದಾಗಿದೆ. ಎರಡೂ ದೇಶಗಳು ಕಳೆದ ವರ್ಷ ಕೊರೋನಾ ಕಾರಣಕ್ಕೆ ಪರ್ವತಾರೋಹಣವನ್ನು ಸ್ಥಗಿತಗೊಳಿಸಿದ್ದವು. ಆದರೆ ಈ ವರ್ಷ ಪ್ರವಾಸೋದ್ಯಮ ಆದಾಯದ ದೃಷ್ಟಿಯಿಂದ ನೇಪಾಳ 408 ವಿದೇಶಿಗರಿಗೆ ಪರ್ವತಾರೋಹಣಕ್ಕೆ ಅನುಮತಿ ನೀಡಿದೆ. ಚೀನಾ ಕೂಡ ತನ್ನ ಕಡೆಯಿಂದ 21 ಮಂದಿಗೆ ಪರ್ವತ ಹತ್ತಲು ಹಸಿರು ನಿಶಾನೆ ತೋರಿದೆ. ಆದರೆ ನೇಪಾಳದಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕು ಹಾಗೂ ಸಾವು ಸಂಭವಿಸುತ್ತಿದೆ. ನೇಪಾಳ ತನ್ನ ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಲಾಕ್‌ಡೌನ್‌ ವಿಧಿಸಿದೆ. ವಿಮಾನ ಸಂಚಾರವನ್ನು ರದ್ದುಗೊಳಿಸಿದೆ. ಹೀಗಾಗಿ ನೇಪಾಳದಿಂದ ತನಗೆ ಸೋಂಕು ಪ್ರಸರಣವಾಗಬಹುದು ಎಂಬ ಭೀತಿ ಚೀನಾವನ್ನು ಕಾಡುತ್ತಿದ್ದು, ಪರ್ವತಕ್ಕೇ ಗೆರೆ ಎಳೆಯಲು ಹೊರಟಿದೆ.

"

ಸೋಂಕು ಅಂಟಲು ಅಸಾಧ್ಯ:

ಆದರೆ ಮೌಂಟ್‌ ಎವರೆಸ್ಟ್‌ ಶೃಂಗಕ್ಕೆ ಯಾವುದೇ ಪ್ರತ್ಯೇಕತಾ ಗೆರೆ ಎಳೆಯಲು ಸಾಧ್ಯವಿಲ್ಲ. ಚೀನಾ ಹಾಗೂ ನೇಪಾಳದ ಪರ್ವತಾರೋಹಿಗಳು ತೀರಾ ಸನಿಹಕ್ಕೆ ಬರುವುದು ಒಂದು ಜಾಗದಲ್ಲಿ ಮಾತ್ರ. ಅಲ್ಲಿ ಕೆಲ ಕ್ಷಣ ನಿಂತು ಫೋಟೋ ತೆಗೆದುಕೊಳ್ಳುತ್ತಾರೆ. ಅದೂ ಅಲ್ಲದೆ ಪರ್ವತಾರೋಹಿಗಳು ದಪ್ಪನೆಯ ಪದರದ ಬಟ್ಟೆ, ಆಕ್ಸಿಜನ್‌ ಮಾಸ್ಕ್‌, ಕನ್ನಡಕ ಹಾಗೂ ಶೀತ ಗಾಳಿಯಿಂದ ರಕ್ಷಣೆಗೆ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಹೀಗಾಗಿ ಅವರಿಗೆ ಸೋಂಕು ತಗಲುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಪರ್ವತಾರೋಹಣ ತಜ್ಞ ಶೇರಿಂಗ್‌ ಶೆರ್ಪಾ.

ಕೊರೋನಾ ವೈರಸ್‌ ಸೋಂಕಿತರು ಮೌಂಟ್‌ ಎವರೆಸ್ಟ್‌ ಹತ್ತಲು ಆಗುವುದೇ ಇಲ್ಲ. ಉಸಿರಾಟ ಸಮಸ್ಯೆ ಇರುವವರು ಎತ್ತರ ಪ್ರದೇಶಕ್ಕೆ ಹೋಗಲು ಆಗುವುದಿಲ್ಲ ಎಂದೂ ತಿಳಿಸುತ್ತಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!