ತಾಲಿಬಾನ್‌ಗೆ ಇರಾನ್, ಚೀನಾ, ಪಾಕ್ ಬೆಂಬಲ: ಕಾದು ನೋಡುವ ಭಾರತ!

By Kannadaprabha NewsFirst Published Aug 17, 2021, 7:24 AM IST
Highlights

* ತಾಲಿಬಾನ್‌ ಉಗ್ರರ ಸರ್ಕಾರ ರಚನೆಯನ್ನು ಇಡೀ ವಿಶ್ವವೇ ಟೀಕಿಸುತ್ತಿದೆ

* ಚೀನಾ, ರಷ್ಯಾ ಮತ್ತು ಪಾಕಿಸ್ತಾನ ಸರ್ಕಾರಗಳಿಂದ ತಾಲಿಬಾನ್‌ ಆಡಳಿತಕ್ಕೆ ಬೆಂಬಲ

* ಅಮೆರಿಕದಿಂದ ತಾಲಿಬಾನ್‌ ಸರ್ಕಾರ ರಚನೆಗೆ ಪರೋಕ್ಷ ಬೆಂಬಲ

* ಭಾರತ ಕಾದುನೋಡುವ ತಂತ್ರಕ್ಕೆ ಶರಣು

ಬೀಜಿಂಗ್‌(ಆ.17): ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಸರ್ಕಾರ ರಚನೆಯನ್ನು ಇಡೀ ವಿಶ್ವವೇ ಟೀಕಿಸುತ್ತಿದ್ದರೆ, ಚೀನಾ, ರಷ್ಯಾ ಮತ್ತು ಪಾಕಿಸ್ತಾನ ಸರ್ಕಾರಗಳು ತಾಲಿಬಾನ್‌ ಆಡಳಿತಕ್ಕೆ ಬೆಂಬಲ ಸೂಚಿಸಿವೆ. ಅಮೆರಿಕವು ತಾಲಿಬಾನ್‌ ಸರ್ಕಾರ ರಚನೆಗೆ ಪರೋಕ್ಷ ಬೆಂಬಲ ನೀಡಿದ್ದು, ಭಾರತ ಕಾದುನೋಡುವ ತಂತ್ರಕ್ಕೆ ಶರಣಾಗಿದೆ.

ಆಷ್ಘಾನಿಸ್ತಾನದಲ್ಲಿನ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಚೀನಾ ಸರ್ಕಾರದ ವಕ್ತಾರ, ‘ತಾಲಿಬಾನ್‌ ಜತೆ ಸಹಕಾರ ಹಾಗೂ ಸ್ನೇಹಪರ ಸಂಬಂಧ ಇರಿಸಿಕೊಳ್ಳಲು ನಾವು ಸಿದ್ಧ. ನಾವು ಹೊಸ ಸರ್ಕಾರಕ್ಕೆ ಸಹಕಾರ ನೀಡಲಿದ್ದೇವೆ’ ಎಂದು ಹೇಳಿದ್ದಾರೆ. ಆಫ್ಘನ್‌ ಜತೆ ಚೀನಾ 76 ಕಿ.ಮೀ. ಗಡಿ ಹಂಚಿಕೊಂಡಿದೆ. ಚೀನಾದಲ್ಲಿ ಉಯಿಘುರ್‌ ಮುಸ್ಲಿಮರು ಇದ್ದು, ಇವರು ಪ್ರತ್ಯೇಕ ಉಯಿಘುರ್‌ ದೇಶಕ್ಕೆ ಬೇಡಿಕೆ ಇಟ್ಟಿರುವ ಪ್ರತ್ಯೇಕತಾವಾದಿಗಳಾಗಿದ್ದಾರೆ. ಇಂಥ ಸಂದರ್ಭದಲ್ಲಿ ತಾಲಿಬಾನ್‌ ಹಾಗೂ ಉಯಿಘುರ್‌ಗಳು ಒಂದಾಗುವ ಸಾಧ್ಯತೆ ಇದೆ. ಇದು ಚೀನಾದ ಆತಂಕ ಹೆಚ್ಚಿಸಿದೆ. ಇದೇ ಕಾರಣಕ್ಕೆ ತಾಲಿಬಾನ್‌ ಜತೆ ಅನಧಿಕೃತ ಸೌಹಾರ್ದ ಸಂಬಂಧಕ್ಕೆ ಮುಂದಾಗಿದೆ ಎನ್ನಲಾಗಿದೆ.

Video: ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಶವವಾದ ನಾಗರಿಕರು!

ಪಾಕ್‌ನದ್ದೂ ಬೆಂಬಲ:

ಮತ್ತೊಂದೆಡೆ ಪಾಕಿಸ್ತಾನ ಕೂಡಾ ತಾಲಿಬಾನ್‌ ಆಡಳಿತವನ್ನು ಸ್ವಾಗತಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌,‘ತಾಲಿಬಾನ್‌ ಸಂಘಟನೆಯು ಗುಲಾಮಗಿರಿಯ ಸಂಕೋಲೆಯನ್ನು ತುಂಡರಿಸಿದೆ’ ಎಂದು ಬಣ್ಣಿಸಿದ್ದಾರೆ. ಇಂಗ್ಲಿಷ್‌ ಶಾಲೆಗಳಿಂದ ಆಫ್ಘನ್‌ ಸಂಸ್ಕೃತಿ ನಾಶವಾಗುತ್ತಿತ್ತು ಎಂಬರ್ಥದಲ್ಲಿ ಮಾತನಾಡಿರುವ ಅವರು, ‘ನೀವು ಮತ್ತೊಂದು ಸಂಸ್ಕೃತಿಯನ್ನು ನಿಮ್ಮದಾಗಿಸಿಕೊಂಡು ಮಾನಸಿಕವಾಗಿ ಅಡಿಯಾಳಾಗಿರುತ್ತೀರಿ. ಅದು ನಿಜವಾದ ಗುಲಾಮಗಿರಿಗಿಂತಲೂ ಕೆಟ್ಟದ್ದು. ಸಾಂಸ್ಕೃತಿಕ ಗುಲಾಮಿತನವನ್ನು ತೊಡೆದುಹಾಕುವುದು ಕಷ್ಟ. ಈಗ ಅಫ್ಘಾನಿಸ್ತಾನದಲ್ಲಿ ಆಗುತ್ತಿರುವುದು ಏನೆಂದರೆ ತಾಲಿಬಾನ್‌ ಈ ಗುಲಾಮಗಿರಿಯ ಸಂಕೋಲೆಯನ್ನು ತುಂಡರಿಸಿದೆ’ ಎಂದಿದ್ದಾರೆ.

ಸ್ಥಳವಿಲ್ಲದಿದ್ದರೂ ವಿಮಾನವೇರಿದ ಅಫ್ಘನ್ನರು: ಟೇಕ್‌ ಆಫ್ ಆಗ್ತಿದ್ದಂತೆಯೇ ಮೂವರು ಕೆಳಕ್ಕೆ!

ತಾಲಿಬಾನ್‌ ಉಗ್ರರಿಗೆ ಇತರೆ ಹಲವು ಉಗ್ರ ಸಂಘಟನೆಗಳ ಜೊತೆ ನಂಟಿದೆ. ಅವು ಸದಾ ಭಾರತದಲ್ಲಿ ಭಯೋತ್ಪಾದನೆಯ ಕೃತ್ಯವೆಸಗುತ್ತಲೇ ಇರುತ್ತವೆ. ಹೀಗಾಗಿ ತಾಲಿಬಾನ್‌ ಬಳಸಿಕೊಂಡು ಭಾರತದಲ್ಲಿ ಇನ್ನಷ್ಟುದುಷ್ಕೃತ್ಯ ನಡೆಸಲು ಚೀನಾ, ಪಾಕಿಸ್ತಾನ ಸಂಚು ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

click me!