ಉಗ್ರರ ಕೈಗೆ ಅಪ್ಘಾನಿಸ್ತಾನ: ಮನುಕುಲಕ್ಕೇ 'ಅಪಮಾನಿಸ್ತಾನ್'!

By Kannadaprabha NewsFirst Published Aug 17, 2021, 7:16 AM IST
Highlights

* ರಾಜಧಾನಿ ಕಾಬೂಲ್‌ನಲ್ಲಿ ಸೋಮವಾರ ಭಾರೀ ಅರಾಜಕತೆ ಸೃಷ್ಟಿ

* ನಗರ ಪ್ರವೇಶ ಮಾಡಿರುವ ಉಗ್ರರು ಅಲ್ಲಲ್ಲಿ ಲೂಟಿ ಮಾಡಿರುವ ಪ್ರಕರಣ

* ವಿಮಾನ ನಿಲ್ದಾಣದಲ್ಲಿನ ದೃಶ್ಯಗಳು ದೇಶದಲ್ಲಿನ ಅರಾಜಕ ಸ್ಥಿತಿಗೆ ಕೈಗನ್ನಡಿ

* ಕಂಡುಕೇಳರಿಯದ ಈ ರೀತಿಯ ಪಲಾಯನ ಯತ್ನದ ದೃಶ್ಯgಗಳು

ಕಾಬೂಲ್‌(ಆ.17): ತಾಲಿಬಾನಿಗಳು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬೆನ್ನಲ್ಲೇ ರಾಜಧಾನಿ ಕಾಬೂಲ್‌ನಲ್ಲಿ ಸೋಮವಾರ ಭಾರೀ ಅರಾಜಕತೆ ಸೃಷ್ಟಿಯಾಗಿದೆ. ನಗರ ಪ್ರವೇಶ ಮಾಡಿರುವ ಉಗ್ರರು ಅಲ್ಲಲ್ಲಿ ಲೂಟಿ ಮಾಡಿರುವ ಪ್ರಕರಣಗಳು ನಡೆದಿವೆ. ಮತ್ತೊಂದೆಡೆ ತಾಲಿಬಾನಿಗಳು ತಮ್ಮ ಮೇಲೆ ಕ್ರೌರ‍್ಯ ಮೆರೆಯಬಹುದು ಎಂಬ ಭೀತಿಯಿಂದ ಕಾಬೂಲ್‌ ಜನರು ವಿಮಾನ ನಿಲ್ದಾಣಕ್ಕೆ ಓಡಿಬಂದು ಸಿಕ್ಕಸಿಕ್ಕ ವಿಮಾನಗಳಲ್ಲಿ ಹತ್ತಿ ಕುಳಿತು ದೇಶದಿಂದ ಪಲಾಯನಗೈಯಲು ಯತ್ನ ನಡೆಸಿದ್ದಾರೆ. ವಿಮಾನ ನಿಲ್ದಾಣದಲ್ಲಿನ ದೃಶ್ಯಗಳು ದೇಶದಲ್ಲಿನ ಅರಾಜಕ ಸ್ಥಿತಿಗೆ ಕೈಗನ್ನಡಿ ಹಿಡಿದಂತಿವೆ. ಇದುವರೆಗೆ ಕಂಡುಕೇಳರಿಯದ ಈ ರೀತಿಯ ಪಲಾಯನ ಯತ್ನದ ದೃಶ್ಯಗಳು ಇಡೀ ವಿಶ್ವದ ಮನಕಲಕುವಂತೆ ಮಾಡಿವೆ.

Video: ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಶವವಾದ ನಾಗರಿಕರು!

ಇದರ ಬೆನ್ನಲ್ಲೇ ಅಮೆರಿಕ ಸೇನೆಯು ತನ್ನ ವಶದಲ್ಲಿರುವ ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಇಡೀ ಅಷ್ಘಾನಿಸ್ತಾನದ ವಾಯುಸೀಮೆಯನ್ನು ಬಂದ್‌ ಮಾಡಿದ್ದು, ಎಲ್ಲಾ ರೀತಿಯ ವಾಣಿಜ್ಯ ವಿಮಾನಗಳ ಸಂಚಾರ ನಿರ್ಬಂಧಿಸಿದೆ. ಜೊತೆಗೆ ನೇರವಾಗಿ ತಾಲಿಬಾನ್‌ ಉಗ್ರರ ಜೊತೆ ಮಾತುಕತೆ ನಡೆಸುವ ಮೂಲಕ ವಿಮಾನ ನಿಲ್ದಾಣದಲ್ಲಿ ಇರುವ ಜನರ ಸುರಕ್ಷಿತ ತೆರವಿಗೆ ಅವಕಾಶ ಮಾಡಿಕೊಡುವಂತೆ ಸೂಚಿಸಿದೆ. ಈ ಎಲ್ಲಾ ಬೆಳವಣಿಗೆಗಳು ಸ್ಥಳೀಯರ ಜಂಘಾಬಲವನ್ನೇ ಉಡುಗಿಸಿವೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರೀ ಆತಂಕ ಸೃಷ್ಟಿಸಿವೆ.

ಬಾಗಿಲು ತಟ್ಟಿದ ಉಗ್ರರು:

ಸೋಮವಾರ ಬೆಳಗ್ಗೆಯಿಂದಲೇ ಕಾಬೂಲ್‌ನಲ್ಲಿ ತಲ್ಲಣದ ವಾತಾವರಣ ಉಂಟಾಗಿತ್ತು. ಉಗ್ರರು ನಗರದ ಅನೇಕ ವೃತ್ತಗಳಲ್ಲಿ ಪಹರೆ ಕಾಯುತ್ತಿದ್ದರು. ಹಲವು ಜನರು ಮನೆಯಿಂದಲೇ ಹೊರಬರಲು ಹೆದರಿ ಬಾಗಿಲು ಮುಚ್ಚಿ ಕುಳಿತರು. ಇಂಥ ಸಂದರ್ಭದಲ್ಲಿ ಬಂದೂಕುಧಾರಿ ತಾಲಿಬಾನಿಗಳು ಮನೆಗಳ ಕದ ತಟ್ಟುತ್ತ ಜನರ ಶೋಧ ನಡೆಸುತ್ತಿರುವುದು ಕಂಡುಬಂತು. ಕೆಲವೆಡೆ ಲೂಟಿಯ ಪ್ರಕರಣಗಳು ನಡೆದವು.

ವಿಮಾನ ನಿಲ್ದಾಣದತ್ತ ಓಟ:

ತಾಲಿಬಾನ್‌ ಕ್ರೌರ‍್ಯದಿಂದ ಬಚಾವ್‌ ಆಗುವ ನಿಟ್ಟಿನಲ್ಲಿ ಸಹಸ್ರಾರು ನಾಗರಿಕರು ಭಾನುವಾರದಿಂದಲೇ ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ದಾಂಗುಡಿ ಇಟ್ಟಿದ್ದರು. ಸೋಮವಾರ ಈ ಸಂಖ್ಯೆ ಹೆಚ್ಚಿತ್ತು. ಕಾಬೂಲ್‌ನಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ ಬಂದ್‌ ಆಗಿದ್ದರೂ ಅವರು ಏರ್‌ಪೋರ್ಟ್‌ನತ್ತ ನುಗ್ಗಿ, ತಮ್ಮನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಆಶ್ರಯ ನೀಡಿ ಎಂದು ಗೋಗರೆಯುತ್ತಿದ್ದುದು ಕಂಡುಬಂತು. ಇನ್ನು ಅಮೆರಿಕದ ಕೆಲವು ವಾಯುಪಡೆಯ ವಿಮಾನಗಳು ಹಾರುತ್ತಿದ್ದಾಗ ರನ್‌ವೇನಲ್ಲಿ ಜನರು ಅಡ್ಡ ಬಂದ ಘಟನೆಗಳೂ ನಡೆದವು. ಕೆಲವರು ವಿಮಾನದ ಬಾಗಿಲು, ಕಿಟಕಿ, ಟೈರ್‌, ಎಂಜಿನ್‌ ಬಳಿ ಹತ್ತಿಕೊಂಡು ಪ್ರಯಾಣಕ್ಕೆ ಯತ್ನಿಸಿದರು. ಈ ವೇಳೆ ಇಬ್ಬರು ನಾಗರಿಕರು ನೂರಾರು ಅಡಿ ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಭೀಕರ ದೃಶ್ಯಗಳು ಕಂಡುಬಂದವು.

ಸ್ಥಳವಿಲ್ಲದಿದ್ದರೂ ವಿಮಾನವೇರಿದ ಅಫ್ಘನ್ನರು: ಟೇಕ್‌ ಆಫ್ ಆಗ್ತಿದ್ದಂತೆಯೇ ಮೂವರು ಕೆಳಕ್ಕೆ!

ಬಸ್ಸಿನ ಥರ ವಿಮಾನದಲ್ಲಿ ರಶ್‌:

ಬಸ್ಸಿನಲ್ಲಿ ಸೀಟು ಸಿಗದವರು ನಿಂತೇ ಪ್ರಯಾಣಿಸುವುದು ಹಾಗೂ ಬಾಗಿಲಲ್ಲಿ ಜೋತು ಬಿದ್ದು ಫುಟ್‌ಬೋರ್ಡ್‌ ಮೇಲೆ ಪ್ರಯಾಣ ಮಾಡುವುದು ಸಾಮಾನ್ಯ. ಆದರೆ ಪ್ರಾಣಭಯದಿಂದ ಜನರು ವಿಮಾನವನ್ನು ಏರಿ ಎಲ್ಲೆಂದರಲ್ಲಿ ಕುಳಿತಿದ್ದು, ಬಾಗಿಲಲ್ಲಿ ಜೋತು ಬಿದ್ದಿದ್ದು, ವಿಮಾನದ ರೆಕ್ಕೆ ಮೇಲೆ ಕುಳಿತಿದ್ದು ಹಾಗೂ ವಿಮಾನದ ಟಾಪ್‌ ಏರಿ ನಿಂತಿದ್ದು ಕೂಡ ಕಾಬೂಲ್‌ನಲ್ಲಿ ಕಂಡುಬಂತು.

ಈ ಬಗ್ಗೆ ಮಾತನಾಡಿದ ಉಜ್ಬೇಕಿಸ್ತಾನಕ್ಕೆ ಟಿಕೆಟ್‌ ಕಾದಿರಿಸಿದ್ದ ಶಫಿ ಅರೀಫಿ ಎಂಬ ಪ್ರಯಾಣಿಕಳೊಬ್ಬಳು, ‘ನನಗೆ ಹತ್ತಲು ಜಾಗವೇ ಇರಲಿಲ್ಲ. ವಿಮಾನದಲ್ಲಿ ಉಸಿರಾಡಲೂ ಅವಕಾಶ ಇಲ್ಲದಷ್ಟುಸಂದಣಿ ಇತ್ತು. ಜನರು ಚೀರುತ್ತಿದ್ದರು, ಅಳುತ್ತಿದ್ದರು. ಯಾರು ಏನು ಮಾತನಾಡುತ್ತಿದ್ದರೆ ಎಂದು ಕೇಳಿಸಲು ಆಗಷ್ಟುಜನರ ಕಿರುಚಾಟ ಇತ್ತು’ ಎಂದಿದ್ದಾಳೆ. ಎಷ್ಟುಜನಸಂದಣಿ ಇತ್ತು ಎಂದರೆ ಸರಿಯಾಗಿ ಉಸಿರಾಡಲು ಆಗದೇ ಮಹಿಳೆಯೊಬ್ಬಳು ಮೂರ್ಛೆಹೋದ ಘಟನೆ ಕೂಡ ನಡೆಯಿತು.

Video: ಸಾವಿನ ಭಯ: ಅಪ್ಘಾನಿಸ್ತಾನ ತೊರೆಯಲು ವಿಮಾನದಲ್ಲಿ ನೂಕು ನುಗ್ಗಲು!

ಯಾರ ಮನೆಗೂ ನುಗ್ಗಬೇಡಿ- ತಾಲಿಬಾನ್‌:

ತನ್ನದೇ ಉಗ್ರರು ಜನರ ಮನೆಗಳಿಗೆ ನುಗ್ಗುತ್ತಿರುವ ನಡುವೆಯೇ, ‘ನಮ್ಮ ಯಾವ ಪಡೆಗಳು ಕೂಡ ಜನರ ಮನೆಗಳಿಗೆ ನುಗ್ಗಬಾರದು. ಎಲ್ಲರನ್ನೂ ಗೌರವದಿಂದ ನೋಡಬೇಕು ಹಾಗೂ ಜೀವಹರಣ ಮಾಡಬಾರದು ಎಂದು ತಾಲಿಬಾನ್‌ ವಕ್ತಾರ ಸುಹೈಲ್‌ ಶಾಹೀನ್‌ ಕರೆ ನೀಡಿದ್ದಾನೆ. ಇದೇ ವೇಳೆ, ಅಮೆರಿಕ ಸಿಬ್ಬಂದಿ ಹಾಗೂ ಅವರ ಕ್ವಾರ್ಟರ್ಸ್‌ಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಆತ ಸ್ಪಷ್ಟಪಡಿಸಿದ್ದಾನೆ.

click me!