
ಹಣ ಕಂಡ್ರೆ ಹೆಣನೂ ಬಾಯ್ಬಿಡುತ್ತೆ ಎನ್ನುವ ಕಾಲ ಇದು ಹೀಗಿರುವಾಗ ಅನಾಥ ಬಾಲಕನೋರ್ವನಿಗೆ ಹಲವು ವರ್ಷಗಳ ನಂತರ ತಾನೋಬ್ಬ ಶ್ರೀಮಂತ ಪೋಷಕರ ಪುತ್ರ ಎಂಬುದು ಗೊತ್ತಾಗಿದೆ. ಆದರೆ ಆತ ತನ್ನ ಪೋಷಕರ ಶ್ರೀಮಂತರಿಗೆ ಮರುಳಾಗದೇ ಅವರ ಆಸ್ತಿಯನ್ನು ತಿರಸ್ಕರಿಸಿದ್ದಾನೆ ಇಂತಹ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ. ನೀವು ಸಿನಿಮಾಗಳಲ್ಲಿ ಇಂತಹ ಘಟನೆಯನ್ನು ನೋಡಿರಬಹುದು. ಅಪಹರಣಕ್ಕೊಳಗಾದ ಶ್ರೀಮಂತ ವ್ಯಕ್ತಿಯೊಬ್ಬನ ಪುತ್ರ ಅನಾಥನಾಗಿ ಬೆಳೆದು ನಂತರ ತನ್ನ ಬಾಲ್ಯ, ಕಳೆದು ಹರೆಯಕ್ಕೆ ಕಾಲಿರಿಸಿದ ನಂತರ ಮತ್ತೆ ತನ್ನ ನಿಜವಾದ ಪೋಷಕರನ್ನು ಭೇಟಿಯಾಗುವಂತಹ ಘಟನೆಗಳನ್ನು ನೀವು ಸಿನಿಮಾಗಳಲ್ಲಿ ನೋಡಿರಬಹುದು. ಆದರೆ ಚೀನಾದಲ್ಲಿ ನಿಜವಾಗಿಯೂ ಇಂತಹ ಘಟನೆ ನಡೆದಿದೆ.
ಚೀನಾದ 26 ವರ್ಷದ ಶಿ ಕ್ವಿನ್ಶುಯಿ ಎಂಬ ಯುವಕ ತನಗೆ 3 ತಿಂಗಳಿರುವಾಗ ಅಪಹರಿಸಲ್ಪಟ್ಟಿದ್ದರು. ಇತ್ತ ನಾಪತ್ತೆಯಾದ ತಮ್ಮ ಮಗುವಿಗಾಗಿ ಆತನ ಪೋಷಕರು ದಶಕಗಳ ಕಾಲ ಹುಡುಕದ ಸ್ಥಳಗಳಿಲ್ಲ, ಓಡಾಡದ ಜಾಗಗಳಿಲ್ಲ, ವೆಚ್ಚ ಮಾಡದ ಹಣವಿಲ್ಲ, ಸುಮಾರು 1 ಕೋಟಿ ರೂಪಾಯಿಯನ್ನು ಇದಕ್ಕಾಗಿಯೇ ಅವರು ವೆಚ್ಚ ಮಾಡಿದ್ದರು. ಆದರೆ ಈಗ ಕಡೆಗೂ ಅವರಿಗೆ ಅವರ ಮಗ ಸಿಕ್ಕಿದ್ದಾನೆ. ಆದರೆ ಮಗನ ಮನಸ್ಸು ಇಷ್ಟು ವರ್ಷಗಳಲ್ಲಿ ಬದಲಾಯಿಸಲಾಗದಷ್ಟು ಬದಲಾಗಿದೆ.
ಜೀವನ ಯಾವಾಗಲೂ ಅನಿರೀಕ್ಷಿತ, ನಾಳೆ ಏನಾಗುವುದು ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ, ಶ್ರೀಮಂತನ ಮಗನಾಗಿ ಹುಟ್ಟಿಯೂ ಅನಾಥನಾಗಿ ಬೆಳೆಯಬಹುದು. ಅನಾಥನಾಗಿ ಹುಟ್ಟಿ ಅತೀ ಶ್ರೀಮಂತ ಕುಟುಂಬವನ್ನು ಸೇರಬಹುದು. ಸಾವು ಎಷ್ಟು ಅನಿಶ್ಚಿತವೋ ಹಾಗೆಯೇ ಜೀವನ ಕೂಡ, ಇಲ್ಲಿ ಶ್ರೀಮಂತರ ಮಗನಾಗಿ ಹುಟ್ಟಿದರೂ ಶಿ ಕ್ವಿನ್ಶುಯಿ ತಮ್ಮ ಜೀವನದ 26 ವರ್ಷಗಳ ಕಾಲ ಅನಾಥರಾಗಿ ಬೆಳೆದಿದ್ದಾರೆ. ಅವರ ಈ ಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, 26 ವರ್ಷದ ಶಿ ಕ್ವಿನ್ಶುಯಿ ಅವರು ಮೂರು ತಿಂಗಳ ಕಂದನಿಂದಾಗ ಅಪಹರಣಕ್ಕೊಳಗಾಗಿದ್ದರು. ಆತನಿಗಾಗಿ ಸಾಕಷ್ಟು ಕಡೆ ಅವರು ಹುಡುಕಾಟ ನಡೆಸಿದ್ದು, ಬರೋಬ್ಬರಿ 1 ಕೋಟಿ ಹಣವನ್ನು ಖರ್ಚು ಮಾಡಿದ್ದರು. ಆದರೂ ಅವರಿಗೆ ಹಲವು ದಶಕಗಳ ನಂತರ ಮಗನಿಗೆ 26 ವರ್ಷ ತುಂಬಿದ ನಂತರ ಸಿಕ್ಕಿದ್ದಾನೆ. ಇದಾದ ನಂತರ ಶಿ ಕ್ವಿನ್ಶುಯಿ ಅವರು ತಮ್ಮ ಕುಟುಂಬವನ್ನು ಡಿಸೆಂಬರ್ 1 ರಂದು ಭೇಟಿಯಾದರು. ಇತ್ತ ಮಗ ಸಿಕ್ಕ ಖುಷಿಯಲ್ಲಿ ಪೋಷಕರು ದೊಡ್ಡ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಅಲ್ಲದೇ ಮಗನಿಗೆ ಹಲವು ವಸ್ತುಗಳನ್ನು ನೀಡಿದರು. ಆತನಿಗೆ ಹಲವು ಪ್ಲಾಟ್‌ಗಳ ಕೀಗಳನ್ನು ಹಾಗೂ ಒಂದು ಕಾರನ್ನು ಕೂಡ ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಮಗ ಮಾತ್ರ ಅಚಾನಕ್ ಆಗಿ ಸಿಕ್ಕಿದ ಐಶ್ವರ್ಯಾಕ್ಕೆ ಆಸೆ ಪಡದೇ ಪೋಷಕರು ನೀಡಿದ ಈ ಐಷಾರಾಮಿ ವಸ್ತುಗಳನ್ನೆಲ್ಲಾ ಸ್ವೀಕರಿಸದೇ ತಿರಸ್ಕರಿಸಿದ್ದಾನೆ. ಅಲ್ಲದೇ ಕೇವಲ ಒಂದು ಮನೆಯನ್ನು ಮಾತ್ರ ಆತ ತನ್ನ ಪೋಷಕರಿಂದ ಸ್ವೀಕರಿಸಿದ್ದಾನೆ.
ಪ್ರಸ್ತುತ ಲೈವ್ ಸ್ಟ್ರೀಮ್‌ಗಳಿಂದಲೇ ಹೆಚ್ಚು ಆದಾಯ ಗಳಿಸುವ ಶಿ ಕ್ವಿನ್ಶುಯಿ ಅವರು ಈಗ ಪೋಷಕರ ಆಸ್ತಿಯನ್ನು ತಿರಸ್ಕರಿಸಿದ್ದು, ತಮ್ಮಿಂದಾಗಿ ಅವರು ತಮ್ಮ ಶ್ರೀಮಂತಿಕೆಯನ್ನು ಕಳೆದುಕೊಳ್ಳುವುದು ಬೇಡ ಎಂದು ಹೇಳಿದ್ದಾರೆ. ಹಣ ಕಂಡ್ರೆ ಹೆಣನೂ ಬಾಯ್ಬಿಡುತ್ತೆ ಎನ್ನುವ ಈ ಕಾಲದಲ್ಲಿ ಶಿ ಕ್ವಿನ್ಶುಯಿ ಅವರು ಎಲ್ಲಾ ಸವಲತ್ತುಗಳನ್ನು ನೀಡಿದರು ಬೇಡ ಎಂದು ತಿರಸ್ಕರಿಸಿರುವುದಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ