
ಬೀಜಿಂಗ್(ಮೇ.16): ಚೀನಾದ ಟಿಯಾನ್ವೆನ್ -1 ನೌಕೆ ಹೊತ್ತೊಯ್ದಿದ್ದ ಝುರಾಂಗ್ ರೋವರ್ ಶನಿವಾರ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿದಿದೆ. ಈ ಮೂಲಕ ಅಮೆರಿಕದ ಬಳಿಕ ಈ ಸಾಧನೆ ಮಾಡಿದ ಎರಡನೇ ದೇಶ ಎನಿಸಿಕೊಂಡಿದೆ. ಅಮೆರಿಕ ಮತ್ತು ರಷ್ಯಾ ಜೊತೆ ಬಾಹ್ಯಾಕಾಶ ಸ್ಪರ್ಧೆ ನಡೆಸುತ್ತಿರುವ ಚೀನಾಕ್ಕೆ ಈ ಯಶಸ್ಸು ಅತ್ಯಂತ ಮಹತ್ವದ್ದಾಗಿದೆ.
ಮಂಗಳನ ಮೇಲೆ ಯುಟೋಪಿಯಾ ಪ್ಲಾನಿಟಿಯಾ ಎಂಬ ಪೂರ್ವ ನಿರ್ಧರಿತ ಜಾಗದಲ್ಲೇ ರೋವರ್ ಯಶಸ್ವಿಯಾಗಿ ಭೂಸ್ಪರ್ಶ ಮಾಡಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. 240 ಕೆಜಿ ತೂಕವಿರುವ ರೋವರ್, ತನ್ನೊಳಗೆ ಒಟ್ಟು 6 ಉಪಕರಣಗಳನ್ನು ಹೊಂದಿದ್ದು, ಅದನ್ನು ಬಳಸಿ ವಿವಿಧ ಸಂಶೋಧನೆ ನಡೆಸಲಿದೆ.
ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಒಳಗೊಂಡ ಟಿಯಾನ್ವೆನ್-1 ನೌಕೆಯನ್ನು ಚೀನಾ, 2020ರ ಜು.23ರಂದು ಹಾರಿಬಿಟ್ಟಿತ್ತು. ಇದು ಸೌರಮಂಡಲದಲ್ಲಿ ಚೀನಾದ ಮೊದಲ ಸಂಶೋಧನಾ ಯಾತ್ರೆಯಾಗಿತ್ತು. ಹೀಗಾಗಿ ಈ ಯೋಜನೆ ಕುರಿತು ಭಾರೀ ಕುತೂಹಲವೂ ಇತ್ತು.
ನೌಕೆಯು, ಕಳೆದ ಫೆಬ್ರುವರಿಯಲ್ಲೇ ಲ್ಯಾಂಡರ್ ಮತ್ತು ರೋವರ್ ಅನ್ನು ಮಂಗಳನ ಕಕ್ಷೆಗೆ ಸೇರಿತ್ತು. ಅಲ್ಲಿ ಸುಮಾರು 3 ತಿಂಗಳು ಸುತ್ತಿದ ಬಳಿಕ ಇದೀಗ ಲ್ಯಾಂಡರ್ ಮತ್ತು ರೋವರ್ ಮಂಗಳನ ನೆಲವನ್ನು ಸ್ಪರ್ಶಿಸಿದೆ.
ಮಂಗಳನ ಅಧ್ಯಯನಕ್ಕೆಂದು ವಿಶ್ವದ ವಿವಿಧ ದೇಶಗಳು ಇದುವರೆಗೆ 40 ಯೋಜನೆ ಜಾರಿಗೊಳಿಸಿವೆ. ಈ ಪೈಕಿ ಯಶಸ್ಸು ಕಂಡಿದ್ದು ಅರ್ಧದಷ್ಟು. ಅದರಲ್ಲೂ ಮಂಗಳನ ನೆಲವನ್ನು ಯಶಸ್ವಿಯಾಗಿ ಸ್ಪರ್ಶಿಸಿದ್ದು ಕೇವಲ ಅಮರಿಕ ಮತ್ತು ಚೀನಾ ಮಾತ್ರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ