ವೈರಸ್‌ ಸೋಂಕು ಬೇಕಂತಲೆ ರಹಸ್ಯವಾಗಿಟ್ಟಿದ್ದ ಚೀನಾ: ಲಸಿಕೆ ಶೋಧಕ್ಕೆ ಅಡ್ಡಿ

By Kannadaprabha NewsFirst Published May 3, 2020, 9:53 AM IST
Highlights

ಚೀನಾ ಕೊರೋನಾ ಸೀಕ್ರೆಟ್‌ ಬೇಹುಗಾರರಿಂದ ಬಯಲು |  ವೈರಸ್‌ ಸೋಂಕು ಬೇಕಂತಲೆ ರಹಸ್ಯವಾಗಿಟ್ಟಿದ್ದ ದೇಶ: ಲಸಿಕೆ ಶೋಧಕ್ಕೆ ಅಡ್ಡಿ | ಲಾಕ್‌ಡೌನ್‌ ಹೇರಿ ಬೇರೆ ದೇಶಗಳಿಗೆ ಅದನ್ನು ಮಾಡಬೇಡಿ ಎಂದಿತ್ತು ನೆರೆ ದೇಶ

ನ್ಯೂಯಾರ್ಕ್  (ಮೇ. 03):  ಜಗತ್ತಿಗೇ ಕಂಟಕವಾಗಿರುವ ಕೊರೋನಾ ವೈರಸ್‌ ಕುರಿತು ಚೀನಾ ಎಲ್ಲ ದೇಶಗಳಿಗೂ ಸುಳ್ಳು ಹೇಳಿದೆ. ಉದ್ದೇಶಪೂರ್ವಕವಾಗಿ ಉಪಯುಕ್ತ ಮಾಹಿತಿಯನ್ನು ಆ ದೇಶ ಬಚ್ಚಿಟ್ಟಿದ್ದರಿಂದಾಗಿ ಲಸಿಕೆ ಕಂಡುಹಿಡಿಯುವ ವಿವಿಧ ದೇಶಗಳ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಐದು ದೇಶಗಳ ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ.

ಅಮೆರಿಕ, ಕೆನಡಾ, ಬ್ರಿಟನ್‌, ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ದೇಶಗಳ ಗುಪ್ತಚರ ಸಂಸ್ಥೆಗಳು 15 ಪುಟಗಳ ವರದಿಯೊಂದನ್ನು ಸಿದ್ಧಪಡಿಸಿದ್ದು, ಇದರಲ್ಲಿ ಚೀನಾ ವರ್ತನೆ ಕುರಿತಂತೆ ಹಲವು ಮಾಹಿತಿಗಳು ಇವೆ.

ಕೊರೋನಾ ಸುತ್ತ ಚೀನಾ ಸರ್ಕಾರ ರಹಸ್ಯ ಕಾಪಾಡಿಕೊಂಡಿದ್ದು ಅಂತಾರಾಷ್ಟ್ರೀಯ ಪಾರದರ್ಶಕತೆ ಮೇಲೆ ನಡೆಸಿದ ದಾಳಿಯಾಗಿದೆ. ಮಾನವರಿಂದ ಮಾನವರಿಗೆ ಈ ವೈರಸ್‌ ಹರಡುವುದಿಲ್ಲ ಎಂದು ಚೀನಾ ವಾದಿಸಿತ್ತು. ಅದನ್ನೇ ವಿಶ್ವ ಆರೋಗ್ಯ ಸಂಸ್ಥೆಯೂ ನಂಬಿ, ಜ.14ರಂದು ಟ್ವೀಟ್‌ ಮೂಲಕ ಪ್ರತಿಪಾದಿಸಿತ್ತು.

ಮತ್ತಷ್ಟು ವಿನಾಯಿತಿ: ವಾಣಿಜ್ಯ ಚಟುವಟಿಕೆ ಆರಂಭ

ಅದಾದ 2 ವಾರಗಳ ಬಳಿಕ ವೈರಸ್‌ ಮಾನವರಿಂದ ಮಾನವರಿಗೆ ಹಬ್ಬುತ್ತದೆ ಎಂದು ಚೀನಾ ಹೇಳಿತ್ತು. ಇದರಿಂದಾಗಿ ವಿವಿಧ ದೇಶಗಳಿಗೆ ವೈರಸ್‌ ಹರಡಲು ಸಾಕಷ್ಟುಸಮಯಾವಕಾಶ ಲಭಿಸಿತು. ಅದೂ ಅಲ್ಲದೆ, ವೈರಸ್‌ ಬಗ್ಗೆ ಮಾತನಾಡಿದವರನ್ನು ಚೀನಾ ಬಾಯಿ ಮುಚ್ಚಿಸಿತು. ಕೆಲವರು ನಾಪತ್ತೆಯಾಗುವಂತೆ ನೋಡಿಕೊಂಡಿತು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಚೀನಾದ ವುಹಾನ್‌ ಲ್ಯಾಬ್‌ನಲ್ಲಿ ಕೊರೋನಾ ವೈರಸ್‌ ಕುರಿತ ಸಂಶೋಧನೆ ನಡೆಯುತ್ತಿತ್ತು. ಆದರೆ ಆ ಲ್ಯಾಬೋರೇಟರಿಯಲ್ಲಿನ ಎಲ್ಲ ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ಚೀನಾ ನಾಶಪಡಿಸಿತು. ವೈರಸ್‌ಗೆ ಲಸಿಕೆ ಕಂಡುಹಿಡಿಯಲು ಜಗತ್ತಿನ ವಿಜ್ಞಾನಿಗಳಿಗೆ ವೈರಸ್‌ ಮಾದರಿ ನೀಡಲೂ ನಿರಾಕರಿಸಿತು. ಸರ್ಚ್ ಎಂಜಿನ್‌ಗಳಲ್ಲಿ ಕೊರೋನಾ ವೈರಸ್‌ಗೆ ಸಂಬಂಧಿಸಿದ ಪದಗಳನ್ನು ಅಳಿಸಿ ಹಾಕಿತು. ತನ್ನ ದೇಶದ ನಾಗರಿಕರಿಗೆ ಪ್ರಯಾಣ ನಿರ್ಬಂಧ ಹೇರಿ, ಇತರ ದೇಶಗಳಿಗೆ ಆ ರೀತಿ ಮಾಡಬೇಡಿ ಎಂದು ಹೇಳಿತು. ಬೀಜಿಂಗ್‌ನಲ್ಲಿ ಜ.23ರಂದೇ ಲಾಕ್‌ಡೌನ್‌ ಹೇರಿ, ಇತರ ದೇಶಗಳಿಗೆ ಅಂತಹ ಕ್ರಮ ಕೈಗೊಳ್ಳದಂತೆ ಸಲಹೆ ಮಾಡಿತ್ತು ಎಂದು ವಿವರಿಸಲಾಗಿದೆ.

ಕೊರೋನಾ ನಿರ್ವಹಣೆಯಲ್ಲಿ ಚೀನಾದ ವೈಫಲ್ಯ ಸಾರುವ ವಿವಿಧ ದೇಶಗಳ ಪ್ರಯತ್ನಕ್ಕೆ ಈ ದಾಖಲೆ ಪ್ರಬಲ ದಾಖಲೆಯಾಗಲಿದೆ ಎಂದು ಎಣಿಸಲಾಗಿದೆ.

click me!