ಗಲ್ವಾನ್‌ ಕಣಿವೆಯಲ್ಲಿ ಚೀನಾದ ಅಸ್ತಿತ್ವವೇ ಇಲ್ಲ: ಭಾರತ

By Suvarna NewsFirst Published Jun 21, 2020, 9:00 AM IST
Highlights

ಗಾಲ್ವಾನ್ ಕಣಿವೆ ನಮ್ಮದೆಂದ ಚೀನಾ| ಒಪ್ಪಲು ಸಾಧ್ಯವೇ ಇಲ್ಲ: ಭಾರತ| ಗಲ್ವಾನ್‌ ಕಣಿವೆಯಲ್ಲಿ ಚೀನಾದ ಅಸ್ತಿತ್ವವೇ ಇಲ್ಲ

ನವದೆಹಲಿ(ಜೂ.21): ಗಲ್ವಾನ್‌ ಕಣಿವೆ ತನಗೆ ಸೇರಿದ್ದು ಎಂಬ ಚೀನಾದ ವಾದವನ್ನು ಭಾರತ ಶನಿವಾರ ಸಾರಾಸಗಟಾಗಿ ತಳ್ಳಿಹಾಕಿದೆ. ಚೀನಾದ ಉತ್ಪ್ರೇಕ್ಷಿತ ಮತ್ತು ಅಸಮರ್ಥನೀಯ ವಾದವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೀನಾ ಈ ಹಿಂದೆ ಗಲ್ವಾನ್‌ ಕಣಿವೆಯಲ್ಲಿ ಅಸ್ತಿತ್ವವನ್ನೇ ಹೊಂದಿರಲಿಲ್ಲ. ಚೀನಾ ತನ್ನ ಸೀಮೆಯನ್ನು ಉಲ್ಲಂಘಿಸಲು ಯತ್ನಿಸಿದ ಕಾರಣಕ್ಕೆ ಭಾರತೀಯ ಪಡೆಗಳು ಸೂಕ್ತ ತಿರುಗೇಟು ನೀಡಿವೆ. ಗಲ್ವಾನ್‌ ಕಣಿವೆಯಲ್ಲಿ ಭಾರತದ ಸ್ಥಾನ ಐತಿಹಾಸಿಕವಾಗಿ ಸಾಬೀತಾಗಿದೆ. ಈಗ ವಾಸ್ತವ ಗಡಿರೇಖೆಗೆ ಸಂಬಂಧಿಸಿದಂತೆ ಚೀನಾ ಹಕ್ಕು ಮಂಡಿಸುತ್ತಿರುವುದು ಉತ್ಪ್ರೇಕ್ಷಿತ ಮತ್ತು ಅಸಮರ್ಥನೀಯವಾದದ್ದು. ಗಲ್ವಾನ್‌ ಕಣಿವೆ ಸೇರಿದಂತೆ ಚೀನಾದ ಜೊತೆಗಿನ ಗಡಿ ಪ್ರದೇಶದ ಸಂಪೂರ್ಣ ಅರಿವು ಭಾರತೀಯ ಪಡೆಗಳಿಗೆ ಇದೆ ಎಂದಿದ್ದಾರೆ.

ಗಲ್ವಾನ್‌ ನಮ್ಮದು, ಜಗಳ ತೆಗೆದಿದ್ದೇ ಭಾರತ: ಚೀನಾ

ಅಲ್ಲದೇ ಭಾರತದ ಗಡಿಯ ರಕ್ಷಣೆಗೆ ನಮ್ಮ ಸೇನೆ ಬದ್ಧವಾಗಿದೆ. ಭಾರತೀಯ ಪಡೆಗಳು ಯಾವತ್ತೂ ಚೀನಾದ ಗಡಿಯನ್ನು ದಾಟಿ ಹೋಗಿ ಸಂಘರ್ಷ ನಡೆಸಿಲ್ಲ. ದೀರ್ಘ ಸಮಯದಿಂದ ಭಾರತೀಯ ಪಡೆಗಳು ಈ ಪ್ರದೇಶದಲ್ಲಿ ಯಾವುದೇ ಅಡ್ಡಿ ಮಾಡದೆ ಕಾವಲು ಕಾಯುತ್ತಿವೆ. ಆದರೆ, ಭಾರತ- ಚೀನಾ ಗಡಿಯ ಪಶ್ಚಿಮ ವಲಯದಲ್ಲಿ ಗಡಿಯನ್ನು ದಾಟಿ ಒಳಕ್ಕೆ ಬರಲು ಚೀನಾ ಮೇ ಮಧ್ಯಾವಧಿಯಿಂದಲೂ ಪ್ರಯತ್ನ ನಡೆಸುತ್ತಲೇ ಇತ್ತು. ಚೀನಾದ ಈ ಕೃತ್ಯಕ್ಕೆ ಸೇನೆ ತಕ್ಕ ಉತ್ತರ ನೀಡಿದೆ. ಚೀನಾ ಗಡಿ ಒಪ್ಪಂದವನ್ನು ಪಾಲಿಸಿ, ಶಾಂತಿ ಪಾಲನೆಗೆ ಒತ್ತು ನೀಡುತ್ತದೆ ಎಂಬುದಾಗಿ ಭಾರತ ನಿರೀಕ್ಷಿಸುತ್ತದೆ ಎಂದು ಹೇಳಿದ್ದಾರೆ.

click me!