
ಬೀಜಿಂಗ್: ಅಮೆರಿಕ ಸೇರಿದಂತೆ ವಿಶ್ವದ ಯಾವುದೇ ಮೂಲೆಯನ್ನು ತಲುಪಬಲ್ಲ, 20 ಸಾವಿರ ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಬಲ್ಲ ಅಣ್ವಸ್ತ್ರ ಹೊತ್ತೊಯ್ಯಬಲ್ಲ ಖಂಡಾಂತರ ಕ್ಷಿಪಣಿಯನ್ನು ಚೀನಾ ಇದೇ ಮೊದಲ ಬಾರಿಗೆ ವಿಶ್ವಸಮುದಾಯದೆದುರು ತೆರೆದಿಟ್ಟಿದೆ. ಬುಧವಾರ ನಡೆದ ಚೀನಾದ 80ನೇ ವಿಕ್ಟರಿಡೇ (ವಿಜಯ ದಿವಸ) ಮಿಲಿಟರಿ ಪರೇಡ್‌ನಲ್ಲಿ ದ್ರವ ಇಂಧನ(ಲಿಕ್ವಿಡ್ ಫ್ಯುಯೆಲ್) ಆಧಾರಿತ ಅಣ್ವಸ್ತ್ರ ಸಾಗಿಸಬಹುದಾದ ‘ಡಿಎಫ್-5ಸಿ’ ಕ್ಷಿಪಣಿಯನ್ನು ಕಮ್ಯುನಿಸ್ಟ್ ದೇಶ ಪ್ರದರ್ಶಿಸಿದೆ. ಅಮೆರಿಕದ ತೆರಿಗೆ ತೆರಿಗೆ ದಾಳಿ ವಿರುದ್ಧ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶಾಂಘೈ ಸಹಕಾರ ಶೃಂಗದಲ್ಲಿ ಗುಡುಗಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇದೊಂದು ವ್ಯೂಹಾತ್ಮಕ ಕ್ಷಿಪಣಿಯಾಗಿದ್ದು, ಈಗಾಗಲೇ ಚೀನಾ ಸೇನೆಯ ಬತ್ತಳಿಕೆಯಲ್ಲಿರುವ ಡಿವೈ ಸರಣಿಯ ಕ್ಷಿಪಣಿಯ ಪರಿಷ್ಕೃತ ಆವೃತ್ತಿಯಾಗಿದೆ ಎಂದು ಅಣ್ವಸ್ತ್ರ ತಜ್ಞರಾದ ಪ್ರೊ. ಯಾಂಗ್ ಚೆಂಗ್‌ಜುನ್ ಅವರು ಗ್ಲೋಬಲ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ. ಈ ಕ್ಷಿಪಣಿ ಎರಡನೇ ವಿಶ್ವಸಮರದಲ್ಲಿ ಜಪಾನ್‌ನ ಹಿರೋಷಿಮಾ ಮೇಲೆ ಅಮೆರಿಕ ಹಾಕಿದ ಪರಮಾಣು ಬಾಂಬ್‌ಗಿಂತಲೂ 200 ಪಟ್ಟು ಹೆಚ್ಚು ಶಕ್ತಿಶಾಲಿ ಎನ್ನಲಾಗಿದೆ.
ಈ ಕ್ಷಿಪಣಿಯನ್ನು ಮೂರು ಸರಕು ಸಾಗಣೆ ವಾಹನಗಳ ಮೂಲಕ ಸಾಗಿಸಬಹುದಾಗಿದೆ. ಹಿಂದಿನ ಡಿವೈ-5 ಕ್ಷಿಪಣಿ ಸರಣಿಗೆ ಹೋಲಿಸಿದರೆ ಈ ಕ್ಷಿಪಣಿಯ ಉಡಾವಣೆಗೆ ತೀರಾ ಕಡಿಮೆ ಸಮಯ ಸಾಕು. ಇನ್ನು ನೆಲ ಮಾತ್ರವಲ್ಲದೆ ಸಮುದ್ರದಲ್ಲೂ ಹಾರಿಸಬಹುದಾಗಿದೆ. ಅಲ್ಲದೆ, ಈ ಬ್ಯಾಲಿಸ್ಟಿಕ್ ಕ್ಷಿಪಣಿಯ ವೇಗ ಕೂಡ ಅಸಾಧಾರಣವಾಗಿದೆ. ಮ್ಯಾಕ್10 ವೇಗವನ್ನು ತಲುಪುವ ಸಾಮರ್ಥ್ಯ ಈ ಕ್ಷಿಪಣಿಗಿದೆ. ಅಂದರೆ ಇತರೆ ದೇಶಗಳ ಬಳಿ ಇರುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿಕೊಂಡು ಸಾಗುವ ಸಾಮರ್ಥ್ಯ ಈ ಕ್ಷಿಪಣಿಗಿದೆ. ಜತೆಗೆ, ಕ್ಷಿಪಣಿಯು ಎಐಆರ್‌ವಿ(ಒಂದಕ್ಕಿಂತ ಹೆಚ್ಚು ಸಿಡಿತಲೆಗಳನ್ನು ಹೊಂದಿರುವ) ಸಾಗಿಸಬಲ್ಲುದಾಗಿದೆ.
ಈ ಖಂಡಾಂತರ ಕ್ಷಿಪಣಿಯನ್ನು ಚೀನಾ ಸ್ವತಂತ್ರವಾಗಿ ಅಭಿವೃದ್ಧಿಪಡಿಸಿದ ಬೈಡೂ ನ್ಯಾವಿಗೇಷನ್ ವ್ಯವಸ್ಥೆಗೆ ಜೋಡಣೆ ಮಾಡಲಾಗಿದ್ದು, ಇದರ ಗುರಿ ಭೇದಿಸುವ ಸಾಮರ್ಥ್ಯವೂ ಕರಾರುವಕ್ಕಾಗಿದೆ. ಡಿಎಸ್ ಸರಣಿಯ ಸಣ್ಣ ಮತ್ತು ಮಧ್ಯಮ ದೂರ ಕ್ರಮಿಸಬಲ್ಲ ಕ್ಷಿಪಣಿಗಳಷ್ಟೇ ಕರಾರುವಕ್ಕಾಗಿ ಈ ಕ್ಷಿಪಣಿ ತನ್ನ ಗುರಿಯನ್ನು ಭೇದಿಸಬಲ್ಲುದಾಗಿದೆ ಎನ್ನುತ್ತಾರೆ ತಜ್ಞರು. ಎರಡನೇ ವಿಶ್ವಯುದ್ಧದ ವೇಳೆ ಜಪಾನಿಗರ ವಿರುದ್ಧದ ಗೆಲುವಿನ ಸಂಭ್ರಮಾಚರಣೆಯ ಭಾಗವಾಗಿ ಈ ವಿಕ್ಟರಿ ಪರೇಡ್ ಅನ್ನು ಆಯೋಜಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಇದು ನಮ್ಮ ಪಾಲಿಗೆ ನೆಗೆಟಿವ್, ನನ್ನಿಂದಾಗಿ ಭಾರತ ತಣ್ಣಗಾಗಿದೆ ಎಂದ ಡೊನಾಲ್ಡ್ ಟ್ರಂಪ್
ಡಿವೈ-5ಸಿ ಮಾತ್ರವಲ್ಲದೆ ವಾಹನಗಳ ಮೂಲಕ ಸಾಗಿಸಬಹುದಾದ ಲೇಸರ್ ಡಿಫೆನ್ಸ್ ಸಿಸ್ಟಂ, ನೆಲದಿಂದ ಆಕಾಶಕ್ಕೆ ಹಾರಿಸುವ ಅತಿದೊಡ್ಡ ಕ್ಷಿಪಣಿ ವ್ಯವಸ್ಥೆಯಾದ HQ-29, ಡಿಎಫ್-61 ಖಂಡಾಂತರ ಕ್ಷಿಪಣಿ, ನಾಲ್ಕು ಮಾದರಿಯ ಯುದ್ಧ ವಿಮಾನಗಳು, ಆಳ ಸಮುದ್ರದ ಡ್ರೋನ್‌ಗಳು, ಎಚ್-6ಜೆ ಬಾಂಬರ್ ವಿಮಾನಗಳು ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ಇದೇ ವೇಳೆ ಚೀನಾ ತನ್ನ ವಿಕ್ಟರಿ ಡೇ ಪರೇಡ್‌ನಲ್ಲಿ ಪ್ರದರ್ಶಿಸಿತು.
ಪರೇಡ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್, ಪಾಕ್ ಪ್ರಧಾನಿ ನವಾಜ್ ಷರೀಫ್, ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ, ಮಾಲ್ಡೀಲ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಸೇರಿ ಹಲವರು ಪಾಲ್ಗೊಂಡಿದ್ದರು. ಭಾರತದ ಪರ ಚೀನಾದ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಪಾಲ್ಗೊಂಡಿದ್ದರು. ಅಮೆರಿಕ, ಯುರೋಪಿಯನ್ ಯೂನಿಯನ್, ಜಪಾನ್ ಮತ್ತು ದಕ್ಷಿಣ ಕೊರಿಯಾದ ನಾಯಕರು ಈ ಪರೇಡ್‌ನಿಂದ ದೂರ ಇದ್ದರು.
ಇದನ್ನೂ ಓದಿ: ತ್ರಿಮೂರ್ತಿಗಳ ತಾಕತ್ತಿಗೆ ಬೆಪ್ಪಾದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್; ಅಮೆರಿಕಾಗೆ 'ಶಕ್ತಿ' ಸಂದೇಶ ರವಾನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ