
ನ್ಯೂಯಾರ್ಕ್/ವಾಷಿಂಗ್ಟನ್: ಶೇ.50ರಷ್ಟು ತೆರಿಗೆ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (America President Donald Trump) ಅವರು ಭಾರತದ ವಿರುದ್ಧ ಮತ್ತೆ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ. ಭಾರತದ ಜತೆ ಅಮೆರಿಕ (India America Relation) ಒಳ್ಳೆಯ ಸಂಬಂಧ ಹೊಂದಿದೆ. ಆದರೆ, ಹಲವು ವರ್ಷಗಳಿಂದ ಇದು ಏಕಮುಖ ಸಂಬಂಧವಾಗಿಯೇ ಉಳಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ತಮ್ಮ ಶೇ.50ರಷ್ಟು ತೆರಿಗೆಯ (American Tariff) ಕ್ರಮವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಏಕಮುಖವಾಗಿತ್ತು. ನಾನು ಅಧಿಕಾರಕ್ಕೆ ಬಂದ ಬಳಿಕ ಅದು ಬದಲಾಯಿತು. ಭಾರತವು ಅಮೆರಿಕದ ವಸ್ತುಗಳ ಮೇಲೆ ವಿಶ್ವದಲ್ಲೇ ಅತೀ ಹೆಚ್ಚು ತೆರಿಗೆ ವಿಧಿಸುತ್ತಿದೆ. ಆದರೆ, ನಾವು ಅವರ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿಲ್ಲ. ಇದು ಮೂರ್ಖ ನಿರ್ಧಾರ. ಇದೇ ಕಾರಣಕ್ಕೆ ಅವರು ನಮ್ಮೊಂದಿಗೆ ಹೆಚ್ಚಿನ ವ್ಯಾಪಾರ ಮಾಡುತ್ತಿದ್ದಾರೆ. ಅವರ ಉತ್ಪನ್ನಗಳನ್ನು ಅಮೆರಿಕಕ್ಕೆ ತಂದು ಸುರಿಯುತ್ತಿದ್ದಾರೆ. ಈ ಕಾರಣಕ್ಕೆ ಆ ವಸ್ತುಗಳು ನಮ್ಮಲ್ಲಿ ಉತ್ಪಾದನೆ ಆಗುತ್ತಿಲ್ಲ. ಇದು ನಮ್ಮ ಪಾಲಿಗೆ ನೆಗೆಟಿವ್ ಆಗಿದೆ ಎಂದರು.
ಆದರೆ, ನಾವು ನಮ್ಮ ಉತ್ಪನ್ನಗಳನ್ನು ಅವರಿಗೆ ಮಾರಾಟ ಮಾಡಲು ಆಗುತ್ತಿಲ್ಲ ಯಾಕೆಂದರೆ ಅವರು ನಮ್ಮ ಉತ್ಪನ್ನಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದಕ್ಕಾಗಿ ಹರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಕಂಪನಿಯ ಉದಾಹರಣೆಯನ್ನೂ ನೀಡಿದರು. ಭಾರತವು ಶೇ.200ರಷ್ಟು ತೆರಿಗೆ ವಿಧಿಸಿದ್ದರಿಂದ ಸಂಸ್ಥೆ ಅಲ್ಲಿ ತನ್ನ ಬೈಕ್‌ಗಳ ಮಾರಾಟ ಮಾಡಲು ಆಗಲಿಲ್ಲ. ಹೀಗಾಗಿ ಅವರು ಭಾರತದಲ್ಲಿ ತಮ್ಮ ಫ್ಯಾಕ್ಟರಿ ತೆರೆದರು. ಈಗ ಅವರು ತೆರಿಗೆ ಪಾವತಿಸಬೇಕಾಗಿಲ್ಲ ಎಂದರು.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಹೊಟ್ಟೆ ಉರಿಸಿದ ರಷ್ಯಾ; ಇಬ್ಬರ ಜಗಳದಲ್ಲಿ ಭಾರತಕ್ಕೆ ಸಿಕ್ತು ಬಂಪರ್ ಲಾಭ
ರಷ್ಯಾದಿಂದ ತೈಲ ಖರೀದಿ ವಿರೋಧಿಸಿ ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿ ಭಾರತದ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ತಾನು ತೆರಿಗೆ ಹಾಕಿದ್ದಕ್ಕೆ ಭಾರತ ತಣ್ಣಗಾಗಿದ್ದು, ಶೂನ್ಯ ತೆರಿಗೆಯ ಪ್ರಸ್ತಾಪ ಮುಂದಿಟ್ಟಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ.
ಸ್ಕಾಟ್ ಜಿನ್ನಿಂಗ್ಸ್ ರೇಡಿಯೋ ಕಾರ್ಯಕ್ರಮಕ್ಕೆ ಸಂದರ್ಶನ ನೀಡಿದ ಅವರು, ‘ಭಾರತ, ಚೀನಾ, ಬ್ರೆಜಿಲ್ ದೇಶಗಳು ತೆರಿಗೆಯ ಮೂಲಕ ನಮ್ಮನ್ನು ಕೊಲ್ಲುತ್ತಿವೆ. ಭಾರತ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶವಾಗಿತ್ತು. ಈಗ ನನ್ನ ತೆರಿಗೆಯಿಂದಾಗಿ ಅವರೆಲ್ಲ ತಣ್ಣಗಾಗುತ್ತಿದ್ದಾರೆ. ಇನ್ಯಾವತ್ತೂ ನಮ್ಮ ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದು ಭಾರತ ಆಫರ್ ನೀಡಿದೆ. ನಾನು ತೆರಿಗೆ ಹೇರದೆ ಇದ್ದಿದ್ದರೆ, ಅವರು ಆಫರ್ ನೀಡುತ್ತಿರಲಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಮೋದಿ ರಣವ್ಯೂಹದಲ್ಲಿ ಸೆರೆಯಾದ ಸುಂಕಾಧ್ಯಕ್ಷ! ಟ್ರಂಫ್ ಟ್ಯಾರಿಫ್.. ಟಾರ್ಗೆಟ್ ಭಾರತ.. ಕೆಣಕಿ ಕೆಟ್ಟ ಅಮೆರಿಕಾ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ