ನವದೆಹಲಿ: ಭಾರತ ಸೇರಿ ವಿವಿಧ ದೇಶಗಳ ಔಷಧ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.100ರಷ್ಟು ತೆರಿಗೆ ಹೇರಿದ ಬೆನ್ನಲ್ಲೇ, ಭಾರತದ ನೆರವಿಗೆ ಚೀನಾ ಧಾವಿಸಿದೆ. ಭಾರತದ ಔಷಧ ಆಮದಿನ ಮೇಲಿದ್ದ ಶೇ.30ರಷ್ಟು ತೆರಿಗೆಯನ್ನು ಶೂನ್ಯಕ್ಕಿಳಿಸಿ ಆದೇಶ ಹೊರಡಿಸಿದೆ..
ಇದರಿಂದೇನು ಲಾಭ?
ಅಮೆರಿಕದ ತೆರಿಗೆ ಹೆಚ್ಚಳದಿಂದಾಗಿ ಜಗತ್ತಿನ ಔಷಧ ಕೇಂದ್ರವಾಗಿದ್ದ ಭಾರತಕ್ಕೆ ಅಮೆರಿಕ ಮಾರುಕಟ್ಟೆಯು ತುಟ್ಟಿಯಾಗುತ್ತಿದೆ. ತೆರಿಗೆಯ ಹೊರೆ ಭಾರತದ ಕಂಪನಿಗಳ ಮೇಲೆ ಬಿದ್ದು, ವೆಚ್ಚ ಹೆಚ್ಚಳವಾಗುತ್ತಿದೆ. ಈಗ ಚೀನಾ ತನ್ನ ತೆರಿಗೆಯನ್ನು ಶೂನ್ಯಕ್ಕಿಳಿಸಿರುವುದರಿಂದ ಉತ್ಪಾದಕರು ಚೀನಾ ಕಡೆಗೆ ಮುಖ ಮಾಡಲಿದ್ದಾರೆ. ಇಷ್ಟು ಸಮಯ ತೆರಿಗೆಯಿಂದಾಗಿ ಕಷ್ಟವಾಗುತ್ತಿದ್ದ ಚೀನಾ ಮಾರುಕಟ್ಟೆಗೆ ಸುಲಭ ಪ್ರವೇಶ ಸಿಗಲಿದೆ. ಇದರಿಂದಾಗಿ ದೇಶದಲ್ಲಿ ಉಳಿದುಕೊಳ್ಳುತ್ತಿದ್ದ ಔಷಧಗಳು ಚೀನಾಕ್ಕೆ ರಫ್ತಾಗಲಿದೆ. 2024ರಲ್ಲಿ 7 ಲಕ್ಷ ಕೋಟಿ ರು. ಮೌಲ್ಯದ ಔಷಧವನ್ನು ಭಾರತ ಚೀನಾ ರಫ್ತು ಮಾಡಿತ್ತು. ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.ಟ್ರಂಪ್ ತೆರಿಗೆ ದಾಳಿ ಬಳಿಕ ಶಾಂಘೈ ಶೃಂಗದ ವೇಳೆ ಭಾರತ- ಚೀನಾ- ರಷ್ಯಾ ಜಂಟಿಯಾಗಿ ಅಮೆರಿಕದ ವಿರುದ್ಧ ತೊಡೆತಟ್ಟಿದ್ದವರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಅಮೆರಿಕಕ್ಕೆ ಸಡ್ಡು : ಕೆ-ವೀಸಾ ಪರಿಚಯಕ್ಕೆ ಚೀನಾ ನಿರ್ಧಾರ
ಬೀಜಿಂಗ್: ಒಂದು ಕಡೆ ಅಮೆರಿಕವು ವಿಶೇಷ ಕೌಶಲ್ಯ ಹೊಂದಿರುವ ವಿದೇಶಿಗರಿಗೆ ನೀಡಲಾಗುತ್ತಿರುವ ಎಚ್1ಬಿ ವೀಸಾಗೆ ಕಡಿವಾಣ ಹಾಕಲು ಮುಂದಾಗಿದ್ದರೆ, ಇನ್ನೊಂದು ಕಡೆ ಚೀನಾ ಅಂಥ ನೌಕರರನ್ನು ತನ್ನತ್ತ ಸೆಳೆಯಲು ಸಜ್ಜಾಗಿ ನಿಂತಿದೆ. ಇದಕ್ಕೆಂದೇ ‘ಕೆ ವೀಸಾ’ ಪರಿಚಯಿಸಲು ಮುಂದಾಗಿದೆ. ವಿಶ್ವದೆಲ್ಲೆಡೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಯುವ ಉದ್ಯೋಗಿಗಳನ್ನು ಸೆಳೆಯಲೆಂದೇ ಈ ವೀಸಾ ಪರಿಚಯಿಸುತ್ತಿದೆ.
ಈ ಸಂಬಂಧ ಚೀನಾ ಪ್ರಧಾನಿ ಲಿ ಕಿಯಾಂಗ್ ಅವರು ವಿದೇಶಿಗರ ಪ್ರವೇಶ ಮತ್ತು ವಾಪಸಾತಿ ಕುರಿತ ಆದೇಶಕ್ಕೆ ಸಹಿಹಾಕಿದ್ದು, ಅದರಂತೆ ಅ.1ರಿಂದಲೇ ವಿಶ್ವದ ಮೂಲೆ ಮೂಲೆಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಯುವ ಉದ್ಯೋಗಿಗಳಿಗೆ ಚೀನಾ ದೇಶದ ಬಾಗಿಲು ತೆರೆಯಲಿದೆ
ಸದ್ಯ ಚೀನಾ 12 ರೀತಿಯ ಸಾಮಾನ್ಯ ವೀಸಾಗಳನ್ನು ನೀಡುತ್ತಿದ್ದು, ಇವುಗಳಿಗೆ ಹೋಲಿಸಿದರೆ ಈ ಕೆ ವೀಸಾ ಹೆಚ್ಚು ಸೌಲಭ್ಯಗಳನ್ನು ಹೊಂದಿರಲಿದೆ. ‘ಕೆ ವೀಸಾ’ ಅಡಿ ಚೀನಾಗೆ ಪ್ರವೇಶಿಸುವವರು ಶಿಕ್ಷಣ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಮಕಾಲೀನ ಉದ್ಯಮ ಮತ್ತು ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ. ಈ ವೀಸಾ ಪಡೆಯಲು ಅರ್ಜಿದಾರರು ಚೀನಾ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ ಮತ್ತು ಷರತ್ತುಗಳನ್ನು ಪೂರೈಸಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ