ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ವಾಹನಗಳ ಮೇಲೆ ಶೇ.25ರಷ್ಟು ತೆರಿಗೆ ವಿಧಿಸಿದ್ದಾರೆ. ಇದರಿಂದ ಭಾರತದ ವಾಹನ ಬಿಡಿಭಾಗಗಳ ರಫ್ತಿಗೆ ಪರೋಕ್ಷವಾಗಿ ಹೊಡೆತ ಬೀಳುವ ಸಾಧ್ಯತೆ ಇದೆ.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶದಿಂದ ಆಮದಾಗುವ ಪೂರ್ಣ ನಿರ್ಮಿತ ಸ್ವರೂಪದಲ್ಲಿರುವ ವಾಹನ ಮತ್ತು ವಾಹನಗಳ ಪ್ರಮುಖ ಬಿಡಿಭಾಗಗಳ ಮೇಲೆ ಶೇ.25ರಷ್ಟು ತೆರಿಗೆ ಘೋಷಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ವಾಹನೋದ್ಯಮದ ಮೇಲೆ ಭಾರೀ ಹೊಡೆತ ನೀಡಿದ್ದಾರೆ.
ಅಮೆರಿಕದಲ್ಲಿ ಆಟೋಮೊಬೈಲ್ ಉದ್ಯಮದ ಪುನಶ್ಚೇತನ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಘೋಷಿಸಿರುವ ಈ ತೆರಿಗೆ ಜಪಾನ್, ಯುರೋಪಿಯನ್ ದೇಶ ಸೇರಿದಂತೆ ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ. ಹೊಸ ತೆರೆಗೆ ಏ.3ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ.
ನಾವು ಅಮೆರಿಕದಲ್ಲಿ ಉತ್ಪಾದನೆಯಾಗದ ವಾಹನಗಳ ಮೇಲೆ ಶೇ.25ರಷ್ಟು ತೆರಿಗೆ ವಿಧಿಸಲಿದ್ದೇವೆ. ನಮ್ಮಲ್ಲಿ ವ್ಯವಹಾರ ಮಾಡಿಕೊಂಡು ನಮ್ಮವರ ಉದ್ಯೋಗ, ಸಂಪತ್ತನ್ನು ಹಲವು ವರ್ಷಗಳಿಂದ ಕೊಂಡೊಯ್ಯುತ್ತಿರುವವರ ಮೇಲೆ ತೆರಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ. ಈ ತೆರಿಗೆ ಕುರಿತು ಯಾವುದೇ ಮಾತುಕತೆ ಇಲ್ಲ ಎಂದೂ ಟ್ರಂಪ್ ಸ್ಪಷ್ಟಪಡಿಸಿದ್ದು, ಇದರಿಂದ ಅಮೆರಿಕಕ್ಕೆ 8.5 ಲಕ್ಷ ಕೋಟಿ ವಾರ್ಷಿಕ ಆದಾಯ ನಿರೀಕ್ಷಿಸಲಾಗಿದೆ.
ಭಾರತದ ಮೇಲೇನು ಪರಿಣಾಮ?
ಇತರೆ ದೇಶಗಳಿಗೆ ಹೋಲಿಸಿದರೆ ಅಮೆರಿಕಕ್ಕೆ ಭಾರತದ ವಾಹನಗಳ ರಫ್ತು ತೀರಾ ಕಡಿಮೆ ಇದೆ. 2024ರಲ್ಲಿ ಅಮೆರಿಕಕ್ಕೆ ಭಾರತದಿಂದ 72 ಕೋಟಿ ರು. ಮೌಲ್ಯದ ಪ್ಯಾಸೆಂಜರ್ ಕಾರು ಫ್ತು ಮಾಡಲಾಗಿದೆ. ದೇಶದಿಂದ ಒಟ್ಟಾರೆ 60 ಲಕ್ಷ ಕೋಟಿ ಮೌಲ್ಯದ ವಾಹನ ರಫ್ತಾಗುತ್ತದೆ. ಅಂದರೆ ಕೇವಲ ಶೇ.0.13ರಷ್ಟು ಕಾರುಗಳಷ್ಟೇ ಅಮೆರಿಕಕ್ಕೆ ರಫ್ತು ಆಗುತ್ತಿವೆ. ಇನ್ನು ಭಾರತದಿಂದ 107 ಕೋಟಿ ಮೌಲ್ಯದ ಟ್ರಕ್‌ಗಳು ಅಮೆರಿಕಕ್ಕೆ ರಫ್ತು ಆಗುತ್ತಿವೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಭಾರತದ ಟ್ರಕ್‌ಗಳ ರಫ್ತಿನ ಶೇ.0.89ರಷ್ಟಾಗಿದೆ ಎಂದು ಹೇಳಿದೆ.
ಆದರೆ, ದೇಶದ ವಾಹನಗಳ ಬಿಡಿಭಾಗ ಉದ್ಯಮದ ಮೇಲೆ ಪರೋಕ್ಷ ಪರಿಣಾಮ ಬೀರುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಭಾರತವು 12,850 ಕೋಟಿ ರು. ಮೊತ್ತದ ಆಟೋ ಬಿಡಿಭಾಗಗಳನ್ನು 2023ರಲ್ಲಿ ಅಮೆರಿಕಕ್ಕೆ ರಫ್ತು ಮಾಡಿದೆ. ಹೊಸ ತೆರಿಗೆ ನೀತಿಯಿಂದ ಭಾರತದಿಂದ ಆಟೋ ಬಿಡಿಭಾಗಗಳನ್ನು ತರಿಸಿಕೊಳ್ಳುವುದು ಅಮೆರಿಕದ ಕಂಪನಿಗಳಿಗೆ ದುಬಾರಿಯಾಗಲಿದೆ. ಇದರ ಪರಿಣಾಮ ಬೇಡಿಕೆ ಕಡಿಮೆಯಾಗಬಹುದು. ಆಗ ಅನಿವಾರ್ಯವಾಗಿ ಭಾರತವು ರಫ್ತಿಗಾಗಿ ಬೇರೆ ದೇಶಗಳ ಕಡೆಗೆ ಮುಖಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ.
ಭಾರತದ ಯಾವ್ಯಾವ ಕಂಪನಿಗಳ ಮೇಲೆ ಹೊಡೆತ?
ಟಾಟಾ ಮೋಟಾರ್ಸ್, ಐಚರ್ ಮೋಟಾರ್ಸ್, ಸೋನಾ ಬಿಎಸ್‌ಡಬ್ಲ್ಟು ಮತ್ತು ಸಂವರ್ಧನ್ ಮದರ್‌ಸನ್ ಕಂಪನಿಗಳ ಮೇಲೆ ಶೇ.25 ತೆರಿಗೆ ಹೊಡೆತ ನೀಡಲಿದೆ.