505 ದಿನ ಕೋವಿಡ್‌ ಹೊಂದಿದ್ದ ಬ್ರಿಟನ್‌ ವ್ಯಕ್ತಿ: ಈತನಿಗೆ ಅತಿ ದೀರ್ಘಕಾಲದ ಪೀಡಿತ ಎಂಬ ‘ಪಟ್ಟ’

By Govindaraj S  |  First Published Apr 23, 2022, 3:10 AM IST

ಬ್ರಿಟನ್ನಿನ ವ್ಯಕ್ತಿಯೊಬ್ಬರು ಸಾವಿಗೀಡಾಗುವ ಮೊದಲು ಸುಮಾರು ಒಂದೂವರೆ ವರ್ಷಗಳ ಕಾಲ (505 ದಿನ) ಕೋವಿಡ್‌ ಸೋಂಕಿಗೆ ತುತ್ತಾಗಿದ್ದರು ಎಂಬ ಅಚ್ಚರಿಯ ವಿಷಯ ಈಗ ಬೆಳಕಿಗೆ ಬಂದಿದೆ. 


ಲಂಡನ್‌ (ಏ.23): ಸಾಮಾನ್ಯವಾಗಿ ಕೋವಿಡ್‌ (Covid19) ಹೊಂದಿದವರು 4 ಅಥವಾ 6 ವಾರದಲ್ಲಿ ಗುಣಮುಖ ಹೊಂದುತ್ತಾರೆ. ಅಂಥದ್ದರಲ್ಲಿ, ತೀವ್ರತರವಾದ ಪ್ರತಿಕಾಯ ರಕ್ಷಕ ವ್ಯವಸ್ಥೆಯನ್ನು ಹೊಂದಿರದ ಬ್ರಿಟನ್ನಿನ ವ್ಯಕ್ತಿಯೊಬ್ಬರು (British Patient) ಸಾವಿಗೀಡಾಗುವ ಮೊದಲು ಸುಮಾರು ಒಂದೂವರೆ ವರ್ಷಗಳ ಕಾಲ (505 ದಿನ) ಕೋವಿಡ್‌ ಸೋಂಕಿಗೆ ತುತ್ತಾಗಿದ್ದರು ಎಂಬ ಅಚ್ಚರಿಯ ವಿಷಯ ಈಗ ಬೆಳಕಿಗೆ ಬಂದಿದೆ. 

ಇದು ಕೋವಿಡ್‌ ಸಾಂಕ್ರಾಮಿಕ ಆರಂಭವಾದಾಗಿನಿಂದ ಅತಿ ಧೀರ್ಘಾವಧಿಯ ಸೋಂಕು ಆಗಿದೆ. ಇದೇ ವೇಳೆ, ಇನ್ನೊಬ್ಬ ವ್ಯಕ್ತಿ 412 ದಿನದಿಂದ ಕೋವಿಡ್‌ ವಿರುದ್ಧ ಹೋರಾಡುತ್ತಿದ್ದಾರೆ ಎಂದೂ ತಿಳಿದುಬಂದಿದೆ. ಈ ಪ್ರಕರಣಗಳು ದುರ್ಬಲ ಪ್ರತಿಕಾಯ ಶಕ್ತಿ ಹೊಂದಿರುವವರನ್ನು ಕೋವಿಡ್‌ನಿಂದ ರಕ್ಷಿಸಬೇಕಾದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ.

Tap to resize

Latest Videos

ಈತನಿಗೆ 10 ರೂಪಾಂತರಿ ಸೋಂಕು!: 505 ದಿನ ಸೋಂಕಿಗೆ ಒಳಗಾಗಿದ್ದ ರೋಗಿಯ ವಯಸ್ಸು , ಹೆಸರು ಮುಂತಾದ ಮಾಹಿತಿಯನ್ನು ವೈದ್ಯರ ತಂಡ ಹಂಚಿಕೊಂಡಿಲ್ಲ. ಆದರೆ ಈ ವ್ಯಕ್ತಿ ಒಂದಲ್ಲ ಎರಡಲ್ಲ... ಆಲ್ಫಾ, ಗಾಮಾ ಮತ್ತು ಒಮಿಕ್ರೋನ್‌ ಸೇರಿದಂತೆ ಸುಮಾರು 10 ರೂಪಾಂತರಿಗಳಿಂದ ಸೋಂಕಿಗೆ ಒಳಗಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ‘505 ದಿನಗಳ ಕಾಲ ಸೋಂಕು ಹೊಂದಿದ್ದು ಈವರೆಗೆ ವರದಿಯಾದ ಅತಿ ಧೀರ್ಘವಾದ ಕೋವಿಡ್‌ ಸೋಂಕು’ ಎಂದು ಗಯ್ಸ್ ಮತ್ತು ಸೆಂಟ್‌ ಥಾಮಸ್‌ ಎನ್‌ಎಚ್‌ಎಸ್‌ ಫೌಂಡೇಶನ್‌ ಟ್ರಸ್ಟ್‌ನ ಸಾಂಕ್ರಾಮಿಕ ರೋಗ ತಜ್ಞ ಡಾ.ಲ್ಯೂಕ್‌ ಬ್ಲಾಗ್‌ಡಾನ್‌ ಸ್ನೆಲ್‌ ಹೇಳಿದ್ದಾರೆ.

Covid19 Case ಏಷ್ಯಾದಲ್ಲಿ 10 ಕೋಟಿ ದಾಟಿದ ಕೋವಿಡ್‌ ಕೇಸ್, ಕೆಲ ಭಾಗದಲ್ಲಿ ಲಾಕ್‌ಡೌನ್!

ಧೀರ್ಘಕಾಲ ಸೋಂಕು ಹೊಂದಿರುವವರಲ್ಲಿ ಯಾವ ರೀತಿಯ ರೂಪಾಂತರಗಳು ಉದ್ಭವಿಸುತ್ತವೆ ಮತ್ತು ರೂಪಾಂತರಿಗಳು ವಿಕಾಸಗೊಳ್ಳುತ್ತವೆಯೇ ಎಂಬುದನ್ನು ಇವರ ತಂಡ ಸಂಶೋಧನೆ ನಡೆಸಿದೆ. ಇದಕ್ಕಾಗಿ ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ 9 ಜನರನ್ನು ಕನಿಷ್ಠ 8 ವಾರಗಳ ಕಾಲ ಕೋವಿಡ್‌ ಸೋಂಕು ಪರೀಕ್ಷೆಗೆ ಒಳಪಡಿಸಿದೆ. ಇವರೆಲ್ಲರೂ ಏಡ್ಸ್, ಅಂಗಾಂಗ ಕಸಿ, ಕ್ಯಾನ್ಸರ್‌ ಮುಂತಾದವುಗಳಿಗೆ ತುತ್ತಾಗಿ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡವರಾಗಿದ್ದಾರೆ. 

ಪುನರಾವರ್ತಿತ ಪರೀಕ್ಷೆಗಳ ಮೂಲಕ ಇವರಲ್ಲಿ ಸರಾಸರಿ 73 ದಿನಗಳ ಕಾಲ ಸೋಂಕು ಇತ್ತು. ಇಬ್ಬರಲ್ಲಿ 1 ವರ್ಷಕ್ಕೂ ಹೆಚ್ಚು ಕಾಲ ಸೋಂಕು ಇತ್ತು. ಮತ್ತೊಬ್ಬ ರೋಗಿ 412 ದಿನಗಳಿಂದ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಸ್ನೆಲ್‌ ಅವರ ತಂಡ ಖಚಿತಪಡಿಸಿದೆ. ನಿರಂತರ ಕೋವಿಡ್‌ ಸೋಂಕಿಗಿಂತ ಈ ದೀರ್ಘಾವಧಿ ಕೋವಿಡ್‌ ಭಿನ್ನವಾಗಿರಲಿದೆ. ದೀರ್ಘಕಾಲದ ಕೋವಿಡ್‌ನಲ್ಲಿ ರೋಗಿಯು ಸೋಂಕಿನಿಂದ ಮುಕ್ತವಾದರೂ, ರೋಗ ಲಕ್ಷಣಗಳು ಮುಂದುವರೆಯುತ್ತವೆ ಎಂದು ಸ್ನೆಲ್‌ ಹೇಳಿದ್ದಾರೆ.

ಬೂಸ್ಟರ್‌ ಡೋಸ್‌ ಬಗ್ಗೆ ನಿರ್ಲಕ್ಷ್ಯ ಬೇಡ: 18 ರಿಂದ 59 ವರ್ಷ ವಯೋಮಾನದವರು ಬೂಸ್ಟರ್‌ ಡೋಸ್‌ ಕೊರೋನಾ ಲಸಿಕೆ (Vaccination) ಪಡೆಯಲು ನೀರಸ ಪ್ರತಿಕ್ರಿಯೆ ತೋರುತ್ತಿರಲು ಮುಖ್ಯ ಕಾರಣ 2ನೇ ಡೋಸ್‌ ಮತ್ತು ಮುನ್ನೆಚ್ಚರಿಕಾ ಡೋಸ್‌ ಲಸಿಕೆ ನಡುವೆ 9 ತಿಂಗಳ ಅಂತರವಿರುವುದು ಕಾರಣ. ಇದಲ್ಲದೆ ಕೋವಿಡ್‌ ಹೋಗಿದೆ ಎಂಬ ಉದಾಸೀನವೂ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಬೂಸ್ಟರ್‌ ಡೋಸ್‌ (Booster Dose) ಬಗ್ಗೆ ನಿರ್ಲಕ್ಷ್ಯ ಬೇಡ ಎಂದೂ ಎಚ್ಚರಿಸಿದ್ದಾರೆ.

ಎರಡು ಡೋಸ್‌ ಲಸಿಕೆ ಪಡೆದ ನಾಲ್ಕೈದು ತಿಂಗಳ ಬಳಿಕ ಪ್ರತಿಕಾಯ ಶಕ್ತಿ ಕುಗ್ಗಲು ಆರಂಭವಾಗುತ್ತದೆ. 9 ತಿಂಗಳ ವೇಳೆಗೆ ಅದು ಕನಿಷ್ಠ ಪ್ರಮಾಣಕ್ಕೆ ಇಳಿಕೆಯಾಗಿರುತ್ತದೆ. ಹೀಗಾಗಿ ಎರಡನೇ ಡೋಸ್‌ ಲಸಿಕೆ ಪಡೆದ 6 ತಿಂಗಳ ನಂತರ ಮುನ್ನೆಚ್ಚರಿಕಾ ಡೋಸ್‌ ಲಸಿಕೆ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಹಾಗೆಯೇ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮುನ್ನೆಚ್ಚರಿಕಾ ಲಸಿಕೆ ಬಗ್ಗೆ ಅರಿವಿನ ಕೊರತೆ ಇದೆ ಎಂದು ಏಮ್ಸ್‌ ಮುಖ್ಯಸ್ಥ (AIMS chief) ರಣದೀಪ್‌ ಗುಲೇರಿಯಾ (Randeep Guleriya) ಹೇಳಿದ್ದಾರೆ.

Health Study: ಕೊರೊನಾದಿಂದ ಚೇತರಿಸಿಕೊಂಡ ಮಕ್ಕಳನ್ನು ಕಾಡೋ ಅನಾರೋಗ್ಯ

ಇದೇ ವೇಳೆ ಕೊರೋನಾ ಅಂತ್ಯವಾಗಿಲ್ಲ. ಯಾವುದೇ ಸಮಯದಲ್ಲಿ ಹೊಸ ರೂಪಾಂತರಿ ತಳಿಗಳ ಉಗಮವಾಗಬಹುದು. ಹಾಗಾಗಿ ಮುನ್ನೆಚ್ಚರಿಕಾ ಲಸಿಕೆ ಪಡೆಯಲು ಯಾರು ಅರ್ಹರೋ ಅಂಥವರು ಅಲಕ್ಷ್ಯಿಸದೇ ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ. ಹಿಂದಿನಂತೆ ಜನರು ಈಗ ಸಾಂಕ್ರಾಮಿಕಕ್ಕೆ ಹೆದರುತ್ತಿಲ್ಲ. ಕೊರೋನಾ ಪ್ರಕರಣಗಳು ತಗ್ಗುತ್ತಿರುವುದರಿಂದ ಕೋವಿಡ್‌ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ಮನೋಭಾವ ಮೂಡಿದೆ. ಆದರೆ ಬೂಸ್ಟರ್‌ ಡೋಸ್‌ ಲಸಿಕೆ ಪಡೆಯಲು ನಿರ್ಲಕ್ಷ್ಯ ಬೇಡ. ನಿರ್ದಿಷ್ಟ ಸಮಯದ ಬಳಿಕ ಜನರಲ್ಲಿ ಅದರಲ್ಲೂ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿರುವವರಲ್ಲಿ ಪ್ರತಿಕಾಯ ಶಕ್ತಿ ಕುಗ್ಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಎಚ್ಚರಿಸಿದ್ದಾರೆ.

click me!