
ನವದೆಹಲಿ (ಜ.11): ಹಜ್ ಯಾತ್ರೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹಜ್ ಯಾತ್ರೆಗೆ ಸರ್ಕಾರ ನೀಡುತ್ತಿದ್ದ ವಿಐಪಿ ಕೋಟಾ ಸೀಟ್‌ಗಳು ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಈ ಹಿಂದೆ, ಹಜ್ ಯಾತ್ರೆಗೆ ಕೆಲವು ಮೀಸಲು ಸೀಟುಗಳನ್ನು ಕೇಂದ್ರ ಸರ್ಕಾರ ಹೊಂದಿತ್ತು. ಈಗ ಅದನ್ನು ರದ್ದುಗೊಳಿಸಲಾಗಿದೆ. ಈ ಹಂತದ ನಂತರ, ಹಜ್‌ಗೆ ಹೋಗುವ ಎಲ್ಲಾ ಜನರು ಸಾಮಾನ್ಯ ಯಾತ್ರಿಗಳಂತೆ ಪ್ರಯಾಣಿಸುತ್ತಾರೆ. ಯಾವುದೇ ಪ್ರಯಾಣಿಕರು ಯಾವುದೇ ವಿಶೇಷ ವಿಐಪಿ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಹಿಂದೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಮತ್ತು ಹಜ್ ಸಮಿತಿಯು ನಿಗದಿಪಡಿಸಿದ ಆಸನಗಳಿಂದ ಸುಮಾರು 500 ಜನರು ಹಜ್‌ಗೆ ವಿಐಪಿ ಕೋಟಾದ ಅಡಿಯಲ್ಲಿ ತೆರಳಬಹುದಾಗಿತ್ತು. ರಾಷ್ಟ್ರಪತಿ ಕೋಟಾದಿಂದ 100, ಉಪರಾಷ್ಟ್ರಪತಿ ಕೋಟಾದಿಂದ 75, ಪ್ರಧಾನಿ ಕೋಟಾದಿಂದ 75, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರ ಕೋಟಾದಿಂದ 50, ಹಜ್ ಸಮಿತಿ ಆಫ್ ಇಂಡಿಯಾ 200 ಸ್ಥಾನಗಳನ್ನು ಪಡೆಯುತ್ತಿತ್ತು. ಆದರೆ ಈಗ ಹೊಸ ಹಜ್ ನೀತಿಯ ಕರಡಿನಲ್ಲಿ ಅದನ್ನು ರದ್ದುಗೊಳಿಸಲಾಗುತ್ತಿದೆ.
ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕು: ಕೇಂದ್ರದ ಈ ನಿರ್ಧಾರದಿಂದಾಗಿ ಇನ್ನು ಮುಂದೆ ಎಲ್ಲಾ ಹಜ್ ಯಾತ್ರಾರ್ಥಿಗಳು ಹಜ್ ಸಮಿತಿ ಮತ್ತು ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ಮಾತ್ರ ಪ್ರಯಾಣಿಸಲು ಸಾಧ್ಯವಾಗುತ್ತದೆ. ಹಾಗಿದ್ದರೂ, ಈ ಹೊಸ ಹಜ್ ನೀತಿಯ ಬಗ್ಗೆ ಇದುವರೆಗೆ ಯಾವುದೇ ಔಪಚಾರಿಕ ಘೋಷಣೆ ಮಾಡಲಾಗಿಲ್ಲ. ಹೊಸ ಹಜ್ ನೀತಿಯ ಕುರಿತು ಶೀಘ್ರದಲ್ಲೇ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.
ಹಜ್ ಯಾತ್ರೆ ನಿಯಮದಲ್ಲಿ ಮಹತ್ವದ ಬದಲಾವಣೆ, ಪುರುಷ ರಕ್ಷಕರಿಲ್ಲದೆ ಮಹಿಳೆಯರ ಉಮ್ರಾಗೆ ಅವಕಾಶ!
ನಿರ್ಬಂಧ ತೆಗೆದು ಹಾಕಿರುವ ಸೌದಿ ಅರೇಬಿಯಾ: ಇತ್ತೀಚೆಗೆ, ಸೌದಿ ಅರೇಬಿಯಾ ಮೂರು ವರ್ಷಗಳವರೆಗೆ ಹಜ್ ಯಾತ್ರಿಕರ ಸಂಖ್ಯೆಯ ಮೇಲಿನ ನಿರ್ಬಂಧವನ್ನು ತೆಗೆದುಹಾಕುವುದಾಗಿ ಘೋಷಿಸಿತ್ತು. ಸೌದಿ ಅರೇಬಿಯಾದ ಈ ನಿರ್ಧಾರದ ನಂತರ, ಕರೋನಾ ಸಾಂಕ್ರಾಮಿಕದ ಮೊದಲಿದ್ದಷ್ಟೇ ಹಜ್ ಯಾತ್ರಿಕರು ಈಗ ಹಜ್‌ಗೆ ಹೋಗಲು ಸಾಧ್ಯವಾಗುತ್ತದೆ. ಅದಲ್ಲದೆ, ವಯೋಮಿತಿ ನಿರ್ಬಂಧವನ್ನು ತೆಗೆದುಹಾಕುವುದಾಗಿಯೂ ಸರ್ಕಾರ ಘೋಷಿಸಿತ್ತು.
ಈ ದೇಶದಲ್ಲಿ ಯಾವೊಬ್ಬ ಮುಸಲ್ಮಾನನೂ ಹಜ್ ಯಾತ್ರೆ ಕೈಗೊಳ್ಳಲ್ಲ, ಕಾರಣವೂ ಬಹಳ ಅಚ್ಚರಿಯುತವಾಗಿದೆ!
ಕೊರೋನಾ ಕಾರಣದಿಂದಾಗಿ ನಿರ್ಬಂಧ: 2019 ರಲ್ಲಿ ಕರೋನಾಕ್ಕಿಂತ ಮೊದಲು ಸುಮಾರು 25 ಲಕ್ಷ ಜನರು ಹಜ್‌ಗೆ ಪ್ರಯಾಣ ಮಾಡುತ್ತಿದ್ದರು. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಆ ನಂತರದ ಎರಡು ವರ್ಷಗಳಲ್ಲಿ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿತ್ತು. ರಿಯಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವ ತೌಫಿಕ್ ಅಲ್ ರಬಿಯಾ, ಸೌದಿ ಅರೇಬಿಯಾ ಈ ವರ್ಷ ಹಜ್ ಯಾತ್ರಿಕರ ಸಂಖ್ಯೆಯನ್ನು ಮಿತಿಗೊಳಿಸುವುದಿಲ್ಲ ಎಂದು ಹೇಳಿದರು. ಇದಲ್ಲದೇ ಸಾಂಕ್ರಾಮಿಕ ರೋಗದ ವೇಳೆ ಹಜ್ ಯಾತ್ರಿಗಳಿಗೆ ವಯೋಮಿತಿ ನಿಗದಿ ಮಾಡಲಾಗಿತ್ತು. ಈಗ ಅದನ್ನೂ ಕೂಡ ತೆಗೆದುಹಾಕಲಾಗಿದೆ ಎಂದಿದ್ದಾರೆ. ಯಾವುದೇ ವಯೋಮಿತಿಯರು ಕೂಡ ಹಜ್‌ಗೆ ಪ್ರಯಾಣಿಸಬಹುದು ಎಂದಿದ್ದಾರೆ. ಈ ಹಿಂದೆ ಜೈರಿನ್‌ಗಳ ಗರಿಷ್ಠ ವಯೋಮಿತಿಯನ್ನು 65 ವರ್ಷಕ್ಕೆ ನಿಗದಿಪಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ