ಅಮೆರಿಕ ಮೇಲೆ ಕೋವಿಡ್‌ ಲಾಕ್‌ಡೌನ್‌ ತೂಗುಕತ್ತಿ!

By Kannadaprabha News  |  First Published Nov 16, 2020, 9:00 AM IST

ಅಮೆರಿಕ ಮೇಲೆ ಕೋವಿಡ್‌ ಲಾಕ್‌ಡೌನ್‌ ತೂಗುಕತ್ತಿ| ತಜ್ಞರಲ್ಲೇ ಮಿಶ್ರ ಅಭಿಪ್ರಾಯ| 4-6 ವಾರದ ದೇಶವ್ಯಾಪಿ ಲಾಕ್‌ಡೌನ್‌ಗೆ ಸಲಹೆಗಾರನ ಸಲಹ| ನಿರ್ದಿಷ್ಟಪ್ರದೇಶಕ್ಕೆ ಲಾಕ್‌ಡೌನ್‌ ಸಾಕು: ವಿವೇಕ್‌ ವಿರೋಧ


ವಾಷಿಂಗ್ಟನ್‌: ಅಮೆರಿಕದಲ್ಲಿ ಅಧಿಕಾರಕ್ಕೇರುತ್ತಿದ್ದಂತೆಯೇ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ರಿಗೆ ಕಠಿಣ ಸವಾಲು ಎದುರಾಗಲಿದೆ. ಕೊರೋನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಬಾರದ ಅಮೆರಿಕದಲ್ಲಿ ದೇಶವ್ಯಾಪಿ ಲಾಕ್‌ಡೌನ್‌ ಘೋಷಣೆ ಮಾಡಬೇಕೆ, ಬೇಡವೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು, ಬೈಡೆನ್‌ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ.

‘ಆರ್ಥಿಕತೆಗೆ ಹೊಡೆತ ಬೀಳಬಹುದು’ ಎಂದು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈವರೆಗೆ ಲಾಕ್‌ಡೌನ್‌ ತಿರಸ್ಕರಿಸಿದ್ದರು. ಆದರೆ, ಬದಲಾದ ರಾಜಕೀಯ ಚಿತ್ರಣದಲ್ಲಿ ಬೈಡೆನ್‌ರ ಪರಮಾಪ್ತ ಸಲಹೆಗಾರರೊಬ್ಬರು ಲಾಕ್‌ಡೌನ್‌ ಘೋಷಣೆ ಮಾಡುವಂತೆ ಸಲಹೆ ನೀಡಿದ್ದಾರೆ.

Tap to resize

Latest Videos

‘ಅಮೆರಿಕದಲ್ಲಿ ನಿತ್ಯ 1.25 ಲಕ್ಷ ಕೋವಿಡ್‌ ಕೇಸು ವರದಿ ಆಗುತ್ತಿವೆ. ಇದು ಮುಂದುವರಿದರೆ ದೇಶವು ‘ಕೋವಿಡ್‌ ನರಕ’ ಪ್ರವೇಶಿಸಲಿದೆ. ಹೀಗಾಗಿ 4-6 ವಾರಗಳ ಲಾಕ್‌ಡೌನ್‌ ಅಗತ್ಯ. ಈ ಸಮಯದ ಆರ್ಥಿಕ ನಷ್ಟಕ್ಕೆ ಸರ್ಕಾರವೇ ಪರಿಹಾರ ಕೊಡಬಹುದು. ಆದರೆ ಸೋಂಕು ನಿಯಂತ್ರಣಕ್ಕೆ ಬರಲಿದೆ’ ಎಂದು ಬೈಡೆನ್‌ ಅವರ 12 ಜನರ ಸಲಹಾ ಮಂಡಳಿ ಸದಸ್ಯ, ಖ್ಯಾತ ವೈದ್ಯ ಡಾ| ಮಿಶೆಲ್‌ ಆಸ್ಟರ್‌ಹೋಂ ಹೇಳಿದ್ದಾರೆ.

ವಿವೇಕ್‌ ಮೂರ್ತಿ ಅಪಸ್ವರ: ಡಾ| ಮಿಶೆಲ್‌ ಸಲಹೆಗೆ ಬೈಡೆನ್‌ರ ಕೊರೋನಾ ಸಲಹಾ ಮಂಡಳಿಯ ಡಾ| ವಿವೇಕ್‌ ಹಲ್ಲೇಗೆರೆ ಮೂರ್ತಿ ಅಪಸ್ವರ ಎತ್ತಿದ್ದಾರೆ. ‘ದೇಶವ್ಯಾಪಿ ಲಾಕ್‌ಡೌನ್‌ ಚಿಂತನೆ ಇಲ್ಲ. ಕೆಲವು ನಿರ್ದಿಷ್ಟಪ್ರದೇಶ ಲಾಕ್‌ಡೌನ್‌ ಮಾಡಿದರೆ ಸಾಕು’ ಎಂದಿದ್ದಾರೆ.

click me!