
ಢಾಕಾ: ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಕ್ ಹಸೀನಾ ರಾಜೀನಾಮೆ ನಂತರ ನಡೆದ ಹಿಂಸಾಚಾರದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಪ್ರತಿಭಟನಾಕಾರರು ಹಸೀನಾರ ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರು, ನಾಯಕರರನ್ನು ಗುರಿಯಾಗಿಸಿ ಹತ್ಯೆ ಮಾಡಿದಲ್ಲದೇ , ಅವರ ಮನೆಗಳಿಗೂ ಬೆಂಕಿ ಹಚ್ಚಿದ್ದರು., ಖ್ಯಾತ ಬಾಂಗ್ಲಾ ಕ್ರಿಕೆಟಿಗನ ಮನೆಗೂ ಬೆಂಕಿ ಬಿದ್ದಿತ್ತು. ಈ ಸಂದರ್ಭವನ್ನು ಬಳಸಿಕೊಂಡು ಮತೀಯವಾದಿಗಳು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು, 4ಕ್ಕೂ ಅಧಿಕ ಕಾಳಿ ಮಂದಿರಗಳು, ಹಲವು ನಿರಾಶ್ರಿತರಿಗೆ ಸಂಕಷ್ಟದ ಸಮಯದಲ್ಲಿ ಅನ್ನ ನೀಡಿದ ಇಸ್ಕಾನ್ ದೇಗುಲ ಸೇರಿದಂತೆ ಎಲ್ಲೆಡೆ ದಾಂಧಲೆ ನಡೆಸಿ ಮೂರ್ತಿಗಳ ಧ್ವಂಸಗೊಳಿಸಿದ್ದರು. ಇದೇ ವೇಳೆ ಬಾಂಗ್ಲಾದ ಹಿಂದೂ ಗಾಯಕ ರಾಹುಲ್ ಆನಂದ್ ಅವರ ಢಾಕಾದ ನಿವಾಸಕ್ಕೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಹಚ್ಚಿದ ಈ ಬೆಂಕಿಯಿಂದಾಗಿ ರಾಹುಲ್ ಆನಂದ್ ಅವರ ಮನೆಯಲ್ಲಿದ್ದ 3 ಸಾವಿರಕ್ಕೂ ಅಧಿಕ ಸಂಗೀತ ಪರಿಕರಗಳು (Musical Instruments) ಬೆಂಕಿಗೆ ಆಹುತಿಯಾಗಿವೆ ಎಂದು ವರದಿ ಆಗಿದೆ.
ವರದಿಯ ಪ್ರಕಾರ, ಪ್ರತಿಭಟನಾಕಾರರು, ಮನೆಯಲ್ಲಿದ್ದ ಅತ್ಯಮೂಲ್ಯ ವಸ್ತುಗಳನ್ನು ಕೊಳ್ಳೆ ಹೊಡೆದಿದ್ದಲ್ಲದೇ ಇಡೀ ಮನೆಯನ್ನೇ ಧ್ವಂಸ ಮಾಡಿದ್ದಾರೆ. ರಾಹುಲ್ ಆನಂದ್ ಅವರು ಮನೆಯಲ್ಲೇ ನಿರ್ಮಿಸಿದ್ದಂತಹ 3 ಸಾವಿರಕ್ಕೂ ಅಧಿಕ ಸಂಗೀತ ಪರಿಕರಗಳು ಕೂಡ ಈ ವೇಳೆ ಧ್ವಂಸಗೊಂಡಿವೆ ಎಂದು ವರದಿ ಆಗಿದೆ. ಬಾಂಗ್ಲಾದೇಶದ ಢಾಕಾದ ಧನ್ಮೊಂಡಿ 32 ಎಂಬ ಪ್ರದೇಶದಲ್ಲಿ ಗಾಯಕ ರಾಹುಲ್ ಆನಂದ್ ಅವರ ಮನೆ ಇತ್ತು. ಪ್ರತಿಭಟನಾಕಾರರ ರೋಷಾವೇಶಕ್ಕೆ ಮನೆಯಲ್ಲಿದ್ದ ಅಮೂಲ್ಯ ವಸ್ತುಗಳೆಲ್ಲಾ ಧ್ವಂಸವಾಗಿವೆ. ಆದರೆ ಅದೃಷ್ಟವಶಾತ್ ಗಾಯಕ ರಾಹುಲ್ ಆನಂದ್ ಹಾಗೂ ಮನೆಯವರು ಯಾವುದೇ ಹಾನಿಯಾಗದೇ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪ್ರತಿಭಟನಾಕಾರರು ಮಾತ್ರ ಮನೆಯಲ್ಲಿ ತಮ್ಮ ಕಣ್ಣಿಗೆ ಬಿದ್ದಿದ್ದೆಲ್ಲವನ್ನು ದೋಚಿದ್ದಾರೆ.
ಬಾಂಗ್ಲಾದೇಶ ಹಿಂಸಾಚಾರ: ಒಂದೇ ದಿನದಲ್ಲಿ ಪೊಲೀಸರು ಸೇರಿ 1000 ಜನರ ಹತ್ಯೆ!
ರಾಹುಲ್ ಆನಂದ್ ಕುಟುಂಬಕ್ಕೆ ಆತ್ಮೀಯರಾದವರೊಬ್ಬರು ಬಾಂಗ್ಲಾದೇಶಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪ್ರತಿಭಟನಾಕಾರರು ಮನೆಯ ಗೇಟು ಮುರಿದು ಮನೆಯ ಒಳಗೆ ನುಗ್ಗಿ ಬಂದಿದ್ದು, ಬಳಿಕ ಮನೆಗೆ ಹಾನಿಯಾಗುವಂತಹ ವಸ್ತುಗಳನ್ನೆಲ್ಲಾ ಮನೆಯತ್ತ ಎಸೆದಿದ್ದಾರೆ. ಮನೆಯಲ್ಲಿದ್ದ ಪೀಠೋಪಕರಣಗಳು ಕನ್ನಡಿ ಸೇರಿದಂತೆ ಪ್ರತಿಯೊಂದನ್ನು ದಂಗೆಕೋರರು ದೋಚಿದ್ದಾರೆ. ಇದಾದ ನಂತರ ಇಡೀ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಮನೆಯಲ್ಲಿ ರಾಹುಲ್ ಆನಂದ್ ಅವರಿಗೆ ಸೇರಿದ 3 ಸಾವಿರಕ್ಕೂ ಅಧಿಕ ಸಂಗೀತ ಪರಿಕರಗಳಿದ್ದವು ಎಂದು ಹೇಳಿದ್ದಾರೆ. ಈ ಮನೆ ಸುಮಾರು 140 ವರ್ಷಗಳಷ್ಟು ಹಿಂದಿನದ್ದು ಎಂದು ತಿಳಿದು ಬಂದಿದೆ. ರಾಹುಲ್ ಆನಂದ್ ಬಾಂಗ್ಲಾದಲ್ಲಿ ಜೊಲೇರ್ ಗಾನ್ ಎಂಬ ಜಾನಪದ ಮ್ಯೂಸಿಕ್ ಬ್ಯಾಂಡ್‌ನ್ನು ಮುನ್ನಡೆಸುತ್ತಿದ್ದರು.
ಬಾಂಗ್ಲಾದಲ್ಲಿ ತಾಲಿಬಾನ್ ರೀತಿ ಹಿಂಸೆ: ಅಲ್ಲೇ ಇದ್ದಿದ್ರೆ ನಮ್ಮ ಕಥೆ ಹರೋಹರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ