
ಢಾಕಾ : ‘ಬಾಂಗ್ಲಾದೇಶದಲ್ಲಿ ಆಂತರಿಕ ಸಂಘರ್ಷಕ್ಕೆ ನಾಂದಿ ಹಾಡಿದ ವಿದ್ಯಾರ್ಥಿ ನಾಯಕ ಉಸ್ಮಾನ್ ಹದಿ ಹತ್ಯೆ ಆರೋಪಿಗಳು ಭಾರತಕ್ಕೆ ಪಲಾಯನ ಮಾಡಿದ್ದಾರೆ. ಮೇಘಾಲಯದ ಹಲುವಾಘಾಟ್ ಗಡಿ ದಾಟಿ ಮೇಘಾಲಯವನ್ನು ಪ್ರವೇಶಿಸಿದ್ದಾರೆ’ ಎಂದು ಬಾಂಗ್ಲಾ ಪೊಲೀಸರು ಗಂಭೀರ ಆರೋಪ ಮಾಡಿದ್ದಾರೆ.
ಆದರೆ ಇದನ್ನು ಮೇಘಾಲಯ ಪೊಲೀಸರು ಮತ್ತು ಬಿಎಸ್‌ಎಫ್ ಅಧಿಕಾರಿಗಳು ತಳ್ಳಿಹಾಕಿದ್ದು, ಈ ಆರೋಪ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಹದಿ ಮೇಲೆ ಡಿ.12ರಂದು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದ. ಈ ಕುರಿತು ಹೇಳಿಕೆ ನೀಡಿದ ಢಾಕಾ ಮೆಟ್ರೋಪಾಲಿಟನ್ ಪೊಲೀಸ್ (ಡಿಎಂಪಿ) ಎಸ್.ಎನ್. ಎಂಡಿ ನಜ್ರುಲ್ ಇಸ್ಲಾಂ, ‘ಕೊಲೆ ಆರೋಪಿಗಳಾದ ಫೈಸಲ್ ಕರೀಂ ಮಸೂದ್ ಹಾಗೂ ಅಲಂಗೀರ್ ಶೇಖ್ ಸ್ಥಳೀಯರ ನೆರವಿನಿಂದ ಮೇಘಾಲಯ ಪ್ರವೇಶಿಸಿದ್ದಾರೆ. ಹಲುವಾಘಾಟ್ ಗಡಿ ದಾಟಿದ ಅವರನ್ನು ಮೊದಲು ಪೂರ್ತಿ ಎಂಬ ವ್ಯಕ್ತಿ ಬರಮಾಡಿಕೊಂಡ. ನಂತರ ಸಮಿ ಎಂಬ ಟ್ಯಾಕ್ಸಿ ಚಾಲಕ ಮೇಘಾಲಯದ ತುರಾ ನಗರಕ್ಕೆ ತಲುಪಿಸಿದ. ಪೂರ್ತಿ ಮತ್ತು ಸಮಿಯನ್ನು ಭಾರತದ ಪೊಲೀಸರು ವಶಕ್ಕೆ ಪಡೆದಿದ್ದಾಗಿ ಮಾಹಿತಿ ಬಂದಿದೆ. ಆರೋಪಿಗಳನ್ನು ಬಾಂಗ್ಲಾಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದು, ಭಾರತದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ’ ಎಂದಿದ್ದಾರೆ.
ಬಾಂಗ್ಲಾ ಪೊಲೀಸರ ಆರೋಪವನ್ನು ಮೇಘಾಲಯ ಪೊಲೀಸರು ಮತ್ತು ಬಿಎಸ್‌ಎಫ್ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ‘ಆರೋಪಿಗಳು ಮೇಘಾಲಯಕ್ಕೆ ಬಂದಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅಂತಹ ಯಾವುದೇ ಘಟನೆಯನ್ನು ಬಿಎಸ್‌ಎಫ್ ಪತ್ತೆ ಮಾಡಿಲ್ಲ. ಈ ಹೇಳಿಕೆಗಳು ಆಧಾರರಹಿತ ಮತ್ತು ದಾರಿತಪ್ಪಿಸುವಂತಿವೆ’ ಎಂದು ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ ಒ.ಪಿ. ಉಪಾಧ್ಯಾಯ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ