
ಬಾಂಗ್ಲಾದೇಶ (ಜ.1): ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಸರಣಿ ದಾಳಿಗಳು ಮುಂದುವರಿದಿದ್ದು, ಹೊಸ ವರ್ಷದ ಮುನ್ನಾದಿನದಂದು ಮತ್ತೊಂದು ಭೀಕರ ಘಟನೆ ಸಂಭವಿಸಿದೆ. ಶರಿಯತ್‌ಪುರ ಜಿಲ್ಲೆಯಲ್ಲಿ ಹಿಂದೂ ವ್ಯಕ್ತಿಯೊಬ್ಬರನ್ನು ಕ್ರೂರವಾಗಿ ಹತ್ಯೆ ಮಾಡಲು ಸಂಚು ರೂಪಿಸಿದ ಘಟನೆ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ.
ಡಿಸೆಂಬರ್ 31ರ ಬುಧವಾರದಂದು ಶರಿಯತ್‌ಪುರ ಜಿಲ್ಲೆಯ ಮೆಡಿಕಲ್ ಮಾಲೀಕ ಖೋಕನ್ ಚಂದ್ರ ಎಂಬುವವರನ್ನು ಮತಾಂಧರ ಅಗುಂಪೊಂದು ಗುರಿಯಾಗಿಸಿದೆ. ಮೊದಲಿಗೆ ಅವರನ್ನು ಸುತ್ತುವರೆದು ಮನಬಂದಂತೆ ಥಳಿಸಿದ ಗಲಭೆಕೋರರು, ನಂತರ ಚಾಕುವಿನಿಂದ ಇರಿದಿದ್ದಾರೆ. ಅಷ್ಟಕ್ಕೇ ನಿಲ್ಲದ ದುಷ್ಕರ್ಮಿಗಳು, ಅವರ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲು ಯತ್ನಿಸಿದ್ದಾರೆ. ಈ ವೇಳೆ ಪ್ರಾಣಭಯದಿಂದ ಖೋಕನ್ ಚಂದ್ರ ಅವರು ಹತ್ತಿರದ ಕೊಳಕ್ಕೆ ಹಾರಿ ಹೇಗೋ ಜೀವ ಉಳಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಾಂಗ್ಲಾದೇಶದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಹಿಂದೂ ಸಮುದಾಯದ ಮೇಲೆ ನಡೆದ ನಾಲ್ಕನೇ ಭೀಕರ ದಾಳಿ ಇದಾಗಿದೆ. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಸುರಕ್ಷತೆ ಮರೀಚಿಕೆಯಾಗಿದೆ. ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರ ಮೇಲೆ ನಿರಂತರವಾಗಿ ನಡೆಯುತ್ತಿರುವ ಈ ಹಿಂಸಾಚಾರದ ವಿರುದ್ಧ ಅಂತರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಭಾರತದ ತೀವ್ರ ಕಳವಳ: 2,900ಕ್ಕೂ ಹೆಚ್ಚು ಹಿಂಸಾಚಾರದ ಪ್ರಕರಣ ದಾಖಲು
ನೆರೆಯ ದೇಶದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ಸರ್ಕಾರ ಗಂಭೀರವಾಗಿ ಪ್ರತಿಕ್ರಿಯಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಗೆತನ ಹೆಚ್ಚುತ್ತಿರುವುದು ಕಳವಳಕಾರಿ. ಮಧ್ಯಂತರ ಸರ್ಕಾರದ ಅವಧಿಯಲ್ಲೇ ಸುಮಾರು 2,900ಕ್ಕೂ ಹೆಚ್ಚು ದೌರ್ಜನ್ಯದ ಪ್ರಕರಣಗಳು ವರದಿಯಾಗಿವೆ. ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಯೂನಸ್ ಸರ್ಕಾರ ಉಗ್ರಗಾಮಿಗಳ ಕೈಗೊಂಬೆ ಎಂದ ಶೇಖ್ ಹಸೀನಾ
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಯೂನಸ್ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಯೂನಸ್ ಅವರು ಶಿಕ್ಷೆಗೊಳಗಾದ ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡಿ ಅವರಿಗೆ ಅಧಿಕಾರ ನೀಡಿದ್ದಾರೆ. ಉಗ್ರಗಾಮಿಗಳೇ ಇಲ್ಲಿನ ವಿದೇಶಾಂಗ ನೀತಿಯನ್ನು ನಿರ್ದೇಶಿಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಭಾರತ ವ್ಯಕ್ತಪಡಿಸುತ್ತಿರುವ ಭದ್ರತೆಯ ಕಳವಳ ನ್ಯಾಯಯುತವಾಗಿದೆ ಎಂದು ಅವರು ಬೆಂಬಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ