ಸ್ವಿಟ್ಜರ್‌ಲ್ಯಾಂಡ್‌ ನಲ್ಲಿ ದುರಂತ: ನ್ಯೂ ಈಯರ್ ಸಂಭ್ರಮದ ವೇಳೆ ಅವಘಡ ಕನಿಷ್ಠ 40 ಮಂದಿ ಬಲಿ, 100ಕ್ಕೂ ಹೆಚ್ಚು ಗಾಯ!

Published : Jan 01, 2026, 06:04 PM IST
switzerland

ಸಾರಾಂಶ

ಸ್ವಿಟ್ಜರ್‌ಲ್ಯಾಂಡ್‌ನ ಕ್ರಾನ್ಸ್-ಮೊಂಟಾನಾ ಸ್ಕೀ ರೆಸಾರ್ಟ್‌ನಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ 'ಲೆ ಕಾನ್ಸ್ಟೆಲೇಷನ್' ಬಾರ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  

ಸ್ವಿಟ್ಜರ್‌ಲ್ಯಾಂಡ್‌ನ ನೈಋತ್ಯ ಭಾಗದಲ್ಲಿರುವ ವಲಾಯಿಸ್ ಕ್ಯಾಂಟನ್‌ನ ಪ್ರಸಿದ್ಧ ಐಷಾರಾಮಿ ಆಲ್ಪೈನ್ ಸ್ಕೀ ರೆಸಾರ್ಟ್ ಪಟ್ಟಣ ಕ್ರಾನ್ಸ್-ಮೊಂಟಾನಾಯಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ಜನಸಂದಣಿಯಿಂದ ತುಂಬಿದ್ದ “ಲೆ ಕಾನ್ಸ್ಟೆಲೇಷನ್” (Le Constellation) ಎಂಬ ಜನಪ್ರಿಯ ಬಾರ್‌ನಲ್ಲಿ ಸಂಭವಿಸಿದ ಸ್ಫೋಟ ಮತ್ತು ಬೆಂಕಿ ಅವಘಡದಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದು, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ವಿಸ್ ಪೊಲೀಸರು ಗುರುವಾರ ದೃಢಪಡಿಸಿದ್ದಾರೆ. ಕಡಿಮೆಯೆಂದರೂ 40 ಜನ ಈವರೆಗೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಹೊಸ ವರ್ಷದ ಮುನ್ನಾದಿನದ ಪಾರ್ಟಿಗಾಗಿ ಬಾರ್ ತುಂಬಿ ತುಳುಕುತ್ತಿದ್ದ ಸಂದರ್ಭದಲ್ಲೇ, ಸ್ಥಳೀಯ ಸಮಯ ಬೆಳಗಿನ ಜಾವ 1.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಬಾರ್ ಇರುವ ಕಟ್ಟಡದ ಒಂದು ಭಾಗಕ್ಕೆ ಬೆಂಕಿ ವ್ಯಾಪಿಸಿದ್ದು, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಂತಾಗಿದೆ.

ಸಾವಿನ ನಿಖರ ಸಂಖ್ಯೆ ಇನ್ನೂ ಸ್ಪಷ್ಟವಿಲ್ಲ

ವಲಾಯಿಸ್ ಕ್ಯಾಂಟೋನಲ್ ಪೊಲೀಸರು ಸ್ಫೋಟ ಸಂಭವಿಸಿರುವುದನ್ನು ದೃಢಪಡಿಸಿದ್ದು, ಸಾವುನೋವುಗಳು ಸಂಭವಿಸಿವೆ ಎಂದು ತಿಳಿಸಿದ್ದಾರೆ. ಆದರೆ, ಸಾವಿನ ನಿಖರ ಸಂಖ್ಯೆಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ. ಪೊಲೀಸ್ ವಕ್ತಾರ ಗೇಟನ್ ಲಾಥಿಯಾನ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿ, “ಈ ಘಟನೆಯಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಸ್ಫೋಟದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ” ಎಂದು ಹೇಳಿದ್ದಾರೆ.

ಇಟಾಲಿಯನ್ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಈ ಅವಘಡದಲ್ಲಿ ಸುಮಾರು 40 ಜನರು ಸಾವನ್ನಪ್ಪಿರುವ ಸಾಧ್ಯತೆ ಇದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ವಿಸ್ ಪೊಲೀಸರು ನಂಬಿದ್ದಾರೆ. ಆದರೆ ಈ ಸಂಖ್ಯೆಗಳನ್ನು ಸ್ವಿಸ್ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಈ ಬೆಂಕಿ ಉದ್ದೇಶಪೂರ್ವಕವಾಗಿ ಹಚ್ಚಲಾಗಿದೆಯೇ ಎಂಬ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.

ಪೊಲೀಸ್ ಅಧಿಕಾರಿಗಳ ಹೇಳಿಕೆ

ವಲಾಯಿಸ್ ಕ್ಯಾಂಟೋನಲ್ ಪೊಲೀಸ್ ಕಮಾಂಡರ್ ಫ್ರೆಡೆರಿಕ್ ಗಿಸ್ಲರ್, “100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಗಂಭೀರ ಸ್ಥಿತಿಯಲ್ಲಿದ್ದಾರೆ” ಎಂದು ತಿಳಿಸಿದ್ದಾರೆ. ಸ್ಕೈ ನ್ಯೂಸ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅವರು ಸಾವಿನ ನಿಖರ ಸಂಖ್ಯೆಯನ್ನು ಬಹಿರಂಗಪಡಿಸದೇ, “ಹಲವಾರು ಡಜನ್ ಜನರು ಮೃತಪಟ್ಟಿದ್ದಾರೆ” ಎಂದು ಹೇಳಿದ್ದಾರೆ.

ಸ್ಕೈ ನ್ಯೂಸ್ ವರದಿ ಪ್ರಕಾರ, ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಮಾತನಾಡಿದರೆ, ಕನಿಷ್ಠ 10 ಮಂದಿ ಸಾವನ್ನಪ್ಪಿರುವುದು ಖಚಿತ, ಆದರೆ ಸ್ಥಳೀಯ ಮಾಧ್ಯಮಗಳು ಸಾವಿನ ಸಂಖ್ಯೆ ಇದಕ್ಕಿಂತ ಹೆಚ್ಚಿರಬಹುದೆಂದು ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಸಾವಿನ ಅಂತಿಮ ಸಂಖ್ಯೆ ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ.

ರಕ್ಷಣಾ ಕಾರ್ಯಾಚರಣೆ ತೀವ್ರ

ಸ್ಫೋಟದ ಮಾಹಿತಿ ಲಭಿಸಿದ ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ, ತುರ್ತು ವೈದ್ಯಕೀಯ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯಕರ್ತರ ದೊಡ್ಡ ಪಡೆ ಸ್ಥಳಕ್ಕೆ ಧಾವಿಸಿತು. ರಾತ್ರಿಯಿಡೀ ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳು ಹಾಗೂ ಪೊಲೀಸ್ ವಾಹನಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸ್ವಿಸ್ ದಿನಪತ್ರಿಕೆ ಬ್ಲಿಕ್, ಘಟನಾ ಸ್ಥಳದಲ್ಲಿದ್ದ ವೈದ್ಯರನ್ನು ಉಲ್ಲೇಖಿಸಿ, ಸಾವಿನ ಸಂಖ್ಯೆ “ಡಜನ್‌ಗಳಲ್ಲಿ” ಇರಬಹುದೆಂದು ವರದಿ ಮಾಡಿದೆ.

ಪ್ರದೇಶ ಸೀಲ್

ಸುರಕ್ಷತಾ ಕಾರಣಗಳಿಂದಾಗಿ ಘಟನಾ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಜೊತೆಗೆ, ಕ್ರಾನ್ಸ್-ಮೊಂಟಾನಾ ಮೇಲೆ ತಾತ್ಕಾಲಿಕ ಹಾರಾಟ ನಿಷೇಧ ವಲಯ (No-Fly Zone) ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದಾಗ ಬಾರ್‌ನಲ್ಲಿ 100ಕ್ಕೂ ಹೆಚ್ಚು ಜನರು ಹಾಜರಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ದೃಶ್ಯಗಳು

ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಬಾರ್ ಇರುವ ಕಟ್ಟಡದ ಭಾಗವೊಂದು ಬೆಂಕಿಗಾಹುತಿಯಾಗಿರುವ ದೃಶ್ಯಗಳು ಹಾಗೂ ರಕ್ಷಣಾ ಸಿಬ್ಬಂದಿ ತುರ್ತು ಕಾರ್ಯಾಚರಣೆಯಲ್ಲಿ ತೊಡಗಿರುವುದು ಕಂಡುಬಂದಿದೆ. “ಲೆ ಕಾನ್ಸ್ಟೆಲೇಷನ್” ಬಾರ್ ಐಷಾರಾಮಿ ಸ್ಕೀ ರೆಸಾರ್ಟ್‌ಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯ ಸ್ಥಳವಾಗಿತ್ತು.  ಐಷಾರಾಮಿ ಸ್ಕೀ ರೆಸಾರ್ಟ್‌ನಲ್ಲಿ ಸಂಭ್ರಮದಿಂದ ನಡೆಯಬೇಕಿದ್ದ ಹೊಸ ವರ್ಷದ ಆಚರಣೆಯ ಮೇಲೆ ಈ ದುರ್ಘಟನೆ ಕರಾಳ ನೆರಳನ್ನು ಬೀರಿದ್ದು, ಇಡೀ ಸ್ವಿಟ್ಜರ್‌ಲ್ಯಾಂಡ್‌ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಆಘಾತ ಮೂಡಿಸಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಘಾನಾ ಪ್ರವಾದಿಯ ಅಸಲಿ ಮುಖ ಬಯಲು: ಪ್ರವಾಹ ಆಗುತ್ತೆ ಅಂತ ಜನರ ದಾರಿ ತಪ್ಪಿಸಿದ ಪ್ರವಾದಿಯ ಬಂಧನ
ದೊಡ್ಡ ಮರುಭೂಮಿಯನ್ನೇ ಹೊಂದಿದ್ದರೂ ಈ ಮುಸ್ಲಿಂ ದೇಶಗಳು ಮರಳನ್ನು ವಿದೇಶದಿಂದ ಆಮದು ಮಾಡಿಕೊಳ್ಳೋದೇಕೆ?