
ಸೋಮವಾರ ಮೇರಿಲ್ಯಾಂಡ್ನ ಜಾಯಿಂಟ್ ಬೇಸ್ ಆಂಡ್ರ್ಯೂಸ್ನಲ್ಲಿ ಹೆಲಿಕಾಪ್ಟರ್ನಿಂದ ಇಳಿಯುವ ವೇಳೆ ಅಮೆರಿಕದ ಸೆಕೆಂಡ್ ಲೇಡಿ ಉಷಾ ವೆನ್ಸ್ ಅವರ ಕಾಲು ಎಡವಿದೆ. ಈ ವೇಳೆ ಅವರು ತಮ್ಮ 9 ವಾರದ ಮಗ ಅಲೆಕ್ ನೀಲ್ ವೆನ್ಸ್ನನ್ನು ಎದೆಗೆ ಅವಚಿಕೊಂಡಿದ್ದರು. ಕಾಲು ಎಡವಿದರೂ, ತಕ್ಷಣವೇ ಪಕ್ಕದಲ್ಲಿದ್ದ ರೇಲಿಂಗ್ ಹಿಡಿದುಕೊಂಡು ಬೀಳುವುದರಿಂದ ತಪ್ಪಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಉಷಾ ವೆನ್ಸ್ ಹೆಲಿಕಾಪ್ಟರ್ನ ಮೆಟ್ಟಿಲುಗಳ ಕೊನೆಯ ಹಂತಕ್ಕೆ ಬಂದಾಗ ಅವರ ಕಾಲು ಜಾರಿದಂತೆ ಕಾಣಿಸುತ್ತದೆ. ಕೂಡಲೇ ರೇಲಿಂಗ್ ಹಿಡಿದುಕೊಂಡು ಸಮತೋಲನ ಕಾಪಾಡಿಕೊಂಡ ಅವರು, ನಂತರ ತಮ್ಮ ಮಗನನ್ನುಕಾಪಾಡಿಕೊಂಡಿದ್ದಾರೆ. ಆದರೆ ಈ ಘಟನೆಗಿಂತ ಮತ್ತೊಂದು ವಿಚಾರವೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಉಷಾ ಅವರಿಂದ ಕೆಲವೇ ಅಡಿ ದೂರದಲ್ಲಿ ಭದ್ರತಾ ಸಿಬ್ಬಂದಿ ನಿಂತಿದ್ದರು. ಅವರು ಉಷಾ ಎಡವಿದಾಗ ಸಹಾಯ ಮಾಡಲು ಮುಂದೆ ಬರಲಿಲ್ಲ. ತಮ್ಮ ಸ್ಥಳದಿಂದ ಅವರು ಕದಲಲಿಲ್ಲ. ಇದನ್ನು ಗಮನಿಸಿದ ಕೆಲವರು, ಅವರು ಸಹಾಯಕ್ಕೆ ಏಕೆ ಮುಂದೆ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಆದರೆ ವಿಡಿಯೋದಲ್ಲಿ ಭದ್ರತಾ ಸಿಬ್ಬಂದಿ ಏಕೆ ಮಧ್ಯಪ್ರವೇಶ ಮಾಡಲಿಲ್ಲ ಎಂಬುದು ಸ್ಪಷ್ಟವಾಗಿಲ್ಲ. ಇದಕ್ಕೆ ಯಾವುದೇ ಭದ್ರತಾ ಪ್ರೋಟೋಕಾಲ್ ಕಾರಣವಾಗಿತ್ತೇ ಎಂಬುದೂ ತಿಳಿದುಬಂದಿಲ್ಲ. ಉಪಾಧ್ಯಕ್ಷ ಜೆ.ಡಿ. ವೆನ್ಸ್ ಅವರು ತಮ್ಮ ನಾಲ್ಕು ವರ್ಷದ ಮಗಳು ಮಿರಾಬೆಲ್ ಅವರನ್ನು ಎತ್ತಿಕೊಂಡು ಉಷಾ ಅವರ ಹಿಂದೆಯೇ ಹೆಲಿಕಾಪ್ಟರ್ನಿಂದ ಇಳಿದಿದ್ದಾರೆ. ಉಷಾ ಎಡವಿದ ಘಟನೆ ಅವರ ಗಮನಕ್ಕೆ ಬಂದಂತೆ ವಿಡಿಯೋದಲ್ಲಿ ಕಾಣಿಸುವುದಿಲ್ಲ. ಮೆಟ್ಟಿಲುಗಳ ಕೆಳಗೆ ಬಂದ ಬಳಿಕ ಅವರು ಉಷಾ ಮತ್ತು ಮಕ್ಕಳನ್ನು ಸೇರಿಕೊಂಡಿದ್ದಾರೆ.
ನಂತರ ಇಡೀ ಕುಟುಂಬ ಒಟ್ಟಾಗಿ ಅಲಾಸ್ಕಾಗೆ ತೆರಳಬೇಕಿದ್ದ ವಿಮಾನದತ್ತ ಸಾಗಿತ್ತು. ಮಧ್ಯಂತರ ಚುನಾವಣೆಗೂ ಮುನ್ನ ನಡೆಯುತ್ತಿದ್ದ ಪ್ರಚಾರ ಪ್ರವಾಸದ ಭಾಗವಾಗಿ ವೆನ್ಸ್ ಕುಟುಂಬ ಅಲಾಸ್ಕಾಗೆ ತೆರಳುತ್ತಿತ್ತು. ರಿಪಬ್ಲಿಕನ್ ಸೆನೆಟರ್ ಡ್ಯಾನ್ ಸುಲಿವನ್ ಅವರನ್ನು ಬೆಂಬಲಿಸಿ ನಡೆಯಲಿದ್ದ ರಿಪಬ್ಲಿಕನ್ ನ್ಯಾಷನಲ್ ಕಮಿಟಿಯ ರ್ಯಾಲಿಯಲ್ಲಿ ವೆನ್ಸ್ ಭಾಷಣ ಮಾಡಬೇಕಿತ್ತು. ಸುಲಿವನ್ ಅವರು ಡೆಮಾಕ್ರಟಿಕ್ ಅಭ್ಯರ್ಥಿ ಮೇರಿ ಪೆಲ್ಟೋಲಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಏರ್ ಫೋರ್ಸ್ ಟು ವಿಮಾನ ಹತ್ತುವ ಮುನ್ನ ವೆನ್ಸ್, ಉಷಾ ಮತ್ತು ತಮ್ಮ ಕೆಲವು ಮಕ್ಕಳು ಕೂಡ ಈ ಪ್ರವಾಸದಲ್ಲಿ ತಮ್ಮೊಂದಿಗೆ ಬರಲಿದ್ದಾರೆ ಎಂದು ತಿಳಿಸಿದ್ದರು. ಈ ಪ್ರವಾಸದೊಂದಿಗೆ ಉಷಾ ಅವರು ಅಮೆರಿಕದ ಎಲ್ಲಾ 50 ರಾಜ್ಯಗಳಿಗೆ ಭೇಟಿ ನೀಡಿದಂತಾಗಲಿದೆ ಎಂದು ಅವರು ಹೇಳಿದ್ದರು. ಸುಮಾರು 7.5 ಗಂಟೆಗಳ ಈ ಪ್ರಯಾಣಕ್ಕೆ ತಮ್ಮ 9 ವಾರದ ಮಗ ಅಲೆಕ್ನನ್ನೂ ಕರೆದುಕೊಂಡು ಹೋಗುತ್ತಿರುವುದಾಗಿ ವೆನ್ಸ್ ತಿಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ