
ಕ್ರಿಕೆಟ್, ಹೀಗೆ ಯಾವುದೇ ಕ್ರೀಡೆಯಾಗಲಿ (Sports) ತಮ್ಮ ನೆಚ್ಚಿನ ತಂಡ ಪಂದ್ಯ ಸೋತಾಗ ಬೇಸರವಾಗುವುದು ಸಹಜ. ಆದರೆ, ಇಂಡೋನೇಷ್ಯಾದಲ್ಲಿ (Indonesia) ತಂಡವೊಂದು ಫುಟ್‌ಬಾಲ್ (Football) ಮ್ಯಾಚ್ ಸೋತಿದ್ದಕ್ಕೆ ಸಿಟ್ಟಿಗೆದ್ದ ಅಭಿಮಾನಿಗಳು ಸ್ಟೇಡಿಯಂನೊಳಗೆ (Stadium) ನುಗ್ಗಿದ್ದಾರೆ. ಈ ವೇಳೆ, ಪೊಲೀಸರು ಅಶ್ರುವಾಯು (Tear Gas) ಪ್ರಯೋಗ ಮಾಡಿದ್ದು, ಇದರಿಂದ ಕಾಲ್ತುಳಿತವಾಗಿದೆ (Stampede) ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಈ ಕಾಲ್ತುಳಿತಕ್ಕೆ ಕನಿಷ್ಠ 174 ಜನರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಇನ್ನು 180 ಜನರಿಗೆ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇಂಡೋನೇಷ್ಯಾದ ಮಲಾಂಗ್ (Malang) ನಗರದ ಕಾಂಜುರುಹಾನ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯ ರಣಾಂಗಣವಾಗಿದ್ದು, ಅರೆಮಾ ಎಫ್‌ಸಿ (Arema FC) ತಂಡದ ಅಭಿಮಾನಿಗಳು ತಮ್ಮ ತಂಡ ಪಂದ್ಯ ಸೋತಿದ್ದಕ್ಕೆ ಸ್ಟೇಡಿಯಂ ಒಳಗೆ ನುಗ್ಗಿದ್ದಾರೆ.
ಭಾರತ - ಪಾಕಿಸ್ತಾನ ಹೇಗೆ ಬದ್ಧ ವೈರಿಗಳೋ ಹಾಗೆ, ಅರೆಮಾ ಎಫ್‌ಸಿ ಹಾಗೂ ಪರ್ಸೆಬಾಯಾ ಸೂರಬಾಯಾ ತಂಡ ಬದ್ಧವೈರಿಗಳಾಗಿವೆ. ಈ ಬದ್ಧವೈರಿಯ ಎದುರು ಕಳೆದ 2 ದಶಕಗಳ ಬಳಿಕ ಅರೆಮಾ ಎಫ್‌ಸಿ ತಂಡ 2 - 3 ಅಂತರದಲ್ಲಿ ಪಂದ್ಯ ಸೋತಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದು ಕ್ರೀಡಾಂಗಣದೊಳಗೆ ನುಗ್ಗಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಪ್ರೇಕ್ಷಕರು ತಾವು ಕೂರುವ ಸ್ಥಳಕ್ಕೆ ವಾಪಸ್ ಹೋಗುವಂತೆ ಪೊಲೀಸರು ಅಭಿಮಾನಿಗಳನ್ನು ಮನವಿ ಮಾಡಿಕೊಂಡಿದ್ದಾರೆ. ಆದರೆ ಅಭಿಮಾನಿಗಳು ಕ್ಯಾರೆ ಎನ್ನದಾಗ ಹಾಗೂ ಇಬ್ಬರು ಅಧಿಕಾರಿಗಳು ಬಲಿಯಾದ ಬಳಿಕ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ: ಫುಟ್ಬಾಲ್ ಕ್ರೀಡಾಂಗಣಕ್ಕೆ ನುಗ್ಗುವಾಗ ಭೀಕರ ಕಾಲ್ತುಳಿತ: 8 ಮಂದಿ ದುರ್ಮರಣ..!
ಈ ವೇಳೆ ನೂರಾರು ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಾವಿನ ಸಂಖ್ಯೆ 174 ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಇಬ್ಬರು ಅಧಿಕಾರಿಗಳಾಗಿದ್ದಾರೆ. ಈ ಪೈಕಿ ಸ್ಟೇಡಿಯಂ ಒಳಗೆ 34 ಜನರು ಮೃತಪಟ್ಟರೆ ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಲಿಯಾಗಿದ್ದಾರೆ ಎಂದು ಪೂರ್ವ ಜಾವಾ ಪೊಲೀಸ್ ಮುಖ್ಯಸ್ಥ ನಿಕೋ ಅಫಿಂಟಾ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಶ್ರುವಾಯು ಪ್ರಯೋಗ ನಡೆದ ಬಳಿಕ ಸ್ಟೇಡಿಯಂನಿಂದ ಹೊರಗೆ ಓಡುತ್ತಿರುವಾಗ ಒಬ್ಬರಿಗೊಬ್ಬರು ತುಳಿದುಕೊಂಡರು ಹಾಗೂ ಉಸಿರುಗಟ್ಟಿ ಹಲವರು ಬಲಿಯಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಇನ್ನು, ಪೊಲೀಸರು ಹೆಚ್ಚು ಅಶ್ರುವಾಯು ಪ್ರಯೋಗ ನಡೆಸಿದ್ದಾರೆ ಹಾಗೂ ಇದನ್ನು ತಪ್ಪಿಸಿಕೊಳ್ಳಲು ಜನರು ಸ್ಟೇಡಿಯಂನಿಂದ ಹೊರಗೆ ಹೋಗುವಾಗ ಕಾಲ್ತುಳಿತ ಸಂಭವಿಸಿದೆ. ಇನ್ನು, ಗಾಯಗೊಂಡ ಪ್ರೇಕ್ಷಕರನ್ನು ಹಲವರು ಎತ್ತಿಕೊಂಡು ಹೋಗುತ್ತಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇನ್ನು, ಸ್ಟೇಡಿಯಂ ಹೊರಗೆ ಸಹ ಭಾನುವಾರ ಬೆಳಗ್ಗೆ ಗಲಾಟೆಯಾಗಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ವೇಳೆ ಪೊಲೀಸ್ ಟ್ರಕ್ ಒಂದಕ್ಕೂ ಬೆಂಕಿ ಬಿದ್ದಿದೆ. ಇನ್ನು, ಈ ಘಟನೆಗೆ ಇಂಡೋನೇಷ್ಯಾ ಸರ್ಕಾರ ಕ್ಷಮೆ ಕೋರಿದ್ದು, ಕಾಲ್ತುಳಿತಕ್ಕೆ ಕಾರಣವಾದ ಸನ್ನಿವೇಶದ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಖತು ಶ್ಯಾಮಜಿ ದೇವಸ್ಥಾನದಲ್ಲಿ ಕಾಲ್ತುಳಿತ, ಮೂವರು ಭಕ್ತರ ಸಾವು ಹಲವರು ಗಾಯ!
‘’ಸ್ಟೇಡಿಯಂನಲ್ಲಿ ಕುಳಿತುಕೊಂಡು ಫುಟ್ಬಾಲ್ ಮ್ಯಾಚ್‌ಗಳನ್ನು ಅಭಿಮಾನಿಗಳು ನೋಡಬಹುದಾದ ಸನ್ನಿವೇಶದಲ್ಲಿ ಇಂತಹ ವಿಷಾದನೀಯ ಘಟನೆ ನಡೆದಿದೆ. ಈ ಘಟನೆಗೆ ನಾವು ಕ್ಷಮೆ ಕೋರುತ್ತೇವೆ ಎಂದು ಇಂಡೋನೇಷ್ಯಾದ ಕ್ರೀಡೆ ಹಾಗೂ ಯುವ ಜನರ ಸಚಿವ ಝೈನುದ್ದೀನ್ ಅಮಾಲಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. "ನಾವು ಪಂದ್ಯದ ಸಂಘಟನೆ ಮತ್ತು ಬೆಂಬಲಿಗರ ಹಾಜರಾತಿಯನ್ನು ಕೂಲಂಕುಷವಾಗಿ ಮೌಲ್ಯಮಾಪನ ಮಾಡುತ್ತೇವೆ. ಇನ್ನು, ನಾವು ಅಭಿಮಾನಿಗಳಿಗೆ ಪಂದ್ಯಗಳಿಗೆ ಹಾಜರಾಗದಂತೆ ನಿಷೇಧಿಸಲು ಹಿಂತಿರುಗುತ್ತೇವೆಯೇ ಎನ್ನುವುದನ್ನು ನಾವು ಚರ್ಚಿಸುತ್ತೇವೆ."ಎಂದು ಹೇಳಿದ್ದಾರೆ.
ಇಂಡೋನೇಷ್ಯಾದ ಫುಟ್‌ಬಾಲ್ ಅಸೋಸಿಯೇಷನ್ (ಪಿಎಸ್‌ಎಸ್‌ಐ) ಒಂದು ವಾರದವರೆಗೆ ಫುಟ್‌ಬಾಲ್ ಪಂದ್ಯಗಳನ್ನು ಸ್ಥಗಿತಗೊಳಿಸಿದೆ. ಅರೆಮಾ ಎಫ್‌ಸಿಯನ್ನು ಉಳಿದ ಋತುವಿನಲ್ಲಿ ಹೋಮ್ ಗೇಮ್‌ಗಳನ್ನು ಆಯೋಜಿಸುವುದನ್ನು ನಿಷೇಧಿಸಿತು ಈ ಘಟನೆ ಬಗ್ಗೆ ತನಿಖೆ ನಡೆಸಲು ತನಿಖಾ ತಂಡವನ್ನು ಮಲಾಂಗ್‌ಗೆ ಕಳುಹಿಸುವುದಾಗಿ ಹೇಳಿದೆ. "ನಾವು ವಿಷಾದಿಸುತ್ತೇವೆ ಮತ್ತು ಘಟನೆಯ ಬಗ್ಗೆ ಸಂತ್ರಸ್ಥರ ಕುಟುಂಬಗಳು ಮತ್ತು ಎಲ್ಲರಿಗೂ ಕ್ಷಮೆಯಾಚಿಸುತ್ತೇವೆ" ಎಂದು ಪಿಎಸ್‌ಎಸ್‌ಐ ಅಧ್ಯಕ್ಷ ಮೊಚಮದ್ ಇರಿಯಾವಾನ್ ಹೇಳಿದ್ದಾರೆ.ಇಂಡೋನೇಷ್ಯಾದಲ್ಲಿ ಅಭಿಮಾನಿಗಳ ಹಿಂಸಾಚಾರವು ದೊಡ್ಡ ಸಮಸ್ಯೆಯಾಗಿದ್ದು, ಹಲವು ಪಂದ್ಯಗಳ ಬಳಿಕ ಮಾರಣಾಂತಿಕ ಗಲಾಟೆಗಳು ನಡೆದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ