
ಢಾಕಾ: ಉದ್ರಿಕ್ತರಿಂದ ಹತ್ಯೆಗೀಡಾದ ಬಾಂಗ್ಲಾದೇಶಿ ವಿದ್ಯಾರ್ಥಿ ನಾಯಕ ಉಸ್ಮಾನ್ ಹದಿ, ಪಕ್ಕಾ ಭಾರತ ವಿರೋಧಿ. ಈತ ಭಾರತದ ಹಲವು ಭಾಗಗಳನ್ನು ಒಳಗೊಂಡ ಗ್ರೇಟರ್ ಬಾಂಗ್ಲಾದೇಶದ ನಕ್ಷೆಯನ್ನೂ ರೂಪಿಸಿದ್ದ. ಇವನ ಮೇಲೆ ಉದ್ರಿಕ್ತರು ಡಿ.12 ರಂದು ಢಾಕಾದಲ್ಲಿ ಗುಂಡಿನ ದಾಳಿ ಮಾಡಿದ್ದರು. ತಲೆಗೆ ಗುಂಡೇಟು ತಿಂದಿದ್ದ ಆತ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ದಾಖಲಾದಾಗ ಸಾವನ್ನಪ್ಪಿದ್ದಾನೆ.
ಕಳೆದ ವರ್ಷದ ಜುಲೈನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಈತ ಮುಂಚೂಣಿ ನಾಯಕನಾಗಿದ್ದ. ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಕೆಳಗಿಳಿಯುವಲ್ಲಿ ಈತನ ಪಾತ್ರವೂ ಪ್ರಮುಖವಾಗಿತ್ತು .ವಿದ್ಯಾರ್ಥಿ ದಂಗೆಯಲ್ಲಿ ಈತ ಭಾಗವಹಿಸಿದ್ದರೂ, ಮುಹಮ್ಮದ್ ಯೂನಸ್ ಸರ್ಕಾರ ಈತನಿದ್ದ ಇಂಕಿಲಾಬ್ ಪಕ್ಷವನ್ನು ಇತ್ತೀಚೆಗೆ ವಿಸರ್ಜಿಸಿತ್ತು ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಿತ್ತು.
ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಬಾಂಗ್ಲಾ ಚುನಾವಣೆಯಲ್ಲಿ ಈತ ಢಾಕಾ-8 ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಪ್ರಚಾರ ಮಾಡುತ್ತಿದ್ದ. ಅಷ್ಟರಲ್ಲೇ ಹತ್ಯೆಗೀಡಾಗಿದ್ದಾನೆ.
ಈತನನ್ನು ಹಂತಕರಿಗಾಗಿ ಬಾಂಗ್ಲಾದೇಶದ ಪೊಲೀಸರು ಹುಡುಕಾಟ ಆರಂಭಿಸಿದ್ದು, ಇಬ್ಬರು ಪ್ರಮುಖ ಶಂಕಿತರ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಅವರ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ ಐದು ಮಿಲಿಯನ್ ಟಕಾ (ಸುಮಾರು $42,000) ಬಹುಮಾನ ನೀಡುವುದಾಗಿ ಹೇಳಿದ್ದಾರೆ.
ಢಾಕಾ: ಬಾಂಗ್ಲಾದಲ್ಲಿ ಭಾರತ ಹಾಗೂ ಹಿಂದೂ ವಿರೋಧಿಗಳ ದಾಳಿಗೆ ಒಳಗಾದ ಹಿಂದೂ ಯುವಕ ದೀಪು ಚಂದ್ರ ದಾಸ್ ಒಬ್ಬ ಉಡುಪು ಕಾರ್ಖಾನೆ ನೌಕರ. ಇತ್ತೀಚೆಗೆ ಅವರ ಕಾರ್ಖಾನೆಯಲ್ಲಿ ನಡೆದಿದ್ದ ವಿಶ್ವ ಅರೇಬಿಕ್ ಭಾಷಾ ದಿನಾಚರಣೆ ಸಮಾರಂಭದಲ್ಲಿ ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಬಗ್ಗೆ ಅನುಚಿತ ಟೀಕೆ-ಟಿಪ್ಪಣಿ ಮಾಡಿದ್ದ ಎನ್ನಲಾಗಿದೆ. ಈತ ಮಾಡಿದ ಆರೋಪಗಳು ಕಾರ್ಖಾನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೇಗವಾಗಿ ಹರಡಿದವು. ಇದರಿಂದ ಕೋಪಗೊಂಡ ಗುಂಪೊಂದು ಅವನನ್ನು ಕೊಂದು ಹಾಕಿತು ಎಂದು ಹೇಳಲಾಗಿದೆ.
ಢಾಕಾ: ಭಾರತ ವಿರೋಧಿ ನಾಯಕನಾಗಿದ್ದ ಉಸ್ಮಾನ್ ಹದಿ ಹತ್ಯೆಯ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಮತ್ತೆ ಭಾರತ ವಿರೋಧಿ ಕಿಚ್ಚು ಉಲ್ಬಣಿಸಿದೆ. ಹದಿ ಹತ್ಯೆಯ ಹಿಂದೆ, ಭಾರತದ ರಾಜಾಶ್ರಯದಲ್ಲಿರುವ ಶೇಖ್ ಹಸೀನಾ ಬೆಂಬಲಿಗರ ಪಾತ್ರವಿದೆ ಎಂಬುದು ಆತನ ಬೆಂಬಲಿಗರ ಅಂಬೋಣ. ಹೀಗಾಗಿ ಚಟ್ಟೋಗ್ರಾಮದಲ್ಲಿರುವ ಭಾರತೀಯ ರಾಯಭಾರಿಯ ಮನೆ ಮೇಲೆ ಕಲ್ಲೆಸೆಯಲಾಗಿದೆ, ಇದೇ ವೇಳೆ, ಇಸ್ಲಾಂ ವಿರೋಧಿ ಹೇಳಿಕೆ ನೀಡಿದ್ದ ಎನ್ನಲಾದ ದೀಪು ಎಂಬ ಯುವಕನ ಹತ್ಯೆ ಮಾಡಲಾಗಿದೆ. ‘ಭಾರತವು ಹದಿ ಭಾಯಿ ಹಂತಕರನ್ನು(ಶೇಖ್ ಹಸೀನಾ) ಹಿಂದಿರುಗಿಸುವವರೆಗೆ ಬಾಂಗ್ಲಾದೇಶದಲ್ಲಿರುವ ಭಾರತೀಯ ಹೈಕಮಿಷನ್ ತೆರೆಯಲು ಅವಕಾಶ ನೀಡಲ್ಲ. ನಾವು ಯುದ್ಧದಲ್ಲಿದ್ದೇವೆ!’ ಎಂದು ಬಾಂಗ್ಲಾದೇಶದ ಎನ್‌ಸಿಪಿಯ ಪ್ರಮುಖ ನಾಯಕ ಸರ್ಜಿಸ್ ಆಲ್ಮ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ