
ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರರನ್ನು ಮುಸುಕುಧಾರರು ಸಾಯಿಸುವ ಬಗ್ಗೆ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಆದರೆ ಈ ಭಯೋತ್ಪಾದಕರು ಹೇಗೆ ಸತ್ತರು, ಅಷ್ಟು ಭದ್ರತೆ ಇರುವ ಸ್ಥಳದಲ್ಲಿ ಯಾರಿಗೂ ಕಾಣದಂತೆ, ಅಲ್ಲಿಯೇ ಅವರನ್ನು ಮೇಲಕ್ಕೆ ಕಳುಹಿಸುವ ಕಾರ್ಯ ಮಾಡುವುದು ಹೇಗೆ? ಅಲ್ಲಿರುವ ಸಿಸಿಟಿವಿಯಲ್ಲಿಯೂ ಕಾಣದಂತೆ ಉಗ್ರರನ್ನು ಉಡೀಸ್ ಮಾಡುವುದು ಹೇಗೆ ಎನ್ನುವುದು ಮಾತ್ರ ಯಾವತ್ತಿಗೂ ನಿಗೂಢವೇ. ಇದರ ಬಗ್ಗೆ ಇನ್ನೊಂದು ಸಿನಿಮಾ ಬಂದರಷ್ಟೇ ಜನರು ತಿಳಿಯಲಿಕ್ಕೆ ಸಾಧ್ಯವೇನೋ. ಆದರೆ ಅಂಥ ಪ್ರಯತ್ನ ಅಂತೂ ನಡೆಯುವುದಿಲ್ಲ ಬಿಡಿ. ಹೀಗೆ ಎಲ್ಲಿಯೇ ಉಗ್ರರು ಸತ್ತರೂ, ಅವರನ್ನು ಮೇಲಕ್ಕೆ ಕಳುಹಿಸುವ ಕಾರ್ಯ ಮಾಡುತ್ತಿರುವುದು ಭಾರತದ ಮುಸುಕುಧಾರರೇ ಎಂದು ವಿಶ್ವಾದ್ಯಂತ ಮಾತು ಕೇಳಿಬರುವುದೂ ಇದೆ.
ಅದೇನೇ ಇರಲಿ. ಆದರೆ ಇದೀಗ ಇದೇ ಮೊದಲ ಬಾರಿಗೆ ಮುಸುಕುಧಾರಿಣಿಯೊಬ್ಬಳು ಉಗ್ರ ಮೊಹಮ್ಮದ್ ತಾಹಿರ್ ಅನ್ವರ್ನನ್ನು ಮೇಲಕ್ಕೆ ಕಳುಹಿಸಿದಳಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಕಾರಣ ಸ್ಥಳೀಯ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಗಳು ಬರುತ್ತಿರುವುದು. ಅಷ್ಟಕ್ಕೂ ಈ ಘಟನೆ ನಡೆದಿರುವುದು 45 ದಿನಗಳ ಹಿಂದೆಯಂತೆ. ನಮಾಜ್ ಮುಗಿಸಿ ಬರುತ್ತಿದ್ದ ಉಗ್ರ ಮೊಹಮ್ಮದ್ ತಾಹಿರ್ ಅನ್ವರ್ಗೆ ಹಿಂದಿನಿಂದ ಬಂದ ಅಪರಿಚಿತ ಮಹಿಳೆಯೊಬ್ಬಳು, ಪಿನ್‌ನಿಂದ ಚುಚ್ಚಿದ್ದಾಳೆ ಎನ್ನಲಾಗಿದೆ. ಆ ಪಿನ್ನಲ್ಲಿ ವಿಷ ಇತ್ತಾ ಏನೂ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಆ ಪಿನ್ ಚುಚ್ಚಿದಾಗಿನಿಂದಲೂ ಅನ್ವರ್ 45 ದಿನಗಳ ಕಾಲ ವಿಲವಿಲ ಒದ್ದಾಡುತ್ತಿದ್ದ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ. ಕೊನೆಗೆ ಉಸಿರುಚೆಲ್ಲಿದ್ದಾನೆ ಎನ್ನುವ ಮಾಹಿತಿಯನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈತನ ಸಾವು ಹೇಗಾಯ್ತು ಎನ್ನುವ ಬಗ್ಗೆ ಅಲ್ಲಿ ಯಾರೂ ಸ್ಪಷ್ಟ ಮಾಹಿತಿ ನೀಡುತ್ತಿಲ್ಲವಾದ್ದರಿಂದ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ, ಹೀಗೆ ಆಗಿದ್ದರೆ ಅದು ಹೊರಕ್ಕೆ ಬರುವುದೂ ಇಲ್ಲ!
ಅಷ್ಟಕ್ಕೂ ಈ ಮೊಹಮ್ಮದ್ ತಾಹಿರ್ ಅನ್ವರ್ ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್ -ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸಹೋದರ. ಪಾಕಿಸ್ತಾನದಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಹಲವಾರು ಜನರನ್ನು ಕೊಲ್ಲಲಾಗಿದೆ. ಈತನ ಅಂತ್ಯಕ್ರಿಯೆಯೂ ನಡೆದಿದೆ. ಬಹಾವಲ್ಪುರದ ಜಾಮಿಯಾ ಮಸೀದಿ ಉಸ್ಮಾನ್ ವಾಲಿ ಬಳಿ ತಾರಿಕ್ನನ್ನು ಸಮಾಧಿ ಮಾಡಲಾಗಿದೆ ಎಂದು ಸಂಘಟನೆಯ ಅಧಿಕೃತ ಚಾನೆಲ್ ಮೂಲಕ ದೃಢಪಡಿಸಲಾಗಿದೆ. ಜೈಷ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಈತನ ಹಿಸ್ಟರಿ ಕೂಡ ಅಷ್ಟೇ ಭಯಾನಕವೂ ಆಗಿದೆ. ಈತ ಜೈಶ್ -ಎ-ಮೊಹಮ್ಮದ್ ಮುಖ್ಯಸ್ಥನಾಗಿದ್ದ ತನ್ನ ಸಹೋದರ ಮಸೂದ್ ಅಜರ್ ಜೊತೆ ನಿಕಟ ಸಂಬಂಧ ಹೊಂದಿದ್ದ, ಈತನೂ ಆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.
ಜೈಶ್-ಎ-ಮೊಹಮ್ಮದ್ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಭಯೋತ್ಪಾದಕ ಸಂಘಟನೆಯಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಪಟ್ಟಿ ಮಾಡಲಾದ ಮಸೂದ್ ಅಜರ್, 2001 ರ ಸಂಸತ್ತಿನ ದಾಳಿ, 2008 ರ ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಬಹು ಭಯೋತ್ಪಾದಕ ದಾಳಿಗಳ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿದ್ದಾನೆ. ಇದರ ಮುಖ್ಯಸ್ಥ ಅನ್ವರ್ ಮಸೂದ್ ಅಜರ್ಗೆ ಇರುವ ಐದು ಸಹೋದರರ ಪೈಕಿ ಈತ ಒಬ್ಬ. ಜೈಶ್-ಎ-ಮೊಹಮ್ಮದ್ ನ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂಬ ಮಾಹಿತಿಗಳು ಇವೆ.
ಭಾರತೀಯ ಪಡೆಗಳು ಪಾಕಿಸ್ತಾನದೊಳಗಿನ ಜೈಶ್ ನೆಲೆಗಳ ಮೇಲೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ಅಜರ್‌ನ ಹಲವಾರು ನಿಕಟ ಸಂಬಂಧಿಗಳು ಸಾವನ್ನಪ್ಪಿದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಜೈಶ್ ಮೊದಲ ಬಾರಿಗೆ ಈ ನಷ್ಟಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಆಪರೇಷನ್ ಸಿಂದೂರ್ ಅಡಿಯಲ್ಲಿ ಬಹಾವಲ್‌ಪುರದ ಮೇಲೆ ಭಾರತ ನಡೆಸಿದ ದಾಳಿಯ ಸಮಯದಲ್ಲಿ ಅಜರ್‌ನ ಕುಟುಂಬದ ಸದಸ್ಯರು ಕೊಲ್ಲಲ್ಪಟ್ಟರು ಎಂದು ಸಂಘಟನೆಯ ಹಿರಿಯ ಕಮಾಂಡರ್ ಒಪ್ಪಿಕೊಂಡಿದ್ದರು. ಕೊಲ್ಲಲ್ಪಟ್ಟವರಲ್ಲಿ ಅವರ ಸಹೋದರಿ, ಸೋದರಳಿಯ ಮತ್ತು ಇತರ ಕುಟುಂಬ ಸದಸ್ಯರು ಸೇರಿದ್ದಾರೆ. ಮಸೂದ್ ಎಂದು ಹೇಳಲಾದ ಕೆಲವು ಆಡಿಯೊ ರೆಕಾರ್ಡಿಂಗ್‌ಗಳು ಸಹ ಸಾವನ್ನು ದೃಢಪಡಿಸಿವೆ. ಮಸೂದ್ ಅಜರ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಪಟ್ಟಿಯಲ್ಲಿದ್ದ. ಮಸೂದ್ ಬಹಳ ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವನ ಇರುವಿಕೆ ಮತ್ತು ಆರೋಗ್ಯದ ಬಗ್ಗೆ ವದಂತಿಗಳು ಹರಡಿವೆ. ಆದಾಗ್ಯೂ, ಮಸೂದ್ ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಹರಡುತ್ತಲೇ ಇದ್ದಾನೆ ಎಂಬ ವರದಿಗಳು ಕೂಡ ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ