
ಟೆಹ್ರಾನ್: ಈಗಾಗಲೇ ತನ್ನ ಸರ್ವೋಚ್ಚ ನಾಯಕ ಸೇರಿದಂತೆ ಸರ್ಕಾರ ಹಾಗೂ ಸೇನೆಯ ಹಲವು ಉನ್ನತ ವ್ಯಕ್ತಿಗಳನ್ನು ಕಳೆದುಕೊಂಡಿರುವ ಇರಾನ್, ‘ಇನ್ನು ನಮ್ಮ ನಾಯಕರನ್ನು ಗುರಿಯಾಗಿಸಿ ಉದ್ದೇಶಿತ ಹತ್ಯೆಗಳನ್ನು ನಡೆಸಿದರೆ, ನಾವು ಗಲ್ಫ್‌ನಲ್ಲಿರುವ ಅಮೆರಿಕದ ಐಟಿ ಕಂಪನಿಗಳ ಮೇಲೆ ಏ.1ರಿಂದಲೇ ದಾಳಿ ಆರಂಭಿಸುತ್ತೇವೆ’ ಎಂದು ಎಚ್ಚರಿಸಿದೆ.
ಈ ಬಗ್ಗೆ ಐಆರ್‌ಜಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮೈಕ್ರೋಸಾಫ್ಟ್, ಗೂಗಲ್, ಆಪಲ್, ಇಂಟೆಲ್, ಐಬಿಎಂ, ಟೆಸ್ಲಾ, ಮೆಟಾ, ಬೋಯಿಂಗ್ ಸೇರಿದಂತೆ 18 ಕಂಪನಿಗಳನ್ನು ಹೆಸರಿಸಲಾಗಿದ್ದು, ‘ಇರಾನ್‌ನಲ್ಲಿ ನಡೆಸಲಾಗುವ ಉಗ್ರಕೃತ್ಯಗಳಿಗೆ ಬದಲಾಗಿ ಈ ಎಲ್ಲಾ ಕಂಪನಿಗಳು ತಮ್ಮ ಘಟಕಗಳನ್ನು ಕಳೆದುಕೊಳ್ಳಬೇಕಾಗುವುದು. ಈ ಷರತ್ತು ರಾತ್ರಿ 10.30ರಿಂದ(ಭಾರತೀಯ ಕಾಲಮಾನ) ಆರಂಭವಾಗುತ್ತದೆ. ಜೀವ ಉಳಿಸಿಕೊಳ್ಳಬೇಕಿದ್ದರೆ ಸಿಬ್ಬಂದಿ ಈ ಕಂಪನಿಯ ಕಟ್ಟಡಗಳಿಂದ ಹೊರಹೋಗಿ’ ಎನ್ನಲಾಗಿದೆ. ಈ ಮೊದಲು ಬ್ಯಾಂಕ್‌ನಂತಹ ಆರ್ಥಿಕ ಕೇಂದ್ರಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಕೆ ನೀಡಿತ್ತು.
ಇರಾನಿನ ನೀರು ಶುದ್ಧೀಕರಣ ಘಟಕ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಬೆನ್ನಲ್ಲೇ ಕ್ವೆಶ್ಮ್ ದ್ವೀಪದಲ್ಲಿನ ಘಟಕದ ಮೇಲೆ ಅಮೆರಿಕ ವಾಯುದಾಳಿ ನಡೆಸಿದೆ. ಸೋಮವಾರವಷ್ಟೇ ಟ್ರಂಪ್, ಇರಾನ್ ಹೋರ್ಮುಜ್ ಜಲಸಂಧಿಯನ್ನು ಎಲ್ಲರಿಗೂ ಮುಕ್ತಗೊಳಿಸದೆ ಇದ್ದರೆ ಇರಾನ್ ತೈಲಬಾವಿ ಮತ್ತು ನೀರು ಶುದ್ಧೀಕರಣ ಘಟಕ ಮೇಲೆ ದಾಳಿ ನಡೆಸುತ್ತೇವೆ ಎಂದು ಟ್ರೂತ್ ಸೋಷಿಯಲ್‌ನಲ್ಲಿ ಎಚ್ಚರಿಸಿದ್ದರು. ಅದಾದ ಒಂದು ದಿನದಲ್ಲೇ ಈ ದಾಳಿ ನಡೆದಿದೆ. ಪರಿಣಾಮ ಇರಾನ್ ಘಟಕ ಸ್ಥಗಿತಗೊಳಿಸಿದೆ.
ಈ ನಡುವೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ದೇಶದ ಅತಿದೊಡ್ಡ ಕ್ಯಾನ್ಸರ್ ಔಷಧ ಉತ್ಪಾದನೆ ಮತ್ತು ಅರಿವಳಿಕೆ ಉತ್ಪಾದನಾ ಘಟಕಕ್ಕೆ ಹಾನಿಯಾಗಿದೆ ಎಂದು ಇರಾನ್ ಆರೋಪಿಸಿದೆ.
ಮತ್ತೊಂದೆಡೆ ಅಮೆರಿಕದ ಅತ್ಯಾಧುನಿಕ ಎಂಕ್ಯೂ-9 ರೀಪರ್ ಡ್ರೋನ್‌ವೊಂದನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಜತೆಗೆ, ದುಬೈ ಬಂದರು ಸಮೀಪದಲ್ಲಿ ನಿಂತಿದ್ದ ಕುವೈಟ್ ಪೆಟ್ರೋಲಿಯಂ ಕಾರ್ಪೊರೇಷನ್‌ಗೆ ಸೇರಿದ ಅಲ್ ಸಮಾಮಿ ತೈಲ ಟ್ಯಾಂಕರ್ ಮೇಲೂ ದಾಳಿ ನಡೆಸಿದೆ. ಅಲ್ಲದೆ ಇಸ್ರೇಲ್, ಕುವೈತ್, ಅಬುದಾಬಿಯನ್ನು ಗುರಿಯಾಗಿರಿಸಿ ಭಾರೀ ಕ್ಷಿಪಣಿ ದಾಳಿ ನಡೆಸಿದೆ.
ಇರಾನ್ ಕ್ಷಿಪಣಿ ದಾಳಿಗೆ ಇಸ್ರೇಲ್ ರಾಜಧಾನಿ ಟೆಲ್‌ಅವೀವ್‌ನಲ್ಲಿ ಹಲವು ಸ್ಫೋಟದ ಸದ್ದು ಕೇಳಿಸಿದ್ದರೆ, ಲೆಬನಾನ್ ಬಂಡುಕೋರರ ದಾಳಿಗೆ ಇಸ್ರೇಲ್‌ನ ನಾಲ್ವರು ಯೋಧರು ಹಾಗೂ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಇಬ್ಬರು ಯೋಧರು ಸಾವಿಗೀಡಾಗಿದ್ದಾರೆ.
ಹೋರ್ಮುಜ್ ಜಲಸಂಧಿ ಹಾಯ್ದು ಹೋಗುವ ಹಡಗುಗಳಿಗೆ ಸುಂಕ ವಿಧಿಸುವ ಹೊಸ ನಿರ್ವಹಣಾ ಯೋಜನೆಯೊಂದನ್ನು ಇರಾನ್ ಸಂಸತ್ ಮಂಗಳವಾರ ಅನುಮೋದಿಸಿದೆ. ಇದರನ್ವಯ ಇಲ್ಲಿ ಸಂಚರಿಸುವ ಹಡಗುಗಳು ರಿಯಾಲ್ ಮೂಲಕ ಇರಾನ್‌ಗೆ ಸುಂಕ ಪಾವತಿಸಬೇಕು. ಈ ಹಣವನ್ನು ಹೋರ್ಮಜ್ ಕರಾವಳಿ ರಕ್ಷಣೆ, ಹಡಗುಗಳ ಭದ್ರತೆ, ಹೋರ್ಮಜ್ ನಿರ್ವಹಣೆಗೆ ಬಳಸಲಾಗುವುದು ಎಂದು ಇರಾನ್ ಹೇಳಿದೆ. ಆದರೆ ಈ ಹೊಸ ಯೋಜನೆಯು ಅಮೆರಿಕ, ಇಸ್ರೇಲ್ ಮತ್ತು ಇರಾನ್ ಮೇಲೆ ಏಕಪಕ್ಷೀಯ ನಿರ್ಬಂಧ ಹೇರುವ ದೇಶಗಳ ಹಡಗುಗಳಿಗೆ ಹೋರ್ಮಜ್‌ನಲ್ಲಿ ಸಂಪೂರ್ಣ ನಿಷೇಧ ಹೇರಿದೆ. ಜೊತೆಗೆ ಜಲಸಂಧಿ ಮೇಲೆ ತನ್ನ ಸಾರ್ವಭೌಮತ್ವವನ್ನು ಪುನರುಚ್ಚರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ