ಮತ್ತೆ ಅಂತರಿಕ್ಷ ಸಾಹಸ: ಜೆಫ್‌ ಬೆಜೋಸ್‌ ಗಗನಯಾನ!

By Suvarna News  |  First Published Jul 20, 2021, 9:21 AM IST

* ಇಂದು ಜೆಫ್‌ ಬೆಜೋಸ್‌ ಗಗನಯಾನ!

* ‘ಬ್ಲೂ ಒರಿಜಿನ್‌’ ಗಗನನೌಕೆಯಲ್ಲಿ ನಾಲ್ವರಿಂದ ಬಾಹ್ಯಾಕಾಶ ಯಾನ

* ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಮೊದಲ ವಾಣಿಜ್ಯ ಪ್ರಯಾಣ


ವಾಷಿಂಗ್ಟನ್‌(ಜು.20): ಉದ್ಯಮಿ ರಿಚರ್ಡ್‌ ಬ್ರಾನ್ಸನ್‌ ತಮ್ಮ ವರ್ಜಿನ್‌ ಗ್ಯಾಲಾಕ್ಟಿಕ್‌ ನೌಕೆಯ ಮೂಲಕ ಬಾಹ್ಯಾಕಾಶ ಯಾನ ಮಾಡಿ ಬಂದ ಬೆನ್ನಲ್ಲೇ, ಮಂಗಳವಾರ ವಿಶ್ವದ ಶ್ರೀಮಂತ ವ್ಯಕ್ತಿ, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಮಂಗಳವಾರ ತಮ್ಮ ಮೊಟ್ಟಮೊದಲ ಬಾಹ್ಯಾಕಾಶ ಯಾನಕ್ಕೆ ಮುನ್ನುಡಿ ಬರೆಯಲಿದ್ದಾರೆ. ಇದು ರಾಕೆಟ್‌ ಮೂಲಕ ವಾಣಿಜ್ಯ ಉದ್ದೇಶದಿಂದ ಬಾಹ್ಯಾಕಾಶಕ್ಕೆ ಕೈಗೊಳ್ಳುತ್ತಿರುವ ಮೊದಲ ಉಡ್ಡಯನವಾಗಿದೆ.

ಭಾರತೀಯ ಕಾಲಮಾನ ಮಂಗಳವಾರ ಸಂಜೆ 6.30ಕ್ಕೆ ‘ಬ್ಲೂ ಒರಿಜಿನ್‌’ ಗಗನನೌಕೆಯಲ್ಲಿ ಜೆಫ್‌ ಬೆಜೋಸ್‌ ಅವರು ತಮ್ಮ ಸೋದರ ಮಾಕ್‌, 82 ವರ್ಷದ ವ್ಯಾಲಿ ಫಂಕ್‌ ಹಾಗೂ ಒಬ್ಬ ಡಚ್‌ ಎಂಜಿನಿಯರ್‌ ಜತೆ ಬಾಹ್ಯಾಕಾಶ ಯಾನ ಕೈಗೊಳ್ಳಲಿದ್ದಾರೆ. ಇವರನ್ನು ‘ನ್ಯೂ ಶೆಫರ್ಡ್‌’ ವಾಹಕವು ಪಶ್ಚಿಮ ಟೆಕ್ಸಾಸ್‌ನಿಂದ ಅಂತರಿಕ್ಷಕ್ಕೆ ಕೊಂಡೊಯ್ಯಲಿದೆ. ಸುಮಾರು 10 ನಿಮಿಷದ ಯಾನ ಇದಾಗಿದ್ದು, 3 ನಿಮಿಷ ಶೂನ್ಯ ಗುರುತ್ವದಲ್ಲಿ ತೇಲಲಿದ್ದಾರೆ. ಬಳಿಕ ಭೂಮಿಗೆ ಮರಳಲಿದ್ದಾರೆ.

Tap to resize

Latest Videos

undefined

ಇದರೊಂದಿಗೆ ಬಾಹ್ಯಾಕಾಶ ಪ್ರವಾಸೋದ್ಯಮ ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗಿದೆ.

ಬಾಹ್ಯಾಕಾಶ ಉಡ್ಡಯನ ಹೇಗೆ?

ಅಮೆಜಾನ್‌ ಒಡೆತನದ ಬ್ಲೂ ಒರಿಜಿನ್‌ ಕಂಪನಿ ಅಭಿವೃದ್ಧಿಪಡಿಸಿರುವ ನ್ಯೂ ಶೆಫರ್ಡ್‌ ವಾಹನದ ಮೂಲಕ ಜೆಫ್‌ ಬೆಜೋಸ್‌ ಮತ್ತು ಇತರ ಮೂವರು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇದು 60 ಅಡಿ ಎತ್ತರದ ಬೂಸ್ಟರ್‌ ಹಾಗೂ ಆರು ಮಂದಿ ಕೂರಬಹುದಾದ ಕ್ಯಾಪ್ಸೂಲ್‌ ಅನ್ನು ಒಳಗೊಂಡಿದೆ. ಭೂಮಿಯಿಂದ 76 ಕಿ.ಮೀ. ಎತ್ತರಕ್ಕೆ ಸಾಗಿದ ಬಳಿಕ ಬೂಸ್ಟರ್‌ ಹಾಗೂ ಕ್ಯಾಪ್ಸೂಲ್‌ ಬೇರ್ಪಡಲಿದೆ. ಈ ವೇಳೆ ಬೂಸ್ಟರ್‌ ನಿಗದಿತ ಸ್ಥಳದಲ್ಲಿ ಇಳಿಯಲಿದೆ. ಕ್ಯಾಪ್ಸೂಲ್‌ 100 ಕಿ.ಮೀ. ಎತ್ತರಕ್ಕೆ ಸಾಗಿದ ಬಳಿಕ ಭೂಮಿತ್ತ ಮುಖ ಮಾಡಲಿದೆ. ಇದರಿಂದ ಕ್ಯಾಪ್ಸೂಲ್‌ನಲ್ಲಿದ್ದವರು ಶೂನ್ಯ ಗುರುತ್ವಾಕರ್ಷಕ ವ್ಯವಸ್ಥೆಯಲ್ಲಿ 3 ನಿಮಿಷಗಳ ಕಾಲ ತೇಲಲಿದ್ದಾರೆ. ನಂತರದಲ್ಲಿ ಕ್ಯಾಪ್ಸೂಲ್‌ ಏರ್‌ ಬ್ಯಾಗ್‌ನ ಸಹಾಯದಿಂದ ಭೂಮಿಗೆ ಸುರಕ್ಷಿತವಾಗಿ ಇಳಿಯಲಿದೆ. ಕ್ಯಾಪ್ಸೂಲ್‌ ಭೂಮಿಯಿಂದ 26 ಕಿ.ಮೀ. ಎತ್ತರದಲ್ಲಿದ್ದಾಗ ಪ್ಯಾರಾಚ್ಯೂಟ್‌ ತೆರೆದುಕೊಳ್ಳಲಿದ್ದು, ಗಂಟೆಗೆ 1.6 ಕಿ.ಮೀ. ವೇಗದಲ್ಲಿ ನಿಧಾನವಾಗಿ ಭೂಮಿನ್ನು ಸ್ಪರ್ಶಿಸಲಿದೆ.

ಹಾರಾಟದ ಹಂತಗಳು

1 ಕ್ಯಾಪ್ಸೂಲ್‌ ಹಾಗೂ ಬೂಸ್ಟರ್‌ ರಾಕೆಟ್‌ ರೀತಿ ನೇರವಾಗಿ ಗಗನಕ್ಕೆ ಚಿಮ್ಮಲಿವೆ.

2. ಭೂಮಿಯಿಂದ 76 ಕಿ.ಮೀ. (2.50 ಲಕ್ಷ ಅಡಿ) ಎತ್ತರದಲ್ಲಿ ಬೂಸ್ಟರ್‌ನಿಂದ ಬೇರ್ಪಡಲಿರುವ ಕ್ಯಾಪ್ಸೂಲ್‌. ಬಳಿಕ 106 ಕಿ.ಮೀ. (3.50 ಲಕ್ಷ ಅಡಿ) ಎತ್ತರಕ್ಕೆ ಸಾಗಲಿರುವ ಕ್ಯಾಪ್ಸೂಲ್‌.

3. ಲಾಂಚ್‌ಪ್ಯಾಡ್‌ನಿಂದ 2 ಮೈಲಿ ದೂರದಲ್ಲಿ ಇಳಿಯಲಿರುವ ಬೂಸ್ಟರ್‌

4. ಪ್ಯಾರಾಚ್ಯೂಟ್‌ನ ಸಹಾಯದಿಂದ ಮರುಭೂಮಿಯಲ್ಲಿ ಇಳಿಯಲಿರುವ ಕ್ಯಾಪ್ಸೂಲ್‌

ಯೋಜನೆಗೆ ತಗುಲಿದ ವೆಚ್ಚ ಎಷ್ಟು?

ವಿಶ್ವದ ನಂ.1 ಶ್ರೀಮಂತ, ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಮತ್ತು ವಿಶ್ವದ ಅತ್ಯಂತ ಕಿರಿಯ ವ್ಯಕ್ತಿಯ ಕೈಗೊಳ್ಳುವ ಬಾಹ್ಯಾಕಾಶ ಪ್ರವಾಸವು ಇದಾಗಲಿದೆ. ಈ ಯಾತ್ರೆಯಲ್ಲಿ ಭಾಗವಹಿಸಲು ಅನಾಮಧೇಯ ವ್ಯಕ್ತಿಯೊಬ್ಬರು 210 ಕೋಟಿ ರು. ಬಿಡ್‌ ಮಾಡಿ ಸ್ಥಾನ ಗೆದ್ದಿದ್ದರಾದರೂ, ಅಂತಿಮ ಹಂತದಲ್ಲಿ ಹಿಂದೆ ಸರಿದಿದ್ದಾರೆ.

ಅತಿ ಹಿರಿಯ, ಕಿರಿಯ, ಶ್ರೀಮಂತರ ಪ್ರಯಾಣ

ಈ ಬಾಹ್ಯಾಕಾಶ ಯಾನದಲ್ಲಿ ಜೆಫ್‌ ಜೆಜೋಸ್‌ ಜೊತೆ 82 ವರ್ಷದ ಮಾಜಿ ಪೈಲಟ್‌ ವ್ಯಾಲಿ ಫಂಕ್‌ ಹಾಗೂ 18 ವರ್ಷದ ಡಚ್‌ ಎಂಜಿನೀಯರ್‌ವೊಬ್ಬ ನೌಕೆಯಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಈ ಮೂಲಕ ಅತಿ ಹಿರಿಯ ವ್ಯಕ್ತಿ ಮತ್ತು ಅತಿ ಕಿರಿಯ ವ್ಯಕ್ತಿ ಏಕಕಾಲದಲ್ಲಿ ಬ್ಯಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ದಾಖಲೆಗೆ ಪಾತ್ರರಾಗಲಿದ್ದಾರೆ.

ಭಾರತೀಯ ಮಹಿಳೆ ನಂಟು

ಬೆಜೋಸ್‌ ಅವರ ಯಾತ್ರೆ ಕೈಗೊಳ್ಳಲಿರುವ ಸ್ಪೇಸ್‌ ರಾಕೆಟ್‌ ಅನ್ನು ಸಿದ್ಧಪಡಿಸಿದ ತಂಡದಲ್ಲಿ ಮಹಾರಾಷ್ಟ್ರದ ಕಲ್ಯಾಣ್‌ ಮೂಲದ ಸಂಜಲ್‌ ಗವಾಂಡೆ ಕೂಡಾ ಇದ್ದಾರೆ. ಮುಂಬೈ ವಿವಿಯಲ್ಲಿ ಓದಿದ ಸಂಜಲ್‌, 2011ರಲ್ಲಿ ಅಮೆರಿಕಕ್ಕೆ ತೆರಳಿ ಅಲ್ಲಿ ಮೆಕಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದುಕೊಂಡಿದ್ದರು.

10 ನಿಮಿಷ: ಗಗನಯಾನಕ್ಕೆ ತಗುಲುವ ಸಮಯ

106 ಕಿ.ಮೀ: ನೌಕೆ ತಲುಪಲಿರುವ ಗರಿಷ್ಠ ಎತ್ತರ

4 ಮಂದಿ: ಕ್ಯಾಪ್ಸೂಲ್‌ನಲ್ಲಿ ಪ್ರಯಾಣಿಸುವವರು

3 ನಿಮಿಷ: ಶೂನ್ಯ ಗುರುತ್ವದಲ್ಲಿರುವ ಸಮಯ

click me!