ನಾಳೆ ಜೆಫ್‌ ಬೆಜೋಸ್‌ ಅಂತರಿಕ್ಷ ಪ್ರವಾಸ: ಇಲ್ಲೂ ಭಾರತೀಯ ಮಹಿಳೆ ನಂಟು!

By Suvarna NewsFirst Published Jul 19, 2021, 8:23 AM IST
Highlights

* ಜೆಫ್‌ ಬೆಜೋಸ್‌ ಅಂತರಿಕ್ಷ ಸಾಹಸ ನಾಳೆ

* ಹಲವು ಹೊಸ ದಾಖಲೆಗಳಿಗೆ ಯಾನ ಸಾಕ್ಷಿ

* ಈ ಯಾನದಲ್ಲೂ ಭಾರತೀಯ ಮಹಿಳೆ ನಂಟು

ವಾಷಿಂಗ್ಟನ್‌(ಜು.19): ಉದ್ಯಮಿ ರಿಚರ್ಡ್‌ ಬ್ರಾನ್ಸನ್‌ ಇತ್ತೀಚೆಗೆ 90 ನಿಮಿಷದ ಬಾಹ್ಯಾಕಾಶ ಯಾತ್ರೆ ಕೈಗೊಂಡು ಯಶಸ್ವಿಯಾಗಿ ಭೂಮಿಗೆ ಮರಳಿ ಬಂದ ಬೆನ್ನಲ್ಲೇ, ಜಗತ್ತಿನ ಶ್ರೀಮಂತ ವ್ಯಕ್ತಿ, ಅಮೆಜಾನ್‌ ಕಂಪನಿ ಸಂಸ್ಥಾಪಕ ಜೆಫ್‌ ಬೆಜೋಸ್‌ ಕೂಡ ಮಂಗಳವಾರ ಈ ಸಾಹಸ ನಡೆಸಲಿದ್ದಾರೆ. ಬ್ರಾನ್ಸನ್‌ ಅವರು ವಿಮಾನದಲ್ಲಿ ಮೇಲೇರಿ ಅಲ್ಲಿಂದ ಮತ್ತೊಂದು ವಾಹಕದ ಮೂಲಕ ಬಾಹ್ಯಾಕಾಸ ತಲುಪಿದ್ದರು, ಆದರೆ ಬ್ಲೂ ಒರಿಜಿನ್‌ ರಾಕೆಟ್‌ ಮಾದರಿಯದ್ದಾಗಿದೆ.

ಮಂಗಳವಾರ ಸಂಜೆ 6.30ಕ್ಕೆ ತಮ್ಮ ‘ಬ್ಲೂ ಒರಿಜಿನ್‌’ ಗಗನನೌಕೆಯಲ್ಲಿ ಸೋದರ ಮಾಕ್‌, 82 ವರ್ಷದ ವ್ಯಾಲಿ ಫಂಕ್‌ ಹಾಗೂ ಒಬ್ಬ ಡಚ್‌ ಎಂಜಿನಿಯರ್‌ ಜತೆ ಅವರು ಯಾತ್ರೆ ಆರಂಭಿಸಲಿದ್ದಾರೆ. ಇವರನ್ನು ‘ನ್ಯೂ ಶೆಫರ್ಡ್‌’ ವಾಹಕವು ಪಶ್ಚಿಮ ಟೆಕ್ಸಾಸ್‌ನಿಂದ ಅಂತರಿಕ್ಷಕ್ಕೆ ಕೊಂಡೊಯ್ಯಲಿದೆ. ಸುಮಾರು 10 ನಿಮಿಷದ ಯಾನ ಇದಾಗಿದ್ದು, 3 ನಿಮಿಷ ಶೂನ್ಯ ಗುರುತ್ವದಲ್ಲಿ ತೇಲಲಿದ್ದಾರೆ. ಬಳಿಕ ಭೂಮಿಗೆ ಮರಳಲಿದ್ದಾರೆ.

ಈ ಉಡ್ಡಯನವು ಹಲವು ದಾಖಲೆಗಳಿಗೆ ಪಾತ್ರವಾಗಲಿದೆ. ವಿಶ್ವದ ನಂ.1 ಶ್ರೀಮಂತ, ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಮತ್ತು ವಿಶ್ವದ ಅತ್ಯಂತ ಕಿರಿಯ ವ್ಯಕ್ತಿಯ ಕೈಗೊಳ್ಳುವ ಬಾಹ್ಯಾಕಾಶ ಪ್ರವಾಸವು ಇದಾಗಲಿದೆ. ಜೊತೆಗೆ ಕಳೆದ ವಾರ ರಿಚರ್ಡ್‌ ಬ್ರಾನ್ಸನ್‌ ನೇತೃತ್ವದ ತಂಡ ಏರಿದ ಎತ್ತರಕ್ಕಿಂತ ಇನ್ನೂ ಹೆಚ್ಚಿನ ಎತ್ತರಕ್ಕೆ ಈ ನೌಕೆ ತಲುಪಲಿದೆ. ಈ ಯಾತ್ರೆಯಲ್ಲಿ ಭಾಗವಹಿಸಲು ಅನಾಮಧೇಯ ವ್ಯಕ್ತಿಯೊಬ್ಬರು 210 ಕೋಟಿ ರು. ಬಿಡ್‌ ಮಾಡಿ ಸ್ಥಾನ ಗೆದ್ದಿದ್ದರಾದರೂ, ಅಂತಿಮ ಹಂತದಲ್ಲಿ ಹಿಂದೆ ಸರಿದಿದ್ದಾರೆ.

ಈ ಯಾನದಲ್ಲೂ ಭಾರತೀಯ ಮಹಿಳೆ ನಂಟು

ಬೆಜೋಸ್‌ ಅವರ ಯಾತ್ರೆ ಕೈಗೊಳ್ಳಲಿರುವ ಸ್ಪೇಸ್‌ ರಾಕೆಟ್‌ ಅನ್ನು ಸಿದ್ಧಪಡಿಸಿದ ತಂಡದಲ್ಲಿ ಮಹಾರಾಷ್ಟ್ರದ ಕಲ್ಯಾಣ್‌ ಮೂಲದ ಸಂಜಲ್‌ ಗವಾಂಡೆ ಕೂಡಾ ಇದ್ದಾರೆ. ಮುಂಬೈ ವಿವಿಯಲ್ಲಿ ಓದಿದ ಸಂಜಲ್‌, 2011ರಲ್ಲಿ ಅಮೆರಿಕಕ್ಕೆ ತೆರಳಿ ಅಲ್ಲಿ ಮೆಕಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದುಕೊಂಡಿದ್ದರು.

click me!