
ನವದೆಹಲಿ (ಅ.7): ಇಸ್ರೇಲ್ ಮೇಲೆ ಭಾರೀ ಪ್ರಮಾಣದ ರಾಕೆಟ್ ದಾಳಿಯ ನಂತರ ಹಮಾಸ್ ಉಗ್ರರು ಇಸ್ರೇಲ್ ಗಡಿಯನ್ನು ದಾಡಿ ಒಳನುಗ್ಗಿರುವ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದರ ನಡುವೆ ಹಮಾಸ್ ಮುಖ್ಯಸ್ಥ ಈ ದಾಳಿಗಳನ್ನು ಟಿವಿಯನ್ನು ವೀಕ್ಷಿಸಿದ ಬಳಿಕ ತಾನು ಇದ್ದ ಸ್ಥಳದಿಂದಲೇ ಅಲ್ಲಾಹ್‌ನಿಗೆ ಸಜ್ದಾ ಮಾಡಿದ ವಿಡಿಯೋ ಕೂಡ ವೈರಲ್ ಅಗಿವೆ. ದೇಶದ ಮೇಲೆ ಏಕಕಾಲಕ್ಕೆ 7 ಸಾವಿರಕ್ಕಿಂತ ಅಧಿಕ ರಾಕೆಟ್ ದಾಳಿಯಾದ ಬೆನ್ನಲ್ಲಿಯೇ ಹಮಾಸ್ ಉಗ್ರರು ದೇಶದ ಗಡಿ ಬೇಲಿಯನ್ನು ದಾಳಿ ಒಳನುಗ್ಗಿದ್ದರಿಂದ ಇಸ್ರೇಲ್ ತತ್ತರಿಸಿ ಹೋಗಿದೆ. ಹಮಾಸ್-ಪ್ಯಾಲೆಸ್ತೀನ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಅನೇಕ ಭಯಾನಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗುತ್ತಿವೆ. ಉಗ್ರರು ಬೀದಿಗಳಲ್ಲಿ ಸಂಚರಿಸಿ ಅಮಾಯಕ ನಾಗರಿಕರನ್ನು ಸೆರೆ ಹಿಡಿದು ಕೊಲ್ಲುತ್ತಿರುವ ವಿಡಿಯೋಗಳು ದಾಖಲಾಗಿವೆ. ಕೆಲವು ಮೃತದೇಹಗಳನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿದ್ದರೆ, ಇನ್ನೂ ಕೆಲವು ನಾಗರೀಕರನ್ನು ಜೀವಂತವಾಗಿ ಹೊತ್ತೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಜೀವಂತವಾಗಿ ಗಾಜಾಗೆ ತೆಗೆದುಕೊಂಡು ಹೋದವರನ್ನು ಒತ್ತೆಯಾಳುಗಳನ್ನಾಗಿ ಇರಿಸಲಾಗಿದೆ. ಗಾಜಾ ಪಟ್ಟಿಯಿಂದ ದಕ್ಷಿಣ ಇಸ್ರೇಲ್ ಕಡೆಗೆ ಸುಮಾರು 5,000 ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ವರದಿಗಳಿವೆ. ಕ್ಷಿಪಣಿ ದಾಳಿಗೆ ಓರ್ವ ಮಹಿಳೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮತ್ತು ಸಲೇಹ್ ಅಲ್-ಅರೂರಿ ಮತ್ತು ಉಗ್ರ ಗುಂಪಿನ ಇತರ ಸದಸ್ಯರು ಇಸ್ರೇಲ್ ಮೇಲೆ ಹಮಾಸ್ ಮಾಡಿರುವ ಭೀಕರ ದಾಳಿಯನ್ನು ಟಿವಿಯಲ್ಲಿ ವೀಕ್ಷಿಸುತ್ತಿರುವುದು ಮಾತ್ರವಲ್ಲ, ಇಸ್ರೇಲಿ ಜನರ ಸಾವಿಗೆ ಸಂಭ್ರಮಪಡುತ್ತಿರುವುದನ್ನು ಕಾಣಬಹುದಾಗಿದೆ. ಟಿವಿಯಲ್ಲಿ ಇದರ ವಿಡಿಯೋ ಬರುತ್ತಿರುವಾಗಲೇ ತಾವಿದ್ದ ಕಚೇರಿಯಲ್ಲಿಯೇ ಸಜ್ದಾ ಶುಕ್ರ್ (ದೇವರಿಗೆ ನಮಸ್ಕಾರ) ಮಾಡುವುದನ್ನು ಕಾಣಬಹುದಾಗಿದೆ.
ಇಸ್ರೇಲ್ ಮೇಲಿನ ದಾಳಿಯ ಹೊಣೆಯನ್ನು ಹಮಾಸ್ ಹೊತ್ತುಕೊಂಡಿದೆ. ಕ್ಷಿಪಣಿಗಳನ್ನು ಹಾರಿಸಿದ ನಂತರ ಸುಮಾರು 50-60 ಉಗ್ರರು ಇಸ್ರೇಲ್‌ಗೆ ನುಸುಳಿದ್ದಾರೆ ಎಂದು ವರದಿಯಾಗಿದೆ. ಅವರು ಇಸ್ರೇಲ್ ಗಡಿಯನ್ನು ಪ್ರವೇಶಿಸಲು ಕ್ಷಿಪಣಿ ಕವರ್ ತೆಗೆದುಕೊಂಡಿದ್ದಾರೆ. ಒಂದೆಡೆ ಇಸ್ರೇಲ್ ರಾಕೆಟ್ ದಾಳಿಯ ಅಚ್ಚರಿಯಲ್ಲಿದ್ದಾಗಲೇ, ಗಡಿಯಲ್ಲಿ ಹಮಾಸ್ ಉಗ್ರರು ದಾಂಧಲೆ ಸೃಷ್ಟಿಸಿ ಇಡೀ ಇಸ್ರೇಲ್‌ಅನ್ನು ನರಕ ಮಾಡಿದ್ದಾರೆ. ಇಸ್ರೇಲ್‌ನ ಅಮಾಯಕ ನಾಗರೀಕರನ್ನು ಕೊಲ್ಲುತ್ತಿದ್ದು, ಕೆಲವರನ್ನು ಜೀವಂತವಾಗಿ ಸೆರೆಹಿಡಿದು ಒತ್ತೆಯಾಳುಗಳನ್ನಾಗಿ ಮಾಡಿದ್ದಾರೆ.
Israel-Palestine Conflict: 7 ಸಾವಿರ ರಾಕೆಟ್ ಫೈರ್ ಮಾಡಿದ ಬಂಡುಕೋರರು, ಹಮಾಸ್‌ಗೆ ಬೆಂಬಲ ನೀಡಿದ ಇರಾನ್!
ಪ್ಯಾಲೆಸ್ತೇನ್ ಜನರೊಂದಿಗೆ ನಡೆಯುತ್ತಿರುವ ಹಿಂಸಾಚಾರದ ಉಲ್ಬಣಕ್ಕೆ ಇಸ್ರೇಲ್ ಮಾತ್ರ ಕಾರಣ ಎಂದು ಕತಾರ್ ವಿದೇಶಾಂಗ ಸಚಿವಾಲಯ ಶನಿವಾರ ಹೇಳಿಕೆ ನೀಡಿದೆ. ಕತಾರ್ ಎರಡೂ ಕಡೆಯವರು ಅತ್ಯಂತ ಸಂಯಮದಿಂದ ವರ್ತಿಸುವಂತೆ ಕರೆ ನೀಡುತ್ತದೆ ಎಂದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ತಮ್ಮ ಸಂತಾಪ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ಇರುತ್ತೇವೆ ಎಂದು ಪ್ರಧಾನಿ ಮೋದಿ ತಮ್ಮ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ವಿರುದ್ಧ ಜಿಹಾದ್ ಹೋರಾಟದಲ್ಲಿ ಪಾಲ್ಗೊಳ್ಳಿ, ಮುಸ್ಲಿಮರಿಗೆ ಮಸೀದಿ ಲೌಡ್‌ಸ್ಪೀಕರ್ ಸಂದೇಶ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ