ಉಜ್ಬೇಕಿಸ್ತಾನ: ಭಾರತದ ಕಂಪನಿ ಔಷಧ ಸೇವಿಸಿ 18 ಮಕ್ಕಳು ಬಲಿ..?

By Kannadaprabha News  |  First Published Dec 29, 2022, 9:13 AM IST

ಈ ಔಷಧ ಸೇವನೆಯಿಂದ ಮಕ್ಕಳು ಉಸಿರಾಟದ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಔಷಧಗಳಲ್ಲಿ ಈಥೈಲೀನ್‌ ಗ್ಲೈಕೋಲ್‌ ಎಂಬ ಮಾರಣಾಂತಿಕ ರಾಸಾಯನಿಕ ಕಂಡುಬಂದಿದೆ.


ತಾಷ್ಕೆಂಟ್‌: ಭಾರತದಲ್ಲಿ (India) ತಯಾರಿಸಲಾದ ಔಷಧ (Syrup) ಸೇವಿಸಿ ಗಾಂಬಿಯಾದಲ್ಲಿ (Gambia) ಮಕ್ಕಳು (Children) ಮೃತಪಟ್ಟ ಘಟನೆಯ ಬೆನ್ನಲ್ಲೇ, ಭಾರತದ ಮತ್ತೊಂದು ಔಷಧ ಸೇವಿಸಿ ಉಜ್ಬೇಕಿಸ್ತಾನದಲ್ಲೂ (Uzbekistan) 18 ಮಕ್ಕಳು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತಾಗಿ ವಿವರವಾದ ತನಿಖೆ ನಡೆಸುವಂತೆ ಅಲ್ಲಿನ ಆರೋಗ್ಯ ಸಚಿವಾಲಯ (Health Ministry) ಸೂಚಿಸಿದೆ. ಉಜ್ಬೇಕಿಸ್ತಾನದ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ‘ಡಾಕ್‌-1 ಮ್ಯಾಕ್ಸ್‌’ (Doc-1 Max) ಎಂಬ ಈ ಔಷಧವನ್ನು ಉತ್ತರ ಪ್ರದೇಶ (Uttar Pradesh)ದ ನೋಯ್ಡಾ ಮೂಲದ ಮಾರಿಯೋನ್‌ ಬಯೋಟೆಕ್‌ (Marion Biotech) ಕಂಪನಿ ತಯಾರಿಸಿದೆ ಎಂದು ತಿಳಿದುಬಂದಿದೆ.

ಈ ಔಷಧ ಸೇವನೆಯಿಂದ ಮಕ್ಕಳು ಉಸಿರಾಟದ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಔಷಧಗಳಲ್ಲಿ ಈಥೈಲೀನ್‌ ಗ್ಲೈಕೋಲ್‌ ಎಂಬ ಮಾರಣಾಂತಿಕ ರಾಸಾಯನಿಕ ಕಂಡುಬಂದಿದೆ. ಇದೇ ರಾಸಾಯನಿಕ ಗಾಂಬಿಯಾದಲ್ಲೂ ಮಕ್ಕಳ ಸಾವಿಗೆ ಕಾರಣವಾಗಿತ್ತು ಎಂದು ವರದಿಗಳು ತಿಳಿಸಿವೆ. ಈ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಇಮೇಲ್‌ ಮುಖಾಂತರ ವರದಿಯನ್ನು ಸಲ್ಲಿಸಲಾಗಿದ್ದು, ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ ಎಂದು ಉಜ್ಬೇಕಿಸ್ತಾನ ಆರೋಗ್ಯ ಇಲಾಖೆ ಹೇಳಿದೆ.

Tap to resize

Latest Videos

ಇದನ್ನು ಓದಿ: ಭಾರತೀಯ ಮೂಲದ ಕಂಪನಿಯ ಔಷಧಿ ಸೇವಿಸಿ 66 ಮಕ್ಕಳ ಸಾವು?

ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಕ್ಕಳಿಗೆ ಅವರ ಪೋಷಕರು ಅಥವಾ ಫಾರ್ಮಾಸಿಸ್ಟ್‌ನವರ ಸಲಹೆಯ ಮೇರೆಗೆ ಸಿರಪ್ ಅನ್ನು ಮಕ್ಕಳಿಗೆ ನಿಯಮಿತ ಪ್ರಮಾಣವನ್ನು ಮೀರಿದ ಡೋಸ್‌ಗಳನ್ನು ನೀಡಲಾಗಿದೆ ಎಂದು ಉಜ್ಬೇಕಿಸ್ತಾನ ಸರ್ಕಾರ ಹೇಳಿದೆ. ಆಸ್ಪತ್ರೆಯ ಚಿಕಿತ್ಸೆಗೆ ದಾಖಲಾಗುವ ಮೊದಲು ಮಕ್ಕಳು ಈ ಸಿರಪ್ ಅನ್ನು 2-7 ದಿನಗಳವರೆಗೆ ಮನೆಯಲ್ಲಿ 2.5 ರಿಂದ 5 ಮಿ.ಲೀ ಪ್ರಮಾಣದಲ್ಲಿ ದಿನಕ್ಕೆ 3 - 4 ಬಾರಿ ತೆಗೆದುಕೊಂಡಿದ್ದಾರೆ ಎಂದು ಕಂಡುಬಂದಿದೆ. ಇದು ಸ್ಟ್ಯಾಂಡರ್ಡ್‌ ಪ್ರಮಾಣವನ್ನು ಮೀರಿದೆ ಎಂದು ಉಜ್ಬೇಕಿಸ್ತಾನ ಆರೋಗ್ಯ ಸಚಿವಾಲಯ ತಿಳಿಸಿದೆ.

ಇನ್ನು, 18 ಮಕ್ಕಳ ಸಾವಿನ ನಂತರ, ದೇಶದ ಎಲ್ಲಾ ಫಾರ್ಮಸಿಗಳಿಂದ ಡಾಕ್ -1 ಮ್ಯಾಕ್ಸ್ ಮಾತ್ರೆಗಳು ಮತ್ತು ಸಿರಪ್‌ಗಳನ್ನು ಹಿಂಪಡೆಯಲಾಗಿದೆ. ಹಾಗೂ, ಪರಿಸ್ಥಿತಿಯನ್ನು ಸಮಯೋಚಿತವಾಗಿ ವಿಶ್ಲೇಷಿಸಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದ ಕಾರಣ 7 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದೂ ಉಜ್ಬೇಕಿಸ್ತಾನ ಸರ್ಕಾರದ ಹೇಳಿಕೆ ತಿಳಿಸಿದೆ. ಮಕ್ಕಳ ಸಾವಿನ ಘಟನೆ ಸಂಬಂಧ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ - ಉತ್ತರ ವಲಯ) ಮತ್ತು ಉತ್ತರ ಪ್ರದೇಶ ಡ್ರಗ್ಸ್ ಕಂಟ್ರೋಲಿಂಗ್ ಮತ್ತು ಲೈಸೆನ್ಸಿಂಗ್ ಅಥಾರಿಟಿಯ ತಂಡಗಳು ಜಂಟಿ ವಿಚಾರಣೆ ನಡೆಸಲಿವೆ ಎಂದೂ ತಿಳಿದುಬಂದಿದೆ. ಮೃತಪಟ್ಟವರ ಸಂಖ್ಯೆಯ ಮೌಲ್ಯಮಾಪನ ವರದಿಯನ್ನು ಸಹ ಉಜ್ಬೇಕಿಸ್ತಾನ ಸರ್ಕಾರ ಕೇಳಿದೆ. 

ಇದನ್ನೂ ಓದಿ: Gambia 66 ಮಕ್ಕಳ ಸಾವಿಗೆ ಭಾರತದ ಸಿರಪ್‌ ಕಾರಣ ಶಂಕೆ: ಕೇಂದ್ರ ಸರ್ಕಾರದಿಂದ ತನಿಖೆಗೆ ಆದೇಶ

ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್‌ಗಳು ಈ ರೀತಿ ವಿವಾದವಾಗುತ್ತಿರುವುದು ವರ್ಷದಲ್ಲಿ ಇದು ಎರಡನೇ ಬಾರಿ. ಈ ವರ್ಷದ ಆರಂಭದಲ್ಲಿ, ಭಾರತದ ಮೈಡೆನ್‌ ಡ್ರಗ್‌ ಫಾರ್ಮಾ ತಯಾರಿಸಿದ ಕೆಮ್ಮಿನ ಔಷಧ ಸೇವಿಸಿ ಕಳೆದ ಅಕ್ಟೋಬರ್‌ನಲ್ಲಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಮೃತಪಟ್ಟಿದ್ದರು. ಆದರೆ ಭಾರತ ಈ ಆರೋಪ ತಳ್ಳಿಹಾಕಿತ್ತು. ಸರ್ಕಾರವು ಪರೀಕ್ಷಿಸಿದ ಮೇಡನ್ ಫಾರ್ಮಾಕ್ಯುಟಿಕಲ್ಸ್‌ನ ಎಲ್ಲಾ ನಾಲ್ಕು ಕೆಮ್ಮು ಸಿರಪ್‌ ಮಾದರಿಗಳು ಮಾನದಂಡಗಳಿಗೆ ಅನುಗುಣವಾಗಿ ಕಂಡುಬಂದಿವೆ ಎಂದು ರಾಷ್ಟ್ರೀಯ ಔಷಧ ನಿಯಂತ್ರಕರು ವಿಶ್ವ ಆರೋಗ್ಯ ಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿತ್ತು. ಅದರೊಂದಿಗೆ ತನಿಖೆಗೂ ಮುನ್ನವೇ ಈ ಸಾವಿಗೆ ಭಾರತವನ್ನು ಲಿಂಕ್‌ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿತ್ತು.
 

ಇದನ್ನೂ ಓದಿ: ಕೆಮ್ಮಿನ ಸಿರಪ್‌ ತೆಗೆದುಕೊಳ್ಳುವ ಮುನ್ನ ಇವಿಷ್ಟು ವಿಚಾರ ಗೊತ್ತಿರಲಿ

click me!