
ನ್ಯೂಯಾರ್ಕ್ (ಸೆ.26) ವಿಶ್ವಸಂಸ್ಥೆಯ 81ನೇ ಜನರಲ್ ಅಸೆಂಬ್ಲಿಯಲ್ಲಿ ಹಲವು ಹೈಡ್ರಾಮಗಳು ನಡೆದಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾಷಣದ ವೇಳೆ ಮುಸ್ಲಿಂ ರಾಷ್ಟ್ರಗಳ ಪ್ರತಿನಿಧಿಗಳು ಹೊರನಡೆದ ಸಂದರ್ಭ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಇದರ ನಡುವೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾಡಿದ ಪಾಕಿಸ್ತಾನದ ಪ್ರಯತ್ನವನ್ನು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಒಂದೇ ವಾಕ್ಯದ ಉತ್ತರದಲ್ಲಿ ವಿಫಲಗೊಳಿಸಿದ್ದಾರೆ. ಇಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮುಖವಾಡವನ್ನ ಕಳಚಿದ್ದಾರೆ.
ವಿಶ್ವಸಂಸ್ಥೆಯ 81ನೇ ಜನರಲ್ ಅಸೆಂಬ್ಲಿಯ ಹಲವು ವೇದಿಕೆಗಳಲ್ಲಿ ಪಾಕಿಸ್ತಾನ ಮುಖಭಂಗ ಅನುಭವಿಸಿದೆ. ಇದರಿಂದ ಕೆರಳಿದ್ದ ಪಾಕಿಸ್ತಾನ ಪತ್ರಕರ್ತನ ವಿದೇಶಾಂಕ ಸಚಿವ ಎಸ್ ಜೈಶಂಕರ್ ಸೇರಿದಂತೆ ವಿಶ್ವಸಂಸ್ಥೆ ಪ್ರತಿನಿಧಿಗಳ ಸಂವಾದದಲ್ಲಿ ಪಾಕಿಸ್ತಾನ ಪತ್ರಕರ್ತ ಪ್ರಶ್ನೆ ಕೇಳಿದ್ದಾನೆ. ಯಾವಾಗ ಭಾರತ ಸರ್ಕಾರ ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸುತ್ತೆ? ಯಾವಾಗ ಭಾರತ ಸರ್ಕಾರ ಭಯೋತ್ಪಾದಕರಿಗೆ ಆರ್ಥಿಕ ಬಲ ನೀಡಿ ಪಾಕಿಸ್ತಾನಕ್ಕೆ ಕಳುಹಿಸುವ ಸಂಪ್ರದಾಯಕ್ಕೆ ಅಂತ್ಯಹಾಡುತ್ತೆ ಎಂದು ಪ್ರಶ್ನಿಸಿದ್ದಾನೆ. ಈ ಪ್ರಶ್ನೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ತಾಳ್ಮೆಯಿಂದ ಮರು ಪ್ರಶ್ನೆ ಹಾಕಿದ್ದಾರೆ. ಭಯೋತ್ಪಾದಕ ದೇಶವೊಂದು ಈ ಪ್ರಶ್ನೆಯನ್ನು ನನ್ನಲ್ಲಿ ಕೇಳುತ್ತಿದೆಯಾ ಎಂದು ಜೈಶಂಕರ್ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯೊಂದಿಗೆ ಜೈಶಂಕರ್ ತಮ್ಮ ಮಾತು ಮುಗಿಸಿದ್ದಾರೆ.
ಜೈಶಂಕರ್ ಮರು ಪ್ರಶ್ನೆಯಲ್ಲಿ ಉತ್ತರವೂ ಅಡಗಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಘೋಷಿಸಿದ ಪಟ್ಟಿಯಲ್ಲಿರುವ ಹಲವು ಭಯೋತ್ಪಾದಕರಿಗೆ ಪಾಕಿಸ್ತಾನ ನಿರಂತರ ಆಶ್ರಯ ನೀಡುತ್ತಾ ಬಂದಿದೆ. ಹಫೀಸ್ ಸಯೀದ್ ಸೇರಿದಂತೆ ಪ್ರಮುಖರನ್ನು ಪಾಕಿಸ್ತಾನ ಬಂಧಿಸಿಲ್ಲ. ಈ ಕುರಿತು ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್‌ಗೆ ಪ್ರಶ್ನೆ ಕೇಳಿದಾಗ ಉತ್ತರಿಸಿದರೆ ಸಾಗಿದ್ದಾರೆ. ಪಾಕಿಸ್ತಾನ ಭಾರತದ ಮೇಲೆ ನಿರಂತರ ಭಯೋತ್ಪಾದಕ ದಾಳಿ ನಡೆಸುತ್ತಾ ಬಂದಿದೆ. 2025ರ ಪಹೆಲ್ಗಾಂ ದಾಳಿ ಇತ್ತೀಚಿನ ಘನಘೋರ ಘಟನೆ. ಅಮಾಯಕ ಪ್ರವಾಸಿಗರ ಮೇಲೆ ಪಾಕಿಸ್ತಾನ ಮೂಲದ ಭಯೋತ್ಪಾದಕರು ದಾಳಿ ನಡೆಸಿದ್ದರು. ಧರ್ಮ ಕೇಳಿ ಈ ದಾಳಿ ನಡೆದಿತ್ತು. 26 ಮಂದಿ ಬಲಿಯಾಗಿದ್ದರು. ಈ ದಾಳಿ ಹಿಂದಿನ ಉಗ್ರ ಸಂಘಟನೆಗಳನ್ನು ಗುರುತಿಸಿದ ಭಾರತ, ಆಪರೇಶನ್ ಸಿಂದೂರ್ ಕಾರ್ಯಾಚರಣೆ ಮೂಲಕ ತಿರೇಗೇಟು ನೀಡಿತ್ತು.
ಬುಧವಾರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಮಂಡಳಿ ಸಭೆಯಲ್ಲೂ ಪಾಕಿಸ್ತಾನವನ್ನು ಭಾರತ ತರಾಟೆಗೆ ತೆಗೆದುಕೊಂಡಿತ್ತು. ಭಾರತದ ರಾಯಭಾರ ಅದಿಕಾರಿ ಕ್ಷಿತಿಜ್ ತ್ಯಾಗಿ ಪಾಕಿಸ್ತಾನದ ಭಯೋತ್ಪಾದಕತೆ ಕುರಿತು ಪ್ರಖರ ಮಾತುಗಳಲ್ಲಿ ವಿವರಿಸಿದ್ದರು. ಪಾಕಿಸ್ತಾನ ಭಯೋತ್ಪಾದಕರ ಸಾಕಿ ಸಲಹುವ ಬದಲು ಆರ್ಥಿಕತೆ, ಜನರಿಗೆ ಮೂಲಭೂತ ಸೌಕರ್ಯ, ಆಹಾರ ಒದಗಿಸುವಲ್ಲಿ ಪ್ರಯತ್ನ ಮಾಡಬೇಕು ಎಂದಿದ್ದರು. ಮತ್ತೊಂದು ದೇಶದ ಪ್ರದೇಶದಲ್ಲಿ ಭಯೋತ್ಪಾದಕರ ಬಿಟ್ಟು ಆಕ್ರಮಿಸಿಕೊಳ್ಳುವ ಪ್ರಯತ್ನ ಮಾಡುವ ಬದಲು ತನ್ನ ನೆಲದ ಜನರ ಬಗ್ಗೆ ಕಾಳಜಿ ತೋರಲಿ ಎಂದಿದ್ದರು. ಯುವ ಸಮೂಹವನ್ನು ಭಯೋತ್ಪಾದಕರಾಗಿ ಪರಿವರ್ತಿಸಿ ಮತ್ತೊಂದು ದೇಶಕ್ಕೆ ಕಳುಹಿಸುವ ಬದಲು ತಮ್ಮ ದೇಶದ ಜನರಿಗೆ ಉದ್ಯೋಗವಕಾಶ, ಬದುಕು ಕಟ್ಟಿಕೊಳ್ಳಲು ನೆರವಾಗುವುದು ಉತ್ತಮ. ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯರು ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದಾಗ ಅವರ ಮೇಲೆ ಗುಂಡು ಹಾರಿಸಿ ಕ್ರೌರ್ಯ ಮೆರೆಯುವ ಬದಲು ಅವರ ಬೇಡಿಕೆ, ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಬೇಕಿತ್ತು ಎಂದು ತ್ಯಾಗಿ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ