
ಲಾಹೋರ್(ಆ.08): ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿನ ಹಿಂದೂ ದೇವಾಲಯ ದ್ವಂಸಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪೋಲಿಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ನಂತರ ಪೊಲೀಸರು 50 ಜನರನ್ನು ಬಂಧಿಸಿ 150ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
‘ಬೋಂಗ್ ದೇವಾಲಯ ಧ್ವಂಸಕ್ಕೆ ಸಂಬಂಧಿಸಿದಂತೆ ಈಗಾಗಲೇ 50 ಜನರನ್ನು ಬಂಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರು ಬಂಧಿಯಾಗುವ ಸಾಧ್ಯತೆ ಇದೆ. ಇವರ ಮೇಲೆ ಭಯೋತ್ಪಾದನೆ ಮತ್ತು ಪಾಕಿಸ್ತಾನ್ ಪೀನಲ್ ಕೋಡ್ ಅನ್ವಯ ಪ್ರಕರಣ ದಾಖಲಿಸಿದ್ದೇವೆ.
ಶಂಕಿತರನ್ನೆಲ್ಲಾ ಬಂಧಿಸುತ್ತೇವೆ. ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯ ಆರಂಭಿಸಲಾಗಿದೆ’ ಪೊಲೀಸ್ ಅಧಿಕಾರಿ ರಹೀಮ್ ಯಾರ್ ಖಾನ್ ಅಸದ್ ಸರ್ಫರಾಜ್ ಹೇಳಿದ್ದಾರೆ.
ಏನಾಗಿತ್ತು?
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನವೊಂದನ್ನು ಮುಸಲ್ಮಾನರ ಗುಂಪೊಂದು ಧ್ವಂಸಗೊಳಿಸಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇಷ್ಟೇ ಅಲ್ಲದೇ ಉದ್ರಿಕ್ತರು ದೇವಸ್ಥಾನಗೊಳಗಿನ ವಿಗ್ರಹಗಳನ್ನೂ ಸುಟ್ಟಿರುವ ದೃಶ್ಯಾವಳಿಗಳು ವಿಡಿಯೋದಲ್ಲಿ ದಾಖಲಾಗಿದ್ದವು.
ಪಾಕಿಸ್ತಾನದ ಹಿಂದೂ ಸಮುದಾಯದ ನಾಯಕ ಹಾಗೂ ಆಡಳಿತ ಪಕ್ಷ ಪಿಟಿಐ ಸಂಸದ ರಮೇಶ್ ಕುಮಾರ್ ವಂಕ್ವಾನಿ ಘಟನೆಯ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹಿಂದೂ ದೇಗುಲದ ಮೂರ್ತಿಗಳನ್ನು ಧ್ವಂಸಗೊಳಿಸುತ್ತಿರುವ ಮುಸಲ್ಮಾನರು 'ನಾರಾ-ಏ-ತಕ್ಬೀರ್' ಹಾಗೂ 'ಅಲ್ಲಾ-ಹು-ಅಕ್ಬರ್' ಎನ್ನುವ ಘೋಷಣೆಗಳನ್ನು ಕೂಗುತ್ತಿರುವುದನ್ನು ಗಮನಿಸಬಹುದು.
ಇನ್ನು ಘಟನೆಯ ಬಗ್ಗೆ ಬರೆದುಕೊಂಡಿರುವ ರಮೇಶ್ 'ರಹೀಮ್ ಖಾನ್ ಯಾರ್ ಖಾನ್ ಜಿಲ್ಲೆಯಲ್ಲಿರುವ, ಭೋಂಗ್ ನಗರದಲ್ಲಿ ಈ ಸಿದ್ಧಿವಿನಾಯಕ ದೇವಸ್ಥಾನದ ದೃಶ್ಯವಿದು. ನಿನ್ನೆಯಿಂದ ಇಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸ್ಥಳೀಯ ಪೊಲೀಸರ ನಿರ್ಲಕ್ಷ್ಯ ನಾಚಿಕೆಗೀಡು ಮಾಡುವಂತಹದ್ದು. ಈ ಬಗ್ಗೆ ಚೀಫ್ ಜಸ್ಟೀಸ್ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದರು.
ಇನ್ನು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಅಲ್ಲಿ ಪಾಕಿಸ್ತಾನ ರೇಂಜರ್ಸ್ನ್ನು ರಕ್ಷಣೆಗೆ ನಿಯೋಜಿಸಲಾಗಿತ್ತು. ದೇಗುಲ ಇರುವ ಸುತ್ತಮುತ್ತ 100 ಹಿಂದೂ ಕುಟುಂಬಗಳು ಇದ್ದು, ಅವರೀಗ ಅಪಾಯದಲ್ಲಿದ್ದಾರೆ. ಎಲ್ಲ ರೀತಿಯ ಭದ್ರತಾ ಕ್ರಮಗಳನ್ನೂ ವಹಿಸಲಾಗಿದೆ ಎಂದೂ ಸ್ಥಳೀಯ ಸರ್ಕಾರ ತಿಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ