ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಕಂಡು ಕೇಳರಿಯದ ರೀತಿ ಎನ್ನಬಹುದಾದ ತುರ್ತು ಕ್ರಮಗಳನ್ನು ಘೋಷಣೆ ಮಾಡಿದೆ. ಜನಸಂಖ್ಯೆಯಲ್ಲಿ ಬೆಂಗಳೂರಿನ 2 ಪಟ್ಟು ಇರುವ ತನ್ನ ದೇಶದ 5 ನಗರಗಳಲ್ಲಿ ಬಂದ್ ರೀತಿಯ ವಾತಾವರಣ ಘೋಷಣೆ ಮಾಡಿದೆ.
ಬೀಜಿಂಗ್ [ಜ.24]: ಈಗಾಗಲೇ 17 ಮಂದಿಯನ್ನು ಬಲಿ ಪಡೆದಿರುವ ಹಾಗೂ ಇನ್ನೂ 630 ಮಂದಿಯಲ್ಲಿ ಕಾಣಿಸಿಕೊಂಡಿರುವ ಕೊರೋನಾವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಕಂಡು ಕೇಳರಿಯದ ರೀತಿ ಎನ್ನಬಹುದಾದ ತುರ್ತು ಕ್ರಮಗಳನ್ನು ಘೋಷಣೆ ಮಾಡಿದೆ. ಜನಸಂಖ್ಯೆಯಲ್ಲಿ ಬೆಂಗಳೂರಿನ 2 ಪಟ್ಟು ಇರುವ ತನ್ನ ದೇಶದ 5 ನಗರಗಳಲ್ಲಿ ಬಂದ್ ರೀತಿಯ ವಾತಾವರಣ ಘೋಷಣೆ ಮಾಡಿದೆ. ಅಲ್ಲದೆ ಬೀಜಿಂಗ್‌ನ ಐತಿಹಾಸಿಕ ಫಾರ್‌ಬಿಡನ್ ಸಿಟಿಯನ್ನು ಮುಂದಿನ ಆದೇಶದವರೆಗೂ ಮುಚ್ಚಲು ಸರ್ಕಾರ ಆದೇಶಿಸಿದೆ.
ವುಹಾನ್, ಹುವಾಂಗ್‌ಗಾಂಗ್, ಈಝೌ, ಝಿಜಿಯಾಂಗ್ ಮತ್ತು ಕ್ವಿಯಾನ್‌ಜಿಯಾಂಗ್ ನಗರಗಳಲ್ಲಿ ಗುರುವಾರ ಸಂಜೆಯಿಂದಲೇ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಮೂಲಕ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹಬ್ಬದಂತೆ ಭಾರೀ ಮುಂಜಾಗ್ರತೆ ವಹಿಸಿದೆ. ಪರಿಣಾಮ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ವುಹಾನ್ ರಸ್ತೆಗಳು ನಿರ್ಜನವಾಗಿವೆ.
undefined
ಕೊರೋನಾವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡು ತೀವ್ರ ಸಮಸ್ಯೆ ತಂದೊಡ್ಡಿರುವ, 1.1 ಕೋಟಿ ಜನಸಂಖ್ಯೆ ಹೊಂದಿರುವ ವುಹಾನ್‌ನಗರದಲ್ಲಿ ವಿಮಾನ ಸಂಚಾರ, ಬಸ್, ಸಬ್ ವೇ ಸೇವೆ, ರೈಲು ಸೇರಿದಂತೆ ಎಲ್ಲ ರೀತಿಯ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಮ್ಮೇಳನ, ಪ್ರವಾಸ, ಭೇಟಿ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲಾಗಿದೆ. ಹೆಚ್ಚು ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ಇದೇ ವೇಳೆ, ಫೆ.8ರವರೆಗೂ ಪ್ರವಾಸಗಳನ್ನು ಆಯೋಜಿಸದಂತೆ ಪ್ರವಾಸೋದ್ಯಮ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
440 ಜನರಿಗೆ ಕೊರೋನಾ ವೈರಸ್ ಸೋಂಕು, ಮೃತರ ಸಂಖ್ಯೆ ಏರಿಕೆ!..
ಇದೇ ವೇಳೆ, ವುಹಾನ್‌ನಿಂದ 70 ಕಿ.ಮೀ. ದೂರದಲ್ಲಿರುವ, 75 ಲಕ್ಷ ಜನಸಂಖ್ಯೆ ಹೊಂದಿರುವ ಹುವಾಂಗ್‌ಗಾಂಗ್‌ನಲ್ಲಿ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಬಾರ್, ಸಿನಿಮಾ ಹಾಲ್‌ಗಳನ್ನು ಮುಚ್ಚಿಸಲಾಗಿದೆ. ತೀರಾ ಅವಶ್ಯಕತೆ ಇಲ್ಲದ ಹೊರತೂ ಜನತೆ ಮನೆಯಿಂದ ಹೊರಬಾರದು ಎಂದು ಸರ್ಕಾರ ಸೂಚಿಸಿದೆ. ಮನೆಯಿಂದ ಹೊರಬರುವ ವೇಳೆ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ತೊಡುವಂತೆ ಸೂಚಿಸಲಾಗಿದೆ.
ಕೊಂದೇ ಬಿಡುವ ಕರೋನಾ ವೈರಸ್ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ...
ಇನ್ನು 90 ಲಕ್ಷ ಜನಸಂಖ್ಯೆ ಹೊಂದಿರುವ ಈಝೌ ಎಂಬ ನಗರದಲ್ಲಿ ರೈಲು ನಿಲ್ದಾಣವನ್ನು ಮುಚ್ಚಿಸಲಾಗಿದೆ. ರೈಲ್ವೆ ನಿಲ್ದಾಣಗಳಿಗೆ ಯಾರೂ ಬರದಂತೆ ತಡೆಯಲು ಅರೆ ಸೇನಾ ಪಡೆ ನಿಯೋಜಿಸಲಾಗಿದೆ.
ನಾಳೆ ಚೀನಿ ಹೊಸ ವರ್ಷ: ಕೊರೋನಾ ಸೋಂಕಿನ ಚಿಂತೆ
ಜ.25 ಅನ್ನು ಚೀನಾ ಜನರು ಹೊಸ ವರ್ಷವಾಗಿ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಕುಟುಂಬದ ಜತೆ ಇರಲು ದೇಶ- ವಿದೇಶಗಳಿಂದ ಲಕ್ಷಾಂತರ ಚೀನಿಯರು ಪ್ರಯಾಣಿಸುತ್ತಾರೆ. ಆ ವೇಳೆ ಕೊರೋನಾವೈರಸ್ ಹಬ್ಬಬಹುದು ಎಂಬ ಕಾರಣಕ್ಕೆ ಪರಿಸ್ಥಿತಿಯ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ನಿಗಾ ವಹಿಸಿದೆ. ಚೀನಿ ಹೊಸವರ್ಷದ ಸಂದರ್ಭದಲ್ಲಿ ರಸ್ತೆ, ರೈಲು ಹಾಗೂ ವಿಮಾನ ಪ್ರಯಾಣದಲ್ಲಿ ಭಾರಿ ದಟ್ಟಣೆ ಇರುತ್ತದೆ. ಇದೀಗ ವುಹಾನ್‌ನಲ್ಲಿ ಸಾರ್ವಜನಿಕ ಸಾರಿಗೆ ನಿಷೇಧಿಸಿರುವುದು ಪರಿಣಾಮ ಬೀರುವ ಸಾಧ್ಯತೆ ಇದೆ.
ಕೊರೋನಾ ವೈರಸ್ ಕೇಂದ್ರ ಸ್ಥಾನದಲ್ಲಿ 700 ಭಾರತೀಯರು
ಕೊರೋನಾವೈರಸ್ ಹಬ್ಬಿದ್ದು ಚೀನಾದ ವುಹಾನ್ ಮೂಲಕ. ಆದರೆ ಅದೇ ನಗರದ ಸುತ್ತಮುತ್ತ 700 ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ಇನ್ನಿತರೆ ಕೋರ್ಸುಗಳನ್ನು ವ್ಯಾಸಂಗ ಮಾಡುತ್ತಿದ್ದಾರೆ. ಆ ಪೈಕಿ ಬಹುತೇಕ ಮಂದಿ ರಜೆ ಕಾರಣ ತಾಯ್ನಾಡಿಗೆ ಮರಳಿದ್ದರೆ, ಇನ್ನೂ ಕೆಲವರು ಅಲ್ಲೇ ಉಳಿದುಕೊಂಡಿದ್ದಾರೆ.
ಮಾಸ್ಕ್ ಧರಿಸಲು ಸೂಚನೆ
ಕೊರೋನಾವೈರಸ್ ಮತ್ತಷ್ಟುಹಬ್ಬುವ ಸಾಧ್ಯತೆ ಹಿನ್ನೆಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್, ಸಿನಿಮಾ, ಪಾರ್ಕ್, ಶಾಪಿಂಗ್ ಮಾಲ್‌ಗಳಿಗೆ ತೆರಳುವ ಸಾರ್ವಜನಿಕರು ಮುಖಗವಸು (ಮಾಸ್ಕ್) ಧರಿಸಬೇಕು ಎಂದು ವುಹಾನ್ ಆಡಳಿತ ಸೂಚನೆ ನೀಡಿದೆ.
ವಿದೇಶಗಳಲ್ಲೂ ವೈರಸ್ ತಾಂಡವ
ಚೀನಾಕ್ಕೆ ಸೀಮಿತವಾಗಿದ್ದ, ಮಾನವರಿಂದ ಮಾನವರಿಗೆ ಹಬ್ಬುವ ಕೊರೋನಾವೈರಸ್ ಜಪಾನ್, ದಕ್ಷಿಣ ಕೊರಿಯಾ, ಥಾಯ್ಲೆಂಡ್ ಹಾಗೂ ದೂರದ ಅಮೆರಿಕದಲ್ಲೂ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಅದೃಷ್ಟ ವಶಾತ್ ಅಲ್ಲೆಲ್ಲಾ ಈವರೆಗೆ ಒಂದೂ ಸಾವು ಸಂಭವಿಸಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಚೀನಾಕ್ಕೆ ತಂಡ ರವಾನೆ
ಕೊರೋನಾವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿನ ಅಲ್ಲಿನ ಪರಿಸ್ಥಿತಿ ಅಧ್ಯಯನಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಂಡವೊಂದನ್ನು ಕಳುಹಿಸಿದೆ. ವೈರಾಣು ತಡೆಗೆ ಚೀನಾ ಕೈಗೊಂಡಿರುವ ಕ್ರಮಗಳನ್ನು ಈ ತಂಡ ಪರಿಶೀಲಿಸಲಿದೆ.
ಏನಿದು ಕೊರೋನಾ ವೈರಸ್?
ಇದೊಂದು ಜಾತಿಯ ವೈರಸ್. ಸೂಕ್ಷ್ಮದರ್ಶಕದಲ್ಲಿ ಇದನ್ನು ವೀಕ್ಷಿಸಿದಾಗ ಇದು ಕಿರೀಟ ರೀತಿ ಕಾಣಿಸುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಕೊರೋನಾ ಎಂದರೆ ಕಿರೀಟ ಎಂದರ್ಥ. ಹೀಗಾಗಿ ವೈರಸ್‌ಗೆ ಕೊರೋನಾ ಎಂದು ಹೆಸರಿಡಲಾಗಿದೆ. ಚೀನಾದ ವುಹಾನ್ ನಗರದಲ್ಲಿನ ಅಕ್ರಮ ವನ್ಯಜೀವಿ ಮಾಂಸ ಕೇಂದ್ರದ ಮೂಲಕ ಮಾನವರಿಗೆ ವೈರಸ್ ತಗುಲಿದೆ. ಸೋಂಕು ತಗುಲಿದವರು ತೀವ್ರ ಶೀತ, ಕೆಮ್ಮು, ಗಂಟಲು ಕಟ್ಟುವಿಕೆ, ಉಸಿರಾಟದ ತೊಂದರೆ, ತಲೆನೋವು, ಜ್ವರದ ಸಮಸ್ಯೆಗೆ ತುತ್ತಾಗುತ್ತಾರೆ.