
ಟೆಕ್ಸಾಸ್: ಅಮೆರಿಕಾದ ಟೆಕ್ಸಾಸ್ (Texas, United States of America) ನಗರದ ಸ್ಯಾನ್ ಆಂಟೊನಿಯೋದಲ್ಲಿ (San Antonio) ಮಾನವ ಕಳ್ಳ ಸಾಗಾಣಿಕೆಯ ಕರಾಳ ಘಟನೆಯೊಂದು ಬೆಳಕಿಗೆ ಬಂದಿದೆ. ಟ್ರಕ್ ಒಳಗೆ 46 ಮಂದಿಯ ಶವ ಪತ್ತೆಯಾಗಿದ್ದು, ಮೆಕ್ಸಿಕೋದಿಂದ ಅಮೆರಿಕಾಗೆ ಮಾನವ ಕಳ್ಳ ಸಾಗಾಣಿಕೆ (Illegal immigrants from Mexico) ವೇಳೆ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಮೆಕ್ಸಿಕೋ ದೇಶದಿಂದ ಅಮೆರಿಕಾಗೆ ಲಕ್ಷಾಂತರ ಜನ ವಲಸೆ ಬರುತ್ತಾರೆ. ಅದರಲ್ಲಿ ಬಹುತೇಕರು ಅನಧಿಕೃತವಾಗಿ ಬಂದು ನೆಲೆಸುವವರು. ಪ್ರತಿ ವರ್ಷ ಅಮೆರಿಕಾ ಸರ್ಕಾರ ಅನಧಿಕೃತ ವಲಸೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಂಡರೂ ವಲಸೆ ಮಾತ್ರ ನಿಲ್ಲುತ್ತಿಲ್ಲ. ಮೆಕ್ಸಿಕೊದಲ್ಲಿನ ಬಡತನ ಇದಕ್ಕೆ ಮೂಲ ಕಾರಣ. ಜತೆಗೆ ಮೆಕ್ಸಿಕೊದಿಂದ ಮಾದಕ ವಸ್ತುಗಳು, ಶಸ್ತ್ರಗಳು ಸಹ ಅಮೆರಿಕಾದ ಒಳಗೆ ಸರಬರಾಜಾಗುತ್ತವೆ.
46 ಜನ ಮೃತಪಟ್ಟಿದ್ದರೆ, ಇನ್ನೂ 16 ಜನರ ಪರಿಸ್ಥಿತಿ ಗಂಭೀರವಾಗಿದ್ದು ಅವರೆಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಅತಿಯಾದ ಸೆಕೆ ಮತ್ತು ಬಿಸಿಲಿನಿಂದ ಟ್ರಕ್ ಒಳಗಿದ್ದವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು, ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಸ್ಯಾನ್ ಆಂಟೊನಿಯೋದ ಅಗ್ನಿಶಾಮಕ ಇಲಾಖೆ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಸ್ಯಾನ್ ಆಂಟೊನಿಯಾದ ದಕ್ಷಿಣ ಭಾಗದ ರೈಲು ಮಾರ್ಗದ ಸಮೀಪ ಟ್ರಕ್ಕನ್ನು ನಿಲ್ಲಿಸಿ ಆರೋಪಿಗಳು ಪರಾರಿಯಾಗಿದ್ದರು. ಟ್ರಕ್‌ನಲ್ಲಿರುವವರು ಮೃತಪಟ್ಟಿರುವುದು ಧೃಡಪಟ್ಟ ಕಾರಣ ಆರೋಪಿಗಳು ಟ್ರಕ್ ಬಿಟ್ಟು ಪರಾರಿಯಾಗಿರಬಹುದು ಎನ್ನಲಾಗಿದೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ಮೆಕ್ಸಿಕೊದಿಂದ ಅಮೆರಿಕಾ ಒಳಗೆ ಕರೆತರಲು ಇಂತಿಷ್ಟು ಹಣ ಎಂದು ಈ ಮಾನವ ಕಳ್ಳ ಸಾಗಾಣಿಕೆ ಜಾಲದವರು ಪಡೆಯುತ್ತಾರೆ ಎನ್ನಲಾಗಿದೆ. ಮೆಕ್ಸಿಕೊದ ವಿದೇಶಾಂಗ ಸಚಿವ ಮರ್ಸೆಲೊ ಎಬ್ರಾರ್ಡ್ ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದು, ಘಟನೆಯನ್ನು ಟೆಕ್ಸಾಸ್ ಟ್ರಾಜೆಡಿ ಎಂದು ವರ್ಣಿಸಿದ್ದಾರೆ. ಮೆಕ್ಸಿಕೊದ ಅಮೆರಿಕಾ ರಾಯಭಾರಿಗಳನ್ನು ಸ್ಥಳಕ್ಕೆ ಭೇಟಿ ನೀಡುವಂತೆಯೂ ಆದೇಶಿಸಿದ್ಧಾರೆ. ಆದರೆ ಇದುವರೆಗೂ ಮೃತಪಟ್ಟವರು ಮೆಕ್ಸಿಕೊ ದೇಶದವರು ಎಂಬ ಬಗ್ಗೆ ಖಚಿತತೆ ಸಿಕ್ಕಿಲ್ಲ.
ಇದನ್ನೂ ಓದಿ: ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಪಾನಿಪೂರಿ ನಿಷೇಧ, ಪಾಲಿಕೆಯಿಂದ ಮಹತ್ವದ ಘೋಷಣೆ!
ಇತ್ತೀಚಿನ ತಿಂಗಳುಗಳಲ್ಲಿ ಅನಧಿಕೃತವಾಗಿ ಮೆಕ್ಸಿಕೊದಿಂದ ಅಮೆರಿಕಾ ಒಳ ಪ್ರವೇಶಿಸುತ್ತಿರುವವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ ಎನ್ನಲಾಗಿದೆ. ಜೋ ಬಿಡನ್ ಅಧ್ಯಕ್ಷರಾದ ನಂತರ ತರಲಾದ ವಿದೇಶಾಂಗ ನೀತಿಗಳಿಂದ ಅಮೆರಿಕಾಗೆ ಅನಧಿಕೃತವಾಗಿ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದೂ ಟೀಕಿಸಲಾಗುತ್ತಿದೆ.
ಮೆಕ್ಸಿಕೊ ಗಡಿಯಿಂದ ಸ್ಯಾನ್ ಆಂಟೊನಿಯೊಗೆ ಸುಮಾರು 250 ಕಿಲೋಮೀಟರ್ ದೂರವಿದೆ. ಸೋಮವಾರ ಇಲ್ಲಿನ ತಾಪಮಾನ 39.4% ಸೆಲ್ಷಿಯಸ್‌ನಷ್ಟು ಏರಿಕೆಯಾಗಿತ್ತು. ಟ್ರಕ್‌ನೊಳಗೆ ಬಿಸಿಲ ತಾಪ ತಡೆಯಲಾಗದೆ ಒಳಗಿದ್ದವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಟ್ರಕ್ ಒಳಗೆ ಸರಿಯಾಗಿ ಉಸಿರಾಡಲೂ ಸಾಧ್ಯವಾಗುತ್ತಿರಲಿಲ್ಲ, ಜತೆಗೆ ಬಿಸಿಲ ತಾಪವೂ ಸೇರಿ ಎಲ್ಲರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಭಾರತ ಮೂಲದ ವ್ಯಕ್ತಿಯ ಕೊಲೆ: ಕಾರಿನಲ್ಲಿ ಕುಳಿತಿದ್ದವನ ಮೇಲೆ ಗುಂಡಿನ ದಾಳಿ
2017ರಲ್ಲಿ ಹತ್ತು ವಲಸಿಗರ ಶವ ಸ್ಯಾನ್ ಆಂಟೊನಿಯೊದಲ್ಲೇ ಪತ್ತೆಯಾಗಿತ್ತು. ಅದೂ ಕೂಡ ಟ್ರಕ್‌ನಲ್ಲೇ ಪತ್ತೆಯಾಗಿತ್ತು. ವಾಲ್‌ಮಾರ್ಟ್ ಶಾಪಿಂಗ್ ಮಾಲ್‌ನ (Wallmart shopping mall) ಪಾರ್ಕಿಂಗ್‌ನಲ್ಲಿ ಟ್ರಕ್ ಪಾರ್ಕ್ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ನಂತರ ಆರೋಪಿ ಜೇಮ್ಸ್ ಮ್ಯಾಥೀವ್ ಬ್ರಾಡ್ಲಿ ಜೂನಿಯರ್‌ನನ್ನು ಪೊಲೀಸರು ಬಂಧಿಸಿದ್ದರು. ಆತನಿಗೆ ಜೀವಿತಾವಧಿ ಶಿಕ್ಷೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ