* ವಾಟ್ಸಾಪ್ ಹೊಸ ನೀತಿ ಜಾರಿಗೆ:
* ಒಪ್ಪದಿದ್ರೆ ಹಂತಹಂತ ಸೇವೆ ಬಂದ್
* ನೂತನ ನೀತ ಒಪ್ಪದಿದ್ದರೆ ಡಮ್ಮಿ ಆಗಲಿದೆ ವಾಟ್ಸಪ್ ಆ್ಯಪ್
ನವದೆಹಲಿ(ಮೇ.16): ವಾಣಿಜ್ಯಿಕ ದೃಷ್ಟಿಯಿಂದ ಬಳಕೆದಾರರ ಮಾಹಿತಿಯನ್ನು ಜೊತೆಗಾರ ಸಂಸ್ಥೆ ಫೇಸ್‌ಬುಕ್ ಜೊತೆ ಹಂಚಿಕೊಳ್ಳುವ ಸಂಬಂಧ ವಾಟ್ಸಾಪ್ ರೂಪಿಸಿರುವ ನೂತನ ನೀತಿ ಶನಿವಾರದಿಂದಲೇ ಜಾರಿಗೆ ಬಂದಿದೆ. ವಾಟ್ಸಾಪ್ ಸೇವೆಯನ್ನು ಬಳಸಲು ಗ್ರಾಹಕರು ನೂತನ ನೀತಿಯನ್ನು ಒಪ್ಪಿಕೊಳ್ಳಲೇ ಬೇಕು. ಒಂದು ವೇಳೆ ನೂತನ ನೀತಿಯನ್ನು ಒಪ್ಪದೇ ಇದ್ದರೆ ವಾಟ್ಸಾಪ್ ಸೇವೆಗಳು ಹಂತ ಹಂತವಾಗಿ ಸ್ಥಗಿತಗೊಳ್ಳಲಿದ್ದು, ವಾಟ್ಸಾಪ್ ಕೇವಲ ಒಂದು ಡಮ್ಮಿ ಆ್ಯಪ್ ಆಗಿ ಮಾತ್ರ ಉಳಿಯಲಿದೆ. ಆದರೆ ತತ್‌ಕ್ಷಣಕ್ಕೆ ಪೂರ್ಣ ಬಳಕೆಗೆ ಯಾವುದೇ ಅಡ್ಡಿ ಇಲ್ಲ.
ಹಾಗೆಂದು ನೂತನ ನೀತಿಯನ್ನು ಒಪ್ಪದೇ ಇದ್ದರೆ ವಾಟ್ಸಾಪ್ ಬಳಕೆದಾರರ ಖಾತೆಗಳನ್ನು ಡಿಲೀಟ್ ಮಾಡುವುದಿಲ್ಲ. ಬಳಕೆದಾರರು ತನ್ನ ನೀತಿಯನ್ನು ಒಪ್ಪುವ ತನಕವೂ ನಿರಂತರವಾಗಿ ಜ್ಞಾಪನಾ ಸಂದೇಶಗಳನ್ನು ರವಾನಿಸಲಿದೆ. ಆರಂಭದಲ್ಲಿ ವಾಟ್ಸಾಪ್ ತನ್ನ ಬಳಕೆದಾರರಿಗೆ ಧ್ವನಿ ಸಂದೇಶ ಹಾಗೂ ವಿಡಿಯೋ ಕಾಲ್‌ಗಳನ್ನು ಮಾಡಲು ಅವಕಾಶ ನೀಡಲಿದೆ. ಆದರೆ, ಸಂದೇಶಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಬದಲಾಗಿ ನೋಟಿಫಿಕೇಶನ್‌ಗಳ ಮೂಲಕ ಮಾತ್ರ ಸಂದೇಶಗಳು ಕಾಣಿಸಲಿವೆ. ನೋಟಿಫಿಕೇಶನ್‌ನಲ್ಲಿರುವ ಮಿಸ್ ಕಾಲ್ ಅಥವಾ ವಿಡಿಯೋ ಕಾಲ್‌ಗಳಿಗೆ ಪ್ರತಿಕ್ರಿಯೆ ನೀಡಬಹುದಾಗಿದೆ. ಆದರೆ, ನೇರವಾಗಿ ಚಾಟ್ ಲೀಸ್ಟ್ ಬಳಸಲು ಸಾಧ್ಯವಾಗುವುದಿಲ್ಲ.
undefined
ನಂತರದಲ್ಲಿ ವಾಟ್ಸಾಪ್ ಸಂದೇಶ ಕಳುಹಿಸುವ ಸೇವೆಯೂ ರದ್ದಾಗಲಿದೆ. ಕರೆಗಳನ್ನು ಕೂಡ ಮಾಡಲು ಸಾಧ್ಯವಾಗುವುದಿಲ್ಲ. ಈ ಮೂಲಕ ವಾಟ್ಸಾಪ್ ಕೇವಲ ಒಂದು ಡಮ್ಮಿ ಆ್ಯಪ್ ಎನಿಸಕೊಳ್ಳಲಿದೆ. ವಾಟ್ಸಾಪ್ ಅನ್ನು ತೆರೆದಾಗಲೆಲ್ಲಾ ನೂತನ ನೀತಿಯನ್ನು ಒಪ್ಪಿಕೊಳ್ಳಿ ಎಂಬ ಜ್ಞಾಪನಾ ಸಂದೇಶ ಗೋಚರಿಸಲಿದೆ. ಅದನ್ನು ಒಪ್ಪಿದರೆ ಮಾತ್ರವೇ ತನ್ನ ಸೇವೆಯನ್ನು ಮರಳಿ ನೀಡಲಿದೆ.
ಒಂದು ವೇಳೆ ಈಗಾಗಲೇ ನೂತನ ನೀತಿಯನ್ನು ಒಪ್ಪಿದ್ದರೆ, ಗ್ರಾಹಕರಿಗೆ ನೂತನ ನೀತಿಯಿಂದ ಯಾವುದೇ ಪರಿಣಾಮ ಆಗುವುದಿಲ್ಲ.