ಇನ್‌ಸ್ಟಾಗ್ರಾಂ ಹ್ಯಾಕ್ ಆಗದಂತೆ ತಡೆಯಲು ಈ ಸಿಂಪಲ್ ಟ್ರಿಕ್ಸ್ ಬಳಸಿ..!

By Suvarna NewsFirst Published Jul 21, 2021, 10:14 AM IST
Highlights

ಜನಪ್ರಿಯ ಆ್ಯಪ್‌ಗಳಲ್ಲಿ ಒಂದಾಗಿರುವ ಇನ್‌ಸ್ಟಾಗ್ರಾಂ ಖಾತೆಗೆ ಹ್ಯಾಕರ್‌ಗಳ ಕಾಟವಂತೆ. ಹ್ಯಾಕ್ ಆಗದಂತೆ ನಿಮ್ಮ ಖಾತೆಯನ್ನು ಕಾಪಾಡಿಕೊಳ್ಳಬೇಕೆಂದರೆ ಕೆಲವು ಮಾರ್ಗಗಳನ್ನು ಅನುಸರಿಸಬೇಕಾಗಲಿದೆ. ನಿಮ್ಮ ಇನ್‌ಸ್ಟಾ ಖಾತೆಯ ಸುರಕ್ಷತೆಗೆ ಹೀಗೆ ಮಾಡಿ.

ಸೋಷಿಯಲ್ ಮೀಡಿಯಾ ದುನಿಯಾದಲ್ಲಿ ಎಲ್ಲವೂ ಫಾಸ್ಟ್. ಹೊಸ ಹೊಸ ಆ್ಯಪ್ಗಳು ಹೊಸತನಗಳನ್ನು ಹೊತ್ತು ತರುತ್ತವೆ. ಆಡಿಯೋ ಆ್ಯಪ್‌ಗಳು, ವಿಡಿಯೋ ಆ್ಯಪ್‌ಗಳು ಹೀಗೆ ಹಲವು ಹೊಸತುಗಳೊಂದಿಗೆ ಬಂದು ಎಲ್ಲರ ಜೊತೆ ಹಾಸುಹೊಕ್ಕಾಗಿ ಹೋಗುತ್ತವೆ.

ಇದಕ್ಕೆ ಇನ್‌ಸ್ಟಾಗ್ರಾಂ ಸಹ ಹೊರತಾಗಿಲ್ಲ. ಬಹಳ ಬೇಗನೆ ಜನಪ್ರಿಯತೆಯನ್ನು ಪಡೆದಿರುವ ಇನ್‌ಸ್ಟಾಗ್ರಾಂ ಅಪ್ಲಿಕೇಶನ್‌ಗೆ ಹ್ಯಾಕರ್‌ಗಳ ಕಾಟ ಇದೆ ಎಂಬ ಬಗ್ಗೆ ಹಲವರಿಗೆ ಗೊತ್ತಿಲ್ಲದ ವಿಚಾರ..!

ಇನ್‌ಸ್ಟಾಗ್ರಾಂ ಖಾತೆಗೆ ಕನ್ನ ಹಾಕುವುದು ಹ್ಯಾಕರ್‌ಗಳಿಗೆ ಬಲು ಸುಲಭವಂತೆ. ಈ ನಿಟ್ಟಿನಲ್ಲಿ ಹ್ಯಾಕರ್‌ಗಳಿಂದ ನಿಮ್ಮ ಖಾತೆಯನ್ನು ಕಾಪಾಡಿಕೊಳ್ಳಬೇಕೆಂದರೆ ಕೆಲವು ನಿಯಮಗಳನ್ನು ನೀವು ಪಾಲಿಸಲೇಬೇಕು. ಹೀಗೆ ನಿಮ್ಮ ಇನ್‌ಸ್ಟಾಗ್ರಾಂ ಖಾತೆಯ ಸುರಕ್ಷತೆಗೆ ಈ ಕೆಲವು ಮಾದರಿಯನ್ನು ಅನುಸರಿಸಿ.

ಸೆಕ್ಯುರಿಟಿ ಚೆಕ್ಅಪ್ ಬಳಸಿ (Security Checkup) 

ಫೇಸ್ಬುಕ್ ಒಡೆತನದ ಇನ್‌ಸ್ಟಾಗ್ರಾಂನಲ್ಲಿ ಸೆಕ್ಯುರಿಟಿ ಚೆಕ್ಅಪ್ ಎಂಬ ಹೊಸ ಫೀಚರ್ ಒಂದನ್ನು ನೀಡಲಾಗಿದೆ. ಈ ಫೀಚರ್ ಸಹಾಯದಿಂದ ನಿಮ್ಮ ಇನ್‌ಸ್ಟಾಗ್ರಾಂ ಖಾತೆಯ ಆಗು-ಹೋಗುಗಳನ್ನು ಗಮನಿಸಿಕೊಳ್ಳಬಹದಾಗಿದೆ. ನಿಮ್ಮ ಲಾಗಿನ್ ಚಟುವಟಿಕೆ, ಪ್ರೊಫೈಲ್ ಮಾಹಿತಿ, ಲಾಗಿನ್ ಮಾಹಿತಿ ಹಂಚಿಕೆಯ ದೃಢೀಕರಣ, ಫೋನ್ ಸಂಖ್ಯೆ ಅಥವಾ ಇ-ಮೇಲ್ ಮಾಹಿತಿಗಳ ರಿಕವರಿ ಮಾಹಿತಿಯನ್ನು ಸಹ ಇಲ್ಲಿ ನವೀಕರಿಸಬಹುದಾಗಿದೆ. 

ಇದನ್ನು ಓದಿ: ಯೂಟ್ಯೂಬ್, ಇನ್‌ಸ್ಟಾ, ಫೇಸ್ಬುಕ್‌ಗೆ ವಿಡಿಯೋ ಹಾಕಲು ಇಲ್ಲಿದೆ ಸೂಪರ್ ಎಡಿಟಿಂಗ್ ಆ್ಯಪ್ಸ್

ಟು-ಫ್ಯಾಕ್ಟರ್ ಅಥೆಂಟಿಕೇಶನ್‌ ಸಕ್ರಿಯಗೊಳಿಸಿ

ಒಟಿಪಿ ಬಳಸದೆ ಯಾರೂ ನಿಮ್ಮ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗದಂತೆ ಫೀಚರ್ ಅನ್ನು ಸೆಟ್ ಮಾಡಿಕೊಳ್ಳಬೇಕು. ಆದರೆ, ಇದಕ್ಕೆ ನೀವು ಟು-ಫ್ಯಾಕ್ಟರ್ ಅಥೆಂಟಿಕೇಶನ್‌ ಸಕ್ರಿಯಗೊಳಿಸಿಕೊಳ್ಳಬೇಕು. 

ಒಟಿಪಿ (ಒಂದು ಬಾರಿ ಪಾಸ್ ವರ್ಡ್) ಇಲ್ಲದ ಯಾರೂ ನಿಮ್ಮ ಖಾತೆಗೆ ಲಾಗಿನ್ ಆಗಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ನೀವು ಎರಡು ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸಿ. ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಮುಂಬರುವ ದಿನಗಳಲ್ಲಿ ಒಟಿಪಿಯನ್ನು ಟೆಕ್ಸ್ಟ್ ಮೆಸೇಜ್ ಮೂಲಕ ಇಲ್ಲವೇ ನಿಮ್ಮ ವಾಟ್ಸಪ್ ಖಾತೆಗೆ ಕಳುಹಿಸುವ ಆಯ್ಕೆ ಸಹ ಲಭ್ಯವಾಗಲಿದೆ. 

ಲಾಗಿನ್ ರಿಕ್ವೆಸ್ಟ್ ಆಯ್ಕೆ ಸಕ್ರಿಯಗೊಳಿಸಿ

ಇಲ್ಲಿ ಬಹುಮುಖ್ಯವಾಗಿ ಎಚ್ಚರಿಸಬೇಕಾದ ಅಂಶವೆಂದರೆ ಹೊಸ ಬ್ರೌಸರ್‌ನಲ್ಲಿ ಲಾಗಿನ್ ಆಗುತ್ತಿದೆ ಎಂದಾದರೆ, ನಿಮಗೆ ಮೊದಲು ಗಮನಕ್ಕೆ ಬರಬೇಕು. ಹಾಗಾಗಿ ಹೊಸ ಸಾಧನ ಅಥವಾ ವೆಬ್ ಬ್ರೌಸರ್‌ನಿಂದ ಯಾರಾದರೂ ನಿಮ್ಮ ಖಾತೆಗೆ ಲಾಗಿನ್ ಆಗಲು ಪ್ರಯತ್ನಿಸಿದರೆ ಟು-ಫ್ಯಾಕ್ಟರ್ ಅಥೆಂಟಿಕೇಶನ್‌ ಕೇಳುವಂತೆ ಮಾಡಿಕೊಳ್ಳಬೇಕು. ಆಗ ನಿಮಗೆ ಯಾವ ಸಾಧನ ಮತ್ತು ಎಲ್ಲಿಂದ ಪ್ರಯತ್ನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಹೀಗಾಗಿ ಈ ಸೆಟ್ಟಿಂಗ್ ಅನ್ನು ಬಳಸದಿದ್ದರೆ ಕೂಡಲೇ ಲಾಗಿನ್ ರಿಕ್ವೆಸ್ಟ್ ಆಯ್ಕೆಯನ್ನು ಸಕ್ರಿಯಗೊಳಿಸಿಕೊಳ್ಳಿ.

ಇದನ್ನು ಓದಿ: ಫೋನ್ ಕಳುವಾದರೆ ಬ್ಯಾಂಕಿಂಗ್ ವಿವರ, ಆನ್‌ಲೈನ್ ವ್ಯಾಲೆಟ್ ಸುರಕ್ಷತೆಗೆ ಹೀಗೆ ಮಾಡಿ..!

ನಿಮ್ಮ ಖಾತೆ ಲಾಗಿನ್ ಆಗಿರುವ ಡಿವೈಸ್ ಪಟ್ಟಿ ಪರಿಶೀಲಿಸಿ

ನಿಮ್ಮ ಖಾತೆಯು ಎಲ್ಲೆಲ್ಲ ಲಾಗಿನ್ ಆಗಿದೆ ಎಂಬ ಮಾಹಿತಿಯನ್ನು ಆಗಾಗ ಪರಿಶೀಲನೆ ಮಾಡಿಕೊಳ್ಳುತ್ತಿರಿ. ಅಂದರೆ, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಯಾವೆಲ್ಲ ಸಾಧನಗಳಿಂದ ನಿಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಲಾಗಿನ್ ಆಗಿದ್ದೀರಿ ಎಂಬ ಬಗ್ಗೆ ತಿಳಿದುಕೊಳ್ಳುತ್ತಿರುವುದು ಉತ್ತಮ. "ಸೆಟ್ಟಿಂಗ್ಸ್" > "ಸೆಕ್ಯುರಿಟಿ" > "ಲಾಗಿನ್ ಆ್ಯಕ್ಟಿವಿಟಿ" ಅಡಿಯಲ್ಲಿ ನೀವು ಇದನ್ನು ಪರಿಶೀಲಿಸಬಹುದು. ಹಾಗಾಗಿ ಇದನ್ನು ನೀವು ಪರಿಶೀಲಿಸಿದರೆ ಲಾಗಿನ್ ಆ್ಯಕ್ಟಿವಿಟಿಯನ್ನು ತಿಳಿದುಕೊಳ್ಳುವುದಲ್ಲದೆ, ಆ ಸ್ಥಳ ಅಥವಾ ಸಾಧನದಿಂದ ಸಹ ಲಾಗ್ ಔಟ್ ಮಾಡಬಹುದು. 

ಫೋನ್ ಸಂಖ್ಯೆ, ಇ-ಮೇಲ್ ನವೀಕರಿಸಿ

ಇಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸವನ್ನು ನಿಮ್ಮ ಬಳಕೆಯ ಡಿವೈಸ್‌ನೊಂದಿಗೆ ಸದಾ ಅಪ್ಡೇಟ್ ಇಟ್ಟುಕೊಳ್ಳಬೇಕಾಗುತ್ತದೆ. ಕಾರಣ, ಒಂದು ವೇಳೆ ನಿಮ್ಮ ಖಾತೆ ಹ್ಯಾಕ್ ಆಗಿದ್ದರೆ ದೃಡೀಕರಣಕ್ಕಾಗಿ ಆ ನಿರ್ದಿಷ್ಟ ಪ್ಲಾಟ್‌ಫಾರ್ಮ್ ನಿಮ್ಮನ್ನು ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಮೂಲಕ ಸಂಪರ್ಕಿಸುತ್ತದೆ. ಹಾಗಾಗಿ ಅಪ್ಡೇಟ್ ಇಟ್ಟುಕೊಳ್ಳುವುದು ಇಲ್ಲಿ ಅತ್ಯವಶ್ಯ. 

ಇದನ್ನು ಓದಿ:  ಸ್ಥಳೀಯ ಉದ್ಯಮಿಗಳ ವ್ಯವಹಾರ ವೃದ್ಧಿಗೆ ಫ್ಲಿಪ್ ಕಾರ್ಟ್‌ನಿಂದ ಡಿಜಿಟಲ್ ಪ್ಲಾಟ್ ಫಾರ್ಮ್!

ಡೈರೆಕ್ಟ್ ಮೆಸೇಜ್ (ಡಿಎಂ)ನಲ್ಲಿ ಮಾಹಿತಿ ಹಂಚಿಕೆ ಬೇಡ

ಹ್ಯಾಕರ್‌ಗಳು ದಾರಿ ತಪ್ಪಿಸಲೇ ಕಾಯುತ್ತಿರುತ್ತಾರೆ. ಅಂದರೆ, ತಾವು ಇನ್‌ಸ್ಟಾಗ್ರಾಂ ಸಂಸ್ಥೆಯವರು ಎಂದು ಹೇಳಿಕೊಂಡು, “ನಿಮ್ಮ ಖಾತೆಯು ನಿಷೇಧಕ್ಕೊಳಗಾಗುವ ಅಪಾಯವಿದೆ”, “ಸಂಸ್ಥೆಯ ನೀತಿಯನ್ನು ನೀವು ಉಲ್ಲಂಘಿಸುವ ಮೂಲಕ ಬೌದ್ಧಿಕ ಆಸ್ತಿಗೆ ಧಕ್ಕೆ ತರುವಂತೆ ಮಾಡಿದ್ದೀರಿ” ಎಂಬಿತ್ಯಾದಿ ಸಂದೇಶಗಳನ್ನು ಡಿಎಂ ಮೂಲಕ ಕಳುಹಿಸಿ ಭಯಗೊಳಿಸಲು ಪ್ರಯತ್ನಿಸಬಹುದು. ಆದರೆ, ನೆನಪಿಡಿ ಇನ್‌ಸ್ಟಾಗ್ರಾಂ ಎಂದಿಗೂ ಡಿಎಂ ಕಳುಹಿಸುವುದಿಲ್ಲ. ಇಂಥ ಸಂದೇಶಗಳಿಗೆ ಸೊಪ್ಪು ಹಾಕದಿರಿ.

“ಇ-ಮೇಲ್ ಫ್ರಂ ಇನ್‌ಸ್ಟಾಗ್ರಾಂ” ಗಮನಿಸಿ

ಕೆಲವೊಮ್ಮೆ ಇನ್‌ಸ್ಟಾಗ್ರಾಂ ಮೆಸೇಜ್‌ಗಳು ಬಾರದೇ ಇರಬಹುದು. ಹಾಗಾಗಿ ನೀವು ಇನ್‌ಸ್ಟಾಗ್ರಾಂನ ಆ್ಯಕ್ಟೀವ್ ಬಳಕೆದಾರರಾಗಿದ್ದರೆ, ಪ್ರತಿದಿನ ಸೆಟ್ಟಿಂಗ್ಸ್‌ನಲ್ಲಿ “ಇ-ಮೇಲ್ ಫ್ರಂ ಇನ್‌ಸ್ಟಾಗ್ರಾಂ” ಅನ್ನು ಗಮನಿಸುತ್ತಿರಿ. ಈ ಆ್ಯಪ್‌ನ ನೇರ ಹಾಗೂ ದೃಢೀಕರಣ ಸಂವಹನವು ಇದರ ಮೂಲಕವೇ ನಡೆಯುತ್ತದೆ.

click me!