ಟ್ವಿಟರ್ ನೇಮಿಸಿದ ಸ್ಥಾನಿಕ ಕುಂದು ಕೊರತೆ ಅಧಿಕಾರಿ ಹೊಣೆ ಏನು?

Suvarna News   | Asianet News
Published : Jul 11, 2021, 01:31 PM ISTUpdated : Jul 11, 2021, 01:32 PM IST
ಟ್ವಿಟರ್ ನೇಮಿಸಿದ ಸ್ಥಾನಿಕ ಕುಂದು ಕೊರತೆ ಅಧಿಕಾರಿ ಹೊಣೆ ಏನು?

ಸಾರಾಂಶ

ಹೊಸ ಐಟಿ ನಿಯಮಗಳ ಜಾರಿ ಸಂಬಂಧ ಕೇಂದ್ರ ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದಿದ್ದ ಟ್ವಿಟರ್ ಕೊನೆಗೂ ಮಣಿದಿದೆ. ನಿಯಮದಂತೆ ಸ್ಥಾನಿಕ ಕುಂದು ಕೊರತೆ ಅಧಿಕಾರಿಯನ್ನು ನೇಮಕ ಮಾಡಿದೆ. ಕೇಂದ್ರ ಸರ್ಕಾರ ಮತ್ತು ಮೈಕ್ರೋ ಬ್ಲಾಗಿಂಗ್ ದೈತ್ಯ ಟ್ವಿಟರ್ ಮಧ್ಯೆ ಹೊಸ ನಿಯಮಗಳ ಜಾರಿಗೆ ಸಂಬಂಧ ಜಟಾಪಟಿಯೇ ನಡೆದಿತ್ತು. 

ಹೊಸ ಐಟಿ ನಿಯಮಗಳ ಅನುಸಾರ ಕೊನೆಗೂ ಟ್ವಿಟರ್ ಕಂಪನಿಯು ವಿನಯ್ ಪ್ರಕಾಶ್ ಎಂಬುವವರನ್ನು ಸ್ಥಳೀಯ ಕುಂದುಕೊರತೆ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ಇದೇ ವೇಳೆ ಕಂಪನಿಯು ಮೇ 26ರಿಂದ ಜೂನ್ 25ರ ನಡುವೆ ಸ್ವೀಕರಿಸಿದ್ದ ದೂರುಗಳು ಮತ್ತು ಅದಕ್ಕೆ ಪರಿಹಾರ ನೀಡಿದ ವರದಿಯನ್ನು  ಪ್ರಕಟಿಸಿದೆ. ಭಾರತದಲ್ಲಿ ಜಾರಿ ಮಾಡಲಾದ ಹೊಸ ಐಟಿ ನಿಮಯಗಳ ಪ್ರಕಾರ, ಸೋಷಿಯಲ್ ಮೀಡಿಯಾ ಕಂಪನಿಗಳು, ಡಿಜಿಟಲ್ ವೇದಿಕೆಗಳು ಪ್ರತಿ ತಿಂಗಳು ಕುಂದುಕೊರತೆಗಳಿಗೆ ಸಂಬಂಧಿಸಿದ ವರದಿಯನ್ನು ಪ್ರಕಟಿಸಬೇಕಾಗುತ್ತದೆ. 

ಸಕಾಲಕ್ಕೆ ಮುಖ್ಯ ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡಿದೇ ಇರುವುದರಿಂದ ನಿಯಮದಂತೆ ಟ್ವಿಟರ್ ಕಾನೂನು ರಕ್ಷಣೆಯನ್ನು ಭಾರತದಲ್ಲಿ ಕಳೆದುಕೊಂಡಿದೆ. ಈ ಸೌಲಭ್ಯವನ್ನು ಕಳೆದುಕೊಂಡ ಅಮೆರಿಕದ ಮೊದಲ ಬಹುರಾಷ್ಟ್ರೀಯ ಕಂಪನಿಯಾಗಿದೆ. ಇದೇ ವೇಳೆ, ಫೇಸ್‌ಬುಕ್, ಗೂಗಲ್ ಸೇರಿದಂತೆ ಅನೇಕ ಟೆಕ್ ಕಂಪನಿಗಳು ಭಾರತೀಯ ಹೊಸ ಕಾನೂನುಗಳ ಪ್ರಕಾರ ಅಧಿಕಾರಿಗಳನ್ನು ನೇಮಕ ಮಾಡಿವೆ ಮತ್ತು ನಿಯಮದಂತೆ ತಾವು ಕೈಗೊಂಡ ಕ್ರಮಗಳನ್ನು ಪ್ರಕಟಿಸಿವೆ.

ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಟ್ವಿಟರ್‌ಗೆ ವಾರ್ನಿಂಗ್ ನೀಡಿದ ನೂತನ ಸಚಿವ ಅಶ್ವಿನಿ ವೈಷ್ಣವ್!

ಏತನ್ಮಧ್ಯೆ, ಟ್ವಿಟರ್ ಮತ್ತು ಕೇಂದ್ರ ಸರ್ಕಾರ ನಡುವಿನ ಸಂಘರ್ಷವು ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಜುಲೈ 8 ರಂದು ಕೋರ್ಟಿಗೆ ಮಾಹಿತಿ ನೀಡಿದ್ದ ಟ್ವಿಟರ್, ಸ್ಥಳೀಯ ಕುಂದುಕೊರತೆ ಅಧಿಕಾರಿಯನ್ನು ನೇಮಿಸಲು 8 ವಾರಗಳು ಸಮಯಾವಕಾಶ ಬೇಕು ಎಂದು ಹೇಳಿತ್ತು. ಆ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಐಟಿ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ತನ್ನ ನಿಲುವನ್ನು ಅಫಿಡವಿಟ್ ಮೂಲಕ ತಿಳಿಸಿತ್ತು. 

ಭಾರತದಲ್ಲಿ ಸಂಪರ್ಕ ಕಚೇರಿ ಸ್ಥಾಪಿಸುವ ಪ್ರಕ್ರಿಯೆಯಲ್ಲಿಯೂ ಇರುವುದಾಗಿಯೂ ಟ್ವಿಟರ್ ಹೇಳಿಕೊಂಡಿದೆ. ಭಾರತದಲ್ಲಿ ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಸರ್ಕಾರದದಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಭಾರತದಲ್ಲಿ ಜಾರಿಯಾಗಿರುವ ನಿಮಯಗಳ ಪ್ರಕಾರ, ಮೂರು ಪ್ರಮುಖ ಸಿಬ್ಬಂದಿಯನ್ನು ನೇಮಕ ಮಾಡಬೇಕಾಗುತ್ತದೆ: ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿ.  50 ಲಕ್ಷ ಬಳಕೆದಾರರನ್ನು ಹೊಂದಿರುವ ಮಾಧ್ಯಮ ವೇದಿಕೆಗಳು ಕಟ್ಟುನಿಟ್ಟಾಗಿ ಈ ನಿಯಮಗಳನ್ನು ಪಾಲನೆ ಮಾಡಬೇಕು. ಹಾಗೆಯೇ ಈ  ಮೂವರೂ ಸಿಬ್ಬಂದಿ ಭಾರತದಲ್ಲಿ ನಿವಾಸಿಗಳಾಗಿರಬೇಕು ಎಂಬ ನಿಯಮವೂ ಇದೆ. 


ಟ್ವಿಟರ್ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ವಿನಯ್ ಪ್ರಕಾಶ್ ಅವರು ಸ್ಥಾನಿಕ ಕುಂದುಕೊರತೆ ಅಧಿಕಾರಿ(ಆರ್‌ಜಿಒ) ಅಧಿಕಾರಿಯಾಗಿದ್ದಾರೆ. ನೀಡಲಾಗಿರುವ ಇ ಮೇಲ್ ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ. ಹಾಗೆಯೇ, ದಿಲ್ಲಿಯಲ್ಲಿರುವ ಟ್ವಿಟರ್ ಕಚೇರಿಯ ಮೂಲಕವೂ ಬಳಕೆದಾರರು ತಮ್ಮ ಕುಂದುಕೊರತೆಗಳನ್ನು ದಾಖಲಿಸಬಹುದಾಗಿದೆ.

ಹೊಸ ಐಟಿ ರೂಲ್ಸ್ ಎಫೆಕ್ಟ್: ನಿಯಮ ಉಲ್ಲಂಘಿಸಿದ 3 ಕೋಟಿ ಪೋಸ್ಟ್ ವಿರುದ್ಧ ಫೇಸ್‌ಬುಕ್ ಕ್ರಮ

ಈ ಟ್ವಿಟರ್ ಈ ಹಿಂದೆ ಮಧ್ಯಂತರ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ಧರ್ಮೇಂದ್ರ ಚಾತೂರ್ ಅವರನ್ನು ನೇಮಕ ಮಾಡಿತ್ತು. ಆದರೆ ಅವರು ಕಳೆದ ತಿಂಗಳು ತಮ್ಮ ಸ್ಥಾನಕ್ಕೆರ ರಾಜೀನಾಮೆ ನೀಡಿದ್ದರು. ಆ ಬಳಿಕವೂ ಹೊಸ ಐಟಿ ನಿಯಮಗಳನ್ನು ಪಾಲಿಸುವ  ಸಂಬಂಧ ಸರ್ಕಾರ ಮತ್ತು ಟ್ವಿಟರ್ ಮಧ್ಯೆ ಸಂಘರ್ಷವೂ ಜಾರಿಯಲ್ಲಿತ್ತು.

ಐಟಿ ನಿಯಮಗಳನ್ನು ಜಾರಿಗೆ ತರುವಂತೆ ಹಲವು  ಬಾರಿ ಎಚ್ಚರಿಕೆಗಳನ್ನು ನೀಡಿದ ಹೊರತಾಗಿಯೂ ಟ್ವಿಟರ್ ಉದ್ದೇಶಪೂರ್ವಕವಾಗಿಯೇ ನೇಮಕಗಳನ್ನು ಮಾಡಿರಲಿಲ್ಲ ಸರ್ಕಾರ ಆರೋಪ ಮಾಡಿತ್ತು. ಭಾರತದಲ್ಲಿ ಸುಮಾರು 1.75 ಕೋಟಿ ಬಳಕೆದಾರರನ್ನು ಹೊಂದಿರುವ ಟ್ವಿಟರ್ ಸಕಾಲಕ್ಕೆ ನಿಯಮಗಳನ್ನು ಪಾಲಿಸದ್ದರಿಂದ ಕಾನೂನು ರಕ್ಷಣೆಯನ್ನು ಕಳೆದುಕೊಂಡಿತ್ತು. ಹಾಗಾಗಿ, ಮೂರನೇ ವ್ಯಕ್ತಿ ಮಾಡುವ ಯಾವುದೇ ಕಾನೂನು ಬಾಹಿರ  ಪೋಸ್ಟ್‌ಗಳಿಗೆ ಟ್ವಿಟರ್ ಕಂಪನಿಯೇ ಹೊಣೆಗಾರಿಕೆಯಾಗಬೇಕಾಯಿತು. 

ಕಾನೂನು ರಕ್ಷಣೆ ಕಳೆದುಕೊಂಡ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಮಾಡಲಾದ  ಪೋಸ್ಟ್‌ ಸಂಬಂಧ ಪ್ರಕಾರಣ ದಾಖಲಾಯಿತು. ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ಭಾರತ ಜಾರಿಗೆ ತಂದಿರುವ ಹೊಸ ಐಟಿ ನಿಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿವೆ ಎಂದು ಅಭಿಪ್ರಾಯಪಟ್ಟಿತ್ತು. 

ಟ್ವಿಟರ್ ಸ್ಥಳೀಯ ಕಾನೂನು ಪಾಲಿಸಲೇಬೇಕು: ಐಟಿ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಕೆ

ಏತನ್ಮಧ್ಯೆ, ಹೊಸ ಐಟಿ ನಿಯಮಗಳ ಜಾರಿ ಹೊಣೆ ಹೊತ್ತಿದ್ದ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು, ಮೊನ್ನೆಯಷ್ಟೇ ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?