ಈಗ ದೇಶೀ ಆ್ಯಪ್ ಅಭಿವೃದ್ಧಿಪಡಿಸುವ ಸಮಯ ಬಂದಿದೆ. ಈ ನಿಟ್ಟಿನಲ್ಲಿ ಭಾರತೀಯ ಯುವ ಸಮೂಹವನ್ನು ಬಡಿದೆಬ್ಬಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಈಗಾಗಲೇ ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡುವ ಕ್ರಮ ಕೈಗೊಂಡ ಬೆನ್ನಲ್ಲೇ ಈಗ ಅವುಗಳು ಹೊಂದಿರುವ ಅಂತಾರಾಷ್ಟ್ರೀಯ ಮಟ್ಟದ ಫೀಚರ್‌ವುಳ್ಳ ಆ್ಯಪ್ ತಯಾರಿಕೆಗೆ ಮುಂದಾಗಿದ್ದು, ಇದಕ್ಕೆ ಖಾಸಗಿ ಕಂಪನಿಗಳ ಹಾಗೂ ಯುವ ಟೆಕ್ಕಿಗಳ ಸಹಾಯವನ್ನು ಕೇಳಿದ್ದಾರೆ. ಅದಕ್ಕಾಗಿ ಬಹುಮಾನವನ್ನೂ ನಿಗದಿ ಮಾಡಿದ್ದಾರೆ. ಹೀಗೆ ಈ ಪ್ಲ್ಯಾನ್ ಒಮ್ಮೆ ವರ್ಕೌಟ್ ಆಯಿತೆಂದರೆ, ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಹಾಗಾದರೆ ಮೋದಿಯವರ ಪ್ಲ್ಯಾನ್ ಏನಿರಬಹುದು ಎಂಬುದನ್ನು ನೋಡೋಣ…
ಚೀನಾ ವಿರುದ್ಧ ಪರೋಕ್ಷ ಸಮರಕ್ಕೆ ಮುಂದಾಗಿರುವ ಭಾರತ ಈಗ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜತಾಂತ್ರಿಕವಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಿದ್ದಾರೆ. ಈಗ ರಾಜತಾಂತ್ರಿಕದಿಂದ ತಾಂತ್ರಿಕ ಮಟ್ಟದಲ್ಲಿ ಭಾರತವನ್ನು ಬಲಿಷ್ಠಗೊಳಿಸಬೇಕು ಎಂಬ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಅವರು ಕೈಹಾಕಿದ್ದು, ಆತ್ಮನಿರ್ಭರ ಭಾರತ ಸೃಷ್ಟಿಗೆ ಮತ್ತಷ್ಟು ಒತ್ತು ನೀಡಿದ್ದಾರೆ.
ಹೌದು. ಭಾರತದ ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿಯಾಗಿ ಪರಿಣಮಿಸಿದ್ದ ಚೀನಾದ 59 ಆ್ಯಪ್‌ಗಳನ್ನು ಈಗಾಗಲೇ ಬ್ಯಾನ್ ಮಾಡಲಾಗಿದೆ. ಆದರೆ, ಇದಕ್ಕೆ ಅದೆಷ್ಟೋ ಭಾರತೀಯರು ಒಗ್ಗಿಕೊಂಡು ಬಿಟ್ಟಿದ್ದಾರೆ. ಹಾಗಂತ ಇವುಗಳಿಗೆ ಸರಿಹೊಂದುವ ಪರ್ಯಾಯ ಆ್ಯಪ್‌ಗಳು ಈಗಿನ ಮಟ್ಟಿಗೆ ಇಲ್ಲ ಎಂದೇ ಹೇಳಬಹುದಾದರೂ ಹೊಸ ಹೊಸ ಆ್ಯಪ್‌ಗಳು ಹುಟ್ಟಿಕೊಂಡಿವೆ, ಹುಟ್ಟಿಕೊಳ್ಳತೊಡಗಿವೆ. ನಮ್ಮ ಕರ್ನಾಟಕದ ಕೆಲವು ಯುವಕರೂ ಈಗ ಆ್ಯಪ್ ತಯಾರಿಕೆ ಮಾಡಿ ಹೆಸರು ಮಾಡುತ್ತಿದ್ದಾರೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಟೆಕ್ ಆ್ಯಪ್ ಚಾಲೆಂಜ್ ಹಿಂದೆ ಇರುವ ಗುಟ್ಟೇನು ಎಂಬುದು ಸದ್ಯದ ಕುತೂಹಲವಾಗಿದ್ದು, ಇದನ್ನು ಟೆಕ್ ವಲಯದ ತಂತ್ರಜ್ಞರು ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ.
ಇದನ್ನು ಓದಿ: ನಿಮ್ಮ ಫೇಸ್ಬುಕ್ ಲಾಗಿನ್ ವಿವರ ಕದಿಯುವ ಈ ಆ್ಯಪ್ ಡಿಲೀಟ್ ಮಾಡಿ..!
ಆತ್ಮನಿರ್ಭರ್ ಭಾರತ ಆಗಬೇಕೆಂದರೆ ಅದಕ್ಕೆ ಪ್ರಮುಖವಾಗಿ ಭಾರತೀಯರು ಕೈಜೋಡಿಸಬೇಕು. ಬಾಯಿ ಮಾತಿನಲ್ಲಿ ಆತ್ಮನಿರ್ಭರರಾಗೋಣ ಎಂದರೆ ಸಾಲದು ನಡೆ-ನುಡಿಯಲ್ಲಿ ಅದನ್ನು ತೋರಿಸಿಕೊಳ್ಳಬೇಕು. ಹೀಗಾದಲ್ಲಿ ಸ್ವದೇಶಿ ಉತ್ಪನ್ನಗಳು ಹೆಚ್ಚಾಗಿ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಹಾಗೂ ಮೇಡ್ ಇನ್ ಇಂಡಿಯಾಗೆ ನಿಜವಾದ ಅರ್ಥ ಸಿಕ್ಕಂತಾಗುತ್ತದೆ. ಈಗ ಈ ಕೆಲಸಕ್ಕೆ ಸ್ವತಃ ಮೋದಿ ಅವರೇ ಕೈಹಾಕಿದ್ದು, ನೇರವಾಗಿ ಯುವ ಸಮೂಹವನ್ನೇ ಟಾರ್ಗೆಟ್ ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವಂತಹ ಆ್ಯಪ್ ಗಳನ್ನು ನಿರ್ಮಾಣ ಮಾಡಿ ಎಂಬ ಚಾಲೆಂಜ್ ಮಾಡಿದ್ದಾರೆ.
ಇದನ್ನು ಯಾರು ಬೇಕಾದರೂ ಮಾಡಬಹುದಾಗಿದ್ದು, ಟೆಕ್ಕಿಗಳು ಇಲ್ಲವೇ ಆ್ಯಪ್ ಡೆವೆಲಪರ್‌ಗಳೂ ಭಾಗವಹಿಸಬಹುದಾಗಿದೆ. ಆ ಮೂಲಕ ಇದಕ್ಕೆ ಮೀಸಲಿಟ್ಟ ಬಹುಮಾನವನ್ನು ಪಡೆಯಬಹುದಾಗಿದೆ ಎಂಬ ಮಾತನ್ನು ಪ್ರಧಾನಿಗಳು ಹೇಳಿದ್ದಾರೆ. ಇಲ್ಲಿ ಬಹುಮುಖ್ಯವಾಗಿ ಹಣದ ಬಹುಮಾನ ಘೋಷಿಸಿರುವುದು ಆಮಿಷ ಎನ್ನುವುದಕ್ಕಿಂತಲೂ ಒಂದು ಸ್ಪೂರ್ತಿ ಹುಟ್ಟಿಸಲು ಎಂದು ಹೇಳಬಹುದಾಗಿದೆ. ಜೊತೆಗೆ ಈ ಮೂಲಕ ಭಾರತದ ಯುವ ಸಮೂಹವನ್ನು ಬಡಿದೆಬ್ಬಿಸುವ ಪ್ರಯತ್ನವನ್ನು ಮೋದಿ ಅವರು ಮಾಡಿದ್ದಾರೆ.
ಇದನ್ನು ಓದಿ: ಸಣ್ಣ ಉದ್ದಿಮೆಗಳಿಗೆ ಡಿಜಿಟಲ್ ಟಚ್ ಕೊಡಲಿದೆ ಗೂಗಲ್!
ಆ್ಯಪ್ ಅಭಿವೃದ್ಧಿಪಡಿಸಿ ಒಪ್ಪಿತವಾದ್ರೆ ಸಿಗುತ್ತೆ 20 ಲಕ್ಷ..!
ಒಂದು ವೇಳೆ ಅಭಿವೃದ್ಧಿಪಡಿಸುವ ಆ್ಯಪ್ ಕೇಂದ್ರ ಸರ್ಕಾರಕ್ಕೆ ಒಪ್ಪಿತವಾದರೆ 2 ಲಕ್ಷ ರೂಪಾಯಿಯಿಂದ ಹಿಡಿದು 20 ಲಕ್ಷ ರೂಪಾಯಿವರೆಗೂ ಬಹುಮಾನವನ್ನು ಪಡೆಯಬಹುದಾಗಿದೆ. ಇಲ್ಲಿ ಕೆಲವು ವಿಭಾಗಗಳನ್ನು ಕೊಟ್ಟಿದ್ದು, ಇ-ಲರ್ನಿಂಗ್, ನ್ಯೂಸ್, ಗೇಮ್, ವರ್ಕ್ ಫ್ರಂ ಹೋಂ, ಸೋಷಿಯಲ್ ನೆಟ್ ವರ್ಕ್, ಆರೋಗ್ಯ, ಬ್ಯುಸಿನೆಸ್ ಇತ್ಯಾದಿಗಳಿವೆ. ಯಾವ ಕಂಡೀಷನ್‌ಗಳನ್ನು ಹಾಕಲಾಗಿದೆ ಎಂಬ ಬಗ್ಗೆ ಹೆಚ್ಚಿನ ವಿವರಗಳು ಬೇಕಿದ್ದವರು, innovate.mygov.in ವೆಬ್‌ಸೈಟ್‌ಗೆ ಹೋಗಿ ವೀಕ್ಷಿಸಬಹುದಾಗಿದೆ.
ಈ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಮುಖ್ಯ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದವರಿಗೆ ಕ್ರಮವಾಗಿ 20 ಲಕ್ಷ ರೂ., 15 ಲಕ್ಷ ರೂ. ಹಾಗೂ 10 ಲಕ್ಷ ರೂಪಾಯಿ ಬಹುಮಾನವಿದೆ. ಇನ್ನು ಇವುಗಳ ಉಪ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದವರಿಗೆ ಕ್ರಮವಾಗಿ 5 ಲಕ್ಷ ರೂ., 3 ಲಕ್ಷ ರೂ. ಹಾಗೂ 2 ಲಕ್ಷ ರೂಪಾಯಿ ಬಹುಮಾನವಿದೆ. ಈಗಾಗಲೇ ಅಂದರೆ ಜುಲೈ 4ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 18 ಕೊನೇ ದಿನವಾಗಿದೆ. ಇದಕ್ಕಾಗಿ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಲಿದ್ದು, ಅದು ಇವುಗಳ ಸಂಪೂರ್ಣ ಮಾಹಿತಿಯನ್ನು ಪರಿಶೀಲನೆಗೊಳಪಡಿಸುತ್ತಿರುತ್ತದೆ.
ಆಂತರಿಕ ಆ್ಯಪ್ ಯುದ್ಧ..!
ಇಲ್ಲಿ ಯುದ್ಧ ಎಂಬುದಕ್ಕೆ ನೈಜ ಅರ್ಥ ಕಲ್ಪಿಸಿಕೊಳ್ಳುವುದು ಬೇಡ. ನಮ್ಮೊಳಗಿನ ಅಂದರೆ ಭಾರತೀಯರೊಳಗಿನ ಪ್ರತಿಭೆಯನ್ನು ಹೊರತರುವ ಪ್ರಯತ್ನವೂ ಇದಾಗಿದೆ. ಈ ಮೂಲಕ ಭಾರತೀಯ ಆ್ಯಪ್ ಇಕೋ ಸಿಸ್ಟಂ ಅನ್ನು ಬೆಳೆಸುವ ಪ್ರಯತ್ನಕ್ಕೆ ಪ್ರಧಾನಿ ಮೋದಿ ಮುಂದಾಗಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಸರ್ಕಾರ ಸಹ ಹೊಂದುವಂತಹ ಆ್ಯಪ್ ಅನ್ನು ಅಡಾಪ್ಟ್ ಮಾಡಿಕೊಳ್ಳುವುದಲ್ಲದೆ, ಅವುಗಳ ಅಭಿವೃದ್ಧಿ ಬಗ್ಗೆ ಡೆವೆಲಪರ್‌ಗಳಿಗೆ ಅಗತ್ಯ ಮಾರ್ಗದರ್ಶನವನ್ನು ನೀಡುತ್ತದೆ. ಒಟ್ಟಿನಲ್ಲಿ ಭಾರತದೊಳಗೆ ಒಂದಷ್ಟು ಕ್ರಿಯೇಟಿವ್ ಆ್ಯಪ್‌ಗಳು ಹುಟ್ಟಿಕೊಳ್ಳುವಂತೆ ಮಾಡುವ, ಪೈಪೋಟಿಯನ್ನು ಹುಟ್ಟುಹಾಕುವ ಒಂದು ಪ್ರಯತ್ನ ಇದಾಗಿದೆ.
ಇದನ್ನು ಓದಿ: ಆ್ಯಂಡ್ರಾಯ್ಡ್, ಐಫೋನ್‌ನಲ್ಲಿ ಅನಿಮೇಟೆಡ್ ಸ್ಟಿಕ್ಕರ್ ಪೀಚರ್ ಕೊಡ್ತಿರೋ ವಾಟ್ಸಪ್...
59 ಆ್ಯಪ್‌ಗಳಿಗೆ ಶಾಶ್ವತ ಬಾಗಿಲು?
ಈಗ ದೇಶದ ಆಂತರಿಕ ಭದ್ರತಾ ದೃಷ್ಟಿಯಿಂದ ನಿಷೇಧಕ್ಕೊಳಪಟ್ಟಿರುವ ಚೀನಾದ 59 ಆ್ಯಪ್‌ಗಳ ಕಂಪನಿಗಳು ಪರಿಸ್ಥಿತಿ ಸುಧಾರಿಸುವ ಆಶಾವಾದದಲ್ಲಿವೆ. ಈಗಾಗಲೇ ಒಂದು ಸುತ್ತು ಕೇಂದ್ರ ಸರ್ಕಾರದ ಕದ ತಟ್ಟಿ ಬಂದಿದೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರೂ ಚೀನಾ ಜೊತೆಗಿನ ಸಂಬಂಧ ಶೀಘ್ರ ಸುಧಾರಣೆ ಕಂಡರೆ ಪುನಃ ತಮ್ಮ ಕೆಲಸವನ್ನು ಶುರುವಿಟ್ಟುಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿವೆ. ಆದರೆ, ಈಗ ಮೋದಿ ಹಾಕಿರುವ ಚಾಲೆಂಜ್‌ನಲ್ಲಿ ಇದಕ್ಕೆ ದೊಡ್ಡ ಪೆಟ್ಟು ಕೊಟುವ ಮಾಸ್ಟರ್ ಪ್ಲ್ಯಾನ್ ಅಡಗಿದೆ ಎನ್ನಲಾಗಿದೆ. ಅಂದರೆ, ಈ ಆ್ಯಪ್‌ಗಳಲ್ಲಿನ ವಿಶೇಷತೆಗಳಾದ ಸುದ್ದಿ, ಸೋಷಿಯಲ್ ನೆಟ್ ವರ್ಕಿಂಗ್, ಮನೋರಂಜನೆ, ಅಗ್ರಿ ಟೆಕ್, ಫಿನ್ ಟೆಕ್ ಸಹಿತ ಪ್ರಮುಖ ಹಾಗೂ ಉಪ ವಿಭಾಗಗಳುಳ್ಳ ಆ್ಯಪ್‌ಗಳನ್ನು ರಚನೆ ಮಾಡುವ ಚಾಲೆಂಜ್ ಯಶ ಕಂಡರೆ ಈ 59 ಆ್ಯಪ್‌ಗಳ ಬಳಕೆದಾರರಿಗೆ ಪರ್ಯಾಯ ಸಿಕ್ಕಿದಂತಾಗುತ್ತದೆ. ಇದರಿಂದ ಭಾರತದ ಡೇಟಾ ಸಹ ಭಾರತದಲ್ಲೇ ಉಳಿಯುತ್ತದೆ. ಈ ಚೀನಾ ಕಂಪನಿಗಳಿಗೆ ಶಾಶ್ವತ ಬೀಗವೂ ಬಿದ್ದಂತಾಗುತ್ತದೆ ಎಂಬ ಲೆಕ್ಕಾಚಾರ ಅಡಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.