ಖಾಸಗಿತನ ನೀತಿ ಕೈಬಿಡಿ: ವಾಟ್ಸಾಪ್‌ಗೆ ಕೇಂದ್ರ ತಾಕೀತು!

By Kannadaprabha News  |  First Published May 20, 2021, 9:54 AM IST

* ಖಾಸಗಿತನ ನೀತಿ ಕೈಬಿಡಿ: ವಾಟ್ಸಾಪ್‌ಗೆ ಕೇಂದ್ರ ತಾಕೀತು

* ನೋಟಿಸ್‌ಗೆ 1 ವಾರದಲ್ಲಿ ಉತ್ತರಿಸಲು ಗಡುವು

* ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ: ಎಚ್ಚರಿಕೆ

* ವಾಟ್ಸಾಪ್‌ ನೀತಿ ಕಾನೂನಿಗೆ ವಿರುದ್ಧವಾದುದು

* ಭಾರತದ ಬಗ್ಗೆ ವಾಟ್ಸಾಪ್‌ ತಾರತಮ್ಯ: ಸರ್ಕಾರ ಕಿಡಿ


ನವದೆಹಲಿ(ಮೇ.20): ವಿವಾದಾತ್ಮಕ ಹೊಸ ಖಾಸಗಿತನ ನೀತಿಯನ್ನು ಕೈಬಿಡಬೇಕು ಎಂದು ಕೇಂದ್ರ ಸರ್ಕಾರವು ಮೊಬೈಲ್‌ ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್‌ ಮಾಲೀಕತ್ವದ ‘ವಾಟ್ಸಾಪ್‌’ಗೆ ಖಡಕ್ಕಾಗಿ ಸೂಚಿಸಿದೆ.

ವಾಟ್ಸಾಪ್‌ನ ಖಾಸಗಿತನ ನೀತಿಯು ಭಾರತದ ಮಾಹಿತಿ ನೀತಿಯ ಮೌಲ್ಯಗಳಿಗೆ, ದತ್ತಾಂಶ ಭದ್ರತೆಗೆ ಹಾಗೂ ಬಳಕೆದಾರರ ಆಯ್ಕೆಗೆ ಧಕ್ಕೆ ತರುವಂಥದ್ದು. ಭಾರತದ ನಾಗರಿಕರ ಹಿತಾಸಕ್ತಿ ಹಾಗೂ ಧಕ್ಕೆಗೆ ತರುವಂಥದ್ದು ಎಂದು ಮೇ 18ರಂದು ವಾಟ್ಸಾಪ್‌ಗೆ ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಪತ್ರ ಬರೆದಿದೆ ಎಂದು ಮೂಲಗಳು ಹೇಳಿವೆ. ಒಂದು ವೇಳೆ ಇನ್ನು 7 ದಿನದಲ್ಲಿ ಈ ಪತ್ರಕ್ಕೆ ಸಮರ್ಪಕ ಉತ್ತರ ನೀಡದಿದ್ದಲ್ಲಿ ವಾಟ್ಸಾಪ್‌ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಅದು ಹೇಳಿದೆ.

Tap to resize

Latest Videos

undefined

ಹೊಸ ಖಾಸಗಿ ನೀತಿಯ ಜಾರಿಗೆ ತಾನು ವಿಧಿಸಿದ್ದ ಮೇ 15ರ ಗಡುವನ್ನು ಕೈಬಿಟ್ಟು, ಈ ದಿನಾಂಕದ ಆಚೆಯೂ ಗಡುವನ್ನು ವಿಸ್ತರಿಸುವುದಾಗಿ ವಾಟ್ಸಾಪ್‌ ಹೇಳಿದೆ. ಇದು ತೃಪ್ತಿಕರ ನಡೆಯಲ್ಲ. ಭಾರತದ ಕಾನೂನಿಗೆ ವಾಟ್ಸಾಪ್‌ ನೀತಿ ತದ್ವಿರುದ್ಧವಾಗಿದೆ. ಅಲ್ಲದೆ, ಯುರೋಪ್‌ನಲ್ಲಿ ವಾಟ್ಸಾಪ್‌ ಅನುಸರಿಸಿದ ನೀತಿಯು ಭಾರತದ ನೀತಿಗೆ ತದ್ವಿರುದ್ಧವಾಗಿದೆ. ಭಾರತಕ್ಕೆ ವಾಟ್ಸಾಪ್‌ ತಾರತಮ್ಯ ಮಾಡುತ್ತಿದೆ ಎಂದು ಸರ್ಕಾರವು ಕಿಡಿಕಾರಿದೆ.

‘ಭಾರತೀಯರು ನಿತ್ಯದ ಸಂವಹನಕ್ಕೆ ವಾಟ್ಸಾಪ್‌ ಮೇಲೆ ತುಂಬಾ ಅವಲಂಬಿತರಾಗಿದ್ದಾರೆ ಎಂಬುದು ನಿಸ್ಸಂದೇಹ. ಇಂಥದ್ದರಲ್ಲಿ ನ್ಯಾಯಸಮ್ಮತವಲ್ಲದ ನಿರ್ಬಂಧಗಳನ್ನು ಹಾಗೂ ಷರತ್ತುಗಳನ್ನು ಭಾರತೀಯರ ಮೇಲೆ ಹೇರುವುದು ಬೇಜವಾಬ್ದಾರಿತನದಿಂದ ಕೂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ವರ್ಷಾರಂಭದಲ್ಲಿ ತನ್ನ ಹೊಸ ಖಾಸಗಿತನ ನೀತಿ ಜಾರಿಗೆ ತರುವುದಾಗಿ ಹೇಳಿ ಬಳಕೆದಾರರಿಗೆ ಸಂದೇಶ ಕಳಿಸಿತ್ತು. ಆಗ ಇದನ್ನು ಒಪ್ಪದ ಬಳಕೆದಾರರಿಗೆ ಖಾತೆ ನಿಷ್ಕಿ್ರಯದ ಭೀತಿ ಎದುರಾಗಿತ್ತು. ಆಗ ತನ್ನ ಹೊಸ ನೀತಿ ಜಾರಿ ಗಡುವನ್ನು ಮೇ 15ಕ್ಕೆ ವಾಟ್ಸಾಪ್‌ ಮುಂದೂಡಿತ್ತು. ಈಗ ಮೇ 15ರ ಆಚೆಗೂ ಗಡುವು ವಿಸ್ತರಿಸುವುದಾಗಿ ಹೇಳಿದೆ. ವಾಟ್ಸಾಪ್‌ ಖಾಸಗಿ ನೀತಿ ಒಪ್ಪಿದರೆ ಬಳಕೆದಾರರ ಮಾಹಿತಿ ತಂತಾನೇ ಫೇಸ್‌ಬುಕ್‌ಗೂ ಲಭಿಸುತ್ತದೆ. ಇದರಿಂದ ತಮ್ಮ ಖಾಸಗಿತನಕ್ಕೆ ಧಕ್ಕೆ ಬರುತ್ತದೆ ಎಂದು ಬಳಕೆದಾರರು ಕಿಡಿಕಾರಿದ್ದರು.

click me!