ಗೂಗಲ್ ಎಂಟ್ರಿ: ರಂಗೇರಲಿದೆ ಭಾರತದ ಟೆಲಿಕಾಂ ಲೋಕ!

By Suvarna NewsFirst Published May 29, 2020, 12:25 PM IST
Highlights

ಭಾರತೀಯ ಟೆಲಿಕಾಂ ಕ್ಷೇತ್ರ ಮತ್ತೆ ರಂಗೇರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ರಿಲಾಯನ್ಸ್ ಜಿಯೋವಿನ ಶೇ.10ರಷ್ಟು ಷೇರನ್ನು ಕೊಳ್ಳಲು ಈಗಾಗಲೇ ಫೇಸ್‌ಬುಕ್ ಮುಂದಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವಂತೆ, ಟೆಕ್ ಲೋಕದ ದಿಗ್ಗಜ ಗೂಗಲ್ ತೆರೆಮರೆಯಲ್ಲೇ ವೋಡಾಫೋನ್-ಐಡಿಯಾ ಮುಖೇನ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಹೊರಟಿದೆ. ಎಲ್ಲವೂ ಅಂದುಕೊಂಡಂತಾದರೆ ಭಾರಿ ಪೈಪೋಟಿ ಎದುರಾಗಿ ಗ್ರಾಹಕ ಇದರ ಲಾಭ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

ಟೆಕ್ ಲೋಕದ ದಿಗ್ಗಜ ಕಂಪನಿ ಗೂಗಲ್ ಈಗ ಹಲೋ ಎನ್ನಲು ಹೊರಟಿದೆ. ಅಂದರೆ, ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡಲಿದೆ ಎಂಬ ಮಾತು ಕೇಳಿಬರುತ್ತಿದ್ದು, ಎಲ್ಲ ಅಂದುಕೊಂಡಂತಾದರೆ ವೋಡಾಫೋನ್-ಐಡಿಯಾದ ಶೇ.5ರಷ್ಟು ಷೇರನ್ನು ಕೊಂಡುಕೊಳ್ಳಲಿದೆ. 

ಹೌದು. ಇತ್ತ ರಿಲಾಯನ್ಸ್ ಜಿಯೋದ ಶೇ.10 ಪಾಲನ್ನು ಕೊಂಡುಕೊಳ್ಳಲು ಫೇಸ್‌ಬುಕ್ ಮುಂದಾಗುತ್ತಿದ್ದಂತೆ, ಇತ್ತ ಗೂಗಲ್ ಸಹ ವೋಡಾಫೋನ್-ಐಡಿಯಾದತ್ತ ಕಣ್ಣು ನೆಟ್ಟಿದೆ. ಮೊದಲೇ ನಷ್ಟದ ಸುಳಿಯಲ್ಲಿ ಸಿಲುಕಿ ನಲುಗುತ್ತಿರುವ ಈ ಟೆಲಿಕಾಂ ಕಂಪನಿಗೆ ಜೀವ ಬರುವುದಲ್ಲದೆ, ಪುಟಿದೇಳುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ತಜ್ಞರು. 
ಇಲ್ಲಿ ಮಹತ್ವದ ವಿಚಾರವೆಂದರೆ ಗೂಗಲ್ ಹಾಗೂ ಫೇಸ್‌ಬುಕ್ ಎರಡೂ ಟೆಕ್ನಾಲಜಿ ಕ್ಷೇತ್ರದಲ್ಲಿ ಭಾರಿ ಹಿಡಿತವನ್ನಿಟ್ಟುಕೊಂಡಿರುವ ಕಂಪನಿಗಳು. ಈಗ ಇವು ಪೈಪೋಟಿಗೆ ಬಿದ್ದಂತೆ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಟೆಲಿಕಾಂ ಕ್ಷೇತ್ರ ಸಹ ದಿನೇ ದಿನೇ ಅಭಿವೃದ್ಧಿ ಹೊಂದುತ್ತಲೇ ಇದ್ದು, ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಸಹಜವಾಗಿ ಈ ಕ್ಷೇತ್ರ ಉದ್ದಿಮೆದಾರರ ಗಮನ ಸೆಳೆದಿದೆ. 

ಇದನ್ನು ಓದಿ: ಫೇಸ್‌ಬುಕ್‌ನಲ್ಲಿನ್ನು ಫೋಟೋ ಹೈಡ್ ಮಾಡೋ ಆಪ್ಷನ್, ಮಹಿಳೆಯರಿಗಿದು ವರ!

ಫೇಸ್‌ಬುಕ್‌ಗೆ ಗೂಗಲ್ ಶಾಕ್
ಫೇಸ್‌ಬುಕ್ ಈಗಾಗಲೇ ಬಹು ಮಿಲಿಯನ್ ಡಾಲರ್ ಮೌಲ್ಯ ಬೆಲೆಬಾಳುವ ರಿಲಾಯನ್ಸ್ ಜಿಯೋ ಸಂಸ್ಥೆಯಲ್ಲಿ ಸರಿಸುಮಾರು 5.7 ಬಿಲಿಯಲ್ ಡಾಲರ್ ಡೀಲ್ ನಡೆಸಲು ಮುಂದಾಗಿದ್ದು, ಶೇ. 10ರಷ್ಟು ಷೇರುಗಳನ್ನು ಕೊಳ್ಳಲು ಮುಂದಾಗಿದೆ. ಆದರೆ, ಈಗ ಗೂಗಲ್‌ನ ದಿಢೀರ್ ನಿರ್ಧಾರ ಫೇಸ್‌ಬುಕ್ಗೆ ಸಣ್ಣ ಕಂಪನವನ್ನುಂಟು ಮಾಡುತ್ತಿದೆ ಎಂದೇ ಹೇಳಲಾಗುತ್ತಿದೆ. ಜೊತೆಗೆ ಇದು ಗೂಗಲ್ ಕೊಟ್ಟ ಶಾಕ್ ಎನ್ನಲಾಗಿದೆ. ಆದರೂ ಸಹ ರಿಲಾಯನ್ಸ್ ಈಗಾಗಲೇ ದರ ಪೈಪೋಟಿಯಲ್ಲಿ ಎಲ್ಲ ಟೆಲಿಕಾಂ ಕಂಪನಿಗಳನ್ನು ಹಿಂದಿಕ್ಕುವ ಮೂಲಕ ಹೆಚ್ಚು ಬಳಕೆದಾರರನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ತನಗೆ ಲಾಭವಾಗಬಹುದು ಎಂಬ ಸಮಾಧಾನವನ್ನೂ ಅದು ಪಡೆಯಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ. 

ಆರಂಭಿಕ ಹಂತದಲ್ಲಿ ಮಾತುಕತೆ
ಗೂಗಲ್ ಮಾತುಕತೆ ಇನ್ನೂ ಆರಂಭಿಕ ಹಂತದಲ್ಲಿ ಮಾತ್ರ ಇದೆ ಎಂದು ಹೇಳಲಾಗುತ್ತಿದೆ. ಇಷ್ಟಾದರೂ ಈ ಸುದ್ದಿ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡಿದೆ. ಅಲ್ಲದೆ, ಜಿಯೋ ವೇಗಕ್ಕೆ ಸಿಲುಕಿ ನಷ್ಟಕ್ಕೆ ಸಿಲುಕಿರುವ ವೋಡಾಫೋನ್-ಐಡಿಯಾ ಟೆಲಿಕಾಂ ಸಂಸ್ಥೆಗೆ ಹೊಸ ಆಶಾಕಿರಣವೊಂದು ಮೂಡಿದೆ. 

ಇದನ್ನು ಓದಿ: ವಾಟ್ಸ್ಆ್ಯಪ್ ವೆಬ್, ಗೂಗಲ್ ಆ್ಯಪ್‌ನಲ್ಲೀಗ ಡಾರ್ಕ್ ಮೋಡ್ ಆಪ್ಷನ್

ಟೆಕ್ ದಿಗ್ಗಜಗಳ ಟೆಲಿಕಾಂ ಹೋರಾಟ
ಇಲ್ಲಿ ಒಂದು ವೇಳೆ ಮಾತುಕತೆಗಳು ಫಲಪ್ರದವಾಗಿ ಎರಡೂ ಕಂಪನಿಗಳು ಒಪ್ಪಿ ವೋಡಾಫೋನ್-ಐಡಿಯಾದ ಶೇ.5ರಷ್ಟು ಪಾಲನ್ನು ಗೂಗಲ್ ಕೊಂಡಿದ್ದೇ ಆದಲ್ಲಿ ಟೆಲಿಕಾಂ ಕ್ಷೇತ್ರ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದೆ ಎಂದೇ ಹೇಳಬಹುದಾಗಿದೆ. ಅಷ್ಟರಮಟ್ಟಿಗೆ ಎರಡು ಟೆಕ್ ದಿಗ್ಗಜ ಕಂಪನಿಗಳ ನಡುವೆ “ಟೆಲಿಕಾಂ ಹೋರಾಟ” ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗ ಹರಿದಾಡುತ್ತಿರುವ ಸುದ್ದಿ ನಿಜವಾಗಲಿ ಎಂಬುದು ಅನೇಕರ ಹಾರೈಕೆಯಾಗಿದೆಯಂತೆ.

ಇದನ್ನು ಓದಿ: ವಾಟ್ಸ್ಆ್ಯಪ್, FB, ಇನ್ಸ್ಟಾಗ್ರಾಮ್‌ನಲ್ಲಿ ಹೊಸ ಫೀಚರ್!

ಮತ್ತೊಂದು ಸುತ್ತಿನ ದರ ಸಮರ?
ಇನ್ನೊಂದೆಡೆ ಗೂಗಲ್ ಏನಾದರೂ ಇಲ್ಲಿ ಹೂಡಿಕೆ ಮಾಡುವುದು ಪಕ್ಕಾ ಎಂದಾದರೆ ಮತ್ತೊಂದು ಸುತ್ತಿನ ದರ ಸಮರಕ್ಕೆ ಟೆಲಿಕಾಂ ಕ್ಷೇತ್ರ ಸಾಕ್ಷಿಯಾಗಲಿದೆ ಎನ್ನಲಾಗಿದೆ. ಒಂದು ಕಾಲದಲ್ಲಿ ವೋಡಾಫೋನ್ ಸಹಿತ ಏರ್ ಟೆಲ್ ಕಂಪನಿಗಳು ಭಾರಿ ಮುಂಚೂಣಿಯಲ್ಲಿದ್ದವು. ಆದರೆ, ಯಾವಾಗ ರಿಲಾಯನ್ಸ್ ಜಿಯೋ ಮೂಲಕ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಟ್ಟಿತೋ ಆಗ ದರ ಸಮರ ಮಾಡಿ ಎಲ್ಲ ಕಂಪನಿಗಳನ್ನೂ ನೆಲ ಕಚ್ಚುವಂತೆ ಮಾಡಿ ಮನೋಪಲಿ ಸಾಧಿಸುವಲ್ಲಿ ಯಶಸ್ವಿಯಾಯಿತು. ಈಗ ಗೂಗಲ್ ಸಹ ಅದೇ ತಂತ್ರವನ್ನು ಅನುಸರಿಸಿದರೆ ಎಂಬ ವಿಶ್ಲೇಷಣೆಯೂ ಚಾಲ್ತಿಯಲ್ಲಿದೆ. ಮಲ್ಟಿ ಬಿಲಿಯನ್ ಡಾಲರ್ ಒಡೆತನ ಗೂಗಲ್ ಒಂದು ವೇಳೆ ದರ ಸಮರಕ್ಕೆ ನಿಂತರೆ ಕಥೆ ಏನು ಎಂಬುದೇ ಸದ್ಯದ ಪ್ರಶ್ನೆಯಾಗಿದೆ. 

click me!