ಕುಂದುಕೊರತೆ ಅಧಿಕಾರ ನಿರ್ಧಾರ ಪ್ರಶ್ನಿಸಲು ಹೊಸ ಆನ್‌ಲೈನ್ ವೇದಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಈ ಮೂಲಕ ಜಾಲತಾಣಗಳ ಏಕಪಕ್ಷೀಯ ನಿರ್ಧಾರ ಪ್ರಶ್ನಿಸಲು ಬಳಕೆದಾರರಿಗೆ ಚಾನ್ಸ್ ನೀಡಲಾಗಿದೆ. ಈ ಸಂಬಂಧ ಹೊಸ ಪೋರ್ಟಲ್ ಅನ್ನು ಸಚಿವ ರಾಜೀವ್ ಚಂದ್ರಶೇಖರ್ ಅನಾವರಣಗೊಳಿಸಿದ್ದಾರೆ.
ನವದೆಹಲಿ (ಮಾರ್ಚ್ 1, 2023): ಸಾಮಾಜಿಕ ಜಾಲತಾಣಗಳ ಏಕಪಕ್ಷೀಯ ನಿರ್ಧಾರವನ್ನು ಪ್ರಶ್ನಿಸಲು ಬಳಕೆದಾರರಿಗೆ ಅವಕಾಶ ನೀಡುವ ಬಹು ನಿರೀಕ್ಷಿತ ದೂರು ಮೇಲ್ಮನವಿ ಸಮಿತಿ (ಜಿಎಸಿ) ವ್ಯವಸ್ಥೆ ಸ್ಥಾಪಿಸಿ ಕೇಂದ್ರ ಸರ್ಕಾರ ಮಂಗಳವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದರಿಂದಾಗಿ ಬಳಕೆದಾರರು ಇನ್ನು ಸೋಷಿಯಲ್ ಮೀಡಿಯಾ ನಿರ್ಣಯಗಳ ವಿರುದ್ಧ ಸಮಿತಿಗೆ ದೂರು ಸಲ್ಲಿಸಬಹುದಾಗಿದೆ.
ದೂರು ನೀಡಲು ಅನುಕೂಲ ಕಲ್ಪಿಸುವ ಹೊಸ ವೆಬ್ ಪೋರ್ಟಲ್ https://gac.gov.in ಅನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ ಇಲ್ಲಿ ಅನಾವರಣಗೊಳಿಸಿದ್ದಾರೆ.
ಇದನ್ನು ಓದಿ: Google 5 ವರ್ಷ ಸಂಭ್ರಮಾಚರಣೆ ಬೆನ್ನಲ್ಲೇ ಕೆಲಸ ಕಳ್ಕೊಂಡ ಭಾರತೀಯ ಮಹಿಳೆ: ಲಿಂಕ್ಡ್ಇನ್ ಪೋಸ್ಟ್ ವೈರಲ್..
ಪೋರ್ಟಲ್ ಅನಾವರಣಗೊಳಿಸಿ ಮಾತನಾಡಿದ ಸಚಿವ ರಾಜೀವ್ ಚಂದ್ರಶೇಖರ್, ‘ದೂರು ಮೇಲ್ಮನವಿ ಸಮಿತಿಯು, ಅಂತರ್ಜಾಲವು ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಬಳಕೆದಾರರಿಗೆ ಹೊಣೆಗಾರರನ್ನಾಗಿ ಮಾಡುವಲ್ಲಿ ಒಂದು ಹೊಸ ಮೈಲುಗಲ್ಲು. ಜಿಎಸಿಯು, ದೂರು ಪರಿಹಾರ ವ್ಯವಸ್ಥೆಯ ಕಾರ್ಯನಿರ್ವಹಣೆ ಖಚಿತಪಡಿಸುವ, ಜನರಿಗೆ ಸ್ಪಂದನಶೀಲವಾಗಿರುವ ವ್ಯವಸ್ಥೆಯಾಗಿದೆ ಎಂದು ಹೇಳಿದ್ದಾರೆ.
ಮೇಲ್ಮನವಿ ಸಮಿತಿ ಕೆಲಸ ಏನು?:
ಈಗಾಗಲೇ ಟ್ವಿಟ್ಟರ್, ಫೇಸ್‌ಬುಕ್, ಟೆಲಿಗ್ರಾಂನಂಥ ಸೋಷಿಯಲ್ ಮೀಡಿಯಾ ಕಂಪನಿಗಳು ತಮ್ಮ ಕಂಪನಿ ಮಟ್ಟದಲ್ಲಿ ಕುಂದುಕೊರತೆ ಅಧಿಕಾರಿಗಳನ್ನು ನೇಮಿಸಿವೆ. ಈ ಅಧಿಕಾರಿಗಳಿಗೆ ಬಳಕೆದಾರರು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು, ಖಾತೆಗಳ ಅಮಾನತು ಅಥವಾ ಇನ್ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ದೂರು ಸಲ್ಲಿಸಬಹುದು. ಇಂಥ ದೂರಿನ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿ ತನ್ನ ನಿರ್ಧಾರ ಪ್ರಕಟಿಸುತ್ತಾನೆ. ಆದರೆ ಇಂಥ ನಿರ್ಧಾರ ಬಳಕೆದಾರನಿಗೆ ವಿರುದ್ಧವಾಗಿ ಬಂದಿದ್ದರೆ ಅದನ್ನು ಮುಂದಿನ ಹಂತದಲ್ಲಿ ಪ್ರಶ್ನಿಸುವ ಅವಕಾಶ ಆತನಿಗೆ ಇರಲಿಲ್ಲ.
ಇದನ್ನೂ ಓದಿ: ಸನ್ನಿ ಲಿಯೋನ್ LinkedIn ಅಕೌಂಟ್ ಡಿಲೀಟ್; ಕಂಪನಿ ತಪ್ಪಿಗೆ ಕ್ಷಮೆ ಕೇಳಬೇಕು ಎಂದ ನಟಿ
ಇಂಥ ಅವಕಾಶವನ್ನು ಕಲ್ಪಿಸಲೆಂದೇ ಇದೀಗ ಕೇಂದ್ರ ಸರ್ಕಾರ ಹೊಸ ಸಮಿತಿ ರಚಿಸಿದೆ. ಈ ಸಮಿತಿ, ಸಾಮಾಜಿಕ ಮಾಧ್ಯಮ ವೇದಿಕೆಗಳ ಕುಂದುಕೊರತೆ ಅಧಿಕಾರಿ ಕೈಗೊಂಡ ನಿರ್ಧಾರವನ್ನು ಪ್ರಶ್ನಿಸಿ 30 ದಿನಗಳ ಒಳಗಾಗಿ ಬಳಕೆದಾರ ದೂರು ಸಲ್ಲಿಸಿದರೆ ಆ ಬಗ್ಗೆ ಮರುಪರಿಶೀಲನೆ ನಡೆಸಲಿವೆ. ಪ್ರತಿ ಸಮಿತಿಯಲ್ಲಿ ಒಬ್ಬ ಮುಖ್ಯಸ್ಥ ಹಾಗೂ 2 ಪೂರ್ಣಾವಧಿ ಸದಸ್ಯರು ಇರುತ್ತಾರೆ. ಇವರನ್ನು ಕೇಂದ್ರ ಸರ್ಕಾರವೇ ನೇಮಕ ಮಾಡಲಿದೆ. ಇವರಲ್ಲಿ ಒಬ್ಬ ವ್ಯಕ್ತಿ ಪದ ನಿಮಿತ್ತ ಸದಸ್ಯರಾಗಿದ್ದರೆ ಇನ್ನಿಬ್ಬರು ಸ್ವತಂತ್ರ ಸದಸ್ಯರಾಗಿರುತ್ತಾರೆ. ಸಮಿತಿಯು ಇಂತಹ ಅರ್ಜಿಗಳ ತ್ವರಿತವಾಗಿ ವಿಚಾರಣೆ ನಡೆಸಿ ಅರ್ಜಿ ದಾಖಲಿಸಿದ 30 ದಿನಗಳ ಒಳಗಾಗಿ ಅದನ್ನು ಇತ್ಯರ್ಥ ಪಡಿಸುತ್ತದೆ.