ಅಳಿವಿನಂಚಿನಲ್ಲಿರುವ ಗಿಬ್ಬನ್‌ಗೆ ವಾಸಸ್ಥಾನ ಉಡುಗೊರೆ ನೀಡುತ್ತಿರುವ ಮೇಘ

By Web Desk  |  First Published Jun 10, 2019, 6:01 PM IST

ಗಿಬ್ಬನ್‌ಗಳ ಸಂತತಿ ಭಾರತದಲ್ಲಿ 170ಕ್ಕೆ ಇಳಿದಿದೆ. ಅರಣ್ಯನಾಶದಿಂದ ಕಂಗಾಲಾಗಿರುವ ಗಿಬ್ಬನ್‌ಗಳ ರಕ್ಷಣೆಗೆ ನಿಂತಿದ್ದಾರೆ ಅರುಣಾಚಲ ಪ್ರದೇಶದ ಅನೋಕೋ ಮೇಘ. 


2008ರ ಘಟನೆ. ಅರುಣಾಚಲ ಪ್ರದೇಶದ ಅರೋಂಗೋ ಹಳ್ಳಿಯಲ್ಲಿ ವ್ಯಕ್ತಿಯೊಬ್ಬ ಮಂಗಗಳ ಜಾತಿಗೆ ಸೇರಿದ ಹೂಲಕ್ ಗಿಬ್ಬನ್‌ಗೆ ಗುಂಡಿಟ್ಟು ಕೊಂದಿದ್ದೇ ತಡ, ಅದೊಂದು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿಬಿಟ್ಟಿತು. ಬೇಟೆಗಾರ ಸಮುದಾಯವಾದ ಇಡು ಮಿಶಿ ಬುಡಕಟ್ಟು ಜನರು ವಾಸಿಸುವ ಅರೋಂಗೋದಲ್ಲಿ ಜನತೆ ಗಿಬ್ಬನ್‌ನ್ನು ಪೂಜನೀಯ ಎಂದು ಭಾವಿಸುತ್ತಾರೆ. ಅಂಥ ಪವಿತ್ರ ಪ್ರಾಣಿಯನ್ನು ಕೊಲ್ಲುವುದು ಮಹಾಪಾಪ ಎಂಬುದು ಅವರ ನಂಬಿಕೆ. ಅಳಿವಿನಂಚಿನಲ್ಲಿರುವ ಪ್ರಾಣಿಯ ಉಳಿವಿಗೆ ಇಂಥ ನಂಬಿಕೆಗಳು ಅಗತ್ಯ ಕೂಡಾ. ಅಂದು ಸಂಜೆ, ಇದೇ ವಿಷಯಕ್ಕೆ ಪಂಚಾಯಿತಿ ಕರೆಯಲಾಯಿತು, ವಿಷಯ ಚರ್ಚಿಸಲಾಯಿತು, ಕಡೆಗೆ ಪಕ್ಕದ ಆದಿ ಬುಡಕಟ್ಟು ಜನಾಂಗಕ್ಕೆ ಸೇರಿದ ತಪ್ಪಿತಸ್ಥನಿಗೆ ಕೇವಲ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದು, ಹಳ್ಳಿಗರನ್ನು ಕೆರಳಿಸಿತ್ತು. 

ಮನೋರಂಜನೆ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Tap to resize

Latest Videos

undefined

ಅದರಲ್ಲೂ ಅನೋಕೋ ಮೇಘ ಎಂಬ ಯುವಕ ಈ ಘಟನೆಯಿಂದ ಬಹಳ ಖೇದಗೊಂಡ. ಹತ್ತಿರದ ಕೊರುನು ಹಳ್ಳಿಯಲ್ಲಿ ವಾಸಿಸುತ್ತಿದ್ದಆತ ಏಳುತ್ತಿದ್ದುದೇ ಗಿಬ್ಬನ್‌ನ ಕೂಗಿಗೆ. ಅಲ್ಲದೆ, ನೆಲಕ್ಕೆ ಕಾಲಿಡುವುದೇ ಅಪರೂಪವಾದ, ಮರದಿಂದ ಮರಕ್ಕೆ ಜಿಗಿವ ಈ ಗಿಬ್ಬನ್ ಪ್ರಾಣಿಗಳು ಹಸಿರು ಮೇಲ್ಚಾವಣಿ ಮರೆಯಾಗುತ್ತಿರುವುದರಿಂದ ಅಳಿವಿನಂಚನ್ನು ತಲುಪಿರುವ ವಿಷಯ ಕೂಡಾ ಆತ ಕೇಳಿ ತಿಳಿದಿದ್ದ. ಹೀಗೇ ಆದರೆ ಮಿಶ್ಮಿ ಗುಡ್ಡಗಾಡು ಪ್ರದೇಶದಿಂದ ಗಿಬ್ಬನ್ ಸಂಪೂರ್ಣವಾಗಿ ಕಣ್ಮರೆಯಾಗುವ ದಿನಗಳು ದೂರವಿಲ್ಲ ಎಂದು ಯೋಚಿಸಿದ 24 ವರ್ಷದ ಮೇಘ, ಇದಕ್ಕಾಗಿ ಏನಾದರೂ ಮಾಡಲೇಬೇಕೆಂದು ಪಣ ತೊಟ್ಟ. 

ದಶಕದ ಬಳಿಕ, ಫಿಲ್ಮ್‌ಮೇಕರ್, ವೈಲ್ಡ್‌ಲೈಫ್ ಫೋಟೋಗ್ರಾಫರ್ ಹಾಗೂ ಪರಿಸರ ಸಂರಕ್ಷಣವಾದಿಯಾಗಿರುವ ಮೇಘ ಇದೀಗ ತಮ್ಮ ಕನಸಿನ ಯೋಜನೆಯ ಬೆನ್ನು ಹತ್ತಿದ್ದಾರೆ. ಒಂದು ಗಿಬ್ಬನ್ ವಾಸಸ್ಥಾನವನ್ನು ಮತ್ತೊಂದಕ್ಕೆ ಕನೆಕ್ಟ್ ಮಾಡುವ ಟ್ರೀ ಕಾರಿಡಾರ್ ನಿರ್ಮಾಣದಲ್ಲಿ ಮೇಘ ನಿರತರಾಗಿದ್ದಾರೆ. ಇದರಿಂದ ಅವರ ಪ್ರೀತಿಯ ಗಿಬ್ಬನ್ ಮರದಿಂದ ಮರಕ್ಕೆ ಜಿಗಿಯುತ್ತಾ ಹಾಯಾಗಿರಬಹುದು ಎಂಬುದು ಅವರ ಆಶಯ. 

ಲೈಫ್‌ಸ್ಟೈಲ್ ಸುದ್ದಿಗಳು ಇಲ್ಲಿವೆ

ಗಿಬ್ಬನ್‌ಗಳು ಈಶಾನ್ಯ ರಾಜ್ಯಗಳ ಹಲವಾರು ಬುಡಕಟ್ಟು ಜನಾಂಗಗಳಿಗೆ ಕುಲದೇವರು. ಮೇಘಾಲಯದ ಗ್ಯಾರೋಸ್, ಮಣಿಪುರದ ಮೇಯ್ಟೀಸ್ ಹಾಗೂ ಅರುಣಾಚಲ ಪ್ರದೇಶದ ಇಡು ಮಿಶೀಸ್ ಜನಾಂಗವು ತಾವು ಮಂಗನಿಂದ ಬಂದವರು ಎಂದು ನಂಬಿದ್ದಾರೆ. ಹೀಗಾಗಿ, ಗಿಬ್ಬನ್‌ಗಳು ಅವರಿಗೆ ಮನೆದೇವರು. 

2014ರಿಂದ ಮೇಘ ತಮ್ಮ ಸಮುದಾಯದ ಸದಸ್ಯರಿಗೆ ಮಿಶ್ಮಿ ಹಿಲ್‌ನ ಶ್ರೀಮಂತ ಜೀವವೈವಿಧ್ಯವನ್ನು ಕಾಪಾಡಲು ಕರೆ ನೀಡುತ್ತಿದ್ದಾರೆ. ಆದರೆ, ಬೇಟೆಯಾಡುವುದು ಅವರ ಮೂಲ ಉದ್ಯೋಗವಾಗಿದ್ದು, ಗಿಬ್ಬನ್ ಸೇರಿದಂತೆ ಕೆಲವು ಪ್ರಾಣಿಗಳನ್ನು ಪೂಜಿಸುವ ಕಾರಣದಿಂದ ಅವರು ಕೊಲ್ಲುವುದಿಲ್ಲ. 

'ಈ ಸ್ಥಳದಲ್ಲಿ ಗಿಬ್ಬನ್‌ಗಳಿಗೆ ಬೇಟೆಗಿಂತ ವಾಸಸ್ಥಾನ ವಿನಾಶವೇ ದೊಡ್ಡ ತಲೆನೋವಾಗಿದೆ. ಅವು ಭೂಮಿಗೆ ಬರದೆ ಕೇವಲ ದೊಡ್ಡ ದೊಡ್ಡ ಮರಗಳಲ್ಲೇ  ವಾಸಿಸುವುದರಿಂದ ಮರಗಳಿಲ್ಲವಾದರೆ ಎಲ್ಲಿಯೂ ದೂರ ಹೋಗಲಾರವು,' ಎನ್ನುತ್ತಾರೆ ಮೇಘ. 

ಇತ್ತೀಚಿನ ವರ್ಷಗಳಲ್ಲಿ ಮೆಹೋ ವನ್ಯಜೀವಿ ಅಭಯಾರಣ್ಯದ ಹೊರಗಿದ್ದ ಗಿಬ್ಬನ್‌ಗಳ ವಾಸಸ್ಥಾನವೆಲ್ಲವೂ ಕೃಷಿ ಹಾಗೂ ವಾಣಿಜ್ಯ ಕಾರಣಗಳಿಗೆ ಅರಣ್ಯ ನಾಶದಿಂದಾಗಿ ಮರೆಯಾಗಿವೆ. ಪ್ರಸ್ತುತ ಈ ಹೂಲಾಕ್ ಗಿಬ್ಬನ್‌ಗಳು ದೇಶದಲ್ಲಿ 170ಕ್ಕೆ ಬಂದು ನಿಂತಿವೆ. ಅವುಗಳಲ್ಲಿ ಬಹುತೇಕ ಗಿಬ್ಬನ್‌ಗಳು ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದ ಮಿಶ್ಮಿ ಹಿಲ್ಸ್‌ನಲ್ಲಿವೆ. 

'ಅರಣ್ಯನಾಶದಿಂದ ಗಿಬ್ಬನ್‌ಗಳು ದೂರ ಹೋಗಲಾಗುತ್ತಿಲ್ಲ. ಹೀಗಾಗಿ, ಒಂದೇ ಕುಟುಂಬದ ಸದಸ್ಯರು ಕ್ರಾಸ್ ಬ್ರೀಡ್ ಮಾಡುತ್ತಿದ್ದು, ಇದರಿಂದ ಜೆನೆಟಿಕ್ ಕಾಯಿಲೆಗಳು ಹೆಚ್ಚುತ್ತಿವೆ. ಅವುಗಳಿಗೆ ಅರಣ್ಯ ಕಾರಿಡಾರ್ ನಿರ್ಮಿಸುವುದರೊಂದಿಗೆ ಆಹಾರವನ್ನೂ ಒದಗಿಸುವಂಥ ಮರಗಳನ್ನು ಬೆಳೆಸುವುದು ನನ್ನ ಗುರಿ,' ಎನ್ನುತ್ತಾರೆ ಮೇಘ. 

ಇದೀಗ ಅವರು ಸ್ಥಳೀಯ ರೈತರ ಮನವೊಲಿಸಿ, ಸ್ಥಳ ಪಡೆದು ಗಿಬ್ಬನ್ ಹಾಟ್‌ಸ್ಪಾಟ್ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮುಂದಿನ ವರ್ಷಕ್ಕೆ ಸ್ಥಳವನ್ನು ಪ್ರವಾಸಿಗರಿಗೆ ತೆರೆಯುವ ಯೋಜನೆ ಇದಾಗಿದ್ದು, ಇದರಿಂದ ಸ್ಥಳೀಯರಿಗೂ ಉದ್ಯೋಗ ದೊರೆಯುತ್ತದೆ, ಗಿಬ್ಬನ್‌ಗಳೂ ತಮ್ಮದೇ ಮನೆಗಳಲ್ಲಿ ಖುಷಿಯಾಗಿರುತ್ತವೆ ಎನ್ನುವುದು ಮೇಘ ಅರ ಚಿಂತನೆ. 

click me!